Asianet Suvarna News Asianet Suvarna News

DRSನಲ್ಲೂ ಮಹಾಮೋಸ, ದಕ್ಷಿಣ ಆಫ್ರಿಕಾ ಎದುರು 'ಅನ್ಯಾಯವಾಗಿ' ಸೋತ ಬಾಂಗ್ಲಾದೇಶ..!

ಅಂಪೈರ್ ಹಾಗೂ ಐಸಿಸಿಯ ತಪ್ಪು ರೂಲ್ಸ್‌ನಿಂದಾಗಿ ಅದೇ 4 ರನ್ ಅಂತರದಲ್ಲಿ ಬಾಂಗ್ಲಾದೇಶ ತಂಡವು ಸೋಲು ಅನುಭವಿಸಿದೆ. ಈ ತೀರ್ಪಿನ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.

T20 World Cup 2024 Major DRS Controversy Denies Bangladesh Win Over South Africa kvn
Author
First Published Jun 11, 2024, 5:10 PM IST

ನ್ಯೂಯಾರ್ಕ್‌: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯವು ಮತ್ತೊಂದು ಲೋ ಸ್ಕೋರಿಂಗ್ ರೋಚಕ ಕಾದಾಟಕ್ಕೆ ಸಾಕ್ಷಿಯಾಯಿತು. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಪ್ರತಿರೂಪದಂತಿದ್ದ ಪಂದ್ಯದಲ್ಲಿ ಹರಿಣಗಳ ಪಡೆ 4 ರನ್ ರೋಚಕ ಜಯ ಸಾಧಿಸುವ ಮೂಲಕ ಸೂಪರ್ 8 ಹಂತಕ್ಕೆ ಬಹುತೇಕ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.

ಭಾನುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 114 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ತಂಡವು ಗೆಲುವಿನತ್ತ ದಾಪುಗಾಲು ಹಾಕಿತ್ತು. ಕೊನೆಯ 4 ಓವರ್‌ಗಳಲ್ಲಿ ಬಾಂಗ್ಲಾದೇಶ ತಂಡಕ್ಕೆ ಗೆಲ್ಲಲು ಕೇವಲ 27 ರನ್‌ಗಳ ಅಗತ್ಯವಿತ್ತು. ಆದರೆ ಡಿಆರ್‌ಎಸ್‌ನಲ್ಲಿನ ಒಂದು ಕೆಟ್ಟ ರೂಲ್ಸ್, ಬಾಂಗ್ಲಾದೇಶ ಕೈಯಲ್ಲಿದ್ದ ಪಂದ್ಯ ದಕ್ಷಿಣ ಆಫ್ರಿಕಾ ಪಾಲಾಗುವಂತೆ ಮಾಡಿತು. ಐಸಿಸಿಯ ಒಂದು ಕೆಟ್ಟ ರೂಲ್ಸ್‌ನಿಂದ ಬಾಂಗ್ಲಾದೇಶ ತಂಡವು ಪಂದ್ಯವನ್ನು ಗೆಲ್ಲುವ ಅವಕಾಶವನ್ನು ಕೈಚೆಲ್ಲುವಂತೆ ಮಾಡಿತು.

ಅಷ್ಟಕ್ಕೂ ಆಗಿದ್ದೇನು?

17ನೇ ಓವರ್‌ನಲ್ಲಿ ಬಾಂಗ್ಲಾದೇಶ ತಂಡವು ಬ್ಯಾಟಿಂಗ್ ಮಾಡುವ ವೇಳೆಯಲ್ಲಿ ಮೊಹಮದುಲ್ಲಾ ಹಾಗೂ ತೌಹಿದ್ ಹೃದೊಯ್ ಕ್ರೀಸ್‌ನಲ್ಲಿದ್ದರು. ಎರಡನೇ ಎಸೆತವನ್ನು ಎದುರಿಸಿದ ಮೊಹಮದುಲ್ಲಾ ಚೆಂಡನ್ನು ಪ್ಲಿಕ್ ಮಾಡುವ ಯತ್ನ ನಡೆಸಿದರು. ಆದರೆ ಚೆಂಡು ಅವರ ಪ್ಯಾಡ್‌ಗೆ ಬಡಿದು ವಿಕೆಟ್‌ ಹಿಂದೆ ಬೌಂಡರಿ ಸೇರಿತು.

ಭಾರತ ಎದುರು ಸೋಲಿನ ಬೆನ್ನಲ್ಲೇ ಪಾಕ್ ಆಟಗಾರರಿಗೆ ಖಡಕ್ ವಾರ್ನಿಂಗ್ ಕೊಟ್ಟ ಗ್ಯಾರಿ ಕರ್ಸ್ಟನ್‌..!

