ಬೆಂಗಳೂರು(ಜ.28): ಭದ್ರತಾ ಸಿಬ್ಬಂದಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಪರಿಣಾಮ ಗರ್ಭಿಣಿಯಾಗಿದ್ದ ಬಾಲಕಿ ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದು, ಆರೋಪಿಯನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೇಪಾಳ ಮೂಲದ ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿ ಗೌತಮ್‌(32) ಬಂಧಿತ. 16 ವರ್ಷದ ಸಂತ್ರಸ್ತ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗು, ತಾಯಿ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಷಕರನ್ನು ಕಳೆದುಕೊಂಡಿರುವ ಸಂತ್ರಸ್ತೆ ನೇಪಾಳದಿಂದ ನಗರಕ್ಕೆ ಬಂದು ಅಣ್ಣನ ಜತೆ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಳು. ಸಂತ್ರಸ್ತೆಯ ಸಹೋದರ ಭದ್ರತಾ ಸಿಬ್ಬಂದಿಯಾಗಿದ್ದ. ಆರೋಪಿ ಕೂಡ ನೇಪಾಳದವನೇ ಆಗಿದ್ದ ಕಾರಣ ತೀರಾ ಪರಿಚಯಸ್ಥನಾಗಿದ್ದ.

ಬಾಲಕಿ ಪುಸಲಾಯಿಸಿ ಕರೆದುಕೊಂಡು ಹೋದ ಬೆಂಗಳೂರು ಕಿರಾತಕರು

ಬಾಲಕಿ ಜತೆ ಸ್ನೇಹ ಬೆಳೆಸಿಕೊಂಡಿದ್ದ ಆರೋಪಿ ಬಾಲಕಿ ಒಬ್ಬಳೇ ಮನೆಯಲ್ಲಿದ್ದಾಗ ಹೋಗಿ ಅತ್ಯಾಚಾರ ಎಸಗಿದ್ದ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಳು. ಈ ವಿಚಾರ ತಡವಾಗಿ ಅಣ್ಣನ ಗಮನಕ್ಕೆ ಬಂದಿತ್ತು. ಕೂಡಲೇ ಸಂತ್ರಸ್ತ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ. ಬುಧವಾರ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿಯ ಸಹೋದರ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿ ಗೌತಮ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.