Asianet Suvarna News Asianet Suvarna News

Mangaluru crime: ಜಲೀಲ್‌ ಹತ್ಯೆ ಪ್ರಕರಣ : ಐವರ ವಿಚಾರಣೆ

ಸುರತ್ಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಟಿಪಳ್ಳ 4ನೇ ಬ್ಲಾಕ್‌ನ ನೈತಂಗಡಿ ಬಳಿ ಶನಿವಾರ ರಾತ್ರಿ ಅಬ್ದುಲ್‌ ಜಲೀಲ್‌ ಹತ್ಯೆ ಪ್ರಕರಣ ಬಳಿಕ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

abdul jalil murder case Five  investigating mangaluru police rav
Author
First Published Dec 26, 2022, 1:23 PM IST

ಮಂಗಳೂರು (ಡಿ.26) : ಸುರತ್ಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಟಿಪಳ್ಳ 4ನೇ ಬ್ಲಾಕ್‌ನ ನೈತಂಗಡಿ ಬಳಿ ಶನಿವಾರ ರಾತ್ರಿ ಅಬ್ದುಲ್‌ ಜಲೀಲ್‌ ಹತ್ಯೆ ಪ್ರಕರಣ ಬಳಿಕ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಮುದಾಯದ ಆಕ್ರೋಶದ ನಡುವೆ ಭಾನುವಾರ ಪಂಜಿಮೊಗರಿನ ಮಸೀದಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಡಿ.27ರ ಬೆಳಗ್ಗೆ 6 ಗಂಟೆವರೆಗೆ ಸುರತ್ಕಲ್‌, ಬಜ್ಪೆ, ಕಾವೂರು, ಪಣಂಬೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸೆ.144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಅಹಿತಕರ ಘಟನೆ ನಡೆಯದಂತೆ ಕಾಟಿಪಳ್ಳ ಕೃಷ್ಣಾಪುರ ಪರಿಸರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌್ತ ಏರ್ಪಡಿಸಲಾಗಿದೆ. ಶನಿವಾರ ರಾತ್ರಿಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ. ನಿಷೇಧಾಜ್ಞೆ ಜಾರಿಗೊಳಿಸಿದ ಪ್ರದೇಶದಲ್ಲಿ ಭಾನುವಾರ ಜನಸಂಚಾರ ವಿರಳವಾಗಿದ್ದು, ಬಿಕೋ ಎನ್ನುತ್ತಿತ್ತು. ಸುರತ್ಕಲ್‌, ಬಜ್ಪೆ, ಕಾವೂರು, ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಡಿ.27ರ ಬೆಳಗ್ಗೆ 10ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಕಾಟಿಪಳ್ಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪಟ್ಟು: ಜಲೀಲ್‌ ಮೃತ ದೇಹವನ್ನಿಟ್ಟು ಧರಣಿ

ಡಿಸಿ ಆಗಮನಕ್ಕೆ ಪಟ್ಟು: ಜಲೀಲ್‌ ಮೃತದೇಹವನ್ನು ಶನಿವಾರ ರಾತ್ರಿಯೇ ಮಂಗಳೂರಿನ ಖಾಸಗಿ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರಿಸಲಾಗಿತ್ತು. ಭಾನುವಾರ ಬೆಳಗ್ಗೆ ಮಾಜಿ ಶಾಸಕರಾದ ಮೊಹಿಯುದ್ದೀನ್‌ ಬಾವ, ಐವನ್‌ ಡಿಸೋಜ ಮತ್ತಿತರ ಮುಖಂಡರು ಆಗಮಿಸಿ ಕುಟುಂಬಸ್ಥರ ಜತೆ ಮುಂದಿನ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಆಂಬ್ಯುಲೆನ್ಸ್‌ನಲ್ಲಿ ಕಾಟಿಪಳ್ಳದಲ್ಲಿರುವ ಜಲೀಲ್‌ ಅವರ ಮನೆಗೆ ಮೃತದೇಹ ಕೊಂಡೊಯ್ಯಲಾಯಿತು. ಅಂತಿಮ ದರ್ಶನಕ್ಕೆ ನೂರಾರು ಜನರು ಮನೆ ಪರಿಸರದಲ್ಲಿ ಜಮಾಯಿಸಿದ್ದು, ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರು. ಮಾತ್ರವಲ್ಲದೆ, ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದ ಆ್ಯಂಬುಲೆ®್ಸ… ತಡೆದು ಆಕ್ರೋಶಿತ ಗುಂಪು ಧರಣಿ ನಡೆಸಿತು.

