Asianet Suvarna News Asianet Suvarna News

ಕೆಎಎಸ್‌ ಅಧಿಕಾರಿ ಪ್ರತಿಮಾ ಕೊಲೆಗೈದ ಆರೋಪಿ ಕಿರಣ್‌, ಹಿಂದೊಮ್ಮೆ ಡಕಾಯಿತಿ ಕೇಸಲ್ಲಿ ಜೈಲು ಸೇರಿದ್ದ!

ಬೆಂಗಳೂರಿನಲ್ಲಿ ಸರ್ಕಾರಿ ಮಹಿಳಾ ಕೆಎಎಸ್‌ ಅಧಿಕಾರಿ ಪ್ರತಿಮಾಳನ್ನು ಕೊಲೆಗೈದ ಆರೋಪಿ ಕಾರು ಚಾಲಕ ಕಿರಣ್‌, ಹಿಂದೆಯೂ ಡಕಾಯಿತಿ ಕೇಸಲ್ಲಿ ಬಂಧನವಾಗಿದ್ದನು.

Karnataka government officer Pratima killed accused Kiran was jailed in previous robbery case sat
Author
First Published Nov 6, 2023, 8:32 PM IST

ಬೆಂಗಳೂರು (ನ.06): ಶಿವಮೊಗ್ಗ ಮೂಲದ ಬೆಂಗಳೂರು ನಗರ ಜಿಲ್ಲೆಯ ಖಡಕ್‌ ಅಂಡ್‌ ಡೈನಾಮಿಕ್‌ ಕೆಎಎಸ್‌ ಅಧಿಕಾರಿ ಪ್ರತಿಮಾ ಅವರ ಕತ್ತನ್ನು ಸೀಳಿ ಕೊಲೆ ಮಾಡಿದ ಆರೋಪಿ ಕಿರಣ್‌ ಈ ಹಿಂದೆಯೇ ಡಕಾಯಿತಿ ಗ್ಯಾಂಗ್‌ನಲ್ಲಿ ಸೇರಿಕೊಂಡು ದರೋಡೆ ಮಾಡಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದನು. ಆದರೆ, ಜೈಲು ಶಿಕ್ಷೆ ಅನುಭವಿಸಿದ್ದನ್ನು ಮುಚ್ಚಿಟ್ಟು ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ್ದನು. 

ಪ್ರತಿಮಾ ಕೊಲೆ ಆರೋಪಿ ಕಿರಣ್‌ಗೆ ಈ ಪ್ರಕರಣಕ್ಕೂ ಮೊದಲೇ ಕ್ರಿಮಿನಲ್ ಹಿನ್ನಲೆಯನ್ನು ಹೊಂದಿದ್ದಾನೆ. ಈ ಹಿಂದೆಯೂ ಜೈಲು ಸೇರಿದ್ದನು. 2017ರಲ್ಲಿ  ಡಕಾಯಿತಿ ಕೇಸಲ್ಲಿ ಭಾಗಿಯಾಗಿದ್ದ ಕಿರಣ್‌ನನ್ನು ಕೋಣನಕುಂಟೆ ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದರು. ಆದರೆ, ಆ ಕೇಸ್ ಮುಚ್ಚಿಟ್ಟು ಸರ್ಕಾರದ ಗುತ್ತಿಗೆ ಆಧಾರದ ಕೆಲಸಕ್ಕೆ ಸೇರಿದ್ದನು. ಈಗ ಸದ್ಯ ಸರ್ಕಾರಿ ಅಧಿಕಾರಿ ಪ್ರತಿಮಾರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಮತ್ತೊಮ್ಮೆ ಅರೆಸ್ಟ್ ಆಗಿದ್ದಾನೆ.

ಸರ್ಕಾರಿ ಅಧಿಕಾರಿ ಪ್ರತಿಮಾ ಕೊಲೆ ಹಿಂದಿತ್ತು ಕೌಟುಂಬಿಕ ಕಲಹ: ಕಾರು ಚಾಲಕನ ಪೀಕಲಾಟಕ್ಕೆ ಅಧಿಕಾರಿ ಬಲಿ

