ದ.ಆಫ್ರಿಕಾ 2022ರ ಟಿ20 ವಿಶ್ವಕಪ್‌, 2023ರ ಏಕದಿನ ವಿಶ್ವಕಪ್‌ಗಳಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಸೋಲುಂಡಿತ್ತು. ಹೀಗಾಗಿ ಈ ಪಂದ್ಯ ಹರಿಣಗಳ ಪಾಲಿಗೆ ಸೇಡಿನ ಪಂದ್ಯವಾಗಿತ್ತು. ರೋಚಕ ಗೆಲುವಿನ ಮೂಲಕ, ದ.ಆಫ್ರಿಕಾ ನಿಟ್ಟುಸಿರು ಬಿಟ್ಟಿತು.

ನ್ಯೂಯಾರ್ಕ್‌: ಈ ಬಾರಿ ಟಿ20 ವಿಶ್ವಕಪ್‌ ಮತ್ತೊಂದು ಆಘಾತಕಾರಿ ಫಲಿತಾಂಶಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದ್ದರೂ, ಅದು ಅಲ್ಪದರಲ್ಲೇ ತಪ್ಪಿದೆ. ಶನಿವಾರ ರಾತ್ರಿ ನೆದರ್‌ಲೆಂಡ್ಸ್‌ ವಿರುದ್ಧ ಸೋಲಿನ ಭೀತಿಯಿಂದ ಪಾರಾಗಿ ದಕ್ಷಿಣ ಆಫ್ರಿಕಾ 4 ವಿಕೆಟ್ ಗೆಲುವು ಸಾಧಿಸಿದೆ. ಆಫ್ರಿಕಾ ಸತತ 2ನೇ ಜಯದೊಂದಿಗೆ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.

ಮೊದಲು ಬ್ಯಾಟ್‌ ಮಾಡಿದ ನೆದರ್‌ಲೆಂಡ್ಸ್ 20 ಓವರಲ್ಲಿ 9 ವಿಕೆಟ್‌ಗೆ 103 ರನ್‌ ಕಲೆಹಾಕಿತು. ಆರಂಭದಲ್ಲೇ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡ 48 ರನ್‌ಗೆ 6 ವಿಕೆಟ್‌ ನಷ್ಟಕ್ಕೊಳಗಾಗಿತ್ತು. ಆದರೆ ಕ್ರೀಸ್‌ನಲ್ಲಿ ನೆಲೆಯೂರಿ ಸೈಬ್ರಂಡ್‌ 40, ವ್ಯಾನ್‌ ಬೀಕ್‌ 23 ರನ್‌ ಸಿಡಿಸಿ ತಂಡವನ್ನು 100ರ ಗಡಿ ದಾಟಿಸಿದರು. ಬಾರ್ಟ್‌ಮ್ಯಾನ್‌ 11ಕ್ಕೆ 4 ವಿಕೆಟ್‌ ಕಿತ್ತರು.

ಕಡಿಮೆ ಮೊತ್ತವನ್ನು ಸುಲಭದಲ್ಲಿ ಬೆನ್ನತ್ತುವ ದ.ಆಫ್ರಿಕಾ ಯೋಜನೆ ಮೊದಲ ಓವರಲ್ಲೇ ತಲೆಕೆಳಗಾಯಿತು. ಡಿ ಕಾಕ್‌(00), ಹೆಂಡ್ರಿಕ್ಸ್‌(03), ನಾಯಕ ಮಾರ್ಕ್‌ರಮ್‌(00) ಹಾಗೂ ಕ್ಲಾಸೆನ್‌(04) ತಂಡದ ಮೊತ್ತ 12 ಆಗುವಷ್ಟರಲ್ಲೇ ಪೆವಿಲಿಯನ್‌ ಸೇರಿದ್ದರು. ಪವರ್‌-ಪ್ಲೇನಲ್ಲಿ 16, ಮೊದಲ 10 ಓವರಲ್ಲಿ 32 ರನ್‌ ಗಳಿಸಿದ್ದ ತಂಡ ಸೋಲಿನ ಭೀತಿಯಲ್ಲಿತ್ತು. ಆದರೆ ಡೇವಿಡ್‌ ಮಿಲ್ಲರ್‌-ಟ್ರಿಸ್ಟನ್‌ ಸ್ಟಬ್ಸ್‌(33) ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದರು. ಕೊನೆವರೆಗೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆನಿಂತ ಮಿಲ್ಲರ್‌ 51 ಎಸೆತಗಳಲ್ಲಿ ಔಟಾಗದೆ 59 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು.