ಉದ್ವಿಗ್ನ ಪರಿಸ್ಥಿತಿ ಉದ್ಭವಿಸಿದ ಕೂಡಲೆ ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಮಧ್ಯೆ ಪ್ರವೇಶಿಸಿ ಆಕ್ರೋಶಿತರನ್ನು ಸಮಾಧಾನಪಡಿಸಿದರು. ಧರಣಿ ಹಿಂಪಡೆದುಕೊಂಡ ಬಳಿಕ ಮೃತದೇಹವನ್ನು ಪಂಜಿಮೊಗರು ಖಬರಸ್ತಾನಕ್ಕೆ ಕಳುಹಿಸಿಕೊಡಲಾಯಿತು. ಬಿಗು ಪೊಲೀಸ್‌ ಬಂದೋಬಸ್‌್ತನಲ್ಲಿ ಝೀರೊ ಟ್ರಾಫಿಕ್‌ನಲ್ಲಿ ಮೃತದೇಹವನ್ನು ಪಂಜಿಮೊಗರಿನ ಕೂಳೂರು ಮುಹಿಯುದ್ದೀನ್‌ ಜುಮ್ಮಾ ಮಸೀದಿ ಆವರಣಕ್ಕೆ ಕರೆತರಲಾಯಿತು. ಅಲ್ಲೂ ನೂರಾರು ಮಂದಿ ಸಮುದಾಯ ಬಾಂಧವರ ನಡುವೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿ ಅಂತ್ಯಸಂಸ್ಕಾರ ಮಾಡಲಾಯಿತು.

ಆಕ್ರೋಶ: ಅಂತ್ಯಸಂಸ್ಕಾರಕ್ಕೆ ಮೊದಲು ಸಮುದಾಯದ ಮುಖಂಡರು ಸರ್ಕಾರದ ನಡೆಯ ಬಗ್ಗೆ ಬಹಿರಂಗವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗೆ ಮುಸ್ಲಿಮರ ಕೊಲೆ ನಡೆದಾಗ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಎಸಗಲಾಗಿದೆ. ಅದರ ಬಳಿಕ ಮುಸ್ಲಿಮರ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇರುವುದರಿಂದಲೇ ಇಂಥ ಘಟನೆಗಳಿಗೆ ಪ್ರೇರಣೆಯಾಗಿದೆ. ಈಗ ಜಲೀಲ್‌ ಕುಟುಂಬಕ್ಕಾದರೂ ಪರಿಹಾರ ನೀಡಬೇಕು. ಕೊಲೆಗಡುಕರನ್ನು ಬೇಕಾಬಿಟ್ಟಿಓಡಾಡಲು ಅವಕಾಶ ನೀಡದೆ ಬಂಧಿಸಿ ಎಂದು ಸಮುದಾಯದ ಮುಖಂಡರು ಆಗ್ರಹಿಸಿದರು. ಈ ಸಂದರ್ಭ ಭೇಟಿ ನೀಡಿದ ಕಮಿಷನರ್‌ ಶಶಿಕುಮಾರ್‌ ಬಳಿ ಕೂಡ ತಮ್ಮ ಬೇಡಿಕೆಗಳನ್ನು ಮುಂದಿರಿಸಿದರು.

ಅಂತ್ಯಸಂಸ್ಕಾರದಲ್ಲಿ ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ, ಮುಖಂಡರಾದ ಕೋಡಿಜಾಲ್‌ ಇಬ್ರಾಹಿಂ, ಕೆ.ಅಶ್ರಫ್‌, ಬಂದರು ಹನೀಫ್‌ ಹಾಜಿ ಮತ್ತಿತರರು ಭಾಗವಹಿಸಿದ್ದರು.

ನೈತಂಗಡಿಯಲ್ಲಿ ಫ್ಯಾನ್ಸಿ ಅಂಗಡಿ ಹೊಂದಿದ್ದ ಅಬ್ದುಲ್‌ ಜಲೀಲ್‌ ಅವರಿಗೆ ಶನಿವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಇಬ್ಬರು ದುಷ್ಕರ್ಮಿಗಳು ಡ್ರ್ಯಾಗರ್‌ನಿಂದ ಎದೆ, ಹೊಟ್ಟೆಭಾಗಕ್ಕೆ ಇರಿದು ಪರಾರಿಯಾಗಿದ್ದರು. ತಕ್ಷಣ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟರಲ್ಲಾಗಲೇ ತೀವ್ರ ರಕ್ತಸ್ರಾವದಿಂದ ಜಲೀಲ್‌ ಮೃತಪಟ್ಟಿದ್ದರು. ಸಾವಿನ ಬಗ್ಗೆ ಅನೇಕ ಊಹಾಪೋಹಗಳು ಹರಡಿದ್ದು, ನಿಜವಾದ ಕಾರಣ ಏನು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಜಲೀಲ್‌ ಅವರಿಗೆ ಪತ್ನಿ, 10 ತಿಂಗಳ ಮಗು ಇದೆ. ಬಹಳ ವರ್ಷಗಳಿಂದ ಮಕ್ಕಳಾಗದೆ ಇದ್ದುದರಿಂದ ಮಗುವೊಂದನ್ನು ದತ್ತು ತೆಗೆದುಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಐವರು ವಶಕ್ಕೆ, ವಿಚಾರಣೆ

ಜಲೀಲ್‌ ಹತ್ಯೆಗೆ ಸಂಬಂಧಿಸಿದಂತೆ ಒಬ್ಬ ಮಹಿಳೆ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಹಿಳೆಯೊಬ್ಬರ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿರುವ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲೂ ಪೊಲೀಸ್‌ ತನಿಖೆ ಮುಂದುವರಿದಿದೆ. 20 ವರ್ಷಗಳ ಹಿಂದೆ ಬಸ್‌ ಡ್ರೈವರ್‌ವೊಬ್ಬರನ್ನು ಕಾಟಿಪಳ್ಳದಲ್ಲಿ ಕೊಲೆ ಮಾಡಲಾಗಿತ್ತು. ಅದರ ಆರೋಪಿಯ ಪುತ್ರ ಈಗ ಜಲೀಲ್‌ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ಆತನನ್ನು ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಕೆಲ ವಾರಗಳ ಹಿಂದಷ್ಟೆನಡೆದ ಕೊಲೆಗಳಿಗೂ ಇದಕ್ಕೂ ಸಂಬಂಧವಿದೆಯೇ ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ.

ಶನಿವಾರ ರಾತ್ರಿ ಜಲೀಲ್‌ಗೆ ದುಷ್ಕರ್ಮಿಗಳು ಡ್ರ್ಯಾಗರ್‌ನಿಂದ ಇರಿದ ಕೂಡಲೆ ರಕ್ತ ತಡೆಯಲು ಮಹಿಳೆಯೊಬ್ಬರು ತನ್ನ ಶಾಲನ್ನು ಕಟ್ಟಿದ್ದಾರೆ. ಅಲ್ಲೇ ಮತ್ತೊಂದು ಅಂಗಡಿಯವರು ಸಹಾಯಕ್ಕೆ ಧಾವಿಸಿದ್ದಾರೆ, ಈ ಇಬ್ಬರೂ ಪ್ರತ್ಯಕ್ಷದರ್ಶಿಗಳಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

ಎಂಟು ಅಧಿಕಾರಿಗಳ ತಂಡ ರಚನೆ: ಕಮಿಷನರ್‌

ಆರೋಪಿಗಳ ಪತ್ತೆಗೆ 8 ಅಧಿಕಾರಿಗಳಿರುವ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಹೇಳಿದ್ದಾರೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದ್ದು, ಹತ್ಯೆ ಮಾಡಿರುವ ನೈಜ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಕೊಡಬಾರದು ಎಂದು ಮನವಿ ಮಾಡಿದರು.

ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 4 ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸೆಕ್ಷನ್‌ 144 ಜಾರಿಯಲ್ಲಿದೆ. ಕ್ರಿಸ್‌ಮಸ್‌ ಇರುವುದರಿಂದ ಪೂರ್ವನಿಯೋಜಿತ ಕಾರ್ಯಕ್ರಮಗಳಿಗೆ ವಿನಾಯ್ತಿ ನೀಡಲಾಗಿದೆ. ಆದರೆ ಎರಡು ದಿನಗಳ ಕಾಲ ಸುರತ್ಕಲ್‌ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಶಶಿಕುಮಾರ್‌ ತಿಳಿಸಿದರು.

ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿ: ಶಾಫಿ

ಕೊಲೆ ಕೃತ್ಯ ಎಸಗಿದವರ, ಕುಮ್ಮಕ್ಕು ನೀಡಿದವರ ಆಸ್ತಿ ಮುಟ್ಟುಗೋಲು ಹಾಕಬೇಕು. ಕೊಲೆಗೆ ಕುಮ್ಮಕ್ಕು ನೀಡಿದವರಿಂದ 10 ಕೋಟಿ ರು. ಹಣ ವಸೂಲಿ ಮಾಡಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ರಾಜ್ಯ ವಕ್ಫ್ ಬೋರ್ಡ್‌ ಅಧ್ಯಕ್ಷ ಶಾಫಿ ಸಅದಿ ಒತ್ತಾಯಿಸಿದ್ದಾರೆ. ಕರಾವಳಿ ಭಾಗದಲ್ಲಿ ನಡೆದಿರುವ ಎಲ್ಲ ಹತ್ಯೆಗಳು ಜನರ ಆತಂಕಕ್ಕೆ ಕಾರಣವಾಗಿದ್ದು, ಈವರೆಗೆ ನಡೆದ ಎಲ್ಲ ಹತ್ಯೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಕರಾವಳಿಯಲ್ಲಿ ಈವರೆಗೆ ನಡೆದಿರುವ ಹತ್ಯೆಗಳ ಹಿಂದೆ ರಾಜಕೀಯದ ಜತೆಗೆ ಬೇರೆ ಷಡ್ಯಂತ್ರವೂ ಇದೆ. ಇದನ್ನು ಬಯಲಿಗೆಳೆಯುವ ಕೆಲಸ ಸಿಬಿಐ ತನಿಖೆ ಮೂಲಕ ಆಗಬೇಕಿದೆ. ಕೊಲೆ ನಡೆಸಿದ ಆರೋಪಿಗಳು ಕೇವಲ 15 ದಿನಗಳೊಳಗೆ ಹೊರಗೆ ಬರುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಅಸಮಾಧಾನ ತಂದಿದೆ. ಕೊಲೆ ನಡೆಸಿರುವವರು ಹಾಗೂ ಅದಕ್ಕೆ ಸಹಕರಿಸಿದ ಆರೋಪಿಗಳ ಮೇಲೆ ಕಠಿಣ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದರು.

