ಹರ್ಷ ಹತ್ಯೆ: ಶಿವಮೊಗ್ಗಕ್ಕೆ ಮತ್ತೆ ಎನ್‌ಐಎ ತಂಡ, ಸಾಕ್ಷ್ಯ ಸಂಗ್ರಹ
* ನಾಲ್ಕು ತಿಂಗಳ ಹಿಂದೆ ಕೊಲೆಯಾಗಿದ್ದ ಹಿಂದೂ ಕಾರ್ಯಕರ್ತ ಹರ್ಷ
* ಒಟ್ಟು 12 ಕಡೆಗಳಲ್ಲಿ ಸಾಕ್ಷ್ಯ ಸಂಗ್ರಹ
* ಆರೋಪ ಪಟ್ಟಿ ಸಲ್ಲಿಕೆಗೆ ಇನ್ನೂ 180 ದಿನಗಳ ಕಾಲಾವಕಾಶ
ಶಿವಮೊಗ್ಗ(ಜು.01): ನಾಲ್ಕು ತಿಂಗಳ ಹಿಂದೆ ಇಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ತಂಡ ಇಲ್ಲಿಗೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹದ ಕಾರ್ಯ ಆರಂಭಿಸಿದೆ.
ಎನ್‌ಐಎ ಬೆಂಗಳೂರು ಕಚೇರಿ ಎಸ್ಪಿ ವಿಕ್ರಮನ್ ನೇತೃತ್ವದಲ್ಲಿ 14 ಮಂದಿ ಅಧಿಕಾರಿಗಳು ಮೂರ್ನಾಲ್ಕು ವಾಹನಗಳಲ್ಲಿ ಬುಧವಾರ ಸಂಜೆಯೇ ಶಿವಮೊಗ್ಗಕ್ಕೆ ಆಗಮಿಸಿದೆ. ಜಿಲ್ಲಾ ರಕ್ಷಣಾಧಿಕಾರಿಗಳ ಜೊತೆ ರಾತ್ರಿಯೇ ಚರ್ಚೆ ನಡೆಸಿದ್ದ ತಂಡ, ಗುರುವಾರ ಬೆಳಗ್ಗೆಯಿಂದಲೇ ಹರ್ಷನ ಕೊಲೆ ಕುರಿತಾದ ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿತು. ಹರ್ಷನ ಹತ್ಯೆ ನಡೆದ ಸ್ಥಳ, ಆರೋಪಿಗಳ ಮನೆ ಸೇರಿದಂತೆ ಒಟ್ಟು 12 ಕಡೆಗಳಲ್ಲಿ ಸಾಕ್ಷ್ಯ ಸಂಗ್ರಹ ನಡೆಸಿತು. ಹತ್ಯೆ ಆರೋಪಕ್ಕೆ ಗುರಿಯಾಗಿ ಬಂಧನಕ್ಕೆ ಒಳಗಾಗಿರುವ ಎಲ್ಲ 12 ಮಂದಿಯ ಮನೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿತು. ಫೆ.21ರಂದು ರಾತ್ರಿ ಹರ್ಷನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಹತ್ಯೆಗೈದಿದ್ದರು.
ಹರ್ಷ ಹತ್ಯೆ ಪ್ರತೀಕಾರವಾಗಿ ಕೊಲೆಗೆ ಸಂಚು, ಶಿವಮೊಗ್ಗದಲ್ಲಿ ಕೋಮುಗಲಭೆಗೆ ಸೃಷ್ಟಿಗೆ ಹೊಂಚು..
ಗುರುವಾರ ಸಂಜೆಯವರೆಗೂ ಇದೇ ಕಾರ್ಯದಲ್ಲಿ ತೊಡಗಿದ್ದರು. ಫೆ.21ರಂದು ರಾತ್ರಿ ಹರ್ಷನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಹತ್ಯೆಗೈದಿದ್ದರು. ಆರಂಭದಲ್ಲಿ ಪ್ರಕರಣವನ್ನು ಸ್ಥಳೀಯ ಪೊಲೀಸರು, ಬಳಿಕ ಸಿಐಡಿ ವಹಿಸಲಾಯಿತು. ಆ ನಂತರ ತನಿಖೆಯನ್ನು ರಾಜ್ಯ ಸರ್ಕಾರವು ಎನ್‌ಐಎಗೆ ವಹಿಸಿತು. ಪ್ರಕರಣ ವಹಿಸಿಕೊಂಡ ಬಳಿಕ ಒಮ್ಮೆ ಎನ್‌ಐಎ ಅಧಿಕಾರಿಗಳ ತಂಡ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿತ್ತು. ಇದೀಗ ಎರಡನೇ ಬಾರಿಗೆ ಸಾಕ್ಷ್ಯ ಸಂಗ್ರಹಕ್ಕಾಗಿ ತಂಡ ಆಗಮಿಸಿತ್ತು.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರೋಪ ಪಟ್ಟಿಸಲ್ಲಿಸಿಲ್ಲ. ಆರೋಪ ಪಟ್ಟಿಸಲ್ಲಿಕೆಗೆ ಇನ್ನೂ 180 ದಿನಗಳ ಕಾಲಾವಕಾಶವಿದ್ದು, ಅಷ್ಟರೊಳಗೆ ಪೂರ್ಣವಾಗಿ ಸಾಕ್ಷ್ಯ ಸಂಗ್ರಹಿಸಬೇಕಾಗಿದೆ.