Asianet Suvarna News Asianet Suvarna News

ಕಾನ್ಪುರದಲ್ಲಿ ಮೊದಲ ದಿನ ಮಳೆ ಕಣ್ಣಾಮುಚ್ಚಾಲೆ; ಆಕಾಶ್‌ದೀಪ್‌ಗೆ 2 ವಿಕೆಟ್‌

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟಕ್ಕೆ ಮಳೆರಾಯ ಅಡ್ಡಿಪಡಿಸಿದ್ದು, ಕೇವಲ 35 ಓವರ್‌ಗಳ ಪಂದ್ಯಾಟವಷ್ಟೇ ನಡೆದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Rain Forces early stumps in Kanpur Test Akash Deep pick 2 wickets kvn
Author
First Published Sep 28, 2024, 9:04 AM IST | Last Updated Sep 28, 2024, 9:04 AM IST

ಕಾನ್ಪುರ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ನಿರೀಕ್ಷೆಯಂತೆಯೇ ಮಳೆ ಅಡ್ಡಿಪಡಿಸಿದೆ. ಮೊದಲ ದಿನವಾದ ಶುಕ್ರವಾರದ ಬಹುತೇಕ ಆಟವನ್ನು ಮಳೆರಾಯ ಬಲಿ ತೆಗೆದುಕೊಂಡಿತು. 90 ಓವರ್‌ಗಳ ಆಟ ನಡೆಯಬೇಕಿದ ಮೊದಲ ದಿನ ಕೇವಲ 35 ಓವರ್ ಎಸೆಯಲಾಗಿದ್ದು, ಪ್ರವಾಸಿ ಬಾಂಗ್ಲಾದೇಶ 3 ವಿಕೆಟ್‌ಗೆ 107 ರನ್ ಕಲೆಹಾಕಿದೆ.

ಮಧ್ಯರಾತ್ರಿ ಸುರಿದಿದ್ದ ಮಳೆಯಿಂದಾಗಿ ಪಂದ್ಯ ಒಂದು ಗಂಟೆ ತಡವಾಗಿ ಆರಂಭ ಗೊಂಡಿತು. ಬೆಳಗ್ಗೆ 10.30ಕ್ಕೆ ಶುರುವಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಕಪ್ಪು ಮಣ್ಣಿನ ಪಿಚ್ ಆಗಿದ್ದರೂ ಭಾರತ ಹೆಚ್ಚುವರಿ ಸ್ಪಿನ್ನರ್ ಕಣಕ್ಕಿಳಿಸಲಿಲ್ಲ. ಚೆನ್ನೈನ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ತಂಡವನ್ನೇ ಮುಂದುವರಿಸಿತು. ಚೆನ್ನೈ ಪಿಚ್‌ ಗಿಂತ ಕಾನ್ಪುರದಲ್ಲಿ ಹೆಚ್ಚಿನ ಸ್ವಿಂಗ್ ಗಳು ಕಂಡುಬಂದವು. 8ನೇ ಓವರ್‌ನಲ್ಲಿ ವೇಗಿ ಆಕಾಶ್ ದೀಪ್ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. 24ಎಸೆತಗಳನ್ನು ಎದುರಿಸಿದರೂ ರನ್ ಖಾತೆ ತೆರೆಯದ ಜಾಕಿರ್ ಹುಸೈನ್, ಯಶಸ್ವಿ ಜೈಸ್ವಾಲ್‌ ಆಕರ್ಷಕ ಕ್ಯಾಚ್‌ಗೆ ಬಲಿ ಯಾದರು. 13ನೇ ಓವರ್‌ನಲ್ಲಿ ಆಕಾಶ್ ದೀಪ್ ಮತ್ತೆ ಬಾಂಗ್ಲಾದೇಶಕ್ಕೆ ಮಾರಕವಾಗಿ ಪರಿಣಮಿಸಿದರು. ಶದ್ಮಾನ್ ಇಸ್ಲಾಂ(24) ಆಕಾಶ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಬಾಂಗ್ಲಾ ಕ್ರಿಕೆಟ್ ಫ್ಯಾನ್‌ಗೆ ಭಾರತೀಯರು ಹೊಡೆದಿಲ್ಲ: ಹಲ್ಲೆ ಸುದ್ದಿ ನಿರಾಕರಿಸಿದ ಕಾನ್ಪುರ ಪೊಲೀಸರು

