ಧಾರವಾಡ: ಭಿಕ್ಷಾಟನೆ ಮಾಡಿಕೊಂಡಿದ್ದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ
* ಲೈಂಗಿಕ ದೌರ್ಜನ್ಯ: ದೂರು ದಾಖಲು
* ಬಾಲಕಿಯನ್ನು ದುರ್ಬಳಕೆ ಮಾಡುತ್ತಿದ್ದ ಯುವಕ
* ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು
ಧಾರವಾಡ(ಸೆ.23): ತಿಂಡಿ-ತಿನಿಸು ಹಾಗೂ ಹಣದ ಆಮಿಷ ಒಡ್ಡಿ ತಾಲೂಕಿನ ದಡ್ಡಿ ಕಮಲಾಪೂರದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಉಪನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.
ಪೊಲೀಸ್(Police) ಇಲಾಖೆಯಿಂದ 14 ವರ್ಷದ ಬಾಲಕಿ ಭಿಕ್ಷಾಟನೆಯಲ್ಲಿ ತೊಡಗಿರುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ಬಂದಿತ್ತು. ಇದಲ್ಲದೇ ಬಾಲಕಿಯನ್ನು ದುರ್ಬಳಕೆ ಮಾಡುತ್ತಿದ್ದ ಯುವಕನೊಬ್ಬನ್ನು ಸಾರ್ವಜನಿಕರು ಥಳಿಸಿರುವ ಘಟನೆ ಬಗ್ಗೆಯೂ ಮಕ್ಕಳ ಸಹಾಯವಾಣಿಗೆ ದೂರು ಬಂದಿತ್ತು. ಈ ಮಾಹಿತಿ ಆಧರಿಸಿ ಬಾಲಕಿಯನ್ನು ಹುಡುಕಿ, ನವನಗರದ ಸ್ನೇಹಾ ತೆರೆದ ತಂಗುದಾಣದಲ್ಲಿ ಕಳೆದ ಸೆ. 17ರಂದು ದಾಖಲಿಸಲಾಗಿತ್ತು. ಇದಾದ ಬಳಿಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರಾಜೇಶ್ವರಿ ಸಾಲಗಟ್ಟಿ ನೇತೃತ್ವದಲ್ಲಿ ಬಾಲಕಿಯೊಂದಿಗೆ ಆಪ್ತ ಸಮಾಲೋಚನೆ ಕೈಗೊಂಡಾಗ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಬೆಳಕಿಗೆ ಬಂದಿದೆ.
ಅತ್ಯಾಚಾರ ನಡೆಸಿದ್ದಾಗಿ ಹೇಳಿದ ಆಡಿಯೋ ವೈರಲ್ : ಕೇಸ್‌ಗೆ ಮೇಜರ್ ಟ್ವಿಸ್ಟ್
ಗೋಬಿ ಮಂಚೂರಿ, ಎಗ್‌ರೈಸ್ ಸೇರಿದಂತೆ ತಿಂಡಿ ತಿನಿಸು ತಿನ್ನಲು 6ನೇ ತರಗತಿಯಿಂದ ಶಾಲೆಗೆ ಹೋಗುವಾಗ ಅವರಿವರಲ್ಲಿ ಬಾಲಕಿ ಹಣ ಕೇಳಿ ಪಡೆಯುತ್ತಿದ್ದಳು. ಆಗ ಕೆಲ ಯುವಕರು ಗುಡ್ಡದ ಹಿಂದೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡಿರುವ ಬಗ್ಗೆ ಬಾಲಕಿ ಮಾಹಿತಿ ನೀಡಿದ್ದಾಳೆ. ನಂತರ ತಿನ್ನಲು ತಿಂಡಿ ಮತ್ತು ಹಣ ಕೊಡುತ್ತಿದ್ದರು. ಲೈಂಗಿಕ ದೌರ್ಜನ್ಯ ಎಸಗಿದವರನ್ನು ಬಾಲಕಿ ಗುರುತಿಸುವುದಾಗಿಯೂ ಆಪ್ತ ಸಮಾಲೋಚನೆಯಲ್ಲಿ ಹೇಳಿದ್ದಾಳೆ ಎಂದು ರಾಜೇಶ್ವರಿ ಸಾಲಗಟ್ಟಿ ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಮಲವ್ವ ಬೈಲೂರು ಉಪನಗರ ಠಾಣೆಗೆ ದೂರು ಸಲ್ಲಿಸಿದ್ದು, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಉಪನಗರ ಠಾಣೆ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.