ಪ್ರವೀಣ್ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಪ್ರವೀಣ್ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಬಂಧಿಸಲಾಗಿದೆ. ಬಂಧಿತ ಇಬ್ಬರೂ ಸ್ಥಳೀಯರು ಮತ್ತು ಪಿಎಫ್‌ಐ ಕಾರ್ಯಕರ್ತರಾಗಿದ್ದಾರೆ.
ಸುಳ್ಯ/ಪುತ್ತೂರು, ಜು.29: ಬೆಳ್ಳಾರೆಯಲ್ಲಿ ಜಿಲ್ಲಾ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಬ್ಬರೂ ಕೊಲೆಗೆ ಸಹಕಾರ ನೀಡಿದವರೆನ್ನಲಾಗಿದೆ. ಬಂಧಿತ ಆರೋಪಿಗಳಿಬ್ಬರನ್ನು ಗುರುವಾರ ಸಂಜೆ ಪುತ್ತೂರು(Putturu) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆ.11ರ ತನಕ 14ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಸವಣೂರಿನ ಜಾಕೀರ್(Jhakeer) ಹಾಗೂ ಬೆಳ್ಳಾರೆಯ ಮೊಹಮ್ಮದ್ ಶಫೀಕ್(Mohmed Shafik) ಬಂಧಿತರು. ಇಬ್ಬರೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) (ಪಿಎಫ್‌ಐ) ಕಾರ್ಯಕರ್ತರು ಎಂದು ತಿಳಿದುಬಂದಿದೆ. ಹತ್ಯೆ ಘಟನೆಯ ಮರುದಿನವೇ ಹಲವು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಈ ಪೈಕಿ ಇಬ್ಬರ ಬಂಧನವನ್ನು ಎಡಿಜಿಪಿ ಅಲೋಕ್ ಕುಮಾರ್ ಹಾಗೂ ದ.ಕ. ಎಸ್‌ಪಿ ಋುಷಿಕೇಶ್((SP Hrishikesh) ಸೋನಾವಣೆ ಖಚಿತಪಡಿಸಿದ್ದಾರೆ.
'ನನ್ನ ಪತಿ, ಪ್ರವೀಣ್‌ಗೂ ಪರಿಚಯವಿತ್ತು, ಆದರೆ ಇಂತಹ ಕೃತ್ಯ ಮಾಡಿಲ್ಲ: ಬಂಧಿತ ಶಫೀಕ್ ಪತ್ನಿ
ಬೆಳ್ಳಾರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಲೋಕ್ ಕುಮಾರ್, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇನ್ನುಳಿದ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳು ಪಿಎಫ್‌ಐ ಸಂಘಟನೆಗೆ ಒಳಪಟ್ಟವರೆಂಬ ಮಾಹಿತಿ ಲಭಿಸಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಇನ್ನಷ್ಟುತನಿಖೆ ನಡೆಸಲಾಗುವುದು ಎಂದು ಹೇಳಿದರು.ಬಂಧಿತ ಆರೋಪಿಗಳನ್ನು ಬೆಳ್ಳಾರೆ ಠಾಣೆಯಲ್ಲಿಯೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸಂಜೆ ವೇಳೆಗೆ ಪುತ್ತೂರಿಗೆ ಕೊಂಡೊಯ್ದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು.
ಈಗ ಬಂಧಿತರಾಗಿರುವ ಇಬ್ಬರೂ ಪ್ರವೀಣ್ ಕೊಲೆ ಕೃತ್ಯಕ್ಕೆ ಸಹಕಾರ ನೀಡಿದವರೆಂದು ತಿಳಿದು ಬಂದಿದೆ.
ಕೊಲೆ ಪ್ರಕರಣದ ತನಿಖೆಗೆ ಅಗತ್ಯವಿದ್ದಲ್ಲಿ ಪೊಲೀಸರು ಮತ್ತೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಿದ್ದಾರೆ ಎಂದು ಸರ್ಕಾರಿ ಸಹಾಯಕ ಅಭಿಯೋಜಕಿ ಕವಿತಾ ತಿಳಿಸಿದ್ದಾರೆ.
ಪ್ರವೀಣ್ ಹತ್ಯೆ: ಕೇರಳದ ಮತೀಯ ಸಂಘಟನೆಗಳಿಗೆ ಸ್ಥಳೀಯರ ಸಾಥ್...?
ತನಿಖೆಗೆ ಕರೆದೊಯ್ದು ಆರೋಪಿ ಎಂಬ ಹಣೆಪಟ್ಟಿ: ಶಫೀಕ್ ಕುಟುಂಬಸ್ಥರ ಆರೋಪ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿ ಶಫೀಕ್‌ನನ್ನು ತನಿಖೆಗಾಗಿ ಪೊಲೀಸರು ಕರೆದೊಯ್ದಿದ್ದು, ಈಗ ಅವರೇ ಕೊಲೆ ಆರೋಪಿ ಎಂದು ಹಣೆಪಟ್ಟಿಕಟ್ಟಲಾಗುತ್ತಿದೆ ಎಂದು ಶಫೀಕ್ ಬೆಳ್ಳಾರೆ ಕುಟುಂಬಸ್ಥರು ಆರೋಪಿಸಿದ್ದಾರೆ.
ಕೊಲೆ ನಡೆದ ಸಂದರ್ಭ ಶಫೀಕ್ ಮನೆಯಲ್ಲೇ ಇದ್ದ. ಮಧ್ಯ ರಾತ್ರಿ ವೇಳೆ ಪೊಲೀಸರು ಬಂದು ತನಿಖೆಗಾಗಿ ಕರೆದೊಯ್ದವರು ಇನ್ನೂ ಕಳುಹಿಸಿ ಕೊಟ್ಟಿಲ್ಲ. ಆತನಿಗೂ ಕೊಲೆಯ ಸುದ್ದಿ ಕೇಳಿ ಶಾಕ್ ಆಗಿತ್ತು. ಪೊಲೀಸರು ಸುಮ್ಮನೇ ಅವನ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಆತ ಅಡಕೆ ಅಂಗಡಿಯಲ್ಲಿ ಕೆಲಸಕಿದ್ದು, ಅವನೇ ಮನೆಗೆ ಆಧಾರವಾಗಿದ್ದ ಎಂದು ಶಫೀಕ್ ತಂದೆ ಇಬ್ರಾಹಿಂ ಹೇಳಿದ್ದಾರೆ.
ತನ್ನ ಪತಿ ಶಫೀಕ್ ಪ್ರವೀಣ್ ಹತ್ಯೆ ಮಾಡಿಲ್ಲ. ಪ್ರವೀಣ್ ಸಾವಿನ ಸುದ್ದಿ ತಿಳಿದು ತನ್ನ ಪತಿಗೂ ಶಾಕ್ ಆಗಿತ್ತು ಎಂದು ಬಂಧಿತ ಶಫೀಕ್ ಪತ್ನಿ ಹನ್ಶಿಫಾ ಹೇಳಿದ್ದಾರೆ.
ಏಷಿಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಆಕೆ, ನನ್ನ ಪತಿ ಶಫೀಕ್‌ಗೂ ಪ್ರವೀಣ್‌ಗೂ ಪರಿಚಯ ಇತ್ತು. ನನ್ನ ಮಾವ ಪ್ರವೀಣ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾವನನ್ನು ಕರೆದೊಯ್ಯಲು ಬೆಳಗ್ಗೆ ಪ್ರವೀಣ್ ನಮ್ಮ ಮನೆಗೆ ಬರುತ್ತಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಮಾವ ಪ್ರವೀಣ್ ಅಂಗಡಿಯಿಂದ ಕೆಲಸ ಬಿಟ್ಟು ಬೇರೆ ಕಡೆ ಚಿಕನ್ ಕಟ್ ಮಾಡುವ ಕೆಲಸಕ್ಕೆ ಸೇರಿದ್ದರು ಎಂದು ವಿವರಿಸಿದ್ದಾರೆ.
ಪ್ರವೀಣ್ ಹತ್ಯೆ ದಿನ ಬೆಳಗ್ಗೆಯಷ್ಟೇ ಪ್ರವೀಣ್‌ನನ್ನು ನೋಡಿದ್ದೆ ಅಂತ ಪತಿ ಹೇಳಿದ್ರು, ಮಧ್ಯರಾತ್ರಿ ಬಂದು ವಿಚಾರಣೆಗೆ ಕರೆ ತಂದು ಅರೆಸ್ಟ್ ಮಾಡಿದ್ದಾರೆ. ರಾತ್ರಿ 12.30ಕ್ಕೆ ಪೊಲೀಸರು ಬಂದು ಎನ್‌ಕ್ವಯರಿ ಇದೆ ಅಂತ ಹೇಳಿ ಕರೆದುಕೊಂಡು ಹೋದರು. ಗುರುವಾರ ಇವರೇ ಆರೋಪಿಗಳು ಎಂದು ಸುದ್ದಿ ಬರುತ್ತಿರುವುದು ತಿಳಿದು ಪೊಲೀಸ್ ಸ್ಟೇಷನ್‌ಗೆ ಬಂದೆವು ಎಂದಿರುವ ಹನ್ಶಿಫಾ, ತನ್ನ ಗಂಡ ಪಿಎಫ್‌ಐಯಲ್ಲಿ ಇದ್ದರು. ಮಸೂದ್ ಸತ್ತಾಗ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ಕುರಿತು ಗೊತ್ತಿಲ್ಲ. ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಅಮಾಯಕ ಹುಡುಗ ಬಲಿಯಾದರೆ ತಪ್ಪಿತಸ್ಥರನ್ನು ಬಂಧಿಸಬೇಕು, ನನ್ನ ಗಂಡನನ್ನೇ ಯಾಕೆ ಅರೆಸ್ಟ್ ಮಾಡಿದ್ದಾರೆ ಅಂತ ಗೊತ್ತಿಲ್ಲ ಎಂದು ಆಕೆ ಪ್ರತಿಕ್ರಿಯಿಸಿದ್ದಾರೆ.