ಕೆಲವೊಮ್ಮೆ ಹಾಗಾಗುತ್ತದೆ. ಒಂದೊಳ್ಳೆಯ ಹೈಕ್ ಸಿಕ್ಕಿ, ಪ್ರೊಮೋಶನ್ ಸಿಕ್ಕಿ, ಕಚೇರಿಯಲ್ಲಿ ಸೀಟು ಬದಲಾಗಿದ್ದು ಯಾವಾಗ ಎಂದೇ ಮರೆತು ಹೋಗುತ್ತದೆ. ಬಹಳ ವರ್ಷಗಳಿಂದ ಆರಕ್ಕೇರದ, ಮೂರಕ್ಕಿಳಿಯದ ಸಂಬಳದಲ್ಲಿ ಕಳೆದೂ ಕಳೆದೂ ಅದಕ್ಕೇ ಹೊಂದಿಕೊಂಡುಬಿಡುವ ಭಯವೂ ಇರುತ್ತದೆ. ಕೆಲಸ ಬದಲಿಸಲು ಧೈರ್ಯವಿಲ್ಲ, ಕಂಫರ್ಟ್ ಝೋನ್‌ನಿಂದ ಹೊರಬರಲು ಆತಂಕ, ಅಲ್ಲೇ ಇದ್ದರೆ ನಿಂತ ನೀರಾಗಿ ಕೊಳೆತು ನಾರುವ ಭಯ, ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎಂಬ ಪರಿಸ್ಥಿತಿ, ನಿಮಗಿಂತ ಬಹಳ ಕಿರಿಯರೆಲ್ಲಾ ವೃತ್ತಿ ಬದುಕಿನಲ್ಲಿ ನಿಮ್ಮನ್ನು ದಾಟಿ ಮುಂದೆ ಹೋಗುವುದನ್ನು ನೋಡಿಯೂ ನೋಡದವರಂತಿರಬೇಕಾದ ಅನಿವಾರ್ಯತೆ...  ಹೌದು, ಎಲ್ಲ ಉದ್ಯೋಗಿಯ ಬದುಕಲ್ಲೂ ಏರುವುದು, ಇಳಿಯುವುದು ಇದ್ದೇ ಇರುತ್ತದೆ. ಯಶಸ್ಸಿನ ಹಾದಿಯಲ್ಲಿ ಅವೆಲ್ಲ ಸಾಮಾನ್ಯ. ಆದರೆ ವೃತ್ತಿಯ ಏಣಿಯಲ್ಲಿ ಏರಲು ನಿರಂತರ ಪ್ರಯತ್ನ ಬೇಕು. ಹಾಗೆ ನಿಮಗೂ ನೀವು ವೃತ್ತಿಯ ಹಾದಿಯಲ್ಲಿ ನಿಂತುಬಿಟ್ಟಿದ್ದೀರಿ ಎನಿಸಿದರೆ ಮುಂದೆ ಸಾಗಲು ಏನು ಮಾಡಬೇಕೆಂದು ಇಲ್ಲಿದೆ ಓದಿ...

ಕಾರಣ ಹುಡುಕಿ

ಎಲ್ಲಕ್ಕಿಂತ ಮೊದಲು ನೀವು ಏಕೆ ವೃತ್ತಿಯಲ್ಲಿ ಮುಂದೆ ಹೋಗುತ್ತಿಲ್ಲ ಎಂಬುದಕ್ಕೆ ಕಾರಣ ಹುಡುಕಿ. ನಿಮಗೆ ಕೆಲಸ ಬೋರಾಗಿ ಹೊಸತೇನನ್ನೂ ಕಲಿಯುತ್ತಿಲ್ಲವೇ ಅಥವಾ ಕಚೇರಿಯಲ್ಲಿ ರಾಜಕೀಯವೇ? ಅಥವಾ ಕಚೇರಿಯ ಪಾಲಿಸಿಗಳು ಅಡ್ಡಿಯಾಗಿವೆಯೇ? ನಿಮಗಿಂತ ಇತರರು ಹೆಚ್ಚು ಕ್ಷಮತೆ ಹೊಂದಿದ್ದಾರೆಯೇ- ಹೀಗೆ ಎಲ್ಲ ಅಂಶಗಳನ್ನೂ ಗಮನಿಸಿ ಕಾರಣ ಕಂಡುಕೊಳ್ಳಿ. ಕಾರಣ ಗೊತ್ತಾದ ಬಳಿಕ ಪರಿಹಾರ ಹುಡುಕುವುದು ಸುಲಭವಲ್ಲವೇ?

ಕೆಲಸದ ಇಂಟರ್‌ವ್ಯೂ ಎಂದರೆ ತಮಾಷೇನಾ?

