ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವು ಇಂಗ್ಲೆಂಡ್ ಎದುರು ಹೀನಾಯ ಸೋಲು ಕಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಮುಲ್ತಾನ್: ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ಇದೀಗ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಪಾತಾಳಕ್ಕೆ ಕುಸಿಯುವ ಮೂಲಕ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಮುಖಭಂಗಕ್ಕೀಡಾಗಿದೆ. ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಇನ್ನಿಂಗ್ಸ್ ಹಾಗೂ 47 ರನ್ ಅಂತರದ ಸೋಲು ಅನುಭವಿಸಿದೆ.
ಮುಲ್ತಾನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಮೊದಲ ಇನ್ನಿಂಗ್ಸ್‌ನಲ್ಲಿ 556 ರನ್ ಸಿಡಿಸಿದ ಹೊರತಾಗಿಯೂ ಇನ್ನಿಂಗ್ಸ್ ಸೋಲು ಅನುಭವಿಸಿದ ಕುಖ್ಯಾತಿಗೆ ಪಾಕಿಸ್ತಾನ ಪಾತ್ರವಾಗಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಇನ್ನಿಂಗ್ಸ್‌ನಲ್ಲಿ 500+ ರನ್ ಬಾರಿಸಿ, ಇನ್ನಿಂಗ್ಸ್ ಸೋಲು ಅನುಭವಿಸಿದ ಮೊದಲ ತಂಡ ಎನ್ನುವ ಮುಖಭಂಗಕ್ಕೆ ಪಾಕಿಸ್ತಾನ ಈಡಾಗಿದೆ.
ಈ 8 ವಿಶ್ವದಾಖಲೆಗಳೇ ಸಾಕು ರೋಹಿತ್ ಶರ್ಮಾ ನಿಜವಾದ ಹಿಟ್‌ಮ್ಯಾನ್ ಅನ್ನೋಕೆ!
ಆತಿಥೇಯ ಪಾಕಿಸ್ತಾನ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ದಾಖಲಿಸಿದ ಹೊರತಾಗಿಯೂ ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವಾಗಲಿಲ್ಲ. ಹ್ಯಾರಿ ಬ್ರೂಕ್ ಬಾರಿಸಿದ ತ್ರಿಶತಕ ಹಾಗೂ ಜೋ ರೂಟ್ ಬಾರಿಸಿದ ದ್ವಿಶತಕದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ತಂಡವು 823 ರನ್ ಕಲೆಹಾಕಿತು. ಬ್ರೂಕ್ ಹಾಗೂ ರೂಟ್ ನಾಲ್ಕನೇ ವಿಕೆಟ್‌ಗೆ 454 ರನ್‌ಗಳ ಜತೆಯಾಟವಾಡಿದರು. ಇನ್ನು ಭಾರೀ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡವು 220 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಇಂಗ್ಲೆಂಡ್ ಎದುರು ಮಂಡಿಯೂರಿತು.
ಇದರೊಂದಿಗೆ ಶಾನ್ ಮಸೂದ್ ನಾಯಕತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಸತತ 6 ಟೆಸ್ಟ್ ಸೋಲು ಅನುಭವಿಸಿದೆ. ಮೊದಲಿಗೆ ಆಸೀಸ್ ಪ್ರವಾಸದಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್‌ವಾಷ್ ಅನುಭವಿಸಿದ್ದ ಪಾಕಿಸ್ತಾನ ತಂಡವು, ಆ ಬಳಿಕ ತವರಿನಲ್ಲಿ ಬಾಂಗ್ಲಾದೇಶ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ವೈಟ್‌ವಾಷ್ ಮುಖಭಂಗ ಅನುಭವಿಸಿತ್ತು. ಇದೀಗ ಇಂಗ್ಲೆಂಡ್ ಎದುರು ಹೀನಾಯ ಸೋಲು ಅನುಭವಿಸಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ 700+ ರನ್ ಗಳಿಸಿದ ಟಾಪ್ 5 ತಂಡಗಳು; ಭಾರತಕ್ಕೆ ಎಷ್ಟನೇ ಸ್ಥಾನ?
2022ರ ಬಳಿಕ ತವರಿನಲ್ಲಿ ಟೆಸ್ಟ್ ಪಂದ್ಯವನ್ನು ಗೆಲ್ಲದ ಏಕೈಕ ತಂಡ ಎನ್ನುವ ಕುಖ್ಯಾತಿಗೆ ಪಾಕಿಸ್ತಾನ ಪಾತ್ರವಾಗಿದೆ. ಪಾಕಿಸ್ತಾನ ತಂಡವು ಇಂಗ್ಲೆಂಡ್ ಎದುರು ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಪಾಕ್ ನಾಯಕ ಶಾನ್ ಮಸೂದ್, ಬೌಲರ್‌ಗಳ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಎದುರಾಳಿ ಇಂಗ್ಲೆಂಡ್ ತಂಡವು ನಮ್ಮ ಎಲ್ಲಾ 20 ವಿಕೆಟ್ ಕಬಳಿಸುತ್ತಾರೆ ಎನ್ನುವುದಾದರೇ, ನಾವು ಕೂಡಾ 20 ವಿಕೆಟ್ ಕಬಳಿಸಬಹುದಿತ್ತು ಎಂದು ಹೇಳಿದ್ದಾರೆ.
