ಶಿವಮೊಗ್ಗ: ನೂರಾರು ಶಾಲಾ ಕೊಠಡಿಗಳು ಶಿಥಿಲ; ಮಳೆಗಾಲ ಶುರುವಾದರೂ ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ!
ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭಗೊಂಡು ತಿಂಗಳು ಕಳೆಯುತ್ತಿದೆ. ಶಾಲೆಗಳ ಬಾಗಿಲು ತೆರೆದು ಶಿಕ್ಷಣ ಇಲಾಖೆ ‘ಸರ್ಕಾರಿ ಶಾಲೆಗೆ ಬನ್ನಿ ಮಕ್ಕಳೆ’ ಎಂದು ಕೈಬೀಸಿ ಕರೆಯುತ್ತಿದೆ. ಆದರೆ, ಜಿಲ್ಲೆಯ ಸಾಕಷ್ಟುಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು, ಮಕ್ಕಳು ಭಯದಲ್ಲಿ ಕುಳಿತು ಪಾಠಕೇಳುವ ದುಸ್ಥಿತಿ ನಿರ್ಮಾಣಗೊಂಡಿದೆ.
ಶಿವಮೊಗ್ಗ (ಜೂ.26): ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭಗೊಂಡು ತಿಂಗಳು ಕಳೆಯುತ್ತಿದೆ. ಶಾಲೆಗಳ ಬಾಗಿಲು ತೆರೆದು ಶಿಕ್ಷಣ ಇಲಾಖೆ ‘ಸರ್ಕಾರಿ ಶಾಲೆಗೆ ಬನ್ನಿ ಮಕ್ಕಳೆ’ ಎಂದು ಕೈಬೀಸಿ ಕರೆಯುತ್ತಿದೆ. ಆದರೆ, ಜಿಲ್ಲೆಯ ಸಾಕಷ್ಟುಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು, ಮಕ್ಕಳು ಭಯದಲ್ಲಿ ಕುಳಿತು ಪಾಠಕೇಳುವ ದುಸ್ಥಿತಿ ನಿರ್ಮಾಣಗೊಂಡಿದೆ.
ಜಿಲ್ಲೆಯಲ್ಲಿ ಎಲ್ಲ ಶಾಲಾ ಕೊಠಡಿಗಳು ಸುಸ್ಥಿತಿಯಲ್ಲಿವೆ, ಶಾಲಾ ಕೊಠಡಿಗಳ ಸಮಸ್ಯೆ ಇಲ್ಲವೆಂದು ಜಿಲ್ಲಾ ಶಿಕ್ಷಣ ಇಲಾಖೆ ಹೇಳುತ್ತಿದೆಯಾದರೂ, ಕೆಲ ಶಾಲೆಗಳ ಅಂಗಳಕ್ಕೆ ಹೋಗಿ ನೋಡಿದರೆ ವಾಸ್ತವ ಸ್ಥಿತಿ ಅನಾವರಣಗೊಳ್ಳುತ್ತದೆ. ಮಕ್ಕಳು ಹಾಗೂ ಶಿಕ್ಷಕರು ಜೀವಭಯದಲ್ಲಿ ಕೊಠಡಿಯಲ್ಲಿ ಕುಳಿತು ಪಾಠ ಕೇಳುತ್ತಿರುವ ಚಿತ್ರಣ ಸ್ಪಷ್ಟವಾಗಿ ಕಾಣುತ್ತದೆ.
ಹಾವೇರಿ: ಶಿಥಿಲಾವಸ್ಥೆಯಲ್ಲಿ 2565 ಶಾಲಾ ಕೊಠಡಿಗಳು; ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ!
ದುಸ್ಥಿತಿಯಲ್ಲಿ 153 ಶಾಲೆಗಳು:
ಜಿಲ್ಲೆಯಲ್ಲಿ 1837 ಪ್ರಾಥಮಿಕ ಹಾಗೂ 164 ಪ್ರೌಢಶಾಲೆಗಳ ಪೈಕಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 153 ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಕಳೆದ ಬಾರಿ 235 ಶಾಲೆ ಕೊಠಡಿಗಳ ದುರಸ್ತಿ ಕಾರ್ಯ ಕೈಗೊಂಡಿದ್ದು, ಇದರಲ್ಲಿ 215 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ 19 ಕಾಮಗಾರಿ ಬಾಕಿ ಉಳಿದಿವೆ ಎಂಬ ಮಾಹಿತಿಯನ್ನು ಶಿಕ್ಷಣ ಇಲಾಖೆ ಹೇಳುತ್ತಿದೆ. ಆದರೆ, ಶಾಲೆಗಳಿಗೆ ಕೊಠಡಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಗಮನಹರಿಸಿಲ್ಲ ಎಂಬ ಆಪಾದನೆ ಸಾರ್ವಜನಿಕರಿಂದ ವ್ಯಾಪಕವಾಗಿದೆ.