ಕಲಿಯುವುದು ನಿಲ್ಲಿಸಬೇಡಿ

ಕಾರ್ಪೋರೇಟ್ ವಲಯದಲ್ಲಿ(ಎಲ್ಲ ವಲಯದಲ್ಲೂ) ನೀವು ಉಳಿಯಬೇಕು, ಬೆಳೆಯಬೇಕು ಎಂದರೆ ನಿರಂತರ ಕಲಿಕೆ ಅಗತ್ಯ. ನಿಮ್ಮ ಕೌಶಲ್ಯಗಳನ್ನು ಆಗಾಗ ಅಪ್ಡೇಟ್ ಮಾಡಿಕೊಳ್ಳುತ್ತಿರಬೇಕು. ನಿಮ್ಮ ಕೆಲಸಕ್ಕೆ ಬೇಕಾಗುವಷ್ಟು ಕೌಶಲ ಹಾಗೂ ಜ್ಞಾನ ನಿಮಗಿದೆ ಎಂದು ನೀವಂದುಕೊಂಡಿರಬಹುದು. ಆದರೆ, ಅದಕ್ಕಿಂತ ಹೆಚ್ಚನ್ನು ತಿಳಿದುಕೊಂಡರೆ, ಹೊಸತನ್ನು ಕಲಿತರೆ ಸಹೋದ್ಯೋಗಿಗಳಿಗಿಂತ ಹೆಚ್ಚು ರೈಸಬಹುದಲ್ಲವೇ? ಹೊಸ ಆನ್ಲೈನ್ ಕೋರ್ಸ್, ಹೊಸ ತಂತ್ರಜ್ಞಾನಗಳ ಕುರಿತ ಜ್ಞಾನ, ಕಲಿಕೆ, ಕಚೇರಿಯ ವರ್ಕ್‌ಶಾಪ್‌ಗಳಲ್ಲಿ ಭಾಗವಹಿಸುವುದು ಎಲ್ಲವೂ ನೀವು ಏನನ್ನು ಬೇಕಾದರೂ ಕಲಿಯಲು ಉತ್ಸುಕರಾಗಿದ್ದೀರಿ ಹಾಗೂ ಸಾಧಿಸಿ ತೋರಿಸುತ್ತೀರಿ ಎಂಬುದನ್ನು ಸೂಚಿಸುತ್ತವೆ. ಜೊತೆಗೆ ಹೊಸ ಕಲಿಕೆಯು ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಪ್ರಮೋಶನ್, ಸ್ಯಾಲರಿ ಹೈಕ್‌ಗಳನ್ನು ಕೊಡದಿದ್ದರೆ ಕೇಳಿ ಪಡೆಯುವಷ್ಟು ನಿಮ್ಮ ಮೇಲೆ ನಂಬಿಕೆ ಹುಟ್ಟುತ್ತದೆ. ಇದನ್ನು ನಿಮ್ಮ ಬಾಸ್ ಕೂಡಾ ಗಮನಿಸುತ್ತಿರುತ್ತಾರೆ. 

ಅವಕಾಶಗಳನ್ನು ಕೇಳಿ ಪಡೆಯಿರಿ

ಕೈಯ್ಯಲ್ಲಿ ಮತ್ತೊಂದು ಕೆಲಸವಿಲ್ಲದೆ ಇದ್ದಕ್ಕಿದ್ದಂತೆ ಉದ್ಯೋಗ ಬಿಡುವುದು ಬುದ್ಧಿವಂತಿಕೆಯಲ್ಲ, ಅದರ ಬದಲು ನಿಮ್ಮ ಮ್ಯಾನೇಜರ್ ಬಳಿ ನಿಮ್ಮನ್ನು ಕಾಡುತ್ತಿರುವ ವೃತ್ತಿಯ ವಿಷಯಗಳ ಕುರಿತು ಚರ್ಚಿಸಿ. ನೀವು ಅರ್ಹತೆಯಿದ್ದರೂ ಏಕೆ ಪ್ರಮೋಷನ್ ಪಡೆದಿಲ್ಲವೆಂಬುದನ್ನು ವಿಚಾರಿಸಿ. ನಿಮ್ಮ ಕೆಆರ್‌ಎ ಬದಲಿಸಲು ಕೂಡಾ ನೀವು ಕೇಳಬಹುದು. ಬೇರೆ ಟೀಂ ಜೊತೆ ಸೇರುವ ಇರಾದೆಯಿದ್ದಲ್ಲಿ ಕೇಳಬಹುದು.  ಇನ್ನು ನಿಮ್ಮ ಕಾರ್ಯಕ್ಷಮತೆ ಹೇಗಿದೆ ಎಂಬ ಬಗ್ಗೆಯೂ ಅವರಲ್ಲಿ ವಿಚಾರಿಸಿ, ಎಲ್ಲಿ ಬದಲಾಗಬೇಕು, ಹೇಗೆ ಬದಲಾಗಬೇಕೆಂದು ವಿಚಾರಿಸಬಹುದು.

ಪ್ರಾಣಿ ಪ್ರಿಯರಿಗೊಂದು ಪ್ರಿಯ ಕೆರಿಯರ್...

