ಕನ್ನಡ ಶಾಲೆ ಮುಚ್ಚಿದರೆ ಮಾತೃಭಾಷೆಗೆ ಕುತ್ತು: ಡಾ.ಮಹೇಶ್ ಜೋಷಿ
ಮಕ್ಕಳ ಕಡಿಮೆ ಹಾಜರಾತಿಯಿಂದ ಶಾಲೆ ಮುಚ್ಚಲಾಗುತ್ತಿದೆ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್
ತಿಪಟೂರು(ಜು.31): ಕರ್ನಾಟಕದಲ್ಲಿಯೇ ಕನ್ನಡ ಶಾಲೆಗಳು ಮುಚ್ಚಿಹೋಗುವ ಹಂತದಲ್ಲಿದ್ದು ಕನ್ನಡ ಶಾಲೆಗಳನ್ನು ಮುಚ್ಚಿದರೆ ಕನ್ನಡ ಭಾಷೆಗೆ ದೊಡ್ಡಮಟ್ಟದ ಆಪತ್ತಾಗಲಿದ್ದು ಕನ್ನಡಿಗರಾದ ನಾವು ಭಾಷೆಯ ಉಳಿವು-ಬೆಳವಣಿಗೆಗೆ ಶ್ರಮಿಸಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಕನ್ನಡಿಗರಿಗೆ ಕರೆ ನೀಡಿದರು. ನಗರದ ಶ್ರೀ ಗುರುಕುಲಾನಂದಾಶ್ರಮದ ಆವರಣದಲ್ಲಿ ಶನಿವಾರ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ 3ನೇ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲ್ಪಜ್ಯೋತಿ ನೆನಪಿನ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ತನ್ನ ಅಸ್ತಿತ್ವನ್ನು ಕಳೆದುಕೊಳ್ಳುತ್ತಿದ್ದು, ಮುಂದಿನ 10 ವರ್ಷಗಳಲ್ಲಿ ಕನ್ನಡ ಭಾಷೆ ಮತ್ತು ಕಸಾಪ ಎಲ್ಲಿ ಮುಚ್ಚಿಹೋಗುತ್ತದೆಯೋ ಎಂಬ ಭಯವಿದೆ. ಕನ್ನಡ ಶಾಲೆಗಳು ಮೂಲಭೂತ ಸೌಲಭ್ಯ, ಶಿಕ್ಷಕರು, ಮಕ್ಕಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ. ಸಮಸ್ಯೆಗಳನ್ನು ಸವಾಲುಗಳಾಗಿ ತಗೆದುಕೊಂಡು ಕನ್ನಡ ಉಳಿವಿಗೆ ಹೋರಾಡುತ್ತೇವೆ. ಶಿಕ್ಷಣ ಸಚಿವರು ಈ ಬಗ್ಗೆ ಅಗತ್ಯ ಕ್ರಮವಹಿಸಿ ಕನ್ನಡ ಶಾಲೆ ಹಾಗೂ ಭಾಷೆಯ ಉಳಿವಿಗೆ ಮುಂದಾಗಬೇಕು ಎಂದರು.
ಸಮ್ಮೇಳನಾಧ್ಯಕ್ಷರಾದ ಲೇಖಕಿ ಡಾ. ಲೀಲಾ ಸಂಪಿಗೆ ಮಾತನಾಡಿ, ಶತ ಶತಮಾನಗಳಿಂದಲೂ ಹಲವು ಹೋರಾಟಗಾರರು, ಶಿವಶರಣರು ಮಹಿಳಾ ಸಮಾನತೆಗಾಗಿ ಧ್ವನಿಯೆತ್ತಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ನಾವು ಸ್ತ್ರೀ ಸಮಾನತೆ, ದೌರ್ಜನ್ಯಗಳ ಕೊನೆ, ಸಮಾನ ಅವಕಾಶ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ. ಎರಡನೇ ದರ್ಜೆಯ ಪ್ರಜೆಯಾಗಿರುವ ನಾವು ಸಂಸತ್ತಿನಲ್ಲಿ, ವಿಧಾನಸಭೆಗಳಲ್ಲಿ ಸಮಾನ ಸ್ಥಾನಮಾನ ಪ್ರವೇಶಕ್ಕೆ ಅವಕಾಶ ದೊರೆತಿಲ್ಲ. ಮಹಿಳೆಯರು ಕೇವಲ ಮತ ನೀಡುವ ಯಂತ್ರವಾಗದೆ ಅಧಿಕಾರ ನಡೆಸುವ ಸೂತ್ರಧಾರಿಗಳಾಗಬೇಕು. ಇದು ಪುರುಷ ಪ್ರಧಾನ ವ್ಯವಸ್ಥೆಯ ಭಿಕ್ಷೆಯಾಗದೆ ಸಾಂವಿಧಾನಿಕ ಅಧಿಕಾರವಾಗಬೇಕು. ಹೆಣ್ಣಿಗೆ ಹೆಣ್ಣೇ ಶತೃ ಎಂಬ ಹೇಳಿಕೆಯಿಂದ ಹೊರಬಂದು ಸಮಾಜದಲ್ಲಿ ನಮ್ಮ ತನವನ್ನು ನಾವು ಕಂಡುಕೊಂಡು ಆತ್ಮಸ್ಥೈರ್ಯದೊಂದಿಗೆ ಸಮಾಜಮುಖಿಯಾಗಬೇಕೆಂದರು.