ನಮಗೆ ನ್ಯಾಯ ಕೊಡಿಸಿ: ಸಹೋದರ

ಜಲೀಲ್‌ ಯಾವುದೇ ಗಲಾಟೆಗೆ ಹೋಗದವನು. ಯಾವುದೇ ಸಂಘಟನೆ, ರಾಜಕೀಯದಲ್ಲಿ ಅವನು ಇಲ್ಲ. ಸುಮಾರು 10-15 ವರ್ಷದಿಂದ ಅಂಗಡಿ ನಡೆಸುತ್ತಿದ್ದ. ಬೆಳಗ್ಗೆ ಅಂಗಡಿಗೆ ಬಂದು ವ್ಯವಹಾರ ಮಾಡಿ ರಾತ್ರಿ ಮನೆಗೆ ಹೋಗ್ತಾನೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಲ್ಲರಿಗೂ ಬೇಕಾದವನು. ಯಾರ ಜೊತೆಗೂ ಜೋರಾಗಿ ಕೂಡ ಮಾತನಾಡದ ಅವನ್ನೇ ಬಿಡಲಿಲ್ಲ. ಅವನಿಗೆ ಶತ್ರುಗಳು ಅಂತ ಯಾರೂ ಇರಲೇ ಇಲ್ಲ. ರಾಜಕಾರಣಕ್ಕಾಗಿ ಅಮಾಯಕನ ಕೊಲೆಯಾಗಿದೆ. ನಮಗೆ ಸರ್ಕಾರ ನ್ಯಾಯ ಕೊಡಬೇಕು, ನೈಜ ಆರೋಪಿ ಬಂಧಿಸಬೇಕು ಎಂದು ಜಲೀಲ್‌ ಸಹೋದರ ಮಹಮ್ಮದ್‌ ಮನವಿ ಮಾಡಿದ್ದಾರೆ. 

ಜಲೀಲ್ ಹತ್ಯೆ ಪ್ರಕರಣ: ಸುರತ್ಕಲ್ ಸುತ್ತಾಮುತ್ತಾ 144 ಸೆಕ್ಷನ್ ಜಾರಿ

ಸಿಎಂ ಅವರ ಕ್ರಿಯೆಗೆ ಪ್ರತಿಕ್ರಿಯೆ ಹೇಳಿಕೆಯ ಬಳಿಕ ಈ ಘಟನೆಗಳು ನಡೆಯುತ್ತಿವೆ. ಆರೋಪಿಗಳಿಗೆ ಜಾಮೀನು ನೀಡಿ ರಕ್ಷಣೆ ಮಾಡಲಾಗುತ್ತಿದೆ. ಕೊಲೆ ಮೂಲಕ ಗಲಭೆ ಸೃಷ್ಟಿಸಿ ರಾಜಕೀಯ ಮಾಡುವ ಆಟ ಬೇಡ. ನಿಮ್ಮ ರಾಜಕೀಯಕ್ಕೆ ಬಡಪಾಯಿ ಜೀವ ಬಲಿ ತೆಗೆದುಕೊಳ್ಳಬೇಡಿ. ನಾವು ಇನ್ನು ಮುಂದೆ ಕಾನೂನು ಹೋರಾಟ ಮಾಡ್ತೇವೆ. ನಮ್ಮ ಎಲ್ಲ ಸಮುದಾಯದ ಜನರಿಗೆ ಅದನ್ನೇ ಹೇಳ್ತೇವೆ.

- ಅಶ್ರಫ್‌ ಕಿನಾರ, ಕರ್ನಾಟಕ ಮುಸ್ಲಿಂ ಜಮಾತ್‌ ರಾಜ್ಯ ಸಮಿತಿ ಸದಸ್ಯ

ಕೊಲೆ, ನೈತಿಕ ಪೊಲೀಸ್‌ಗಿರಿ ನಿತ್ಯ ಹೆಚ್ಚುತ್ತಿದ್ದರೂ ಪೊಲೀಸ್‌ ಇಲಾಖೆ ಏನು ಮಾಡುತ್ತಿದೆ? ತಲೆ, ಕಾಲು ಕಡೀತೀವಿ ಎನ್ನುವವರ ಮೇಲೂ ಕ್ರಮ ಆಗಲ್ಲ ಎಂದರೆ ಪೊಲೀಸ್‌ ಇಲಾಖೆ ಇಲ್ವಾ? ಸರ್ಕಾರ ಗೂಂಡಾಗಳ ಕೈಯ್ಯಲ್ಲಿ ಇದೆಯಾ? ಅಮಾಯಕರ ಹತ್ಯೆ ಮೂಲಕ ಕೋಮು ಗಲಭೆ ಸೃಷ್ಟಿಉದ್ದೇಶ ಇದರ ಹಿಂದೆ ಇದೆ.

- ಕೆ.ಅಶ್ರಫ್‌, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ

Follow Us:
Download App:
  • android
  • ios