ಬೆಂಗಳೂರು(ಸೆ.21): ತಂಗಿ ಆತ್ಮಹತ್ಯೆಗೆ ಕಾರಣ ಎಂದು ಕುಪಿತಗೊಂಡ ಸೈನಿಕನೊಬ್ಬ ತನ್ನ ಭಾವನನ್ನೇ ಹತ್ಯೆ ಮಾಡಿರುವ ಘಟನೆ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಕಾಡುಗೋಡಿಯ ವೀರಸ್ವಾಮಿ ಲೇಔಟ್‌ ನಿವಾಸಿ ರಾಜೇಶ್‌ (35) ಕೊಲೆಯಾದವರು. ಸೈನಿಕ ಜಾನ್‌ಪಾಲ್‌, ಆತನ ಸ್ನೇಹಿತ ದಿನೇಶ್‌ ಎಂಬಾತನನ್ನು ಬಂಧಿಸಲಾಗಿದೆ.

ರಾಜೇಶ್‌ ಎಚ್‌ಎಎಲ್‌ ಉದ್ಯೋಗಿಯಾಗಿದ್ದು, ಮೂಲತಃ ಕೆಜಿಎಫ್‌ನವರಾಗಿದ್ದಾರೆ. ಏಳು ವರ್ಷಗಳ ಹಿಂದೆ ರಾಜೇಶ್‌, ಜಾಸ್ಮಿನ್‌ ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ವಿವಾಹ ಅದಾಗಿನಿಂದಲೂ ದಂಪತಿ ನಡುವೆ ಕೌಟುಂಬಿಕ ಕಲಹ ಇತ್ತು. ಹಲವು ಬಾರಿ ಕುಟುಂಬದ ಹಿರಿಯರು ದಂಪತಿ ನಡುವೆ ರಾಜೀ ಸಂಧಾನ ನಡೆಸಿದ್ದರು. ಮನಸ್ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಜಾಸ್ಮಿನ್‌ ತವರು ಮನೆ ಸೇರಿದ್ದರು. ನಾಲ್ಕೈದು ದಿನಗಳ ಹಿಂದೆ ಜಾಸ್ಮಿನ್‌ ಅವರು ತಂದೆಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಬಾಯ್ ಫ್ರೆಂಡ್ ಮನೆಯಲ್ಲಿದ್ದ ಮಗಳನ್ನು ಕೊಡಲಿಯಿಂದ ಕೊಚ್ಚಿದ ತಂದೆ!

ತಂಗಿ ಆತ್ಮಹತ್ಯೆಗೆ ಭಾವ ರಾಜೇಶ್‌ನೇ ಕಾರಣ ಎಂದು ಜಾನ್‌ಪಾಲ್‌ ಕುಪಿತಗೊಂಡಿದ್ದ. ಭಾನುವಾರ ಬೆಳಗ್ಗೆ 11.30ರ ಸುಮಾರಿಗೆ ರಾಜೇಶ್‌ ಮನೆಗೆ ಹೋಗುತ್ತಿದ್ದರು. ಈ ವೇಳೆ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಬಂದಿದ್ದ ಜಾನ್‌ಪಾಲ್‌ ಭಾವನ ಕತ್ತು ಕೊಯ್ದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವವಾಗಿ ರಾಜೇಶ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಆರೋಪಿ ಜಾನ್‌ಪಾಲ್‌ ಸೈನಿಕನಾಗಿದ್ದು, ರಜೆ ಮೇಲೆ ಮನೆಗೆ ಬಂದಿದ್ದ. ಜಾಸ್ಮಿನ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪೋಷಕರು ರಾಜೇಶ್‌ ವಿರುದ್ಧ ಯಾವುದೇ ದೂರು ನೀಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.