Mohmed Fazil Murder Case: 3 ರೌಡಿಶೀಟರ್ ಸೇರಿ 6 ಸೆರೆ - ಎಲ್ಲ ಬಂಧಿತರಿಗೆ ಹಿಂದು ಸಂಘಟನೆಗಳ ನಂಟು!
ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಕರಾವಳಿಯ ತ್ರಿವಳಿ ಹತ್ಯೆ ಪ್ರಕರಣ ಪೈಕಿ ಒಂದಾದ ಸುರತ್ಕಲ್‌ನಲ್ಲಿ ನಡೆದ ಫಾಝಿಲ್ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರು ರೌಡಿಶೀಟರ್ ಸೇರಿ ಆರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.
ಮಂಗಳೂರು (ಆ.3) : ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಕರಾವಳಿಯ ತ್ರಿವಳಿ ಹತ್ಯೆ ಪ್ರಕರಣ ಪೈಕಿ ಒಂದಾದ ಸುರತ್ಕಲ್‌ನಲ್ಲಿ ನಡೆದ ಫಾಝಿಲ್ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರು ರೌಡಿಶೀಟರ್ ಸೇರಿ ಆರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ನಡೆದ ಕೊಲೆ ಘಟನೆ ಇದಾಗಿದೆ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.
ಜು.28ರಂದು ರಾತ್ರಿ ಸುರತ್ಕಲ್(Suratkal)ನ ಮಂಗಳಪೇಟೆ ನಿವಾಸಿ ಮೊಹಮ್ಮದ್ ಫಾಝಿಲ್(Mohmed Fazil)ನನ್ನು (23) ದುಷ್ಕರ್ಮಿಗಳ ತಂಡವೊಂದು ಹತ್ಯೆ ತಲವಾರಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ಘಟನೆಗೆ ಸಂಬಂಧಿಸಿ ಬಜಪೆಯ ಸುಹಾಸ್ ಶೆಟ್ಟಿ(29), ಮೋಹನ್ (26), ಗಿರಿಧರ್ (23), ಅಭಿಷೇಕ್ (21), ಶ್ರೀನಿವಾಸ್ (23) ಹಾಗೂ ದೀಕ್ಷಿತ್ (21) ಅನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಕಾರಿನ ಮಾಲೀಕ ಅಜಿತ್ ಕ್ರಾಸ್ತಾನನ್ನು ಈಗಾಗಲೇ ಬಂಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಒಟ್ಟು 7 ಮಂದಿಯನ್ನು ಬಂಧಿಸಿದಂತಾಗಿದೆ.
ಪಾಝಿಲ್ ಹತ್ಯೆ ಕೇಸ್‌ನಲ್ಲಿ ಪೊಲೀಸರಿಗೆ ಸಿಕ್ತು ದೊಡ್ಡ ಸುಳಿವು
ಈ ಪೈಕಿ ಮೂವರು ರೌಡಿಶೀಟರ್(Rowdy Sheeter)ಗಳಾಗಿದ್ದು, 6 ಮಂದಿ ವಿರುದ್ಧ ಕೂಡ ಈ ಹಿಂದೆ ನಾನಾ ಘಟನೆಗಳಲ್ಲಿ ಕೇಸು ದಾಖಲಾಗಿದೆ. ಕೃತ್ಯಕ್ಕೆ ಸಹಕರಿಸಿದ ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.
ಸಂಘಟನೆಗಳ ನಂಟು: ಸುಹಾಸ್ ಶೆಟ್ಟಿಈ ಹಿಂದೆ ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ. 2020ರಲ್ಲಿ ಹತ್ಯೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಂಘಟನೆಯಿಂದ ಈತನನ್ನು ಉಚ್ಚಾಟಿಸಲಾಗಿತ್ತು. ಉಳಿದ ಐವರು ಹಿಂದೂ ಸಂಘಟನೆಗಳ ಜತೆ ನಂಟು ಹೊಂದಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಪ್ರತೀಕಾರಕ್ಕೆ ಸ್ಕೆಚ್!:
ಬಂಧಿತರು ಜು.26ರಂದೇ ಪ್ರವೀಣ್ ಹತ್ಯೆಗೆ ಪ್ರತೀಕಾರ ತೀರಿಸಲು, ಇನ್ನೊಂದು ಧರ್ಮದ ಯಾರಾದರೊಬ್ಬರನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿದ್ದರು.
Exclusive: ಮಾಜಿ SDPI ಮುಖಂಡನಿಗೆ ಸ್ಕೆಚ್, ಬಲಿಯಾಗಿದ್ದು ಫಾಜಿಲ್..?
ಜು.26ರಂದು ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳಿಂದ ಕೊಲೆಯಾಗಿದ್ದು, ಅಂದೇ ರಾತ್ರಿ ಆರೋಪಿಗಳ ಪೈಕಿ ಸುಹಾಸ್ ಶೆಟ್ಟಿಗೆ ಇದಕ್ಕೆ ಪ್ರತಿಕಾರ ತೀರಿಸಬೇಕೆಂಬ ಆಲೋಚನೆ ಹೊಳೆದಿತ್ತು. ಅದನ್ನು ಅಂದೇ ರಾತ್ರಿ ಸ್ನೇಹಿತ ಅಭಿಷೇಕ್‌ಗೆ ಕರೆ ಮಾಡಿ ತಿಳಿಸಿದ್ದ. ಮರುದಿನ ಮಧ್ಯಾಹ್ನದೊಳಗೆ ಯಾರನ್ನಾದರೂ ಉರುಳಿಸಬೇಕು ಎಂದು ಹೇಳಿದ್ದ. ಜು.27ರಂದು ಇನ್ನೊಬ್ಬ ಸ್ನೇಹಿತ ಗಿರಿಧರ್‌ನ್ನು ಕರೆಸಿಕೊಂಡ ಸುಹಾಸ್, ಹತ್ಯೆಗೆ ಬೇಕಾದ ಆಯುಧ ನನ್ನಲ್ಲಿದೆ, ಸುರತ್ಕಲ್‌ನಲ್ಲಿ ಕೃತ್ಯ ಎಸಗುವಂತೆ ತಿಳಿಸಿದ್ದ. ನಂತರ ಉಳಿದ ಸ್ನೇಹಿತರಾದ ಮೋಹನ್, ಅಭಿಷೇಕ, ಶ್ರೀನಿವಾಸ್, ದೀಕ್ಷಿತ್ ಸೇರಿ ಕೊಲೆ ಬಗ್ಗೆ ಚರ್ಚೆ ನಡೆಸಿದ್ದರು.
ಕಾರಿಂಜಕ್ಕೆ ಭೇಟಿ!:
ಜು.27ರ ಬೆಳಗ್ಗೆ ಬಂಟ್ವಾಳದ ಕಾರಿಂಜ ಕ್ಷೇತ್ರಕ್ಕೆ ಭೇಟಿ ನೀಡಿದ ಹಂತಕರು, ಅಲ್ಲಿ ಆಟಿ ಕಷಾಯ ಸೇವಿಸಿ ಮಂಗಳೂರಿಗೆ ಬಂದಿದ್ದಾರೆ. ಮಂಗಳೂರಲ್ಲಿ ಕೇಸೊಂದಕ್ಕೆ ಸಂಬಂಧಿಸಿ ಕೋರ್ಚ್‌ಗೆ ಹಾಜರಾಗಿ ಬಳಿಕ ಸ್ಥಳೀಯ ಖಾಸಗಿ ಪ್ರಾಥಮಿಕ ಶಾಲೆ ಬಳಿ ಕೊಲೆಗೆ ಅಂತಿಮ ಸ್ಕೆಚ್ ಹಾಕಿದ್ದರು. ಇದಕ್ಕಾಗಿ ಅನ್ಯಧರ್ಮದ 6 ಮಂದಿ ಪಟ್ಟಿಸಿದ್ಧಪಡಿಸಿದ್ದರು. ಕೊನೆಗೆ ಸ್ಥಳೀಯವಾಗಿ ಗೊತ್ತಿರುವಾತ ಎಂದು ಫಾಝಿಲ್ ಕೊಲೆಗೆ ಸ್ಕೆಚ್ ಹಾಕಿದ್ದರು. ಬಳಿಕ ಮಧ್ಯಾಹ್ನ ಕಿನ್ನಿಗೋಳಿಯ ಬಾರ್‌ವೊಂದಕ್ಕೆ ತೆರಳಿ ಊಟ ಮುಗಿಸಿ, ಅಲ್ಲಿಂದ ಸುರತ್ಕಲ್‌ಗೆ ಬಂದು ಸಂಜೆ ವೇಳೆಗೆ ಕಾರು ಬಾಡಿಗೆ ಪಡೆದು ಮರುದಿನ ಕೃತ್ಯ ಎಸಗಿದ್ದರು.
ಫಾಝಿಲ್ ಹತ್ಯೆ ಹಿಂದೆ ಪ್ರೇಮ ಪ್ರಕರಣವಾಗಲಿ, ಕೌಟುಂಬಿಕ ಮನಸ್ತಾಪ, ಇಲ್ಲವೇ ಬೇರೆ ವಿಷಯಗಳು ಕಾರಣವಲ್ಲ. ಮೇಲ್ನೋಟಕ್ಕೆ ಕೊಲ್ಲಬೇಕು ಎಂಬ ಉದ್ದೇಶದಿಂದ ಕೊಲೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಆರೋಪಿಗಳನ್ನು ಕಸ್ಟಡಿಗೆ ಪಡೆದು ಇನ್ನಷ್ಟುತನಿಖೆ ನಡೆಸಲಾಗುವುದು. ತನಿಖೆ ಪೂರ್ಣಗೊಂಡ ಬಳಿಕವೇ ಪೂರ್ತಿ ಮಾಹಿತಿ ಸಿಗಲಿದೆ.
- ಶಶಿಕುಮಾರ್, ಮಂಗಳೂರು ಪೊಲೀಸ್ ಆಯುಕ್ತ
---