ಶ್ರದ್ಧಾ ರೀತಿ ಮತ್ತೊಂದು ಪ್ರಕರಣ, ಲೀವ್ ಇನ್ ಸಂಗಾತಿಯ ನೀರಿನ ಟ್ಯಾಂಕ್‌ಗೆ ತಳ್ಳಿದ ಪಾಪಿ!
ದೆಹಲಿ ಶ್ರದ್ಧಾ ಭೀಕರ ಹತ್ಯೆ ರೀತಿಯಲ್ಲೇ ಮತ್ತೊಂದು ಪ್ರಕರಣ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯನ್ನು ಹತ್ಯೆ ಮಾಡಲು ನೀರನ ಟ್ಯಾಂಕ್‌ಗೆ ತಳ್ಳಿದ ಘಟನೆ ನಡೆದಿದೆ.
ಮುಂಬೈ(ನ.17): ಲಿವ್ ಇನ್ ರಿಲೇಶನ್‌ನಲ್ಲಿ ಗೆಳತಿ ಶ್ರದ್ಧಾಳನ್ನು 35 ತುಂಡು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಗೆಳೆಯ ಅಫ್ತಾಬ್ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ. ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಈ ಭೀಕರ ಹತ್ಯೆ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಇದೇ ರೀತಿ ಲಿವ್ ಇನ್ ರಿಲೇಶನ್‌ನಲ್ಲಿದ್ದ ಗೆಳತಿಯನ್ನು ಹತ್ಯೆಗೆ ಯತ್ನಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಹಲವು ವರ್ಷಗಳಿಂದ ಲಿವ್ ಇನ್ ರಿಲೇಶನ್‌ನಲ್ಲಿದ್ದ ಗೆಳತಿ ಪ್ರಿಯಾಂಗಿ ಸಿಂಗ್‌ಳನ್ನು ಗೆಳೆಯ ನೀರಿನ ಟ್ಯಾಂಕ್‌ಗೆ ತಳ್ಳಿ ಹಾಕಿದ್ದಾನೆ. 18 ಅಡಿ ಆಳದ ನೀರಿನ ಟ್ಯಾಂಕ್‌ಗೆ ಬಿದ್ದ ಪ್ರಿಯಾಂಗಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸದ್ಯ ಪ್ರಿಯಾಂಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಮುಂಬೈನ ದಹಿಸರ್‌ನಲ್ಲಿ ಈ ಘಟನೆ ನಡೆದಿದೆ. 10 ವರ್ಷಗಳಿಂದ ಪ್ರಿಯಾಂಗಿ ಸಿಂಗ್ ಹಾಗೂ ಗೆಳೆಯ ಪರಿಚಯಸ್ಥರು. ಕಳೆದ ಹಲವು ವರ್ಷಗಳಿಂದ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಇತ್ತೀಚೆಗೆ ಹಲವು ಬಾರಿ ಇವರಿಬ್ಬರಿಗೂ ಜಗಳವಾಗಿದೆ. ಇದರಿಂದ ಕೆರಳಿದ ಗೆಳೆಯ ಆಕೆಯನ್ನು ನೀರಿನ ಟ್ಯಾಂಕ್‌ಗೆ ತಳ್ಳಿ ಪರಾರಿಯಾಗಿದ್ದ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
Delhi Crime: ಶ್ರದ್ದಾ ಬರ್ಬರ ಹತ್ಯೆ ಪ್ರಕರಣ: ಗ್ಯಾಸ್ ಸಿಲಿಂಡರ್ ಬಳಿ ದೊರೆತ ಸಾಕ್ಷ್ಯ..!
ಇತ್ತ ಪ್ರಿಯಾಂಗಿ ಸಿಂಗ್ ಕೋಮಾಗೆ ಜಾರಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಯುವಕನ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಈ ಘಟನೆಯಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಈತನಿಗೆ ಮತ್ತೊಬ್ಬಳ ಜೊತೆಗೂ ಲಿವ್ ಇನ್ ರಿಲೇಶನ್ ಸಂಬಂಧ ಇತ್ತು ಅನ್ನೋ ಮಾಹಿತಿಯೂ ಬೆಳಕಿಗೆ ಬಂದಿದೆ.