6 ವರ್ಷ ತುಂಬಿದ್ದರೆ ಮಾತ್ರ 1ನೇ ಕ್ಲಾಸ್‌ಗೆ ಪ್ರವೇಶ..!
ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ, ಅಂದಿನ ಕಾಲದಲ್ಲಿಯೇ ಶಿವಶರಣರು ಹೆಣ್ಣಿಗೆ ಮಹತ್ವದ ಸ್ಥಾನ ಕೊಟ್ಟಿದ್ದರು. ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವ ಮಹಿಳೆಗೆ ಪುರುಷ ಪ್ರಧಾನ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಂತಾಗಿದೆ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಸಾಲುಮರದ ತಿಮ್ಮಕ್ಕ ಮಾತನಾಡಿ, ಮಕ್ಕಳಂತೆ ಗಿಡ ಮರ ಬೆಳೆಸಿ. ನಾನು ಮತ್ತು ನನ್ನ ಗಂಡ ಜೊತೆಗೂಡಿ ನಾಲ್ಕು ಕಿ.ಮೀ ಆಲದ ಮರಗಳನ್ನು ನೆಟ್ಟು ಪೋಷಣೆ ಮಾಡಿದೆವು. ಮಕ್ಕಳಿಲ್ಲದ ನಮಗೆ ಮರಗಳನ್ನೇ ಮಕ್ಕಳಂತೆ ಕಂಡೆವು. ಯಾರೂ ಸಹ ಬೆಳೆಸಿದ ಮರಗಳನ್ನು ಕಡಿಯಬೇಡಿ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಪ್ರಾಸ್ತಾವಿಕನುಡಿಗಳನ್ನಾಡಿದರು. ಚಿತ್ರ ನಟಿ ಸುಧಾ ನರಸಿಂಹರಾಜು ಅಮೃತ ವಾಹಿನಿ ಪುಸ್ತಕ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ ತಿಪಟೂರು ತಾಲೂಕಿನ ಸ್ವಾತಂತ್ರ್ಯ ಹೋರಾಟ ಪುಸ್ತಕ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಬಸವರಾಜಪ್ಪ, ಲೇಖಕಿ ಬಾ.ಹ. ರಮಾಕುಮಾರಿ, ಕುಮಾರ್ ಆಸ್ಪತ್ರೆಯ ಡಾ.ಶ್ರೀಧರ್, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಅನಸೂಯ, ಸಮಾಜಸೇವಕಿ ಸ್ವರ್ಣಗೌರಿ, ಜಿಲ್ಲಾ ಕಾರ್ಯದರ್ಶಿ ಯೋಗೀಶ್ವರಪ್ಪ, ಸಣ್ಣಹೊನ್ನಯ್ಯ, ಮಂಜುಳ ಕಿರಣ್, ಕಸಾಪ ಪದಾಧಿಕಾರಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.
ಹಣಕಾಸಿನ ಕೊರತೆಯಿಂದ ಶಾಲೆ ಮುಚ್ಚುತ್ತಿಲ್ಲ
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ದೇಶದ ಸಂಸ್ಕೃತಿ, ಸಾಹಿತ್ಯ, ಭಾಷೆ, ಪರಂಪರೆಗೂ ಈ ನೆಲಕ್ಕೂ ಅವಿನಾಭಾವ ಸಂಬಂಧವಿದೆ. ಸರ್ಕಾರ ಹಣಕಾಸಿನ ಕೊರತೆಯಿಂದ ಕನ್ನಡ ಶಾಲೆಗಳನ್ನು ಮುಚ್ಚುತ್ತಿಲ್ಲ. ಮಕ್ಕಳ ಹಾಜರಾತಿ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಮುಚ್ಚಲಾಗುತ್ತದೆ. ಆದರೆ ಸಮಾಜದ ಕಟ್ಟಕಡೆಯ ಮಗು ಶಿಕ್ಷಣದಿಂದ ವಂಚಿತವಾಗಬಾರದೆಂಬ ಉದ್ದೇಶ ಸರ್ಕಾರದ್ದಾಗಿದೆ. ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಿ ಮಾತೃ ಭಾಷೆಯ ಜೊತೆಗೆ ಉನ್ನತ ಶಿಕ್ಷಣಕ್ಕಾಗಿ ಸ್ಪೋಕನ್ ಇಂಗ್ಲಿಷ್ ಕಲಿಸಲು ನಿರ್ಧಾರ ಮಾಡಲಾಗಿದೆ ಎಂದರು.