Scroll to load tweet…

ಸ್ಕೋರ್‌: 
ನೆದರ್‌ಲೆಂಡ್ಸ್‌ 20 ಓವರಲ್ಲಿ 103/9 (ಸೈಬ್ರಂಡ್‌ 40, ಬಾರ್ಟ್‌ಮ್ಯಾನ್‌ 4-11, ನೋಕಿಯಾ 2-19), 
ದ.ಆಫ್ರಿಕಾ 18.5 ಓವರಲ್ಲಿ 106/6 (ಮಿಲ್ಲರ್‌ 59*, ಸ್ಟಬ್ಸ್‌ 33, ವಿವಿಯನ್‌ 2-12)

ತೀರಿದ ಸೇಡು!

ದ.ಆಫ್ರಿಕಾ 2022ರ ಟಿ20 ವಿಶ್ವಕಪ್‌, 2023ರ ಏಕದಿನ ವಿಶ್ವಕಪ್‌ಗಳಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಸೋಲುಂಡಿತ್ತು. ಹೀಗಾಗಿ ಈ ಪಂದ್ಯ ಹರಿಣಗಳ ಪಾಲಿಗೆ ಸೇಡಿನ ಪಂದ್ಯವಾಗಿತ್ತು. ರೋಚಕ ಗೆಲುವಿನ ಮೂಲಕ, ದ.ಆಫ್ರಿಕಾ ನಿಟ್ಟುಸಿರು ಬಿಟ್ಟಿತು.

ಲಂಕಾ ವಿರುದ್ಧ ಲೋ ಸೋರಿಂಗ್ ಥಿಲ್ಡರ್ ಗೆದ್ದ ಬಾಂಗ್ಲಾದೇಶ!

ಡಲ್ಲಾಸ್: ಬದ್ಧವೈರಿಗಳಾದ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಟಿ20 ವಿಶ್ವಕಪ್ ಮುಖಾಮುಖಿ ಭಾರೀ ರೋಚಕ ಅಂತ್ಯ ಕಂಡಿದೆ. ಲೋ ಸ್ಕೋರಿಂಗ್ ಪಂದ್ಯದಲ್ಲಿ ಬಾಂಗ್ಲಾ 2 ವಿಕೆಟ್‌ಗಳ ಗೆಲುವು ಸಾಧಿಸಿದ್ದು, ಸತತ 2ನೇ ಸೋಲು ಕಂಡಿರುವ ಲಂಕಾ 'ಡಿ' ಗುಂಪಿನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದು, ಗುಂಪು ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿದೆ.

ಶನಿವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಕಾ, 20 ಓವರಲ್ಲಿ 9 ವಿಕೆಟ್‌ಗೆ ಕೇವಲ 124 ರನ್ ಕಲೆಹಾಕಿತು. ಆರಂಭಿಕ ಬ್ಯಾಟರ್ ಪಥುಂ ನಿಸ್ಸಾಂಕ 47, ಧನಂಜಯ ಡಿ ಸಿಲ್ವಾ 21 ಹೊರತುಪಡಿಸಿ ಉಳಿದವರಾರೂ 20 ದಾಟಲಿಲ್ಲ.

ಕೊಹ್ಲಿಯ 8 ಗಂಟೆಯ ಸಂಪಾದನೆ = ನೇಪಾಳ ಕ್ರಿಕೆಟರ ಒಂದು ತಿಂಗಳ ಸ್ಯಾಲರಿ..! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾ 28 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಬಳಿಕ 4ನೇ ವಿಕೆಟ್‌ಗೆ ಲಿಟನ್ ದಾಸ್ (36) ಹಾಗೂ ತೌಹಿದ್ ಹೃದೋಮ್ (40) ಜೊತೆಗೂಡಿ 63 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ, 22 ರನ್‌ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡ ಬಾಂಗ್ಲಾ ಸೋಲಿನತ್ತಮುಖಮಾಡಿತ್ತು. ಅನುಭವಿ ಮಹ್ಮುದುಲ್ಲಾ ಔಟಾಗದೆ 16 ರನ್ ಗಳಿಸಿ, ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ತಂಡವನ್ನು ಗೆಲ್ಲಿಸಿದರು.

ಸ್ಕೋರ್: ಲಂಕಾ 20 ಓವರಲ್ಲಿ 124/9 (ನಿಸ್ಸಾಂಕ 47, ಮುಸ್ತಾಫಿಜುರ್ 3 -17, ರಿಶಾದ್ 3-22), 
ಬಾಂಗ್ಲಾ 19 ಓವರಲ್ಲಿ 125/8 (ತೌಹಿದ್ 40, ಲಿಟನ್ 36, ತುಷಾರ 4-18) 
ಪಂದ್ಯಶ್ರೇಷ್ಠ: ರಿಶಾದ್‌ ಹೊಸೈನ್‌

ಕಿವೀಸ್‌ಗೆ ಮಣ್ಣು ಮುಕ್ಕಿಸಿದ ಆಫನ್! 

