ಕೋಲಾರ ಮರ್ಯಾದಾ ಹತ್ಯೆ: ದಲಿತನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಉಸಿರುಗಟ್ಟಿಸಿ ಕೊಂದ ತಂದೆ!
ಕೋಲಾರದ ಬಂಗಾರಪೇಟೆಯಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಯುವತಿಯ ತಂದೆಯೇ ಮಗಳನ್ನು ಹತ್ಯೆ ಮಾಡಿದ್ದಾರೆ. ವಿಷಯ ತಿಳಿದು ಯುವಕ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೋಲಾರ (ಜೂ.28): ಕೋಲಾರದ ಬಂಗಾರಪೇಟೆಯಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ಅನ್ಯ ಜಾತಿಯ ಹುಡುಗನ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಮಗಳನ್ನು ಆಕೆಯ ತಂದೆಯೇ ಕೊಲೆ ಮಾಡಿದ್ದಾರೆ. ವಿಷಯ ತಿಳಿದು ಆಕೆಯ ಪ್ರೇಮಿಯೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬಂಗಾರಪೇಟೆಯ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ತಾಲೂಕಿನ ಬೋಡಗುರ್ಕಿ ಗ್ರಾಮದ ಕೀರ್ತಿ (20) ಎಂಬ ಯುವತಿಯನ್ನು ಆಕೆಯ ತಂದೆ ಕೃಷ್ಣಮೂರ್ತಿ (46) ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇದನ್ನರಿತ ಯುವತಿಯ ಪ್ರಿಯಕರ ಅದೇ ಗ್ರಾಮದ ಗಂಗಾಧರ್ (24) ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇವರಿಬ್ಬರೂ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವಿಷಯ ತಿಳಿದ ಕೀರ್ತಿಯ ತಂದೆ ಬುದ್ಧಿವಾದ ಹೇಳಿದ್ದರು. ಆದರೆ ಮಗಳು ಇಬ್ಬರ ವಿವಾಹಕ್ಕೆ ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ತಂದೆ ಪುತ್ರಿಯ ಕೊಲೆ ಮಾಡಿದ್ದಾರೆ.
ಮದುವೆ ಮನೆಯಲ್ಲಿ ಸೂತಕ, ಪುತ್ರಿಯರ ವಿವಾಹಕ್ಕೆ ಓಡಾಡಿ ತಯಾರಿ ಮಾಡಿದ್ದ ಅಪ್ಪನೇ ಅಪಘಾತದಲ್ಲಿ ಸಾವು!
ಕೋಲಾರ ಬಂಗಾರಪೇಟೆ ತಾಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದ್ದು, ಇವರಿಬ್ಬರೂ ಕೂಡ ಒಂದೇ ಗ್ರಾಮದವರಾಗಿದ್ದಾರೆ. ಯುವಕ ದಲಿತ ಪಂಗಡಕ್ಕೆ ಸೇರಿದವನಾಗಿದ್ದ, ಯುವತಿ ಬೇರೆ ಜಾತಿಯವಳಾಗಿದ್ದಳು. ಮಂಗಳವಾರ ಬೆಳಗ್ಗೆ ಈ ವಿಚಾರವಾಗಿ ಕೀರ್ತಿ ಹಾಗೂ ಆಕೆಯ ತಂದೆ ತೀವ್ರ ವಾಗ್ವಾದ ನಡೆದಿದೆ. ಕೋಪದ ಭರದಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಿನ್ನೆಯೇ ಪ್ರೇಮಿಗಳಿಬ್ಬರ ಅಂತ್ಯಸಂಸ್ಕಾರ ನಡೆದಿದೆ. ಜಾತಿ ವಿಚಾರವಾಗಿ ಪ್ರೇಮಿಗಳು ಧಾರುಣ ಅಂತ್ಯ ಕಂಡಿದ್ದಾರೆ. ಬೋಡಗುರ್ಕಿ ಗ್ರಾಮದಲ್ಲಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮಗಳನ್ನು ಉಸಿರು ಗಟ್ಟಿಸಿ ಕೊಂದ ಆರೋಪಿ ತಂದೆ ಕೃಷ್ಣಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ನಿರಪರಾಧಿಗಳ ಮೇಲೆ ಕೇಸು ಜಡಿದ ಮಂಗಳೂರಿನ 3 ಪೊಲೀಸ್ ಅಧಿಕಾರಿಗಳಿಗೆ ಭಾರೀ ದಂಡ!