ಸಾಲ ವಾಪಸ್ ಕೇಳಿದ್ದಕ್ಕೆ ಸ್ನೆಹಿತನ ಇರಿದು ಕೊಂದ ಗೆಳೆಯ: ಒಟ್ಟಿಗೇ ಮದ್ಯ ಸೇವನೆ ವೇಳೆ ಜಗಳ
ಬಾರ್‌ನಲ್ಲಿ ಹಣದ ವಿಚಾರಕ್ಕೆ ಗೆಳೆಯರ ಗಲಾಟೆ ನಡೆದಿದ್ದು, ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶೇಖರ್ ಕೊಲೆಯಾಗಿದ್ದಾರೆ. ಮನೆಗೆ ಹೋಗುತ್ತಿದ್ದವನ ರಸ್ತೆಯಲ್ಲಿ ತಡೆದು ಹತ್ಯೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು (ಫೆಬ್ರವರಿ 9, 2023) : ಹಣಕಾಸು ವಿವಾದದ ಹಿನ್ನಲೆಯಲ್ಲಿ ಕ್ಯಾಬ್ ಚಾಲಕನೊಬ್ಬನನ್ನು ಆತನ ಸ್ನೇಹಿತರು ಹತ್ಯೆಗೈದು ಪರಾರಿಯಾಗಿರುವ ಘಟನೆ ಬಾಸಣವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಬಾಣಸವಾಡಿ ನಿವಾಸಿ ಎಂ.ಶೇಖರ್ (29) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಮೃತನ ಗೆಳೆಯ ಮನೋಜ್ ಹಾಗೂ ಈತನ ಸಹಚರನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಗೆಳೆಯರ ಜತೆ ಮದ್ಯ ಸೇವಿಸಿ ಮನೆಗೆ ಮರಳುತ್ತಿದ್ದ ಶೇಖರ್‌ನನ್ನು ಅಡ್ಡಗಟ್ಟಿಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಶೇಖರ್ ಮನೆ ಸಮೀಪ ಈ ಕೃತ್ಯ ನಡೆದಿದ್ದು, ಗಾಯಾಳುವನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ.
ಇದನ್ನು ಓದಿ: TUMAKURU: ಹಫ್ತಾ ವಸೂಲಿ ಆರೋಪ : ಪುಂಡರಿಂದ ವ್ಯಾಪಾರಿ ಮೇಲೆ ಹಲ್ಲೆ
ತಮಿಳುನಾಡು ಮೂಲದ ಶೇಖರ್, ಹಲವು ವರ್ಷಗಳಿಂದ ತನ್ನ ಪೋಷಕರ ಜತೆ ಚಿಕ್ಕಬಾಣಸವಾಡಿಯಲ್ಲಿ ನೆಲೆಸಿದ್ದ. ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶೇಖರ್‌ಗೆ ಮನೋಜ್ ಜತೆ ಸ್ನೇಹವಿತ್ತು. ಈ ಗೆಳೆತನದಲ್ಲಿ ಆತನಿಗೆ .70 ಸಾವಿರ ಸಾಲ ಕೊಟ್ಟಿದ್ದ. ಆದರೆ ಸಕಾಲಕ್ಕೆ ಹಣ ಮರಳಿಸದ ಕಾರಣಕ್ಕೆ ಗೆಳೆಯರ ಮಧ್ಯೆ ಮನಸ್ತಾಪ ಮೂಡಿತ್ತು. ಆಗಾಗ ಜಗಳ ನಡೆದಿತ್ತು. ಅಂತೆಯೇ ಮಂಗಳವಾರ ರಾತ್ರಿ ಚಿಕ್ಕಬಾಣಸವಾಡಿಯ ಬಾರ್‌ನಲ್ಲಿ ಮದ್ಯ ಸೇವನೆಗೆ ಮನೋಜ್ ಹಾಗೂ ಶೇಖರ್ ತೆರಳಿದ್ದರು. ಕಂಠಮಟ್ಟಮದ್ಯ ಸೇವಿಸಿದ ಬಳಿಕ ಹಣದ ವಿಚಾರ ಪ್ರಸ್ತಾಪವಾಗಿ ಗಲಾಟೆಯಾಗಿದೆ. ತನ್ನ ಸಾಲ ಕೊಡುವಂತೆ ಶೇಖರ್ ಕೇಳಿದಕ್ಕೆ ಮನೋಜ್ ಜಗಳ ಮಾಡಿದ್ದಾನೆ. ಆಗ ಅವರನ್ನು ಸಮಾಧಾನಪಡಿಸಿ ಬಾರ್ ಸಿಬ್ಬಂದಿ ಹೊರ ಕಳುಹಿಸಿದ್ದಾರೆ. ಇದಾದ ನಂತರ ಮನೆಗೆ ಹೋಗುತ್ತಿದ್ದ ಶೇಖರ್‌ನನ್ನು ಅಡ್ಡಗಟ್ಟಿಮನೋಜ್ ಹಾಗೂ ಆತನ ಸಹಚರ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಪಿಎಸ್‌ಐ ಫೈರಿಂಗ್ ಪ್ರಕರಣ, ಆರೋಪಿ ಕಾಲು ಕತ್ತರಿಸಿದ ವೈದ್ಯರು