ಗಯಾನ: ಟಿ20 ಕ್ರಿಕೆಟ್‌ನಲ್ಲಿ ತಾನೆಷ್ಟು ಅಪಾಯಕಾರಿ ಎಂಬುದನ್ನು ಅಫ್ಘಾನಿಸ್ತಾನ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಶನಿವಾರ 2021ರ ಟಿ20 ವಿಶ್ವಕಪ್ ರನ್ನರ್-ಅಪ್ ನ್ಯೂಜಿಲೆಂಡ್ ವಿರುದ್ಧ ಆಫ್ಘನ್ 84 ರನ್ ಗೆಲುವು ಸಾಧಿಸಿದ್ದು, ಬೃಹತ್ ಟೂರ್ನಿಯಲ್ಲಿ ಸತತ 2ನೇ ಜಯದೊಂದಿಗೆ 'ಸಿ' ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. 

ಮೊದಲು ಬ್ಯಾಟ್ ಮಾಡಿದ ಆಫ್ಘನ್ 6 ವಿಕೆಟ್‌ಗೆ 159 ರನ್ ಕಲೆಹಾಕಿತು. ಮೊದಲ ವಿಕೆಟ್‌ಗೆ ಇಬ್ರಾಹಿಂ ಜದ್ರಾನ್ ಹಾಗೂ ರಹ್ಮಾನುಲ್ಲಾ ಗುರ್ಬಾಜ್ 14.3 ಓವರಲ್ಲಿ 103 ರನ್ ಜೊತೆಯಾಟವಾಡಿದರು. ಜದ್ರಾನ್ 41ಕ್ಕೆ ಔಟಾದರೂ, ಕಿವೀಸ್ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದ ಗುರ್ಬಾಜ್ 56 ಎಸೆತಗಳಲ್ಲಿ 5 ಬೌಂಡರಿ, 5 ಸಿಕರ್‌ನೊಂದಿಗೆ 80 ರನ್ ಚಚ್ಚಿದರು. ಜದ್ರಾನ್ ಔಟಾದ ಬಳಿಕ ಸತತ ವಿಕೆಟ್ ಕಳೆದುಕೊಂಡರೂ ತಂಡ 160ರ ಸನಿಹ ತಲುಪಿತು. ಕೊನೆ ಓವರಲ್ಲಿ 3 ವಿಕೆಟ್ ಉರುಳಿತು.

ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಪಾಕ್ ವೇಗಿ..? ಅಮೆರಿಕ ಎದುರು ಪಾಕ್ ಮೋಸದಾಟ..!

ಚೇಸಿಂಗ್ ಕಷ್ಟವಿದ್ದ ಪಿಚ್‌ನಲ್ಲಿ ಕಿವೀಸ್‌ನ ವಿಕೆಟ್‌ಗಳು ತರಗೆಲೆಯಂತೆ ಉದುರಿದವು. ಮೊದಲ ಎಸೆತದಲ್ಲೇ ಫಿನ್ ಆ್ಯಲೆನ್ ಔಟಾದ ಬಳಿಕ ಯಾರೊಬ್ಬರೂ ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. ಗ್ಲೆನ್ ಫಿಲಿಪ್ಸ್ (18), ಮ್ಯಾಟ್ ಹೆನ್ರಿ (12) ಹೊರತುಪಡಿಸಿ ಬೇರೆಯಾರೂ ಎರಡಂಕಿ ಮೊತ್ತ ದಾಟಲಿಲ್ಲ. ತಂಡ 15.2 ಓವರಲ್ಲಿ 75ಕ್ಕೆ ಗಂಟುಮೂಟೆ ಕಟ್ಟಿತು. ರಶೀದ್ ಖಾನ್ 4 ಓವರಲ್ಲಿ 17 ರನ್‌ಗೆ 4, ಫಜಲ್ ಹಕ್ ಫಾರೂಖಿ 3.2 ಓವರಲ್ಲಿ 17 ರನ್‌ಗೆ 4 ವಿಕೆಟ್ ಕಬಳಿಸಿದರು.

ಸ್ಕೋರ್: ಅಫ್ಘಾನಿಸ್ತಾನ 20 ಓವರಲ್ಲಿ 159/6 (ಗುರ್ಬಾಜ್ 80, ಜದ್ರಾನ್ 44, ಬೌಲ್ಡ್ 2-22)
ಕಿವೀಸ್ 15.2 ಓವರಲ್ಲಿ 75/10 (ಫಿಲಿಪ್ 18, ರಶೀದ್ 4-17, ಫಜಲ್ ಹಕ್ ಫಾರೂಖಿ 4-17)

ಪಂದ್ಯಶ್ರೇಷ್ಠ: ಗುರ್ಬಾಜ್