‘ಪಿಎಂ ಶ್ರೀ’ ಯೋಜನೆಗೆ ತಾಲೂಕಿಗೆ 2 ಶಾಲೆ ಆಯ್ಕೆ: ರಾಜ್ಯ ಸರ್ಕಾರದ ಯೋಜನೆ
ಸರ್ಕಾರಿ ಶಾಲೆಗಳನ್ನು ತಂತ್ರಜ್ಞಾನ ಆಧಾರಿತ ನಾವೀನ್ಯ ಬೋಧನಾ ವ್ಯವಸ್ಥೆ, ಕೌಶಲ್ಯ, ಆವಿಷ್ಕಾರ, ಉತ್ತಮ ಮೂಲಕೌರ್ಯ ಸೇರಿದಂತೆ ಸರ್ವತೋಮುಖ ಬೆಳವಣಿಯೊಂದಿಗೆ ಉನ್ನತೀಕರಿಸಲು ಕೇಂದ್ರ ಸರ್ಕಾರ ಘೋಷಿಸಿರುವ ಮಹತ್ವಾಕಾಂಕ್ಷಿ ‘ಪಿಎಂ ಶ್ರೀ’ ಯೋಜನೆಯಡಿ ಮೊದಲ ಹಂತದಲ್ಲಿ ಕರ್ನಾಟಕದ ಪ್ರತಿ ತಾಲ್ಲೂಕಿನಿಂದ ಎರಡು ಶಾಲೆಗಳನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿದೆ.
ಬೆಂಗಳೂರು (ಡಿ.06): ಸರ್ಕಾರಿ ಶಾಲೆಗಳನ್ನು ತಂತ್ರಜ್ಞಾನ ಆಧಾರಿತ ನಾವೀನ್ಯ ಬೋಧನಾ ವ್ಯವಸ್ಥೆ, ಕೌಶಲ್ಯ, ಆವಿಷ್ಕಾರ, ಉತ್ತಮ ಮೂಲಕೌರ್ಯ ಸೇರಿದಂತೆ ಸರ್ವತೋಮುಖ ಬೆಳವಣಿಯೊಂದಿಗೆ ಉನ್ನತೀಕರಿಸಲು ಕೇಂದ್ರ ಸರ್ಕಾರ ಘೋಷಿಸಿರುವ ಮಹತ್ವಾಕಾಂಕ್ಷಿ ‘ಪಿಎಂ ಶ್ರೀ’ ಯೋಜನೆಯಡಿ ಮೊದಲ ಹಂತದಲ್ಲಿ ಕರ್ನಾಟಕದ ಪ್ರತಿ ತಾಲ್ಲೂಕಿನಿಂದ ಎರಡು ಶಾಲೆಗಳನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿದೆ. ಆ ಪ್ರಕಾರ ರಾಜ್ಯದ 31 ಜಿಲ್ಲೆಗಳಲ್ಲಿನ 175ಕ್ಕೂ ಹೆಚ್ಚು ತಾಲ್ಲೂಕುಗಳಿಂದ ತಲಾ 2 ಶಾಲೆಗಳಂತೆ 350ಕ್ಕೂ ಹೆಚ್ಚು ಶಾಲೆಗಳನ್ನು ಆಯ್ಕೆ ಮಾಡಲು ಯೋಜಿಸಲಾಗಿದೆ.
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಎಲ್ಲಾ ಜಿಲ್ಲಾ ಉಪನಿರ್ದೇಶಕರುಗಳಿಗೆ ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ.ಕಾವೇರಿ ಅವರು ಸೋಮವಾರ ಸುತ್ತೋಲೆ ಹೊರಡಿಸಿದ್ದು, ಕೇಂದ್ರ ಸರ್ಕಾರ ನೀಡಿರುವ ಮಾನದಂಡಗಳನ್ನು ಆಧರಿಸಿ ಪಿಎಂ ಶ್ರೀ ಯೋಜನೆಗೆ ಅರ್ಹ ಶಾಲೆಗಳ ಆಯ್ಕೆಗೆ ಶಿಫಾರಸು ಮಾಡಲು ಸೂಚಿಸಿದ್ದಾರೆ. ಅಲ್ಲದೆ, ಯೋಜನೆಗೆ ಆಯಾ ಶಾಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಒಪ್ಪಿಗೆ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳ ಒಪ್ಪಿಗೆ ಪತ್ರ ಪಡೆಯಲು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಬಯಲುಸೀಮೆ ಜಿಲ್ಲೆಗಳ ಅಭಿವೃದ್ಧಿಗೆ 1 ಸಾವಿರ ಕೋಟಿ: ಎಚ್.ಡಿ.ಕುಮಾರಸ್ವಾಮಿ
ಕೇಂದ್ರ ಪ್ರಾಯೋಜಿತ ಹೊಸ ಯೋಜನೆ ಪಿಎಂ ಶ್ರೀ ಶಾಲೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಎಲ್ಲಾ ಅಂಶಗಳನ್ನು ಅನುಷ್ಠಾನಗೊಳಿಸಲು ದೇಶಾದ್ಯಂತ 14,500 ಕ್ಕೂ ಹೆಚ್ಚು ಶಾಲೆಗಳನ್ನು ಪಿಎಂ ಶ್ರೀ ಶಾಲೆಗಳಾಗಿ ಐದು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ.
