ಶಿಕ್ಷಣ ನೀತಿ ಜಾರಿಯಾಗಿ 2 ವರ್ಷ ಕಳೆದರೂ ಮುಗಿಯದ ಗೊಂದಲ, ಹಂತ ಹಂತವಾಗಿ ಜಾರಿ ಮಾಡಲು ಸಲಹೆ
ಶಿಕ್ಷಣ ನೀತಿ ಜಾರಿಯಾಗಿ 2 ವರ್ಷ ಕಳೆದರೂ ಮುಗಿಯದ ಗೊಂದಲ. ಶಿಕ್ಷಣ ಸಂಸ್ಥೆಗಳು ಇದನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುತ್ತಾ ಹೋಗಬೇಕಾಗುತ್ತದೆ ಎಂದು ಐಐಟಿ ಗೌಹಾಟಿ ನಿರ್ದೇಶಕ ಡಾ ಟಿ.ಜಿ.ಸೀತಾರಾಮ್ ಅಭಿಪ್ರಾಯ.
ಬೆಂಗಳೂರು (ಸೆ.30): ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020’ ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದವರೆಗಿನ ಸವಾಲು, ಸಮಸ್ಯೆಗಳ ಪರಿಹಾರ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗಿದ್ದು, ಶಿಕ್ಷಣ ಸಂಸ್ಥೆಗಳು ಇದನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುತ್ತಾ ಹೋಗಬೇಕಾಗುತ್ತದೆ ಎಂದು ಐಐಟಿ ಗೌಹಾಟಿ ನಿರ್ದೇಶಕ ಡಾ ಟಿ. ಜಿ. ಸೀತಾರಾಮ್ ಅಭಿಪ್ರಾಯಪಟ್ಟರು. ‘ಸೆಂಟರ್ ಫಾರ್ ಎಜುಕೇಷನಲ್ ಆ್ಯಂಡ್ ಸೋಷಿಯಲ್ ಸ್ಟಡೀಸ್’ ನಗರದ ರಾಮಯ್ಯ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಎನ್‌ಇಪಿ ಸಿದ್ಧತೆ- ಉನ್ನತ ಶಿಕ್ಷಣದ ಪರಿವರ್ತನೆಯಲ್ಲಿ ಸವಾಲುಗಳು ಮತ್ತು ವ್ಯಾಪ್ತಿ’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿ ಎರಡು ವರ್ಷಗಳು ಕಳೆದರೂ ಇನ್ನೂ ಕೂಡ ಸಾಕಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯಕ್ರಮ ರಚನೆ, ಬಹು ಶಿಸ್ತೀಯ ಕಲಿಕಾ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗೊಂದಲ, ಪ್ರಶ್ನೆ, ಸಮಸ್ಯೆಗಳು ಹಾಗೇ ಇವೆ. ಇದೇ ಕಾರಣಕ್ಕೆ ಸರ್ಕಾರ ಎನ್‌ಇಪಿ ಅನುಷ್ಠಾನಕ್ಕೆ ಸಾಕಷ್ಟು ಕಾಲಾವಕಾಶ ನೀಡಿದೆ ಎಂದರು.
ಟಾಟಾ ಗ್ರೂಪ್‌ನ ಕಾರ್ಯನಿರ್ವಾಹಕ ಸಲಹೆಗಾರ ಪರಶುರಾಮನ್ ಮಾತನಾಡಿ, ಎನ್‌ಇಪಿ ದೇಶದ ಸಮಗ್ರ ಅಭಿವೃದ್ಧಿಯನ್ನು ಕೇಂದ್ರೀಕರಿಸುತ್ತದೆ. ಇದು ಭಾರತವನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯಲಿದ್ದು, ಭಾರತವನ್ನು ಭವಿಷ್ಯದಲ್ಲಿ ಜಗತ್ತಿನ ನಾಯಕನಾಗಿಸಲು, ಜಾಗತಿಕವಾಗಿ ನಮ್ಮ ಮಕ್ಕಳು ತೆರೆದುಕೊಳ್ಳಲು, ಪ್ರತಿ ವಿದ್ಯಾರ್ಥಿ ಮಾತ್ರವಲ್ಲ ಶಿಕ್ಷಕರಿಗೂ ನಿರಂತರ ಕಲಿಕಾ ವ್ಯವಸ್ಥೆಯನ್ನು ಕಲ್ಪಿಸುತ್ತದೆ ಕಲ್ಪಿಸುತ್ತದೆ. ಆದರೆ, ವೈವಿಧ್ಯಮಯ ಸಾಹಿತ್ಯ, ಸಂಸ್ಕೃತಿ, ಭಾಷೆಯನ್ನು ಹೊಂದಿರುವ ಭಾರತದಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸುತ್ತಾ ಹೋಗಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ನ್ಯಾಕ್ ನಿರ್ದೇಶಕ ಡಾ.ಎಸ್.ಸಿ.ಶರ್ಮಾ, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್.ರಾಮಪ್ರಸಾದ್ ಮತ್ತಿತರರು ಮಾತನಾಡಿದರು.