3ನೇ ವಿಕೆಟ್‌ಗೆ ಜೊತೆಯಾದ ನಾಯಕ ನಜ್ರುಲ್ ಹೊಸೈನ್ ಹಾಗೂ ಮೋಮಿನುಲ್ ಹಕ್ ಬಾಂಗ್ಲಾಕ್ಕೆ ಚೇತರಿಕೆ ನೀಡಿದರು. ಈ ಜೋಡಿ 101 ಎಸೆತಗಳಲ್ಲಿ 51 ರನ್ ಜೊತೆಯಾಟವಾಡಿತು. ಆದರೆ ಇವರಿಬ್ಬರನ್ನು ಅಶ್ವಿನ್ ಬೇರ್ಪಡಿಸಿದರು. ಇನ್ನಿಂಗ್ಸ್‌ನ 29ನೇ ಎಸೆತದಲ್ಲಿ ನಜ್ರುಲ್ (31) ಎಲ್‌ಬಿಡಬ್ಲ್ಯು ಮೂಲಕ ಪೆವಿಲಿಯನ್ ಸೇರಿದರು. ಮುರಿಯದ 4ನೇ ವಿಕೆಟ್‌ಗೆ ರಹೀಂ ಜೊತೆಯಾಗಿರುವ ಮುಷ್ಟಿಕು‌ (ಔಟಾಗದೆ 6) ಹಾಗೂ ಮೋಮಿನುಲ್ ಹಕ್ ತಂಡಕ್ಕೆ ದೊಡ್ಡ ಮೊತ್ತದ ನಿರೀಕ್ಷೆ ಮೂಡಿಸಿದ್ದಾರೆ. ಮೋಮಿನುಲ್ ಹಕ್ ಔಟಾಗದೆ 40 ರನ್ ಗಳಿಸಿದ್ದಾರೆ. ವೇಗದ ಬೌಲರ್ ಆಕಾಶ್ ದೀಪ್ ಎರಡು, ಅಶ್ವಿನ್ ಒಂದು ವಿಕೆಟ್ ಕಿತ್ತರು.

ಗಂಟೆಗಳ ಕಾಲ ಸುರಿದ ಮಳೆ: ಬಳಿಕ ಮಂದ ಬೆಳಕಿನಿಂದ ಪಂದ್ಯ ಸ್ಥಗಿತ

ಶುಕ್ರವಾರ ಪಂದ್ಯ 1 ಗಂಟೆ ತಡವಾಗಿ ಆರಂಭಗೊಂಡಿತು. ಬಳಿಕ ಮಧ್ಯಾಹ್ನದವರೆಗೂ ಪಂದ್ಯ ನಡೆದರೂ, ಊಟದ ವಿರಾಮದ ವೇಳೆ ಮತ್ತೆ ಮಳೆ ಸುರಿಯಲಾರಂಭಿಸಿತು. 2ನೇ ಅವಧಿಯಲ್ಲಿ ಕೇವಲ 9 ಓವರ್ ಎಸೆಯಲಾಯಿತು. ಆ ನಂತರ ಗಂಟೆಗಳ ಕಾಲ ಸುರಿದ ಮಳೆ ಪಂದ್ಯವನ್ನು ಸ್ಥಗಿತಗೊಳಿಸಿತು. 3 ಗಂಟೆ ವೇಳೆಗಾಗಲೇ ಮಂದ ಬೆಳಕು ಆವರಿಸಿದ ಕಾರಣ ಪಂದ್ಯ ಪುನಾರಂಭಿಸಲಾಗಲಿಲ್ಲ.ಹೀಗಾಗಿ ದಿನದಾಟ ಕೊನೆಗೊಳಿಸಲಾಯಿತು. ನಗರದಲ್ಲಿ ಶನಿವಾರವೂ ಮಳೆ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚು.

ಐಪಿಎಲ್‌ನಲ್ಲಿ ಕೊಹ್ಲಿ-ರೋಹಿತ್‌ಗಿಂತ ಧೋನಿ ನಾಯಕತ್ವ ಬೆಸ್ಟ್ ಎಂದ ಇಂಗ್ಲೆಂಡ್ ಮಾಜಿ ಕ್ಯಾಪ್ಟನ್!

