ಅಮೀನಗಡ(ಫೆ.17): ತನ್ನನ್ನು ಬಿಟ್ಟು ಮತ್ತೊಂದು ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಶಂಕೆಯ ಹಿನ್ನೆಲೆಯಲ್ಲಿ ಆಕೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಆಕೆಯ ಸೀರೆಯಿಂದ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಇಳಕಲ್‌ ತಾಲೂಕು ಕೆಲೂರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಸಮೀಪದ ಕೆಲೂರ ಗ್ರಾಮದ ಬಾಳವ್ವ ಸಿದ್ದಪ್ಪ ಬನ್ನೆಪ್ಪನವರ್‌ (28) ಕೊಲೆಯಾದ ಮಹಿಳೆ. ಅದೇ ಗ್ರಾಮದ ಮಂಜುನಾಥ ಐಹೊಳೆ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಘಟನೆಯ ವಿವರ:

ಇಳಕಲ್‌ ತಾಲೂಕಿನ ಕೆಲೂರ ಗ್ರಾಮದ, ಹತ್ಯೆಯಾದ ಬಾಳವ್ವ ಬನ್ನೆಪ್ಪನವರ ಕುಟುಂಬ ಮತ್ತು ಮಂಜುನಾಥ ಐಹೊಳೆ ಕುಟುಂಬಗಳು ಕೆಲಸಕ್ಕಾಗಿ ಮಂಗಳೂರಿಗೆ ಗುಳೆ ಹೋಗಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಹತ್ಯೆಯಾದ ಬಾಳವ್ವ ಸಿದ್ದಪ್ಪ ಬನ್ನೆಪ್ಪನವರ್‌ ಕುಟುಂಬ ಕೆಲೂರಲ್ಲೇ ವಾಸಿಸುತ್ತಿತ್ತು. ಈಕೆಯ ಪತಿ ಸಿದ್ದಪ್ಪ ಗ್ರಾಮದಲ್ಲಿ ಕೂಲಿ ಮಾಡಿಕೊಂಡೇ ಜೀವನ ನಡೆಸುತ್ತಿದ್ದ. ಇನ್ನು ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ ಐಹೊಳೆ ತನ್ನ ಕುಟುಂಬದೊಂದಿಗೆ ಮಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದ. ಈ ವೇಳೆ ಮಂಜುನಾಥ ಆಗಾಗ ಊರಿಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.

ಭಾವನ ಹತ್ಯೆಗೈದ ಬಾಮೈದ : ಇಟ್ಟಿಗೆಯಿಂದ ಹೊಡೆದು ಕೊಲೆ

ಸೋಮವಾರ ಗ್ರಾಮಕ್ಕೆ ಬಂದ ಮಂಜುನಾಥ ಮತ್ತೊಬ್ಬನೊಂದಿಗೆ ಅನೈತಿಕ ಶಂಕೆ ಹಿನ್ನೆಲೆಯಲ್ಲಿ ಬಾಳವ್ವಳನ್ನು ಕೊಡಲಿಯಿಂದ ಹತ್ಯೆ ಮಾಡಿದ್ದಾನೆ. ನಂತರ ಆಕೆಯ ಸೀರೆಯಿಂದ ತಾನೂ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ಅಮೀನಗಡ ಪೊಲೀಸ್‌ ಠಾಣೆಯಲ್ಲಿ ಮೃತ ಬಾಳವ್ವಳ ತಂದೆ ಮಲ್ಲಪ್ಪ ಕುಣಬೆಂಚಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹುನಗುಂದ ಸಿಪಿಐ ಅಯ್ಯನಗೌಡ ಪಾಟೀಲ ಮಾಹಿತಿ ನೀಡಿದರು. ಸ್ಥಳಕ್ಕೆ ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಅಮೀನಗಡ ಸಬ್‌ ಇನ್ಸ್‌ಪೆಕ್ಟರ್‌ ಮಲ್ಲಿಕಾರ್ಜುನ ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದರು.