ಎರಡೂ ತಂಡಗಳಲ್ಲೂ ಸಾಕಷ್ಟು ಟಿ20 ಸ್ಪೆಷಲಿಸ್ಟ್ ಆಟಗಾರ್ತಿಯರು ಇರುವುದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ರೋಚಕ ಪಂದ್ಯ ನೋಡಲು ಸಿಗುವ ಸಾಧ್ಯತೆಯಿದೆ. ಕನ್ನಡತಿ ಶ್ರೇಯಾಂಕ ಪಾಟೀಲ್ ಸದ್ಯ ಒಳ್ಳೆಯ ಲಯದಲ್ಲಿದ್ದು ತವರಿನಲ್ಲಿ ಆರ್‌ಸಿಬಿ ಪರ ಉತ್ತಮ ಆಲ್ರೌಂಡ್ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ.
ಬೆಂಗಳೂರು(ಫೆ.24) ಕಳೆದ ಬಾರಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದ ಆರ್‌ಸಿಬಿ ಈ ಬಾರಿ ಶನಿವಾರ ಯುಪಿ ವಾರಿಯರ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಸ್ಮೃತಿ ಮಂಧನಾ ನಾಯಕತ್ವದ ಆರ್‌ಸಿಬಿ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಯುಪಿ ತಂಡವನ್ನು ಅಲೀಸಾ ಹೀಲಿ ಮುನ್ನಡೆಸಲಿದ್ದಾರೆ.
ಎರಡೂ ತಂಡಗಳಲ್ಲೂ ಸಾಕಷ್ಟು ಟಿ20 ಸ್ಪೆಷಲಿಸ್ಟ್ ಆಟಗಾರ್ತಿಯರು ಇರುವುದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ರೋಚಕ ಪಂದ್ಯ ನೋಡಲು ಸಿಗುವ ಸಾಧ್ಯತೆಯಿದೆ. ಕನ್ನಡತಿ ಶ್ರೇಯಾಂಕ ಪಾಟೀಲ್ ಸದ್ಯ ಒಳ್ಳೆಯ ಲಯದಲ್ಲಿದ್ದು ತವರಿನಲ್ಲಿ ಆರ್‌ಸಿಬಿ ಪರ ಉತ್ತಮ ಆಲ್ರೌಂಡ್ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ.
ಡೆಲ್ಲಿ ಎದುರು ಮುಂಬೈ ಇಂಡಿಯನ್ಸ್‌ಗೆ ರೋಚಕ ಜಯ
ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ರೋಚಕ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡವು ಆರಂಭದಲ್ಲೇ ಶಫಾಲಿ ವರ್ಮಾ ವಿಕೆಟ್ ಕಳೆದುಕೊಂಡಿತಾದರೂ, ಎರಡನೇ ವಿಕೆಟ್‌ಗೆ ಮೆಗ್ ಲ್ಯಾನಿಂಗ್ ಅಲೈಸಿ ಕ್ಯಾಪ್ಸಿ ಎರಡನೇ ವಿಕೆಟ್‌ಗೆ 64 ರನ್‌ಗಳ ಜತೆಯಾಟವಾಡುವ ಮೂಲಕತಂಡಕ್ಕೆ ಆಸರೆಯಾದರು. ಲ್ಯಾನಿಂಗ್ 31 ರನ್ ಬಾರಿಸಿದರೆ, ಕ್ಯಾಪ್ಸಿ 75 ರನ್ ಸಿಡಿಸಿದರು. ಇನ್ನು ಕೊನೆಯಲ್ಲಿ ಜೆಮಿಯಾ ರೋಡ್ರಿಗ್ಸ್ 42 ಹಾಗೂ ಮರಿಜಾನೆ ಕ್ಯಾಪ್ ಸ್ಪೋಟಕ 16 ರನ್ ಸಿಡಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.
ಇನ್ನು ಸವಾಲಿನ ಗುರಿ ಬೆನ್ನತ್ತಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತನ್ನ ಖಾತೆ ತೆರೆಯುವ ಮುನ್ನವೇ ಹೀಲೆ ಮ್ಯಾಥ್ಯೂಸ್ ವಿಕೆಟ್ ಕಳೆದುಕೊಂಡಿತು. ಆದರೆ ಯಾಸ್ತಿಕಾ ಭಾಟಿಯಾ(57) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್(55) ಸ್ಪೋಟಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಇದರ ಹೊರತಾಗಿಯೂ ಕೊನೆಯ ಎಸೆತದಲ್ಲಿ ಮುಂಬೈ ಗೆಲ್ಲಲು 5 ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ಗಿಳಿದ ಸಜನಾ ಲಾಂಗ್ ಆನ್‌ನತ್ತ ಸಿಕ್ಸರ್ ಸಿಡಿಸಿ ಮುಂಬೈಗೆ ರೋಚಕ ಗೆಲುವು ತಂದುಕೊಟ್ಟರು.
ಡಬ್ಲ್ಯುಪಿಎಲ್‌ಗೆ ವಿಧ್ಯುಕ್ತ ಚಾಲನೆ
ಬೆಂಗಳೂರು: ಬಹುನಿರೀಕ್ಷಿತ 2ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ವಿಧ್ಯುಕ್ತ ಚಾಲನೆ ಲಭಿಸಿತು. ಅದ್ಧೂರಿ ಉದ್ಘಾಟನಾ ಸಮಾರಂಭ ನೆರವೇರಿಸಿದ ಬಿಸಿಸಿಐ, ನೆರೆದಿದ್ದ ಅಪಾರ ಪ್ರಮಾಣದ ಕ್ರೀಡಾಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿತು.
ಸಂಜೆ 6.30ಕ್ಕೆ ಆರಂಭಗೊಂಡ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಟ್ ನಟರಾದ ಶಾರುಖ್ ಖಾನ್, ಟೈಗರ್ ಶ್ರಾಫ್, ಶಾಹಿದ್ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ, ಆರ್ಯನ್ ಕಾರ್ತಿಕ್, ವರುಣ್ ಧವನ್ ತಮ್ಮ ಅತ್ಯಾಕರ್ಷಕ ನೃತ್ಯದ ಮೂಲಕ ಕ್ರೀಡಾಭಿಮಾನಿಗಳನ್ನು ರಂಜಿಸಿದರು. ಎಲ್ಲಾ 5 ತಂಡಗಳ ನಾಯಕಿಯರ ಜೊತೆಗೆ ಶಾರುಖ್ ಖಾನ್ ತಮ್ಮದೇ ಶೈಲಿಯಲ್ಲಿ ಪೋಸ್ ಕೊಟ್ಟಿದ್ದು ಪ್ರಮುಖ ಆಕರ್ಷಣೆ ಎನಿಸಿಕೊಂಡಿತು.
ಸಮಾರಂಭದ ವೇಳೆ ಆಕರ್ಷಣೀಯ ಬಣ್ಣಬಣ್ಣದ ಬೆಳಕಿನ ಚಿತ್ತಾರ, ಸಿಡಿ ಮದ್ದು ಪ್ರದರ್ಶನವೂ ಅಭಿಮಾನಿಗಳ ಮನಸೂರೆಗೊಳಿಸಿತು. 5 ತಂಡಗಳ ನಾಯಕಿಯರು ವಿಶೇಷ ವಾಹನದಲ್ಲಿ ಮೈದಾನಕ್ಕೆ ಆಗಮಿಸಿದರು.
