ಕೊರೋನಾ ಇದೊಂದು ಸಾಂಕ್ರಾಮಿಕ ರೋಗ ಎಂದು ದೃಢಪಟ್ಟತಕ್ಷಣ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿ ಆಗುವುದನ್ನು ಕಡಿಮೆ ಮಾಡಿರುವುದು. ಇದರಿಂದ ವಿದ್ಯಾರ್ಥಿಗಳಿಗೆ, ಪಾಲಕರಿಗೆ, ಶಿಕ್ಷಕ ಸಮುದಾಯಕ್ಕೆ ಹಾಗೂ ಸಾರ್ವಜನಿಕರಿಗೂ ರಕ್ಷಣೆ ನೀಡುವ ಮೂಲಕ ರೋಗ ಹರಡದಂತೆ ಎಚ್ಚರಿಕೆ ವಹಿಸಿತು. ಮತ್ತು ರಾಷ್ಟ್ರದ ವಿದ್ಯಾಸಂಪತ್ತನ್ನು ರಕ್ಷಿಸಿದ ಕೀರ್ತಿ ಸರ್ಕಾರದ್ದಾಯಿತು.

ಮಾರ್ಚ್ 14ರಿಂದ 10 ದಿನಗಳ ರಜೆಯನ್ನು ಅನುಭವಿಸಿ ಸಂತಸದಲ್ಲಿದ್ದು, ಪಾಠ ಪ್ರವಚನ ಮತ್ತು ಪರೀಕ್ಷೆಗಳ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿ ಸಮುದಾಯಕ್ಕೆ ಇನ್ನೂ 21 ದಿನಗÜಳ ಭಾರತ ಲಾಕ್‌ಡೌನ್‌ ಪ್ರಕಟಣೆ ಒಮ್ಮೆಲೇ ಚಿಂತಾಕ್ರಾಂತರನ್ನಾಗಿಸಿದೆ.

9 ನೇ ತರಗತಿ ವರೆಗಿನ ಎಲ್ಲಾ ಪರೀಕ್ಷೆಯನ್ನು ರದ್ದುಪಡಿಸಿ, 10ನೇ ತರಗತಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಮುಂದೂಡಿ ಸೂಕ್ತ ಸಮಯ ನೀಡಿ ಪರೀಕ್ಷೆ ನಡೆಸಲಾಗುವುದೆಂದು ಸರ್ಕಾರ ಪ್ರಕಟಿಸಿದ ಮೇಲೆ ಸಂಬಂಧಪಟ್ಟವಿದ್ಯಾರ್ಥಿಗಳು ಹಾಗೂ ಪಾಲಕರು ನಿರಾತಂಕಗೊಂಡು ನಿಟ್ಟುಸಿರು ಬಿಡುವಂತಾಯಿತು.

ಖಾಸಗಿ ಶಿಕ್ಷಣ ಸಂಸ್ಥೆಗಳೇ ಎಚ್ಚರ, ಶಿಕ್ಷಣ ಇಲಾಖೆಯ ಖಡಕ್ ಸೂಚನೆ ಒಮ್ಮೆ ನೋಡಿ

ಕಾಲೇಜು ವಿದ್ಯಾರ್ಥಿಗಳ ಭವಿಷ್ಯ?

ಆದರೆ ಸಂದಿಗ್ಧಕ್ಕೆ ಸಿಲುಕಿದವರು ಇನ್ನೂ ಪಠ್ಯಮುಗಿಯದ, ಪಾಠ ಪ್ರವಚನ ಆಗದ ಸೆಮಿಸ್ಟರ್‌ ಪರೀಕ್ಷೆಯ ನಿರೀಕ್ಷೆಯಲ್ಲಿರುವ ಕಾಲೇಜು ಶಿಕ್ಷಣ, ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಅರೆ ವೈದ್ಯಕೀಯ, ಕಾನೂನು, ಲಲಿತಕಲೆ ಮುಂತಾದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು. ಹೌದು ಈ ಎಲ್ಲಾ ಶಿಕ್ಷಣಕ್ಕೆ ಹೋಲಿಸಿದಾಗ ಪ್ರಾಯಶಃ ಕಾಲೇಜು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಕೊರೋನಾ ಲಾಕ್‌ಡೌನ್‌ ಪ್ರಭಾವ ಈ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂದರೆ ತಪ್ಪಾಗಲಿಕ್ಕಿಲ್ಲ.

