ಅಂಕಿತಾ ಭಂಡಾರಿ ಹತ್ಯೆ ಮರಣೋತ್ತರ ವರದಿ ಲಭ್ಯ, ಬಿಜೆಪಿ ನಾಯಕನಿಗೆ ಮತ್ತಷ್ಟು ಸಂಕಷ್ಟ
ಶಾಂತವಾಗಿದ್ದ ಉತ್ತರಖಂಡದಲ್ಲಿ ಪ್ರತಿಭಟನೆ, ಗಲಭೆ ಕಾರಣವಾಗಿರುವ ಅಂಕಿತಾ ಬಂಢಾರಿ ಹತ್ಯೆ ಪ್ರಕರಣ ಇದೀಗ ಮತ್ತೆ ಬಿಜೆಪಿ ಮುಖಂಡನ ಪುತ್ರನಿಗೆ ಮತ್ತಷ್ಟು ಸಂಕಷ್ಟ ತಂದಿದೆ. 19ರ ಹರೆಯದ ಯುವತಿ ಹತ್ಯೆಯ ಮರಣೋತ್ತರ ಪರೀಕ್ಷಾ ವರದಿ ಪೊಲೀಸರಿಗೆ ಲಭ್ಯವಾಗಿದೆ. ಇದು ಆರೋಪಕ್ಕೆ ಮಹತ್ವದ ಸಾಕ್ಷಿ ಒದಗಿಸಿದೆ.
ಉತ್ತರಖಂಡ(ಅ.03): ಬಿಜಿಪಿ ನಾಯಕ ವಿನೋದ್ ಆರ್ಯ ಪುತ್ರ ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್‌ನಲ್ಲಿ ಹತ್ಯೆಯಾದ ರಿಸೆಪ್ಶನಿಸ್ಟ್ ಅಂಕಿತಾ ಭಂಡಾರಿ ಮರಣೋತ್ತರ ಪರೀಕ್ಷಾ ವರದಿ ಪೊಲೀಸರಿಗೆ ಲಭ್ಯವಾಗಿದೆ. ವಿಶೇಷ ತನಿಖಾ ತಂಡ ಕಲೆ ಹಾಕಿರುವ ಸಾಕ್ಷ್ಯಗಳಿಗೂ, ಮರಣೋತ್ತರ ವರದಿ ಹೊಂದಿಕೆಯಾಗುತ್ತಿದೆ. ಹೀಗಾಗಿ ಪುಲ್ಕಿತ್ ಆರ್ಯ ಮೇಲಿನ ಆರೋಪಗಳಿಗೆ ಮತ್ತಷ್ಟು ಸಾಕ್ಷ್ಯ ಲಭ್ಯವಾಗಿದೆ. ಪೋಸ್ಟ್‌ಮಾರ್ಟನ್ ರಿಪೋರ್ಟ್ ಪೊಲೀಸರಿಗೆ ಲಭ್ಯವಾಗುತ್ತಿದ್ದಂತೆ ಪ್ರಕರಣ ತನಿಖೆ ಮತ್ತಷ್ಟು ಚುರುಕುಗೊಂಡಿದೆ ಎಂದು ಎಸ್ಐಟಿ ಇನ್‌ಚಾರ್ಜ್ ಡಿಜಿ ರೇಣುಕಾ ದೇವಿ ಹೇಳಿದ್ದಾರೆ. ನಾವು ಕಲೆ ಹಾಕಿರುವ ಈವರೆಗಿನ ಎಲ್ಲಾ ಸಾಕ್ಷ್ಯಗಳಿಗೆ ಪೂರವಾಗಿ ಮರಣೋತ್ತರ ವರದಿ ಬಂದಿದೆ. ಇನ್ನು ಮರಣೋತ್ತರ ಪರೀಕ್ಷೆಯ ಸಂಪೂರ್ಣ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇಷ್ಟೇ ಅಲ್ಲ ವೈದ್ಯರ ತಂಡದಿಂದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸುವ ಎಲ್ಲಾ ಪ್ರಕ್ರಿಯೆಗಳು ಎಸ್ಐಟಿ ಸುಪರ್ದಿಯಲ್ಲಿ ನಡೆದಿದೆ ಎಂದು ರೇಣುಕಾ ದೇವಿ ಹೇಳಿದ್ದಾರೆ.