ಫ್ರೀಲ್ಯಾನ್ಸ್

ಹೊಸ ಕೆಲಸಕ್ಕೆ ಜಿಗಿಯಬೇಕೆಂದು ಯೋಜಿಸಿದರೆ ಅದು ಕಾರ್ಯರೂಪಕ್ಕೆ ಬರುವಾಗ ಹಲವು ತಿಂಗಳಾಗಬಹುದು. ಈ ಸಂದರ್ಭದಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ಆರಂಭಿಸಿ ನೋಡಬಹುದು. ಹೊಸ ಅಸೈನ್‌ಮೆಂಟ್‌ಗಳನ್ನು ತೆಗೆದುಕೊಂಡು ಪೂರೈಸುತ್ತಿರಿ. ಇದು ಚೆನ್ನಾಗಿ ನಡೆದರೆ ಇದನ್ನೇ ಮುಂದುವರಿಸಬಹುದು.

ನೆಟ್ವರ್ಕಿಂಗ್

ಪ್ರೊಫೆಶನಲ್ ನೆಟ್ವರ್ಕಿಂಗ್‌ನ ಶಕ್ತಿಯನ್ನು ಕಡೆಗಣಿಸಬೇಡಿ. ಹೊಸ ಕೆಲಸ, ಹೊಸ ಕ್ಷೇತ್ರ, ಫ್ರೀಲ್ಯಾನ್ಸಿಂಗ್ ಅಸೈನ್ಮೆಂಟ್ಸ್ ಅಥವಾ ಯಾವುದೇ ಸಲಹೆಗಳಿಗಾಗಿ ಎದುರು ನೋಡುತ್ತಿದ್ದರೆ ನಿಮ್ಮ ಸಹೋದ್ಯೋಗಿಗಳ ಬಳಿ ಹೇಳಿಕೊಳ್ಳಿ. ಲಿಂಕ್ಡ್ಇನ್ ಇನ್ನಿತರೆ ಪ್ರೊಫೈಲ್‌ಗಳನ್ನು ಅಪ್ಡೇಟ್ ಮಾಡಿ. 

ಬ್ರೇಕ್ ತೆಗೆದುಕೊಳ್ಳಿ

ಕೆಲವೊಮ್ಮೆ ನಾವು ನಮ್ಮ ಕೆಲಸ ಹಾಗೂ ಕಚೇರಿಯಲ್ಲಿ ಎಷ್ಟು ಕಂಫರ್ಟ್ ಆಗಿಬಿಟ್ಟಿರುತ್ತೆವೆಂದರೆ ಅಲ್ಲಿ ಕಲಿಯಲು ಅವಕಾಶಗಳಿಲ್ಲವೆಂಬುದು ಅರಿವಿಗೆ ಬರುವ ಹೊತ್ತಿಗೆ ಬಹಳ ವರ್ಷಗಳೇ ಕಳೆದಿರುತ್ತವೆ. ಕೆಲವು ದಿನ ಬ್ರೇಕ್ ತೆಗೆದುಕೊಂಡು ದೊಡ್ಡ ಟ್ರಿಪ್ ಮಾಡಿ ಬರುವುದು, ಇಲ್ಲವೇ ರಜೆ ಹಾಕಿ ಮನೆಯಲ್ಲಿದ್ದು ಆತ್ಮಾವಲೋಕನ ಮಾಡಿಕೊಳ್ಳುವುದರಿಂದ ವೃತ್ತಿಜೀವನ ನಿಂತಿರುವ ಅರಿವಾಗುತ್ತದೆ. ಅಲ್ಲದೆ ಮುಂದೇನು ಮಾಡಬಹುದೆಂದು ಯೋಚಿಸಲೂ ಸಮಯಾವಕಾಶ ಸಿಗುತ್ತದೆ.

ಕೆಲಸದಲ್ಲಿ ಏಕಾಗ್ರತೆ ಇಲ್ಲವೇ? ಹೀಗೆ ಮಾಡಿ ನೋಡಿ..

ಬಿಟ್ಟುಕೊಡಬೇಡಿ

ಹೀಗೆ ನಿಂತ ನೀರಾದ ಸ್ಟೇಜ್ ಬಹಳ ಕಿರಿಕಿರಿ ಎನಿಸುತ್ತದೆ. ಆದರೆ, ಟೆನ್ಷನ್ ಆಗಬೇಡಿ. ನೀವೊಬ್ಬರೇ ಅಲ್ಲ, ಬಹುತೇಕ ಉದ್ಯೋಗಿಗಳು ಈ ಹಂತದ ಅನುಭವ ಪಡೆಯುತ್ತಾರೆ. ಈ ವೃತ್ತಿಜಡತ್ವವು ನಿಮ್ಮನ್ನು ಕೆಳಗೆಳೆಯಲು ಬಿಡಬೇಡಿ. ಬದಲಿಗೆ ಮೇಲೇರಲು ಏನೇನು ಮಾಡಬಹುದು ಯೋಚಿಸಿ, ಕಾರ್ಯಾರಂಭಿಸಿ.