ಡ್ರೈವರ್‌ ಕೆಲಸಕ್ಕೆ ಸೇರುವ ಮುನ್ನ ಆರೋಪಿ ಕಿರಣ್ ಮಾರಕಾಸ್ತ್ರ ಹಿಡಿದು ದರೋಡೆಗೆ ಸ್ಕೆಚ್ ಹಾಕಿದ್ದನು. ದರೋಡೆ ಜೊತೆಗೆ ಮನೆಗಳ್ಳತನವನ್ನೂ ಮಾಡುತ್ತಿದ್ದನು. ದೊಡ್ಡವರ ಮನೆಗೆ ನುಗ್ಗಿ ಚಿನ್ನಾಭರಣ ದೋಚೋಣ, ಕದ್ದ ದುಡ್ಡಲ್ಲಿ ಲೈಫ್ ಸೆಟಲ್ ಆಗೋಣ ಎಂದು ಪ್ಲ್ಯಾನ್‌ ಮಾಡಿದ್ದನು. ಹೀಗೆ, ದರೋಡೆಗೆ ಮುಂದಾದಾಗ ಪೊಲೀಸರ ಕೈಗೆ ಸಿಕ್ಕು ಅರೆಸ್ಟ್‌ ಆಗಿದ್ದನು. ಅಂದರೆ, ಕಿರಣ್‌ಗೆ ಮೊದಲಿನಿಂದಲೇ ಕ್ರಿಮಿನಲ್‌ಗಳ ಸಂಪರ್ಕವಿದ್ದು, ಆತನೂ ಕ್ರಿಮಿನಲ್‌ ಹಿನ್ನೆಲೆಯನ್ನು ಹೊಂದಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕ್ರಿಮಿನಲ್‌ ದಾಖಲೆಯನ್ನು ಮುಚ್ಚಿಟ್ಟಿದ್ದ ಕಿರಣ್: ಇನ್ನು ಕೊಲೆ ಆರೋಪಿ ಕಿರಣ್‌ ಅವರ ತಂದೆ ಸರ್ಕಾರದ ಮತ್ತೊಂದು ಇಲಾಖೆಯಲ್ಲಿ ಸರ್ಕಾರಿ ಕಾರು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಗನಿಗೆ ಹೇಗಾದರೂ ಮಾಡಿ ಉತ್ತಮ ಜೀವನಕ್ಕೆ ದಾರಿ ತೋರಿಸಬೇಕೆಂಬ ಉದ್ದೇಶದಿಂದ ಪೋಲಿ ಬಿದ್ದು, ಕ್ರಿಮಿನಲ್‌ ಚಟುವಟಿಕೆಯಲ್ಲಿ ಭಾಗಿಯಾಗಿ ಜೈಲು ಸೇರಿ ಹೊರಬಂದಿದ್ದ ಮಗನಿಗೆ ಬುದ್ಧಿ ಹೇಳಿದ್ದನು. ನಂತರ ಮಗನಿಗೆ ಉತ್ತಮ, ಜೀವನ ರೂಪಿಸಿಕೊಡುವ ಜವಾಬ್ದಾರಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಡ್ರೈವರ್‌ ಕೆಲಸ ಕೊಡಿಸಿದ್ದನು. ಆದರೆ, ಇಲ್ಲಿಯೂ ನಿಯತ್ತಾಗಿ ಕೆಲಸ ಮಾಡದ ಕ್ರಿಮಿನಲ್‌ ಹಿನ್ನೆಲೆಯುಳ್ಳ ಕಿರಣ್‌ ಅಧಿಕಾರಿಯನ್ನೇ ಕೊಂದಿದ್ದಾನೆ.

ಶಿವಮೊಗ್ಗದ ಡೈನಾಮಿಕ್‌ ಲೇಡಿ ಕೆಎಎಸ್‌ ಆಫೀಸರ್‌ ಪ್ರತಿಮಾಳನ್ನು ಬೆಂಗಳೂರಲ್ಲಿ ಕತ್ತು ಸೀಳಿದ ದುಷ್ಕರ್ಮಿ!

ದಾಳಿಗೂ ಮುನ್ನವೇ ಸುಳಿವು ನೀಡ್ತಿದ್ದ ಕಿರಣ್?: ಬೆಂಗಳೂರು ನಗರ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಖಡಕ್‌ ಅಧಿಕಾರಿ ಪ್ರತಿಮಾ ಅವರು ಹಲವು ಅಕ್ರಮ ಗಣಿಗಾರಿಕೆಗಳನ್ನು ಮಟ್ಟ ಹಾಕುವಲ್ಲಿ ಮುಂದಾಗಿದ್ದರು. ಆದರೆ, ಅಕ್ರಮ ಗಣಿಗಳ ಮೇಲೆ ದಾಳಿ ಮಾಡುವ ಮೊದಲೇ ಕಾರು ಚಾಲಕನಾಗಿದ್ದ ಕಿರಣ್‌ ಗಣಿಗಳ ಮಾಲೀಕರಿಗೆ ಮಾಹಿತಿ ನೀಡಿ ಆರೋಪಿಗಳು ತಪ್ಪಿಸಿಕೊಳ್ಳುವಂತೆ ಮಾಡುತ್ತಿದ್ದನು ಎಂಬ ಆರೋಪವೂ ಕೇಳಿಬಂದಿದೆ. ಮೂರ್ನಾಲ್ಕು ಪ್ರಕರಣಗಳಲ್ಲಿ ಇದೇ ರೀತಿ ಘಟನೆ ನಡೆದಾಗ ಅಧಿಕಾರಿ ಪ್ರತಿಮಾ ತನ್ನ ಕಾರು ಚಾಲಕ ಕಿರಣ್‌ನನ್ನು ಕೆಲಸದಿಂದ ವಜಾ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಒಂದು ಬಾರಿ ನಂಬಿಕೆ ಕಳೆದುಕೊಂಡ ಕಿರಣ್‌ ಎಷ್ಟೇ ಬೇಡಿಕೊಂಡರೂ ಮರಳಿ ಕೆಲಸಕ್ಕೆ ಸೇರಿಸಿಕೊಂಡಿರಲಿಲ್ಲ. ಇದೇ ಸೇಡನ್ನು ಮನಸ್ಸಿನಲ್ಲಿಟ್ಟುಕೊಂಡ ಕ್ರಿಮಿನಲ್‌ ಕಿರಣ್‌ ಅಧಿಕಾರಿ ಪ್ರತಿಮಾಳ ಮನೆಗೆ ನುಗ್ಗಿ ಕತ್ತು ಕೊಯ್ದು ಸಾಯಿಸಿದ್ದಾನೆ.

Follow Us:
Download App:
  • android
  • ios