Dowry Harassment: ಬೆಂಗ್ಳೂರಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಸಾವು
ಮದುವೆ ವೇಳೆ 200 ಗ್ರಾಂ ಚಿನ್ನ, ನಗದು ಪಡೆದಿದ್ದ ಪತಿ, ಮತ್ತಷ್ಟು ತರುವಂತೆ ಕಿರುಕುಳದ ಆರೋಪ
ಬೆಂಗಳೂರು(ಸೆ.02): ವರದಕ್ಷಿಣೆ ಕಿರುಕುಳ ಹಿನ್ನಲೆಯಲ್ಲಿ ಗೃಹಿಣಿಯೊಬ್ಬರನ್ನು ಆಕೆಯ ಪತಿ ಹಾಗೂ ಕುಟುಂಬದವರು ನೇಣು ಬಿಗಿದು ಹತ್ಯೆ ಮಾಡಿದ್ದಾರೆ ಎಂದು ಆರೋಪಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ಮೈಸೂರು ರಸ್ತೆಯ ಬಾಪೂಜಿ ನಗರದ ನಿವಾಸಿ ಶಿಲ್ಪಾ (32) ಕೊಲೆಯಾದ ದುರ್ದೈವಿ. ಈ ಘಟನೆ ಸಂಬಂಧ ಮೃತಳ ಪತಿ ಚಂದ್ರಶೇಖರ್, ಅತ್ತೆ ನಾಗವೇಣಿ, ನಾದಿನಿ ಶೋಭಾ ಹಾಗೂ ಆಕೆಯ ಪತಿ ದೇವರಾಜ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಮನೆಯ ಕೊಠಡಿಯಲ್ಲಿ ಶಿಲ್ಪಾ ನೇಣು ಬಿಗಿದು ಸ್ಥಿತಿಯಲ್ಲಿ ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಪತ್ತೆಯಾಗಿದ್ದಾರೆ. ವರದಕ್ಷಿಣೆಗಾಗಿ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಮೃತಳ ಸೋದರಿ ನಾಗರತ್ನ ದೂರು ನೀಡಿರುವ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಪ್ರಿಯತಮೆಗೆ ಬೇರೊಬ್ಬನ ಜೊತೆ ಮದುವೆ ನಿಗದಿ: ಪ್ರಿಯಕರನ ಬಾಡಿಗೆ ಮನೆ ಧ್ವಂಸ ಮಾಡಿದ ಸಂಬಂಧಿಕರು
ಆರು ವರ್ಷಗಳ ಹಿಂದೆ ಮೈಸೂರು ರಸ್ತೆಯ ಬಾಪೂಜಿ ನಗರದ ಚಂದ್ರಶೇಖರ್ ಹಾಗೂ ಶಿಲ್ಪಾ ವಿವಾಹವಾಗಿದ್ದು, ದಂಪತಿಗೆ 5 ವರ್ಷದ ಹೆಣ್ಣು ಮಗುವಿದೆ. ಮದುವೆ ಬಳಿಕ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಮದುವೆ ವೇಳೆ 200 ಗ್ರಾಂ ಚಿನ್ನ ಹಾಗೂ ಹಣ ಸೇರಿದಂತೆ ಚಂದ್ರಶೇಖರ್‌ಗೆ ವರದಕ್ಷಿಣೆ ನೀಡಲಾಗಿತ್ತು. ಹೀಗಿದ್ದರೂ ಪ್ರತಿ ದಿನ ವರದಕ್ಷಿಣೆ ತರುವಂತೆ ಶಿಲ್ಪಾಳಿಗೆ ಆಕೆಯ ಪತಿ ಚಂದ್ರಶೇಖರ್, ಅತ್ತೆ ನಾಗವೇಣಿ, ನಾದಿನಿ ಶೋಭಾ ಹಾಗೂ ಶೋಭಾ ಪತಿ ದೇವರಾಜ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ಸೋದರಿ ನಾಗರತ್ನ ಆರೋಪಿಸಿದ್ದಾರೆ.
ನನಗೆ ಬೆಳಗ್ಗೆ 8.50ರ ಸುಮಾರಿಗೆ ಚಂದ್ರಶೇಖರ್ ಕರೆ ಮಾಡಿ ಫ್ಯಾನ್‌ಗೆ ನೇಣು ಹಾಕಿಕೊಂಡು ಶಿಲ್ಪಾ ಸಾವನ್ನಪ್ಪಿರುವುದಾಗಿ ತಿಳಿಸಿದರು. ಕೂಡಲೇ ನಾನು ಸೋದರಿ ಮನೆಗೆ ಹೋಗಿ ನೋಡಿದಾಗ ಮೃತಳ ಕುತ್ತಿಗೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ವರದಕ್ಷಿಣೆ ದುರಾಸೆಯಿಂದ ತಂಗಿಗೆ ಪ್ರತಿ ದಿನ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ನಾಗರತ್ನ ದೂರಿದ್ದಾರೆ.