ಶಿಥಿಲಗೊಂಡಿರುವ ಕೊಠಡಿಗಳಲ್ಲಿ ಮಕ್ಕಳು ಪಾಠ ಕೇಳದ ಸ್ಥಿತಿಯಲ್ಲಿವೆ. ಕೆಲ ಶಾಲೆಗಳಲ್ಲಿ ಸುಸ್ಥಿತಿಯಲ್ಲಿರುವ ಒಂದೆರಡು ಕೊಠಡಿಗಳನ್ನು ಬಳಕೆ ಮಾಡಿಕೊಂಡು ತರಗತಿಗಳನ್ನು ನಡೆಸಲಾಗುತ್ತಿದೆ. ಮತ್ತೆ ಕೆಲ ಶಾಲೆಗಳಲ್ಲಿ ಕಟ್ಟಡದ ಸೀಲಿಂಗ್ ಕಿತ್ತು ಬರುತ್ತಿದೆ. ಇಂಥ ಶಾಲೆಗಳಲ್ಲಿ ಪಾಠ ಮಾಡಬೇಕಾದ ಅನಿವಾರ್ಯತೆ ಶಿಕ್ಷಕರದಾಗಿದ್ದರೆ, ಜೀವ ಕೈಯಲ್ಲಿಡಿದು ಪಾಠ ಕೇಳುವ ಸಂದಿಗ್ಧತೆ ಮಕ್ಕಳದ್ದಾಗಿದೆ.
ನೆಪಮಾತ್ರಕ್ಕೆ ರಿಪೇರಿ:
ರಜೆ ದಿನಗಳಲ್ಲಿ ಶಾಲಾ ಕೊಠಡಿಗಳು ದುರಸ್ತಿಗೊಂಡಿರುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಒಂದೆರಡು ಕೊಠಡಿಗಳ ಹೆಂಚುಗಳನ್ನು ಸರಿ ಮಾಡಿ ಸಣ್ಣ ಪುಟ್ಟರಿಪೇರಿ ಮಾಡಿ ಮುಗಿಸಲಾಗಿದೆ ಎಂಬುದು ಪೋಷಕರ ಆರೋಪವಾಗಿದೆ.
ಕುಂದಗಸವಿ ಶಾಲೆ ಕಟ್ಟಡ ದುರಸ್ತಿ ಎಂದು?
ಸೊರಬ ತಾಲೂಕಿನ ಕುಂದಗಸವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕಳೆದ ಸಂಪೂರ್ಣ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಅಡಿಪಾಯದಿಂದಲೇ ನೀರು ಒಸರುತ್ತಿದೆ. ಯಾವುದೇ ಕ್ಷಣದಲ್ಲಾದರೂ ಈ ಕಟ್ಟಡ ಬೀಳುವ ಹಂತದಲ್ಲಿದ್ದು, ಭಯದ ವಾತಾವರಣದಲ್ಲಿ ಮಕ್ಕಳು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.
ಕುಂದಗಸವಿ ಗ್ರಾಮದ ಶಾಲೆಯಲ್ಲಿ ಇಬ್ಬರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 1ರಿಂದ 5ನೇ ತರಗತಿಯವರೆಗೆ 23 ಮಕ್ಕಳು ಕಲಿಯುತ್ತಿದ್ದಾರೆ. 1ರಿಂದ 3ನೇ ತರಗತಿ ಮಕ್ಕಳ ಸೇತುಬಂಧ ಶಿಕ್ಷಣಕ್ಕೆ 1 ಕೊಠಡಿ ಮೀಸಲಾಗಿದ್ದು, ಇನ್ನೊಂದು ಕೊಠಡಿಯಲ್ಲಿ 4 ಮತ್ತು 5ನೇ ತರಗತಿಗಳ ಪಾಠ-ಪ್ರವಚನಗಳು ನಡೆಯುತ್ತಿವೆ. ಆದರೆ ಒಂದು ಕಟ್ಟಡ ಬಿರುಕು ಬಿಟ್ಟಿದ್ದು, ಮಳೆ ಬಂದರೆ ಸೋರುತ್ತದೆ. ಮಕ್ಕಳು ತೇವಾಂಶಗೊಂಡ ನೆಲದಲ್ಲೇ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದೂ ಅಲ್ಲದೇ ಕಟ್ಟಡ ಸಂಪೂರ್ಣ ಒದ್ದೆಯಾಗಿ ಕುಸಿಯುವ ಹಂತಕ್ಕೆ ಬಂದಿದೆ.
