ಮಳಲಿ ಮಸೀದಿ ವಿವಾದ: ಮಂಗಳೂರು ಕೋರ್ಟ್ ಆದೇಶದಲ್ಲಿ ಏನಿದೆ ನೋಡಿ..
ಮಂಗಳೂರು ಸಿವಿಲ್ ಕೋರ್ಟ್ ಇಂದು ನೀಡಿದ ಮಹತ್ವದ ತೀರ್ಪು ಮಳಲಿ ಮಸೀದಿ ವಿವಾದವನ್ನೂ ಜ್ಞಾನವಾಪಿ ಮಾದರಿಯಲ್ಲೇ ಸಾಗಿಸುವ ಎಲ್ಲಾ ಸೂಚನೆ ಕೊಟ್ಟಿದೆ.
(ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು)
ಮಂಗಳೂರು: ಮಳಲಿ ಮಸೀದಿ (Malali Masjid) ವಿವಾದ ಸಂಬಂಧ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ (Mangaluru Civil Court) ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಮಳಲಿ ಮಸೀದಿ ವಿವಾದದ ಮುಂದಿನ ಎಲ್ಲಾ ಅರ್ಜಿಗಳ ಕುರಿತ ವಿಚಾರಣೆಗೆ ಹೊಸ ದಿಕ್ಕು ಕಲ್ಪಿಸಿದ್ದು, ಡಿಸೆಂಬರ್‌ನಿಂದ ಮಂಗಳೂರು ಕೋರ್ಟ್‌ನಲ್ಲಿ ಈ ಬಗ್ಗೆ ವಾದ-ಪ್ರತಿವಾದಗಳು ಆರಂಭಗೊಳ್ಳಲಿದೆ. ಮಂಗಳೂರು ಸಿವಿಲ್ ಕೋರ್ಟ್ ಇಂದು ನೀಡಿದ ಮಹತ್ವದ ತೀರ್ಪು ಮಳಲಿ ಮಸೀದಿ ವಿವಾದವನ್ನೂ ಜ್ಞಾನವಾಪಿ (Gyanvapi Case) ಮಾದರಿಯಲ್ಲೇ ಸಾಗಿಸುವ ಎಲ್ಲಾ ಸೂಚನೆ ಕೊಟ್ಟಿದೆ. ಅಷ್ಟಕ್ಕೂ ಮಳಲಿ ಮಸೀದಿ ಸಂಬಂಧ ಮಂಗಳೂರು ಕೋರ್ಟ್ ಕೊಟ್ಟ ತೀರ್ಪಿನ ಸಾರಾಂಶ ಏನು ಅನ್ನೋದು ಇಲ್ಲಿದೆ...
1) ವಕ್ಫ್ ಕಾಯ್ದೆ 1991ರ ಸೆಕ್ಷನ್ 85ರ ಅಡಿ ಸಿವಿಲ್ ಕೋರ್ಟ್‌ಗೆ ಅರ್ಜಿ ವಿಚಾರಣೆ ಅಧಿಕಾರ ಇಲ್ಲ ಎಂದು ಮಳಲಿ ಮಸೀದಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಸಿವಿಲ್ ಕಾಯ್ದೆ 151 ಅಡಿಯಲ್ಲಿ ಮಂಗಳೂರು ಕೋರ್ಟ್‌ಗೆ ವಿಎಚ್‌ಪಿ ಅರ್ಜಿ ವಿಚಾರಣೆ ನಡೆಸುವ ಅಧಿಕಾರ ಇಲ್ಲ ಅಂತ ಮಸೀದಿ ಆಡಳಿತ ಮಂಡಳಿ ವಾದಿಸಿತ್ತು. ಆದರೆ ಸುದೀರ್ಘ ವಿಚಾರಣೆ ನಡೆಸಿ ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಈ ಅರ್ಜಿಗಳನ್ನು ವಜಾಗೊಳಿಸಿದೆ. ಈ ಮೂಲಕ ವಕ್ಫ್ ಕಾಯ್ದೆಯ ಅಡಿಗೆ ಈ ವಿಚಾರ ಬರಲ್ಲ. ಸರ್ಕಾರಿ ಜಾಗದಲ್ಲಿ ಮಸೀದಿ ಇರೋ ಕಾರಣದಿಂದ ಸಿವಿಲ್ ಕೋರ್ಟ್‌ಗೆ ವಿಚಾರಣೆಯ ಅಧಿಕಾರ ವ್ಯಾಪ್ತಿ ಇದೆ ಅಂತ ಹೇಳಿದೆ. ಅಲ್ಲದೇ ಸಿವಿಲ್ ಕೋರ್ಟ್‌ಗೆ ವಿಚಾರಣೆ ನಡೆಸುವ ಅಧಿಕಾರ ಇದೆ ಎಂದು ಹೇಳಿ ಮಸೀದಿ ಆಡಳಿತದ ಅರ್ಜಿ ವಜಾ ಮಾಡಿದೆ.
