ಹೆಂಡ್ತಿ ಸರಿಯಾಗಿ ಆರೈಕೆ ಮಾಡ್ತಿಲ್ಲವೆಂದು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪಾಪಿ ಗಂಡ
ಹೆಂಡತಿ ತನ್ನನ್ನು ಸರಿಯಾಗಿ ಆರೈಕೆ ಮಾಡುತ್ತಿಲ್ಲವೆಂಬ ಕೋಪದಿಂದ ಮಲಗಿದ್ದ ಪತ್ನಿಯ ಕುತ್ತಿಗೆಯನ್ನು ಗಂಡನೇ ಕೊಡಲಿಯಿಂದ ಕಡಿದು ಕೊಲೆ ಮಾಡಿದ ದುರ್ಘಟನೆ ನಡೆದಿದೆ.
ಬಳ್ಳಾರಿ (ಡಿ.04): ರಾಜ್ಯದ ಗಡಿ ಜಿಲ್ಲೆ ಬಳ್ಳಾರಿಯಲ್ಲಿ ಹೆಂಡತಿ ತನ್ನನ್ನು ಸರಿಯಾಗಿ ಆರೈಕೆ ಮಾಡುತ್ತಿಲ್ಲವೆಂಬ ಕೋಪದಿಂದ ಮಲಗಿದ್ದ ಪತ್ನಿಯ ಕುತ್ತಿಗೆಯನ್ನು ಗಂಡನೇ ಕೊಡಲಿಯಿಂದ ಕಡಿದು ಕೊಲೆ ಮಾಡಿದ ದುರ್ಘಟನೆ ನಡೆದಿದೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಲಕುಂದಿ ಗ್ರಾಮದಲ್ಲಿ ಘಟನೆ ನಡೆದಿದೆ, ಇಬ್ಬರಿಗೂ ಹಲವು ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ, ಗಂಡನಿಗೆ ಕೆಲವೇ ದಿನಗಳಲ್ಲಿ ತೀವ್ರ ಅನಾರೋಗ್ಯ ಕಾಡಿದ್ದರಿಂದ ಆತನನ್ನು ಹೆಂಡತಿಯೇ ಕಷ್ಟಪಟ್ಟು ದುಡಿದು ನೋಡಿಕೊಳ್ಳುತ್ತಿದ್ದಳು. ಇತ್ತೀಚಿನ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಗಿಂದಾಗ್ಗೆ ಗಂಡನಿಗೆ ಡಯಾಲಿಸಿಸ್ ಮಾಡಿಸಬೇಕಿತ್ತು. ಇದಕ್ಕೆಲ್ಲ ಹಣ ಹೊಂದಾಣಿಕೆ ಮಾಡುವುದಕ್ಕೆ ಹೆಂಡತಿ ಅವರಿವರ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಆದರೆ, ಹೆಂಡತಿ ತನ್ನನ್ನು ಮನೆಯಲ್ಲಿ ಸರಿಯಾಗಿ ಆರೈಕೆ ಮಾಡುತ್ತಿಲ್ಲವೆಂದು ಕೋಪಗೊಂಡ ಗಂಡ ರಾತ್ರಿ ವೇಳೆ ಹೆಂಡತಿ ಮಲಗಿದ್ದಾಗ ಕೊಡಲಿಯನ್ನು ತೆಗೆದುಕೊಂಡು ಆಕೆಯ ಕುತ್ತಿಗೆಯನ್ನು ಕಡಿದು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
ಬೆಂಗಳೂರು ತಡರಾತ್ರಿ ಹೋಟೆಲ್ ಮುಚ್ಚಿಸಲು ಬಂದ ಪಿಎಸ್‌ಐ ಮೇಲೆ 50,000 ರೂ. ಲಂಚದ ಕೇಸ್ ಹಾಕ್ತೀನೆಂದ ಮಾಲೀಕ
ಮೃತ ಮಹಿಳೆಯನ್ನು ಮೈಬುನಾ ಬಿ. (35) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ಗಂಡ ರಸೂಲ್ ಸಾಬ್ ಆಗಿದ್ದಾನೆ. ಈತ ಡಯಾಲಿಸಿಸ್ ರೋಗಿಯಾಗಿದ್ದರಿಂದ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ, ಪತ್ನಿಯೇ ಕೆಲಸ ಮಾಡಿ ಸಾಕುತ್ತಿದ್ದಳು. ತೀವ್ರ ಕೆಲಸದ ನಡುವೆ ಪತ್ನಿ ತನ್ನನ್ನು ನಿರ್ಲಕ್ಷ್ಯ ಮಾಡ್ತಿದ್ದಾಳೆಂದು ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ತೆಕ್ಕಲಕೋಟೆ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ತಾನು ಕಷ್ಟಪಟ್ಟು ದುಡಿದಾದರೂ ಸರಿ ಗಂಡನ ಆರೈಕೆ ಮಾಡಬೇಕೆಂದು ಜೀವವನ್ನೇ ಸವೆಸುತ್ತಿದ್ದ ಪತ್ನಿಯನ್ನು ಕೊಲೆ ಮಾಡಿದ ದುರುಳ ಗಂಡನಿಗೆ ತಕ್ಕ ಶಿಕ್ಷೆಯೇ ಆಗಬೇಕು ಎಂದು ಮೃತ ಮೈಬುನಾ ಕುಟುಂಬಸ್ಥರು ಆಗ್ರಹ ಮಾಡಿದ್ದಾರೆ.
ಪ್ರೀತಿಸಿ ಮದುವೆಯಾಗಿ ಬಂದು ಗಂಡನ ಮನೆಯಲ್ಲಿ ನೇಣಿಗೆ ಶರಣಾದ ಗೃಹಿಣಿ:
ಬೆಂಗಳೂರು(ಡಿ.04): ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹದೇವಪುರದ ಸಿಂಗಯ್ಯನಪಾಳ್ಯ ನಿವಾಸಿ ಅನುಷಾ(23) ಮೃತ ದುರ್ದೈವಿ. ಶನಿವಾರ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳ ಪೋಷಕರು ನೀಡಿದ ದೂರಿನ ಮೇರೆಗೆ ಅಳಿಯ ಪ್ರವೀಣ್, ಆತನ ತಾಯಿ ನಾಗಮ್ಮ, ಸೋದರ ಮಾವ ರಾಜೇಶ್, ದೊಡ್ಡಪ್ಪ ತಿಮ್ಮೇಗೌಡ ಹಾಗೂ ಇವರ ಮಗ ಮಹೇಶ್ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಗದೂರು ಗ್ರಾಮದ ಅನುಷಾ ಮತ್ತು ಪಕ್ಕದ ಊರಿನ ಪ್ರವೀಣ್ ಪರಸ್ಪರ ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಅನುಷಾ ಮನೆಯವರ ವಿರೋಧವಿತ್ತು. ಎರಡು ತಿಂಗಳ ಹಿಂದೆ ಅನುಷಾ ಮತ್ತು ಪ್ರವೀಣ್ ಮನೆ ಬಿಟ್ಟು ಬಂದು ಮದುವೆಯಾಗಿದ್ದರು. ಬಳಿಕ ಮಹದೇವಪುರದ ಸಿಂಗಯ್ಯನಪಾಳ್ಯದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಇವರ ಜತೆಗೆ ಪ್ರವೀಣ್ ತಾಯಿ ನಾಗಮ್ಮ ಇದ್ದರು.
ಪ್ರವೀಣ್ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ ಮಾಡುತ್ತಾನೆ. ಅನುಷಾ ಮನೆಯಲ್ಲೇ ಇದ್ದಳು. ಶನಿವಾರ ಸಂಜೆ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಅನುಷಾ ಅತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅತ್ತೆ ನಾಗಮ್ಮ ರೂಮ್‌ಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಮರಣಪತ್ರ ಸಿಕ್ಕಿಲ್ಲ. ಆದರೆ, ಮೃತರ ಪೋಷಕರು, ಅಳಿಯ ಪ್ರವೀಣ್ ಮತ್ತು ಅವರ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.