ಕಾಲೇಜು ಶಿಕ್ಷಣಕ್ಕೆ ಸಂಬಂಧಪಟ್ಟಂತೆ, ರಾಜ್ಯದ ಎಲ್ಲಾ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಸೆಮಿಸ್ಟರ್‌ ಪದ್ದತಿಯನ್ನು ಅಳವಡಿಸಿಕೊಂಡು ಬೆಸ ಸೆಮಿಸ್ಟರ್‌ ಮುಗಿಸಿ, ಕಳೆದ ಡಿಸೆಂಬರ್‌/ಜನವರಿಯಿಂದ ಸಮ ಸೆಮಿಸ್ಟರ್‌ ಪ್ರಾರಂಭಿಸಿ ಮಾಚ್‌ರ್‍/ಏಪ್ರಿಲ್‌ ತಿಂಗಳೊಳಗೆ ಪಾಠ ಪ್ರವಚನ, ಗೃಹಪಾಠ, ಆಂತರಿಕ ಮೌಲ್ಯಮಾಪನ ಪರೀಕ್ಷೆಗಳನ್ನೆಲ್ಲಾ ಮುಗಿಸಿ ವಿದ್ಯಾರ್ಥಿಗಳನ್ನು ಸೆಮಿಸ್ಟರ್‌ ಪರೀಕ್ಷೆಗೆ ಸಿದ್ಧಗೊಳಿಲು ತಯಾರಿ ನಡೆಸುತ್ತಿದ್ದವು. ಹೀಗಿರುವಾಗಲೇ ಏಕಾಏಕಿ ಕೊರೋನಾ ಆಕ್ರಮಣದಿಂದಾಗಿ ಭಾರತ ಲಾಕ್‌ಡೌನ್‌ ಪ್ರಕಟಿಸಿರುವುದರಿಂದ ಉ®್ನÜತ ಶಿಕ್ಷಣ ಸಂಸ್ಥೆಯ ವಿಶೇಷವಾಗಿ ಕಾಲೇಜು ಶಿಕ್ಷಣ ಪಡೆಯುವ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಪಾಠ, ಪರೀಕ್ಷೆ ಹೇಗೆ?

ಪಠ್ಯದ ಅವಧಿ ಇನ್ನೂ ಮುಗಿಯದ ಕಾರಣ ಬಾಕಿ ಇರುವ ಪಠ್ಯಕ್ರಮ, ಪಾಠ ಪ್ರವಚನ, ಆಂತರಿಕ ಮೌಲ್ಯಮಾಪನ ಹಾಗೂ ಸೆಮಿಸ್ಟರ್‌ ಪರೀಕ್ಷೆಗಳ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಗೊಂದಲ ಇರುವುದು ಸ್ವಾಭಾವಿಕ. ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಓದುತ್ತಿರುವ ಪದವಿ ತರಗತಿಗಳ ವಿದ್ಯಾರ್ಥಿಗಳು ಹಾಗೂ ಮೊದಲ ವರ್ಷದಲ್ಲಿ ಓದುತ್ತಿರುವ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಕುರಿತಾಗಿ ಅಷ್ಟೇನು ಚಿಂತಿಸದಿದ್ದರೂ, ಅಂತಿಮ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಮುಂದಿನ ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ಹಂಬಲಿಸಿ ವಿವಿಧ ಯೋಜನೆಗಳನ್ನು ಹಾಕಿಕೊಂಡವರ ಭವಿಷ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಾದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಂತಾಗಬೇಕು.

ಹಲೋ ವಿದ್ಯಾರ್ಥಿಗಳೇ ಉನ್ನತ ಶಿಕ್ಷಣ ಸಚಿವರು ಮಹತ್ವದ ಮಾಹಿತಿ ಕೊಟ್ಟಿದ್ದಾರೆ ನೋಡಿ..!