ಸೌಲಭ್ಯ ಇಲ್ಲ, ಆದರೂ ಗುಣಮಟ್ಟದ ಶಿಕ್ಷಣ ನೀಡಿ ಎಂದರೆ ಹೇಗೆ?: ಕುಲಪತಿ
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಇರುವ ಸವಾಲು, ಸಮಸ್ಯೆಗಳನ್ನು ರಾಜ್ಯದ ಹಲವು ಸಾರ್ವಜನಿಕ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮುಕ್ತವಾಗಿ ಹಂಚಿಕೊಂಡರು.
ಬೋರ್ಡ್‌ರೂಂನಲ್ಲಿ ನಡೆದ ಚರ್ಚೆಯಲ್ಲಿ ಬೆಂಗಳೂರು ನಗರ ವಿವಿ ಕುಲಪತಿ ಡಾ. ಲಿಂಗರಾಜ ಗಾಂಧಿ, ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಬಿ.ಜೆ.ಪಿ.ರಾವ್, ಕುವೆಂಪು ವಿವಿ ಕುಲಪತಿ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ಸುಮಾರು 45ಕ್ಕೂ ಹೆಚ್ಚು ವಿಶ್ವವಿದ್ಯಾಲಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳು ಭಾಗವಹಿಸಿದ್ದರು.
New Education Policy: ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷಾ ಮಂಡಳಿ ವಿಲೀನ
ಎನ್‌ಇಪಿ ಅಡಿ ಪಠ್ಯಕ್ರಮವನ್ನು ಯಾರು ರಚಿಸಬೇಕು, ಹೇಗೆ ರಚಿಸಬೇಕು, ಗುಣಮಟ್ಟದ ಶಿಕ್ಷಣ ಒದಗಿಸಲು ಅಗತ್ಯ ಸಿಬ್ಬಂದಿ ಕೊರತೆ, ಮೂಲಸೌಕರ್ಯಗಳ ಕೊರತೆ ನೀಗಿಸುವುದು ಹೇಗೆ, ಇದಕ್ಕೆ ಎದುರಾಗುವ ಹಣಕಾಸು ಹೊಂದಿಸುವುದು ಎಲ್ಲಿಂದ ಎಂಬುದು ಸೇರಿದಂತೆ ಅನೇಕ ಅಭಿಪ್ರಾಯ ಹಂಚಿಕೊಂಡರು. ವಿವಿಗಳಲ್ಲಿ ಶೇ.10ರಷ್ಟು ಮಾತ್ರ ಖಾಯಂ ಉಪನ್ಯಾಸಕರು ಇದ್ದಾರೆ. ಉಳಿದ ಹುದ್ದೆಗಳನ್ನು ಅತಿಥಿ ಬೋಧಕರು, ಗುತ್ತಿಗೆ ಆಧಾರದಲ್ಲಿ ನಿರ್ವಹಿಸಲಾಗುತ್ತಿದೆ. ಕೇಂದ್ರೀಯ ವಿವಿಗಳಲ್ಲಿರುವ ಉತ್ತಮ ಶೈಕ್ಷಣಿಕ, ತಾಂತ್ರಿಕ ಸೌಲಭ್ಯಗಳು ರಾಜ್ಯ ವಿವಿಗಳಲ್ಲಿ ಇಲ್ಲ. ಸರ್ಕಾರದಿಂದ ನೀಡುವ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಆದರೆ, ಎನ್‌ಇಪಿ ಅನುಷ್ಠಾನ ಮಾಡಿ ಗುಣಮಟ್ಟದ ಶಿಕ್ಷಣ ನೀಡಿ ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
KCET RESULT 2022: ಸಿಇಟಿ ಪರಿಷ್ಕೃತ ರ‍್ಯಾಕಿಂಗ್ ಪಟ್ಟಿ ಅ.1ರಂದು ಮಧ್ಯಾಹ್ನ ಪ್ರಕಟ
ವರ್ಚುವಲ್ಲಾಗಿ ಸಭೆಯಲ್ಲಿ ಮಾತನಾಡಿದ ಯುಜಿಸಿ ಅಧ್ಯಕ್ಷ ಪ್ರೊ.ಎಂ.ಜಗದೇಶ್ ಕುಮಾರ್, ಎನ್‌ಇಪಿ ಪಠ್ಯಕ್ರಮ ರಚನೆ ವಿಚಾರದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಗರಿಷ್ಠ ಸ್ವಾತಂತ್ರ್ಯ ನೀಡುತ್ತದೆ. ಅದನ್ನು ಸಕ್ರಿಯವಾಗಿ ಬಳಸಿಕೊಳ್ಳಬೇಕು ಎಂದರು.