ಇದನ್ನು ಓದಿ: Mangaluru: ಮಳಲಿ ಮಸೀದಿ ವಿವಾದ: ಇಂದೂ ಬರಲಿಲ್ಲ ತೀರ್ಪು; ನವೆಂಬರ್ 9 ಕ್ಕೆ ಆದೇಶ ಮುಂದೂಡಿಕೆ
2) ಪೂಜಾ ಸ್ಥಳ ಕಾಯಿದೆ 1991ರ ಅಡಿಯಲ್ಲೂ ಸಿವಿಲ್ ಕೋರ್ಟ್‌ಗೆ ಮಳಲಿ ಮಸೀದಿ ವಿಚಾರ ವಿಚಾರಣೆ ಮಾಡಲು ಆಗಲ್ಲ ಅಂತ ಮಸೀದಿ ಪರ ವಕೀಲರು ವಾದ ಮಂಡಿಸಿದ್ದರು. 1991 ಪೂಜಾಸ್ಥಳ ಕಾಯ್ದೆಯ ಪ್ರಕಾರ 1947ರ ಆಗಸ್ಟ್ 15ರ ಬಳಿಕ ದೇಶದಲ್ಲಿ ಇರುವ ಪೂಜಾ ಸ್ಥಳಗಳಲ್ಲಿ ಯಥಾ ಸ್ಥಿತಿಯನ್ನು ಕಾಪಾಡಿಕೊಂಡು ಬರಬೇಕು ಎಂದು ಆಯೋಧ್ಯೆ ಪ್ರಕರಣದ ಅನಂತರದ ಪರಿಸ್ಥಿತಿಯಲ್ಲಿ ಪಿ.ವಿ.ನರಸಿಂಹ ರಾವ್ ನೇತೃತ್ವದ ಸರಕಾರ ಈ ಕಾಯ್ದೆ ಜಾರಿಗೊಳಿಸಿತ್ತು.
ಕಾಯ್ದೆಯ ಸೆಕ್ಷನ್ ಮೂರರ ಅನ್ವಯ ಧಾರ್ಮಿಕ ಸ್ಥಳದ ಸ್ಥಿತಿಯನ್ನು ಬದಲಾಯಿಸುವುದನ್ನು ನಿಷೇಧಿಸಲಾಗಿದೆ. ಸೆಕ್ಷನ್ 4 (2)ರಲ್ಲಿ ಉಲ್ಲೇಖವಾಗಿರುವಂತೆ ಯಾವುದೇ ಧಾರ್ಮಿಕ ಕ್ಷೇತ್ರದ ವಿರುದ್ಧ ಕೋರ್ಟ್‌ಗಳಲ್ಲಿ 1947ರ ಆಗಸ್ಟ್ 15ರ ಒಳಗೆ ಸಲ್ಲಿಕೆ ಮಾಡಲಾಗಿರುವ ಅರ್ಜಿಗಳ ವಿಚಾರಣೆ ಮಾತ್ರ ನಡೆಯಬೇಕು. ಈ ದಿನಾಂಕದ ಅನಂತರ ಸಲ್ಲಿಕೆಯಾಗುವ ಹೊಸ ಅರ್ಜಿಗಳ ವಿಚಾರಣೆಯನ್ನು ಪರಿಗಣಿಸಬಾರದು ಎಂದು ಕಾಯ್ದೆ ಹೇಳುತ್ತದೆ. ಅದರಂತೆ ಮಸೀದಿ ಆಡಳಿತ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ: ಮಳಲಿ ಮಸೀದಿ ವಿವಾದ: ಹೈಕೋರ್ಟ್‌ನಲ್ಲಿ VHP ಅರ್ಜಿ ವಜಾ: ವಿವಾದ ಮತ್ತೆ ಮಂಗಳೂರು ಕೋರ್ಟ್‌ಗೆ
ಆದರೆ ಅದೇ ಕಾಯ್ದೆಯಲ್ಲಿ ರಾಷ್ಟ್ರೀಯ ಸ್ಮಾರಕ ಅಥವಾ ಐತಿಹಾಸಿಕ ಎಂದು ಪರಿಗಣಿತವಾಗಿರುವ, ಐತಿಹಾಸಿಕ ಸ್ಥಳಗಳು ಮತ್ತು ಪಳೆಯುಳಿಕೆಗಳ ಕಾಯ್ದೆ 1958ರ ಅನ್ವಯ ನಿಗದಿತ ಸ್ಥಳ ಘೋಷಣೆಯಾಗಿದ್ದರೆ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಸೆಕ್ಷನ್ 4ರಲ್ಲಿಯೇ ಉಲ್ಲೇಖಗೊಂಡಿದೆ. ಇದೇ ಅಂಶವನ್ನು ಮಳಲಿ ಮಸೀದಿ ಕೇಸ್‌ನಲ್ಲಿ ವಿಎಚ್‌ಪಿ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಹೀಗಾಗಿ ಈ ಆಧಾರದ ಮೇಲೆ ಮಸೀದಿಯ ಮತ್ತೊಂದು ಅರ್ಜಿಯೂ ವಜಾಗೊಂಡಿದೆ.
ಹೀಗಾಗಿ ಡಿಸೆಂಬರ್ 8ರಿಂದ ಅರ್ಜಿ ವಿಚಾರಣೆ ನಡೆಯಲಿದ್ದು, ಈ ವೇಳೆ ವಿಎಚ್‌ಪಿ (VHP) ಸಲ್ಲಿಸಿದ ಕೋರ್ಟ್ ಕಮಿಷನರ್ ನೇಮಕ, ಪ್ರಾಚೀನ ಸ್ಮಾರಕ ಕುರಿತ ಅರ್ಜಿಗಳು ವಿಚಾರಣೆ ನಡೆಯಲಿದೆ. ಒಟ್ಟಾರೆ ಈ ತೀರ್ಪು ಅಂತಿಮವಲ್ಲ. ಆದರೆ ವಿಎಚ್‌ಪಿ ಹೋರಾಟದ ಮೊದಲ ಗೆಲುವು ಅಷ್ಟೇ. ಇನ್ನು ಮುಂದೆ ಇದೇ ಸಿವಿಲ್ ಕೋರ್ಟ್ ಇದರ ಸುದೀರ್ಘ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: Gyanvapi case: ಶಿವಲಿಂಗ ಆರಾಧನೆ ಕೋರಿ ಸಲ್ಲಿಸಿರುವ ತೀರ್ಪು ನ.14ಕ್ಕೆ ಮುಂದೂಡಿಕೆ