ಸರ್ವಶಿಕ್ಷಣ ಅಭಿಯಾನವು ಭಾರತ ಸರ್ಕಾರದ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ ಕಾಲಮಿತಿಗೆ ಒಳಪಟ್ಟಕಾರ್ಯಕ್ರಮಗಳಲ್ಲಿ ಅತ್ಯಂತ ಪ್ರಮುಖವಾಗಿದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಹೊಸ ಶಾಲೆಗಳನ್ನು ತೆರೆದು, ಈಗಿರುವ ಶಾಲೆಗೆ ಹೆಚ್ಚುವರಿ ಕೊಠಡಿಗಳು ಕುಡಿಯುವ ನೀರು, ಶೌಚಾಲಯ ನಿರ್ವಹಣಾ ಅನುದಾನ ಮತ್ತು ಶಾಲಾಭಿವೃದ್ಧಿಗೆ ಅನುದಾನ ಅಲ್ಲದೇ ಅನೇಕ ಮೂಲಸೌಲಭ್ಯಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
30 ವರ್ಷಗಳಷ್ಟುಹಳೆಯದಾಗಿರುವ 1 ಶಾಲಾ ಕಟ್ಟಡ ಕಳೆದ 5 ವರ್ಷಗಳಿಂದಲೂ ಸಂಪೂರ್ಣ ಶಿಥಿಲಗೊಂಡು ಅಡಿಪಾಯ ಹಾಳಾಗಿದೆ, ಗೋಡೆಗಳು ಬಿರುಕು ಬಿಟ್ಟವೆ. ಮೇಲ್ಛಾವಣಿ ಸೋರುತ್ತಿದೆ. ಇದು ಪ್ರತಿ ಮಳೆಗಾಲದ ದುಸ್ಥಿತಿಯಾಗಿದೆ. ಜೂನ್ ಮೊದಲ ವಾರ ಮುಗಿಯುತ್ತಾ ಬಂದರೂ ಮಳೆ ತಾಲೂಕಿನಲ್ಲಿ ಮಳೆಯೇ ಪ್ರಾರಂಭವಾಗಿಲ್ಲ. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಶಿಥಿಲಗೊಂಡ ಕೊಠಡಿಯಲ್ಲೇ ಪಾಠ ನಡೆಯುತ್ತಿದೆ. ಮಳೆ ಪ್ರಾರಂಭವಾದರೆ ಎಲ್ಲ ತರಗತಿಗಳ ಪಾಠ-ಪ್ರವಚನ ಒಂದೇ ಕೊಠಡಿಯಲ್ಲಿ ನಡೆಯುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಕಾರಣ ಮಳೆಗಾಲದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ತಕ್ಷಣ ಎಚ್ಚರಗೊಂಡು ಮಳೆ ಪ್ರಾರಂಭವಾಗುವ ಮುನ್ನ ಸೂಕ್ತ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕಿದೆ.
Viveka Scheme Politics: ವಿವೇಕ ಯೋಜನೆ ಅವಿವೇಕದ ಪರಮಾವಧಿ: ಕಾಂಗ್ರೆಸ್
ಕಳೆದ 30 ವರ್ಷಗಳ ಹಿಂದಿನ ಒಂದು ಕೊಠಡಿ ಕಳೆದ 5 ವರ್ಷಗಳಿಂದ ಶಿಥಿಲಗೊಂಡು ತಳಪಾಯ ಬಿರುಕುಬಿಟ್ಟಿದೆ. ಮಳೆ ಬಂದರೆ ಸೋರುತ್ತದೆ. ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಅವರೇ ಈ ಬಾರಿ ಶಿಕ್ಷಣ ಸಚಿವರಾಗಿದ್ದು, ಮುಂದಿನ ದಿನಗಳಲ್ಲಿ ಶಿಥಿಲಗೊಂಡಿರುವ ಶಾಲಾ ಕಟ್ಟಡಗಳ ಬಗ್ಗೆ ಗಮನಹರಿಸುವ ನಿರೀಕ್ಷೆ, ವಿಶ್ವಾಸ ಇದೆ
- ನೋಪಿ ಶಂಕರ, ಅಧ್ಯಕ್ಷ, ಎಸ್‌ಡಿಎಂಸಿ, ಕುಂದಗಸವಿ ಶಾಲೆ