ಲಾಕ್‌ಡೌನ್‌ ಅವಧಿ ಮುಗಿದರೂ, ಕೊರೋನಾ ರೋಗ ಹರಡುವ ಭೀತಿ ಇರುವುದರಿಂದ ಈ ವಿದ್ಯಾರ್ಥಿಗಳನ್ನು ವಿದ್ಯಾಲಯಕ್ಕೆ ಕರೆಸಿ ಪಾಠ ಮಾಡಿ ಪಠ್ಯ ಮುಗಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ. ಆದ್ದರಿಂದ ವಿಶ್ವವಿದ್ಯಾಲಯಗಳು, ಯೋಗ್ಯ ಚಿಂತನೆ ಮಾಡಿ ಸೂಕ್ತ ಪರಿಹಾರ ಸೂಚಿಸಿದಲ್ಲಿ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕ ಸಮುದಾಯದವರು ನಿರಾಳವಾಗಿರಬಹುದು.

ವಿವಿಗಳಿಗಿರುವ ಸವಾಲುಗಳೇನು?

ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಹಾಲಿ ಇರುವ ಸವಾಲುಗಳೆಂದರೆ ಬಾಕಿ ಇರುವ ಪಾಠ ಪ್ರವಚನ ಮಾಡಿ, ಪಠ್ಯವನ್ನು ಮುಗಿಸಿ, ಆಂತರಿಕ ಮೌಲ್ಯಮಾಪನ ಪರೀಕ್ಷೆ ನಡೆಸಿ, ಸೆಮಿಸ್ಟರ್‌ ಪರೀಕ್ಷೆ ನಡೆಸಿ, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿಸಿ, ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿ, ವಿದ್ಯಾರ್ಥಿಗಳಿಗೆ ಮುಂದಿನ ದಾರಿ ತೋರಿಸುವುದು. ಇದು ಸುಲಭದ ಕೆಲಸವೇನಲ್ಲ. ಈ ದಿಸೆಯಲ್ಲಿ ಬಾಕಿ ಇರುವ ಪಾಠ ಪ್ರವಚನಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ದೂರ ಸಂಪರ್ಕ ಮಾಧ್ಯಮಗಳಾದ ಆನ್‌ಲೈನ್‌, ಯುಟ್ಯೂಬ್‌ ಅಥವಾ ಇನ್ನಿತರ ಉಪಯುಕ್ತ ಆ್ಯಪ್‌ ಬಳಸಿ ಪಠ್ಯ ಮುಗಿಸಬಹುದಾಗಿದೆ.

ಆದರೆ ಈ ತಂತ್ರಜ್ಞಾನದ ಉಪಯೋಗ ಮತ್ತು ಯಶಸ್ಸು ಆಯಾ ಕಾಲೇಜಿನ ಶಿಕ್ಷಕರ ತಂತ್ರಜ್ಞಾನ ಬಳಕೆಯ ಸಾಮರ್ಥ್ಯ ಮತ್ತು ವಿದ್ಯಾರ್ಥಿಗಳ ವಿಶೇಷವಾಗಿ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಿಗುವ ಅಂತರ್ಜಾಲ ಸೌಲಭ್ಯದ ಮೇಲೆ ಅವಲಂಬಿತವಾಗಿರುತ್ತದೆ.

ವಿಜ್ಞಾನ, ಸಂಗೀತ, ಭೂಗೋಳ, ಮುಂತಾದ ವಿಭಾಗಗಳ ಪ್ರಾಯೋಗಿಕ ವಿಷಯಗಳ ಬೋಧನೆ ಮತ್ತು ಪ್ರಯೋಗಕ್ಕಾಗಿ ವಿದ್ಯಾರ್ಥಿಗಳ ವೈಯಕ್ತಿಕ ಹಾಜರಿ ಅನಿವಾರ್ಯವಾಗಬಹುದು. ಈ ಕುರಿತಾಗಿ ವಿಶ್ವವಿದ್ಯಾಲಯ ಮತ್ತು ಕಾಲೇಜು ಮುಖ್ಯಸ್ಥರು ಜಂಟಿಯಾಗಿ ಚಿಂತಿಸಿ ಸೂಕ್ತ ಪರಿಹಾರ ಕಂಡುಕೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕಾಗುವುದು.

ಪರೀಕ್ಷೆ ನಡೆಸೋದು ಹೇಗೆ?

ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ, ಪಾಠಕ್ಕಿಂತ ಪರೀಕ್ಷೆ ನಡೆಸುವುದೇ ವಿದ್ಯಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿದೆ. ಪಾಠ ಪ್ರವಚನಗಳನ್ನು ಬೇರೆ ಬೇರೆ ಮಾರ್ಗದ ಮೂಲಕ ಮಾಡಬಹುದು. ಆದರೆ ಪರೀಕ್ಷೆ ನಡೆಸಲು ಬೇರೆ ಬೇರೆ ದಾರಿಗಳಿದ್ದರೂ, ಕಾಲೇಜು ಶಿಕ್ಷಣಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳನ್ನು ಕಾಲೇಜಿಗೆ ಖುದ್ದು ಕರೆಸಿ, ಕೊಠಡಿಯಲ್ಲಿ ಕೂರಿಸಿ ಲಿಖಿತ ಪರೀಕ್ಷೆ ನಡೆಸುವುದನ್ನು ಬಿಟ್ಟರೆ ಇನ್ಯಾವುದೇ ಸಮರ್ಥನೀಯ ದಾರಿ ಸದ್ಯದ ಪರಿಸ್ಥಿತಿಯಲ್ಲಿ ಕಾಣಸಿಗದು.

ಆಂತರಿಕ ಮೌಲ್ಯಮಾಪನ ಪರೀಕ್ಷೆಗೆ ಸಂಬಂಧಪಟ್ಟಂತೆ, ಯಾವ ಮಹಾವಿದ್ಯಾಲಯ ಮತ್ತು ವಿಶ್ವವಿದ್ಯಾಲಯಗಳಲ್ಲಿ 02 ಪರೀಕ್ಷೆಗಳನ್ನು ಮಾಡುವರೋ ಅಂತಹ ವಿದ್ಯಾಸಂಸ್ಥೆಗಳು ಈಗಾಗಲೇ ನಡೆಸಿದ ಮೊದಲ ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಪಡೆದ ಅಂಕವನ್ನೇ ದ್ವಿತೀಯ ಪರೀಕ್ಷೆಯ ಅಂಕವನ್ನಾಗಿ ಪರಿಗಣಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬಹುದು.

ಆದರೆ ಸೆಮಿಸ್ಟರ್‌ ಪರೀಕ್ಷೆ ನಡೆಸುವಲ್ಲಿ ಸಾಕಷ್ಟುಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳದೇ ಪರೀಕ್ಷೆ ನಡೆಸಿದಲ್ಲಿ ವಿದ್ಯಾಸಂಸ್ಥೆಗಳೇ ಕೊರೋನಾ ಹರಡುವ ಕೇಂದ್ರಗಳಾಗಬಹುದು. ಆದ್ದರಿಂದ ಪರೀಕ್ಷಾ ಕೇಂದ್ರವಿರುವ ವಿದ್ಯಾಸಂಸ್ಥೆಗಳ ಎಲ್ಲಾ ಕೊಠಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿ ಆದಷ್ಟುದೂರದಿಂದಲೇ ವಿದ್ಯಾರ್ಥಿಗಳನ್ನು ಮೇಲ್ವಿಚಾರಣೆ ಮಾಡಿ ಪರೀಕ್ಷೆ ನಡೆಸಬಹುದು. ಪರೀಕ್ಷಾ ಪ್ರವೇಶ ಪತ್ರ ಮತ್ತು ಗುರುತಿನ ಚೀಟಿಯನ್ನು ದೂರದಿಂದಲೇ ಪರಿಶೀಲಿಸಿ ಪ್ರತಿ ಕೊಠಡಿಯಲ್ಲೂ ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳಿಗಿಂತ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಬಹುದು.

ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಬರುವ ಪೂರ್ವದಲ್ಲಿಯೇ ನೀಡಿ ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಿಂದ ನಿರ್ಗಮಿಸಿದ ಮೇಲೆ ಉತ್ತರ ಪತ್ರಿಕೆಯನ್ನು ಸಂಗ್ರಹಿಸಿಕೊಳ್ಳುವ ಸಿದ್ಧತೆಯನ್ನು ಉಪನ್ಯಾಸಕರು ಮಾಡಿಕೊಳಬ್ಳೇಕು. ಹೀಗೆ ಪರೀಕ್ಷೆ ನಡೆಸಲು ಸಾಕಷ್ಟುಪೂರ್ವಸಿದ್ಧತೆ ಮಾಡಿಕೊಂಡು ಪರೀಕ್ಷೆ ನಡೆಸಿದಲ್ಲಿ ಕೊರೋನಾ ರೋಗ ಹರಡುವುದನ್ನು ತಡೆಗಟ್ಟಬಹುದು.

