ಕರ್ನಾಟಕದಲ್ಲಿ ಮತ್ತೊಂದು ಸೆಲ್ಫಿ ದುರಂತ: ನೋಡು ನೋಡುತ್ತಿದ್ದಂತೆಯೇ ಯುವಕನ ಪ್ರಾಣ ಹೋಯ್ತು
ಕರ್ನಾಟಕದಲ್ಲಿ ಮತ್ತೊಂದು ಸೆಲ್ಫಿ ದುರಂತ ಸಂಭವಿಸಿದೆ. ಇದೂ ನಿಜಕ್ಕೂ ಸೆಲ್ಫಿ ದುರಂತವೇ ಸರಿ. ಯಾಕಂದ್ರೆ ಇದು ಸ್ವಯಂಕೃತಾಪರಾಧ.
ಶಿವಮೊಗ್ಗ, (ಜ.12): ಸೆಲ್ಫಿ ಹುಚ್ಚು ಅದೆಷ್ಟರ ಮಟ್ಟಿಗೆ ಹೆಚ್ಚಿದೆ ಅಂದ್ರೆ ಜೀವದ ಮೇಲೆದ ಲೆಕ್ಕವೇ ಇರಲ್ಲ. ಇಂತಹದೊಂದು ಹುಚ್ಚಾಟಕ್ಕೆ ಯುವಕನ ಪ್ರಾಣವೇ ಹಾರಿಹೋಯ್ತು.
ಹೌದು...ಸೆಲ್ಫಿ ತೆಗೆಯಲೆಂದು ಜಲಾಶಯದ ಸಮೀಪದ ಮರ ಹತ್ತಿದ್ದ ಯುವಕನೋರ್ವ ತನ್ನ ಕುಟುಂಬದವರ ಕಣ್ಣೆದುರೇ ಕಾಲು ಜಾರಿ ತುಂಗಾ ಜಲಾಶಯಕ್ಕೆ ಬಿದ್ದು ಸಾವು ಕಂಡ ದುರ್ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಗನ್ ಹಿಡಿದುಕೊಂಡು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸತ್ತ!
ಮೃತ ಯುವಕನನ್ನು ನಗರದ ವಿನಾಯಕ(22) ಎಂದು ಗುರುತಿಸಲಾಗಿದೆ.ವಿನೊಬನಗರದ ವಿನಾಯಕ ಹುಬ್ಬಳ್ಳಿಯಲ್ಲಿ ಚಿನ್ನಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ, ತಮ್ಮ ಅಜ್ಜಿಯ ಕಾರ್ಯಕ್ಕೆಂದು ಶಿವಮೊಗ್ಗಕ್ಕೆ ಬಂದಿದ್ದ.
ಆದ್ರೆ, ಮಂಗಳವಾರ ಮಧ್ಯಾಹ್ನ ಕುಟುಂಬದವರ ಜೊತೆಗೆ ಗಾಜನೂರು ಜಲಾಶಯದ ನೋಡಲೆಂದು ತೆರಳಿದ್ದರು. ಈ ವೇಳೆ ತೆಗೆಸಿಕೊಳ್ಳಲೆಂದು ಜಲಾಶಯಕ್ಕೆ ಹೊಂದಿಕೊಂಡ ಮರವೊಂದನ್ನು ಏರಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಆದ್ರೆ, ದುರದೃಷ್ಟವಶಾತ್ ವಿನಾಯಕ ಕಾಲು ಜಾರಿ ಜಲಾಶಯದೊಳಗೆ ಬಿದ್ದಿದ್ದಾನೆ. ಈಜು ಬಾರದ ಇವರು ನೀರಲ್ಲಿ ಮುಳುಗಲಾರಂಭಿಸಿದರು. ಇದನ್ನೆಲ್ಲಾ ಕುಟುಂಬದವರು ನೋಡುತ್ತಾ ಗಾಬರಿಯಿಂದ ಕೂಗುತ್ತಿದ್ದರು. ಆದರೆ ಯಾರೂ ಏನೂ ಮಾಡದ ಸ್ಥಿತಿ.
ತಕ್ಷಣವೇ ಹತ್ತಿರದಲ್ಲಿದ್ದ ಮೀನುಗಾರರು ಮತ್ತು ಸ್ಥಳೀಯರು ತೆಪ್ಪದ ಸಹಾಯದಿಂದ ಜಲಾಶಯಕ್ಕೆ ಇಳಿದು ವಿನಾಯಕನನ್ನು ಎತ್ತಿಕೊಂಡು ಬಂದರು. ಆದರೆ ಅಷ್ಟರಲ್ಲಾಗಲೇ ವಿನಾಯಕ ಮೃತಪಟ್ಟಿದ್ದ.