2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಆಫ್ಘಾನ್ ಎದುರು ಏಕಪಕ್ಷೀಯವಾಗಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ 9 ವಿಕೆಟ್ ಅಂತರದ ಸುಲಭ ಗೆಲುವು ಸಾಧಿಸಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಟ್ರಿನಿಡಾಡ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಆಫ್ಘಾನಿಸ್ತಾನ ಎದುರು 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ಏಯ್ಡನ್ ಮಾರ್ಕ್‌ರಮ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಏಕಪಕ್ಷೀಯವಾಗಿ ನಡೆದ ಸೆಮೀಸ್ ಕದನದಲ್ಲಿ ಹರಿಣಗಳ ಪಡೆ ಅನಾಯಾಸವಾಗಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಗೆಲ್ಲಲು ಕೇವಲ 57 ರನ್ ಗುರಿ ಪಡೆದ ಹರಿಣಗಳ ಪಡೆ ಕೇವಲ 8.5 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನ್ ತಂಡದ ನಾಯಕ ರಶೀದ್ ಖಾನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲು ಬ್ಯಾಟ್ ಮಾಡಿ ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಆಫ್ಘಾನಿಸ್ತಾನ ತಂಡಕ್ಕೆ ಆರಂಭದಲ್ಲೇ ಮಾರ್ಕೊ ಯಾನ್ಸೆನ್ ಹಾಗೂ ಕಗಿಸೋ ರಬಾಡ ಶಾಕ್ ನೀಡಿದರು. ಪರಿಣಾಮ 28 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 6 ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಝ್ಮತುಲ್ಲಾ ಓಮರ್‌ಝೈ 10 ರನ್ ಗಳಿಸಿದ್ದೇ ಆಫ್ಘಾನ್ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತು. ಅಝ್ಮತುಲ್ಲಾ ಹೊರತುಪಡಿಸಿ ಆಫ್ಘಾನಿಸ್ತಾನದ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಆಫ್ಘಾನಿಸ್ತಾನ ತಂಡವು 11.5 ಓವರ್‌ಗಳಲ್ಲಿ 56 ರನ್ ಗಳಿಸಿ ಸರ್ವಪತನ ಕಂಡಿತು.
T20 World Cup 2024: ಸೆಮೀಸ್‌ನಲ್ಲಿ ಭಾರತಕ್ಕಿಂದು ಇಂಗ್ಲೆಂಡ್ ಚಾಲೆಂಜ್; 3ನೇ ಫೈನಲ್ ಮೇಲೆ ಟೀಂ ಇಂಡಿಯಾ ಕಣ್ಣು
56 ರನ್: ಇದು ಟಿ20 ವಿಶ್ವಕಪ್ ನಾಕೌಟ್ ಪಂದ್ಯದ ಇತಿಹಾಸದಲ್ಲೇ ದಾಖಲಾದ ಅತಿ ಕನಿಷ್ಠ ಮೊತ್ತ ಎನಿಸಿಕೊಂಡಿತು. ಈ ಮೊದಲು ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳು 101 ರನ್‌ಗಳಿಗೆ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಲೌಟ್ ಆಗಿದ್ದು ಕನಿಷ್ಠ ಸ್ಕೋರ್ ಎನಿಸಿಕೊಂಡಿತ್ತು.
ದಕ್ಷಿಣ ಆಫ್ರಿಕಾ ಪರ ಮಾರಕ ದಾಳಿ ನಡೆಸಿದ ಮಾರ್ಕ್ ಯಾನ್ಸೆನ್ ಹಾಗೂ ತಬ್ರೀಜ್ ಶಮ್ಸಿ ತಲಾ 3 ವಿಕೆಟ್ ಪಡೆದರೆ, ಕಗಿಸೋ ರಬಾಡ ಹಾಗೂ ಏನ್ರಿಚ್ ನೋಕಿಯಾ ತಲಾ ಎರಡು ವಿಕೆಟ್ ತಮ್ಮ ಖಾತೆಗೆ ಹಾಕಿಕೊಂಡರು.
ಇನ್ನು ಸುಲಭ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಎರಡನೇ ಓವರ್‌ನಲ್ಲೇ ಕ್ವಿಂಟನ್ ಡಿ ಕಾಕ್ ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ಎರಡನೇ ವಿಕೆಟ್‌ಗೆ ರೀಜಾ ಹೆಂಡ್ರಿಕ್ಸ್ ಹಾಗೂ ಏಯ್ಡನ್ ಮಾರ್ಕ್‌ರಮ್ ಮುರಿಯದ 55 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ರೀಜಾ ಹೆಂಡ್ರಿಕ್ಸ್ ಅಜೇಯ 29 ರನ್ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ನಾಯಕ ಏಯ್ಡನ್ ಮಾರ್ಕ್‌ರಮ್ 23 ರನ್ ಬಾರಿಸಿ ಮಿಂಚಿದರು.
T20 World Cup 2024: ಅಯ್ಯೋ.. ಭಾರತ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯ ನಡೆಯೋದೇ ಡೌಟ್..!
ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆ: ಚೋಕರ್ಸ್ ಹಣೆಪಟ್ಟಿ ಅಳಿಸಿ ಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿರುವ ಹರಿಣಗಳ ಪಡೆ ಕೊನೆಗೂ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಕಳೆದ 8 ಆವೃತ್ತಿಯ ಟಿ20 ವಿಶ್ವಕಪ್ ಪೈಕಿ ದಕ್ಷಿಣ ಆಫ್ರಿಕಾ ತಂಡವು 2009 ಹಾಗೂ 2014ರಲ್ಲಿ ಸೆಮೀಸ್‌ಗೆ ಬಂದು ಫೈನಲ್ ರೇಸ್‌ನಲ್ಲಿ ಮುಗ್ಗರಿಸಿತ್ತು. ಆದರೆ ಇದೇ ಮೊದಲ ಬಾರಿಗೆ ಸೆಮಿಫೈನಲ್ ಸವಾಲು ಮೆಟ್ಟಿನಿಂತು ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