ಶ್ರದ್ಧಾ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಹೊರಕ್ಕೆ
ಶ್ರದ್ಧಾ ಹಾಗೂ ಅಫ್ತಾಬ್ ಮುಂಬೈನ ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೀತಿ ಮೊಳೆತಿತ್ತು. ಮನೆಯವರು ವಿರೋಧಿಸಿದಾಗ ಇಬ್ಬರೂ ಏಪ್ರಿಲ್ ಕೊನೆಯಲ್ಲಿ ದೆಹಲಿಗೆ ಓಡಿಬಂದಿದ್ದರು. ಇಲ್ಲಿ ಒಂದೇ ಮನೆಯಲ್ಲಿದ್ದರು. ಮೇ ತಿಂಗಳಲ್ಲಿ ಆಕೆ ತನ್ನನ್ನು ಮದುವೆಯಾಗುವಂತೆ ಅಫ್ತಾಬ್‌ನನ್ನು ಒತ್ತಾಯಿಸಿದ್ದಾಳೆ. ಆಗ ಜಗಳವಾಗಿ, ಅವಳ ಕತ್ತುಹಿಸುಕಿ ಅಫ್ತಾಬ್ ಕೊಲೆ ಮಾಡಿದ್ದಾನೆ. ನಂತರ ಹೊಸತಾಗಿ 300 ಲೀ. ಸಾಮರ್ಥ್ಯದ ಫ್ರಿಜ್ ಖರೀದಿಸಿ ತಂದು ದೇಹವನ್ನು ಅದರಲ್ಲಿರಿಸಿದ್ದಾನೆ. ಅಫ್ತಾಬ್ ಹೋಟೆಲ್ ಒಂದರಲ್ಲಿ ಬಾಣಸಿಗನಾಗಿದ್ದು, ಅಲ್ಲಿ ಮಾಂಸ ಕತ್ತರಿಸುತ್ತಿದ್ದ ಅನುಭವ ಬಳಸಿ ಅವಳ ದೇಹವನ್ನು ಚಾಕುವಿನಿಂದ ನಿತ್ಯ ಒಂದೆರಡು ತುಂಡು ಮಾಡಿ ಎಸೆಯುತ್ತಿದ್ದ ಎಂದು ಹೇಳಲಾಗಿದೆ.
ಫ್ರಿಜ್‌ನಲ್ಲಿದ್ದ ಕತ್ತರಿಸಿದ ರುಂಡದ ಮೇಲೂ ಹಲ್ಲೆ!
ದೆಹಲಿಯ 35 ಪೀಸ್ ಮರ್ಡರ್ ಕೇಸ್ ಎಂದೇ ಕುಖ್ಯಾತಿ ಹೊಂದಿರುವ ಪ್ರಕರಣದಲ್ಲಿ ಇನ್ನೂ ಆಘಾತಕಾರಿ ವಿಷಯಗಳು ಬೆಳಕಿಗೆ ಬರುತ್ತಿವೆ. ಕೊಲೆಗಾರ ಅಫ್ತಾಬ್, ತಾನು ಕತ್ತರಿಸಿ ಫ್ರಿಜ್‌ನಲ್ಲಿಟ್ಟಿದ್ದ ಶ್ರದ್ಧಾಳ ರುಂಡದೊಂದಿಗೆ ಮಾತನಾಡುತ್ತಿದ್ದ ಹಾಗೂ ಕೋಪಗೊಂಡಾಗ ಕಪಾಳಕ್ಕೆ ಹೊಡೆಯುತ್ತಿದ್ದ ಎಂಬ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಕಣ್ಣೀರಿಟ್ಟು ಬಚಾವ್ ಆಗಿದ್ದಳು ಶ್ರದ್ಧಾ
ಶ್ರದ್ಧಾ ಹತ್ಯೆಯಾದ 10 ದಿನಗಳ ಮುನ್ನ ಆಕೆ ಹಾಗೂ ಅಫ್ತಾಬ್ ನಡುವೆ ಭಾರಿ ಜಗಳ ನಡೆದಿತ್ತು. ಅದೇ ವೇಳೆ ಅಫ್ತಾಬ್ ಆಕೆಯನ್ನು ಕೊಲ್ಲಬಹುದಾಗಿತ್ತು. ಅದರೆ ಅಚಾನಕ್ಕಾಗಿ ಶ್ರದ್ಧಾ ಭಾವುಕಳಾಗಿ ಕಣ್ಣೀರು ಹಾಕಿದ್ದಕ್ಕೆ ಅಫ್ತಾಬ್ ಆಕೆಯನ್ನು ಕೊಲ್ಲಲು ಹಿಂಜರೆದ ಎಂದು ಪೊಲೀಸರು ಹೇಳಿದ್ದಾರೆ. ಆದರೆ ನಂತರ ಮತ್ತೆ ಅದೇ ರೀತಿಯ ಘಟನೆ ನಡೆದು ಅಫ್ತಾಬ್ ಶ್ರದ್ಧಾಳನ್ನು ಹತೈಗೈದ ಎಂದು ಪೊಲೀಸರು ತಿಳಿಸಿದ್ದಾರೆ.