ಮೌಲ್ಯಮಾಪನದಲ್ಲಿ ಮಾರ್ಪಾಡು

ಸೆಮಿಸ್ಟರ್‌ ಪರೀಕ್ಷೆ ನಡೆಸುವಷ್ಟೇ ದೊಡ್ಡ ಸವಾಲು ಮೌಲ್ಯಮಾಪನ ಪ್ರಕ್ರಿಯೆಯಲ್ಲೂ ಇದೆ. ಸದ್ಯದ ವ್ಯವಸ್ಥೆಯಲ್ಲಿ ಎಲಾ ್ಲವಿಶ್ವವಿದ್ಯಾಲಯಗಳು ಕೇಂದ್ರೀಕೃತ ಮೌಲ್ಯಮಾಪನ ವ್ಯವಸ್ಥೆಯನ್ನು ಹೊಂದಿದ್ದು, ಕೊಠಡಿ ತುಂಬಾ ಮೌಲ್ಯಮಾಪಕರನ್ನು ಕೂರಿಸಿ ವಿಶ್ವವಿದ್ಯಾಲಯಗಳಲ್ಲಿಯೇ ಮೌಲ್ಯಮಾಪನ ಮಾಡಿಸಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಈ ವ್ಯವಸ್ಥೆಯನ್ನು ಮುಂದುವರಿಸಿದರೆ, ಮೌಲ್ಯಮಾಪನದ ಕೇಂದ್ರಗಳೇ ಕೊರೋನಾ ಹರಡುವ ಕೇಂದ್ರಗಳಾಗುವ ಅಪಾಯ ಇದೆ.

ಆದ್ದರಿಂದ ಕೇಂದ್ರೀಕೃತ ಮೌಲ್ಯಮಾಪನ ವ್ಯವಸ್ಥೆಯನ್ನು ಕೈಬಿಟ್ಟು, ವಿಕೇಂದ್ರೀಕರಣ ಮಾಡಿ ಸ್ಥಾನೀಕೃತ ವ್ಯವಸ್ಥೆಯನ್ನು ಜಾರಿಗೆ ತಂದು, ಆಯಾ ಕಾಲೇಜು ಅಥವಾ ತಾಲೂಕು ಮಟ್ಟದಲ್ಲಿ ಮೌಲ್ಯಮಾಪನ ವ್ಯವಸ್ಥೆ ಮಾಡಿದರೆ, ಮೌಲ್ಯಮಾಪನ ಕಾರ್ಯ ಸುಗಮವಾಗಿ ಸಾಗಿ, ಸೂಕ್ತ ವೇಳೆಯಲ್ಲಿ ಫಲಿತಾಂಶ ಪ್ರಕಟಿಸಲೂ ಅನುಕೂಲವಾಗಬಹುದು. ಅತಿಥಿ ಉಪನ್ಯಾಸಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪದವಿ ಕಾಲೇಜುಗಳಲ್ಲಿ ಅಲ್ಪಸಂಖ್ಯಾತ ಖಾಯಂ ಉಪನ್ಯಾಸಕರಿಂದ ಮಾತ್ರ ಮೌಲ್ಯಮಾಪನ ಕಾರ್ಯ ಮಾಡಿಸಿ ವೇಳೆಗೆ ಸರಿಯಾಗಿ ಫಲಿತಾಂಶ ಪ್ರಕಟಿಸುವುದು ಕನಸಿನ ಮಾತಾದೀತು.

ಆದ್ದರಿಂದ ಖಾಯಂ ಉಪನ್ಯಾಸಕರೊಂದಿಗೆ ಅತಿಥಿ ಉಪನ್ಯಾಸಕರ ಸಹಕಾರವನ್ನೂ ನಿರೀಕ್ಷಿಸಬೇಕಾಗುತ್ತದೆ. ಈ ದಿಸೆಯಲ್ಲಿ ವಿಶ್ವವಿದ್ಯಾಲಯಗಳು ಈ ಕೂಡಲೇ ಚಿಂತನೆ ಮಾಡಿ, ಮೇಲೆ ನಮೂದಿಸಿದ ಎಲ್ಲಾ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು.

- ಡಾ. ವಿನಾಯಕ ಎಂ. ಭಂಡಾರಿ

ಹೊನ್ನಾವರ