ಯು-ಡೈಸ್ ಕೋಡ್ ಹೊಂದಿರುವ ಸಮಗ್ರ ಶಿಕ್ಷಣ ಕರ್ನಾಟಕ ಅಡಿಯಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಶಾಲೆಗಳು 1 ರಿಂದ 5ನೇ ತರಗತಿ, 1 ರಿಂದ 8ನೇ ತರಗತಿ, ಮತ್ತು ಮಾಧ್ಯಮಿಕ, ಹಿರಿಯ ಮಾಧ್ಯಮಿಕ ಶಾಲೆಗಳನ್ನು 1 ರಿಂದ 10ನೇ ತರಗತಿ, 1 ರಿಂದ 12ನೇ ತರಗತಿ, 6 ರಿಂದ 10ನೇ ತರಗತಿ, 6 ರಿಂದ 12ನೇ ತರಗತಿ ಶಾಲೆಗಳನ್ನು ಈ ಯೋಜನೆಯಡಿ ಆಯ್ಕೆಗೆ ಪರಿಗಣಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಪ್ರತಿ ತಾಲೂಕಿಗೆ ಎರಡರಂತೆ ಚಾಲೆಂಜ್ ಮೋಡ್ ನಲ್ಲಿ ಪಿಎಂ ಶ್ರೀ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
‘ಪಿಎಂ ಶ್ರೀ’ ಶಾಲೆಗಳ ವೈಶಿಷ್ಯಗಳೇನು?: ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಿಎಂ ಶ್ರೀ ಎಂಬ ಹೊಸ ಯೋಜನೆಯನ್ನು ಘೋಷಿಸಿ ದೇಶಾದ್ಯಂತ 14,500 ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದರು. ಪ್ರಮುಖವಾಗಿ 21ನೇ ಶತಮಾನ ಆಧುನಿಕ ಕೌಶಲ್ಯಕ್ಕೆ ಆದ್ಯತೆ, ಬಹುಭಾಷಾ ಅಗತ್ಯತೆಗಳು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020ರ ದೃಷ್ಟಿಕೋನದಂತೆ ತಮ್ಮದೇ ಆದ ಕಲಿಕಾ ಪ್ರಕ್ರಿಯೆ ಸಾಕಾರಗೊಳಿಸುವುದು.
ನವೀನ ಬೋಧನಾ ಶಾಸ್ತ್ರ ಮತ್ತು ತಂತ್ರಜ್ಞಾನ ವ್ಯವಸ್ಥೆ. ಸರ್ಕಾರಿ ಶಾಲೆಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು. ಪರಿಸರ ಸ್ನೇಹಿ ವ್ಯವಸ್ಥೆ ಹಾಗೂ ಇಂಧನ ಕ್ಷಮತೆ ಮೂಲಸೌಕರ್ಯ ಕಲ್ಪಿಸುವುದು. ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ರೂಪಿಸಲು, ಕೌಶಲ್ಯ ಅಭಿವೃದ್ಧಿ ಪಡಿಸುವ ಗುರಿ. ಆಧುನಿಕ ತಂತ್ರಜ್ಞಾನ, ಸ್ಮಾರ್ಚ್ ತರಗತಿಗಳನ್ನು ಆರಂಭಿಸುವುದು. ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸೂಕ್ತ ಸೌಲಭ್ಯ. ಉತ್ತಮ ದರ್ಜೆಯ ಗ್ರಂಥಾಲಯ, ಕಲಾ ಕೊಠಡಿಗಳನ್ನು ಒದಗಿಸುವುದು ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿಪಡಿಸುವುದು ಈ ಯೋಜನೆಯ ವಿಶೇಷತೆಗಳಾಗಿವೆ.
ಸೌರ ಫಲಕಗಳು, ಎಲ್‌ಇಡಿ ದೀಪಗಳು, ನೈಸರ್ಗಿಕ ಕೃಷಿಯೊಂದಿಗೆ ಪೌಷ್ಠಿಕಾಂಶ ಉದ್ಯಾನಗಳು, ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಮುಕ್ತ, ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹ್ಯಾಕಥಾನ್ ಮತ್ತು ಸುಸ್ಥಿರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಜಾಗೃತಿ ಮೂಡಿಸುವುದು ಮುಂತಾದ ಪರಿಸರ ಸ್ನೇಹಿ ಅಂಶಗಳನ್ನು ಒಳಗೊಂಡ ಹಸಿರು ಶಾಲೆಗಳಾಗಿ ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿದೆ.
ಶಿಕ್ಷಣ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರ: ಈಶ್ವರ ಖಂಡ್ರೆ
2022-23ರಿಂದ 2026-27ರವರೊಳಗೆ ದೇಶಾದ್ಯಂತ 14,500 ಶಾಲೆಗಳನ್ನು ಸಮಗ್ರ ಅಭಿವೃದ್ಧಿಪಡಿಸುವ ಪಿಎಂ ಶ್ರೀ ಯೋಜನೆಗೆ ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳಿಂದ ಕ್ರಮವಾಗಿ 60:40 ರಷ್ಟುಅನುದಾನ ಒದಗಿಸಬೇಕು. ಒಟ್ಟು 27,360 ಕೋಟಿ ರು.ಗಳ ಈ ಯೋಜನೆಗೆ ಕೇಂದ್ರ ಸರ್ಕಾರ 18,128 ಕೋಟಿ ರು. ನೀಡಿದರೆ, ಉಳಿದ ಅನುದಾನವನ್ನು ರಾಜ್ಯ ಸರ್ಕಾರಗಳು ಬರಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.