ಈ ವೇಳೆ ದಕ್ಷಿಣ ಆಫ್ರಿಕಾ ಬೌಲರ್‌ಗಳು ಔಟ್‌ಗಾಗಿ ಬಲವಾದ ಮನವಿ ಸಲ್ಲಿಸಿದರು. ಆಗ ಹರಿಣಗಳ ಮನವಿಯನ್ನು ಪುರಸ್ಕರಿಸಿದ ಅಂಪೈರ್ ಔಟ್ ಎಂದು ತೀರ್ಮಾನ ನೀಡಿದರು. ಅಲ್ಲಿಗೆ ಆ ಚೆಂಡು ರೂಲ್ಸ್ ಪ್ರಕಾರ ಡೆಡ್(ಫಿನಿಶ್) ಆಯಿತು. ಆದರೆ ಬಾಂಗ್ಲಾದೇಶದ ಮೊಹಮದುಲ್ಲಾ ಅಂಪೈರ್ ತೀರ್ಪನ್ನು ಪ್ರಶ್ನಿಸಿ ಡಿಆರ್‌ಎಸ್ ಮೊರೆ ಹೋದರು. ಡಿಆರ್‌ಎಸ್‌ನಲ್ಲಿ ಚೆಂಡು ವಿಕೆಟ್‌ನಿಂದ ಹೊರಹೋಗುವುದು ಸ್ಪಷ್ಟವಾಗಿ ಗೋಚರಿಸಿದ್ದರಿಂದ ಥರ್ಡ್‌ ಅಂಪೈರ್ ನಾಟೌಟ್ ಎನ್ನುವ ತೀರ್ಮಾನವಿತ್ತರು. ಹೀಗಾಗಿ ಆನ್‌ಫೀಲ್ಡ್ ಅಂಪೈರ್ ತಮ್ಮ ನಿರ್ಧಾರವನ್ನು ಬದಲಿಸಿದರು.

ಅಂಪೈರ್ ನಾಟೌಟ್ ಎನ್ನುವ ತೀರ್ಮಾನ ನೀಡಿದರಾದರೂ, ಚೆಂಡು ಬೌಂಡರಿ ಗೆರೆ ಸೇರಿದ್ದರೂ, 4 ರನ್ ಬಾಂಗ್ಲಾದೇಶ ಖಾತೆಗೆ ಸೇರ್ಪಡೆಯಾಗಲಿಲ್ಲ. ಯಾಕೆಂದರೆ ಅಂಪೈರ್ ಔಟ್ ಎಂದು ತೀರ್ಮಾನ ನೀಡುತ್ತಿದ್ದಂತೆಯೇ ರೂಲ್ಸ್ ಪ್ರಕಾರ ಅದು ಡೆಡ್ ಬಾಲ್ ಆಗುತ್ತದೆ. ಅಂಪೈರ್ ತಪ್ಪು ತೀರ್ಮಾನ ನೀಡಿದ ಹೊರತಾಗಿಯೂ, ಈಗಿರುವ ಐಸಿಸಿ ರೂಲ್ಸ್‌ ಪ್ರಕಾರ ಡೆಡ್ ಬಾಲ್ ತೀರ್ಪನ್ನು ಬದಲಿಸಲು ಸಾಧ್ಯವಿಲ್ಲ.

ಸತತ 2 ಪಂದ್ಯ ಸೋತ ಪಾಕಿಸ್ತಾನಕ್ಕೆ ಇನ್ನೂ ಇದೇ ಸೂಪರ್ 8ಕ್ಕೇರುವ ಅವಕಾಶ..! ಆದ್ರೆ ಭಾರತದ ಸಪೋರ್ಟ್‌ ಬೇಕು

ಇನ್ನು ಅಂಪೈರ್ ಹಾಗೂ ಐಸಿಸಿಯ ತಪ್ಪು ರೂಲ್ಸ್‌ನಿಂದಾಗಿ ಅದೇ 4 ರನ್ ಅಂತರದಲ್ಲಿ ಬಾಂಗ್ಲಾದೇಶ ತಂಡವು ಸೋಲು ಅನುಭವಿಸಿದೆ. ಈ ತೀರ್ಪಿನ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.

ಇನ್ನು ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು, ಬಾಂಗ್ಲಾ ಬೌಲರ್‌ಗಳು ಸಂಘಟಿತ ಪ್ರದರ್ಶನದ ಎದುರು ತಿಣುಕಾಡಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 113 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು ಗೆಲುವಿನತ್ತ ದಿಟ್ಟ ಹೆಜ್ಜೆಯಿಟ್ಟಿತಾದರೂ, ಕೊನೆಯಲ್ಲಿ ಕೇಶವ್ ಮಹರಾಜ್ ದಾಳಿಗೆ ತತ್ತರಿಸಿ 7 ವಿಕೆಟ್ ಕಳೆದುಕೊಂಡು 109 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ ಏಯ್ಡನ್ ಮಾರ್ಕ್‌ರಮ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು 4 ರನ್ ರೋಚಕ ಜಯ ಸಾಧಿಸಿ, ಈಗಾಗಲೇ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದೆ.
 

Latest Videos
Follow Us:
Download App:
  • android
  • ios