ಅಂಕಿತಾ ಹತ್ಯೆ ಭಾರಿ ಪ್ರತಿಭಟನೆ
ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರನ ರೆಸಾರ್ಚ್‌ನಲ್ಲಿ 19 ವರ್ಷದ ಯುವತಿಯೊಬ್ಬಳ ಹತ್ಯೆ ನಡೆದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಿಜೆಪಿಯು ವಿನೋದ್ ಆರ್ಯ ಹಾಗೂ ಅವರ ಸಹೋದರ ಅಂಕಿತ್ ಆರ್ಯ ಅವರನ್ನು ಪಕ್ಷದಿಂದ ವಜಾಗೊಳಿಸಿದೆ. ಹತ್ಯೆಯ ಆರೋಪಿಯಾದ ರೆಸಾರ್ಚ್ ಒಡೆಯ ಪುಳಕಿತ್ ಆರ್ಯ ಹಾಗೂ ಹತ್ಯೆಯಲ್ಲಿ ಸಹಕರಿಸಿದ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಕೊನೆಯ ಸಲ ಮಗಳ ಮುಖ ನೋಡಲೂ ಬಿಡ್ಲಿಲ್ಲ: Ankita Bhandari ತಾಯಿ ಆಕ್ರೋಶ
ಇದಲ್ಲದೇ ಉತ್ತರಾಖಂಡ ಮಾಟಿ ಕಲಾ ಬೋರ್ಡಿನ ಮುಖ್ಯಸ್ಥ ಸ್ಥಾನದಿಂದ ವಿನೋದ್ ಆರ್ಯ ಅವರನ್ನು ಹಾಗೂ ಒಬಿಸಿ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ಅಂಕಿತ್ ಆರ್ಯ ಅವರನ್ನು ವಜಾಗೊಳಿಸಲಾಗಿದೆ. ಅಲ್ಲದೇ ಹತ್ಯೆ ನಡೆದ ರೆಸಾರ್ಚ್ ಮೇಲೆ ಉತ್ತರಾಖಂಡ ಸರ್ಕಾರ ಬುಲ್ಡೋಜರ್ ಚಲಾಯಿಸಿ ಅದನ್ನು ಧ್ವಂಸಗೊಳಿಸಿದೆ. ಇದೇ ವೇಳೆ ಉದ್ರಿಕ್ತರು ರೆಸಾರ್ಚ್‌ನ ಕೆಲ ಭಾಗಕ್ಕೆ ಬೆಂಕಿ ಕೂಡ ಹಚ್ಚಿದ್ದಾರೆ. ರೆಸಾರ್ಚ್‌ನಲ್ಲಿ ಸ್ವಾಗತಕಾರಿಣಿ ಆಗಿದ್ದ ಅಂಕಿತಾ ಭಂಡಾರಿ ಎಂಬುವಳೇ ಕೊಲೆ ಆದವಳು. ಈಕೆ ಸೆ.18ರಿಂದ ಕಾಣೆಯಾಗಿದ್ದಾಳೆ ಎಂದು ಆಕೆಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆಯ ಬಳಿಕ ಆಕೆಯ ಮೃತದೇಹ ಶನಿವಾರ ಮುಂಜಾನೆ ಚೀಲಾ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸೆಕ್ಸ್ ನಿರಾಕರಿಸಿದ ರೆಸೆಪ್ಶನಿಸ್ಟ್ ಹತ್ಯೆ, ಪುತ್ರನ ಕರ್ಮಕಾಂಡಕ್ಕೆ ಬಿಜೆಪಿ ನಾಯಕನ ತಲೆದಂಡ!
ನನ್ನ ಮಗ ಸೀದಾ ಸಾದಾ ಬಾಲಕ: ಬಿಜೆಪಿ ಮುಖಂಡ
ರೆಸಾರ್ಚ್‌ನಲ್ಲಿ ಸ್ವಾಗತಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾದ ಪುಳಕಿತ್ ಆರ್ಯನ ತಂದೆ, ಮಾಜಿ ಬಿಜೆಪಿ ನಾಯಕ ವಿನೋದ್ ಆರ್ಯ, ‘ನನ್ನ ಮಗ ಏನೂ ತಪ್ಪು ಮಾಡಿಲ್ಲ, ಆತ ಸೀದಾ ಸಾದಾ ಹುಡುಗ. ಆತ ಅಂಥವನಲ್ಲ’ ಎಂದಿದ್ದರು. ಪುಳಕಿತ್ ವಿರುದ್ಧದ ಆರೋಪವನ್ನು ಅವರು ನಿರಾಕರಿಸಿದ ಅವರು, ‘ನನ್ನ ಮಗ ಸೀದಾ ಸಾದಾ ಬಾಲಕ. ಅವನು ಕೇವಲ ತನ್ನ ಕೆಲಸದ ಬಗ್ಗೆ ಕಾಳಜಿ ಹೊಂದಿದ್ದ. ಅವನು ಎಂದಿಗೂ ಇಂತಹ ಕೃತ್ಯಗಳನ್ನು ನಡೆಸುವುದಿಲ್ಲ. ನನ್ನ ಮಗ ಹಾಗೂ ಅಂಕಿತಾ ಭಂಡಾರಿ ಇಬ್ಬರಿಗೂ ನ್ಯಾಯ ಸಿಗಬೇಕೆಂದು ಬಯಸುತ್ತೇನೆ’ ಎಂದಿದ್ದರು.