ಸ್ಕೋರ್: ಬಾಂಗ್ಲಾದೇಶ 107/3 (ಮೊದಲ ದಿನದಂತ್ಯಕ್ಕೆ) 
(ಮೋಮಿನುಲ್ ಹಕ್ 40*, ನಜ್ರುಲ್ ಹೊಸೈನ್ 31, ಶದ್ಮಾನ್ 24, ಆಕಾಶ್ ದೀಪ್ 2-34, ಆರ್.ಅಶ್ವಿನ್ 1-22)

ಕೊಹ್ಲಿಯ ಬ್ಯಾಟಿಂಗ್‌ ನೋಡಲು ಸೈಕಲ್‌ನಲ್ಲೇ 58 ಕಿ.ಮೀ ದೂರದಿಂದ ಬಂದ 15 ವರ್ಷದ ಬಾಲಕ!
 
ಕಾನ್ಪುರ: ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ನಲ್ಲಿ ವಿರಾಟ್‌ ಕೊಹ್ಲಿಯ ಬ್ಯಾಟಿಂಗ್‌ ನೋಡಲು ಉತ್ತರ ಪ್ರದೇಶದ ಉನ್ನಾವೊ ಎಂಬಲ್ಲಿನ 15 ವರ್ಷದ ಬಾಲಕನೋರ್ವ 58 ಕಿ.ಮೀ. ದೂರದ ಕಾನ್ಪುರಕ್ಕೆ ಸೈಕಲ್‌ನಲ್ಲೇ ಆಗಮಿಸಿದ್ದಾನೆ.

ಕಾರ್ತಿಕೇಯ ಎಂಬ ಬಾಲಕ ಶುಕ್ರವಾರ ಮುಂಜಾನೆ 4 ಗಂಟೆಗೆ ಸೈಕಲ್‌ ಹತ್ತಿದ್ದು, 11 ಗಂಟೆ ವೇಳೆ ಕಾನ್ಪುರದ ಕ್ರೀಡಾಂಗಣ ತಲುಪಿದ್ದಾನೆ. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಕುಂಬ್ಳೆಯ ಮತ್ತೊಂದು ದಾಖಲೆ ಮುರಿದ ಅಶ್ವಿನ್‌

ಭಾರತದ ಹಿರಿಯ ಸ್ಪಿನ್ನರ್‌ ಆರ್‌.ಅಶ್ವಿನ್‌ ಮತ್ತೊಂದು ದಾಖಲೆ ಬರೆದಿದ್ದಾರೆ. ಏಷ್ಯಾದಲ್ಲೇ ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್‌ ಕಿತ್ತ ಭಾರತೀಯ ಸಾಧಕರ ಪಟ್ಟಿಯಲ್ಲಿ ಅಶ್ವಿನ್‌ ಅಗ್ರಸ್ಥಾನಕ್ಕೇರಿದ್ದಾರೆ. ಒಟ್ಟಾರೆ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ ಅವರಿಗೆ ಈಗ 2ನೇ ಸ್ಥಾನ.

ಶುಕ್ರವಾರ ಅಶ್ವಿನ್‌, ನಜ್ಮುಲ್‌ ಹೊಸೈನ್‌ ವಿಕೆಟ್‌ ಪಡೆದರು. ಇದು ಏಷ್ಯಾದಲ್ಲಿ ಅಶ್ವಿನ್‌ ಕಿತ್ತ 420ನೇ ಟೆಸ್ಟ್‌ ವಿಕೆಟ್‌. ಈ ಮೂಲಕ ಅನಿಲ್‌ ಕುಂಬ್ಳೆ(419 ವಿಕೆಟ್‌)ರನ್ನು ಹಿಂದಿಕ್ಕಿದರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ 612 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಲಂಕಾದ ರಂಗನಾ ಹೆರಾತ್‌ 354, ಭಾರತದ ಹರ್ಭಜನ್‌ ಸಿಂಗ್‌ 300 ವಿಕೆಟ್‌ ಪಡೆದಿದ್ದಾರೆ.

Latest Videos
Follow Us:
Download App:
  • android
  • ios