ಇದೇ ಅಕ್ಟೋಬರ್ 16ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟವಾಗಿದೆ.

ಮುಂಬೈ: ತವರಿನಲ್ಲಿ ನ್ಯೂಜಿಲೆಂಡ್ ಎದುರು ಇದೇ ಅಕ್ಟೋಬರ್ 16ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಕ್ರಿಕೆಟ್ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ರೋಹಿತ್ ಶರ್ಮಾ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದು, ಮಾರಕ ವೇಗಿ ಜಸ್ಪ್ರೀತ್ ಬುಮ್ರಾಗೆ ಉಪನಾಯಕ ಪಟ್ಟ ಕಟ್ಟಲಾಗಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 16ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರಾರಂಭವಾಗಲಿದೆ.

ಬಹುತೇಕ ಬಾಂಗ್ಲಾದೇಶ ಎದುರಿನ ಸರಣಿಗೆ ಆಯ್ಕೆಯಾಗಿದ್ದ ತಂಡವನ್ನೇ ಇದೀಗ ನ್ಯೂಜಿಲೆಂಡ್ ಎದುರಿನ ಸರಣಿಗೂ ಆಯ್ಕೆ ಮಾಡಲಾಗಿದೆ. ಈ ಪೈಕಿ ಎಡಗೈ ವೇಗಿಯಾಗಿದ್ದ ಯಶ್ ದಯಾಳ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಭಾರತ ತಂಡದಲ್ಲಿ ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಹೀಗೆ ನಾಲ್ವರು ಸ್ಪಿನ್ನರ್‌ಗಳಿಗೆ ಮಣೆ ಹಾಕಲಾಗಿದೆ. ಇನ್ನು ವೇಗದ ಬೌಲರ್‌ಗಳ ರೂಪದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ಸ್ಥಾನ ಪಡೆದಿದ್ದಾರೆ. 

Scroll to load tweet…

ರತನ್ ಟಾಟಾ & ಭಾರತೀಯ ಕ್ರಿಕೆಟ್: ಟಾಟಾ ಸಹಾಯ ಪಡೆದು ಟೀಂ ಇಂಡಿಯಾದಲ್ಲಿ ಮಿಂಚಿದ ಕ್ರಿಕೆಟಿಗರು

ಇನ್ನುಳಿದಂತೆ ಮೊದಲ ಆಯ್ಕೆಯ ವಿಕೆಟ್ ಕೀಪರ್ ರೂಪದಲ್ಲಿ ರಿಷಭ್ ಪಂತ್ ಸ್ಥಾನ ಪಡೆದಿದ್ದರೇ, ಬ್ಯಾಕ್ ಅಪ್‌ ವಿಕೆಟ್ ಕೀಪರ್ ಆಗಿ ದೃವ್ ಜುರೆಲ್ ಸ್ಥಾನ ಪಡೆದಿದ್ದಾರೆ. ಇನ್ನು ಕನ್ನಡಿಗ ಕೆ ಎಲ್ ರಾಹುಲ್, ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನವೆಂಬರ್ 22ರಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯರಾಗುವ ಸಾಧ್ಯತೆಯಿದೆ ಎನ್ನುವಂತಹ ಚರ್ಚೆ ಚಾಲ್ತಿಯಲ್ಲಿರುವ ಬೆನ್ನಲ್ಲೇ ಇದೀಗ ಬುಮ್ರಾಗೆ ಉಪನಾಯಕ ಪಟ್ಟ ಕಟ್ಟಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾ ಪ್ರವಾಸದ ಮೊದಲ ಅಥವಾ ಎರಡನೇ ಟೆಸ್ಟ್‌ ಪಂದ್ಯಕ್ಕೆ ರೋಹಿತ್ ಶರ್ಮಾ ವೈಯುಕ್ತಿಕ ಕಾರಣದಿಂದ ಅಲಭ್ಯರಾಗುವ ಸಾಧ್ಯತೆಯಿದೆ. ಹೀಗಾದ ಪಕ್ಷದಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ಬುಮ್ರಾ ನಾಯಕನಾಗಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.

ತೆಲಂಗಾಣದ ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್

ಒಂದು ವೇಳೆ ಆಸ್ಟ್ರೇಲಿಯಾ ಎದುರಿನ ಆರಂಭಿಕ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯರಾದರೇ, ದೇಶಿ ಕ್ರಿಕೆಟ್‌ನಲ್ಲಿ ರನ್ ರಾಶಿಯನ್ನೇ ಗುಡ್ಡೆಹಾಕಿರುವ ಅಭಿಮನ್ಯು ಈಶ್ವರನ್‌ ಅವರನ್ನು ಬ್ಯಾಕ್‌ಅಪ್ ಓಪನ್ನರ್ ಆಗಿ ಆಯ್ಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದಷ್ಟೇ ಅಲ್ಲದೇ ಯಶಸ್ವಿ ಜೈಸ್ವಾಲ್ ಜತೆಗೆ ಶುಭ್‌ಮನ್ ಗಿಲ್ ಇಲ್ಲವೇ ಕೆ ಎಲ್ ರಾಹುಲ್ ಕೂಡಾ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 

ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:

ರೋಹಿತ್ ಶರ್ಮಾ(ನಾಯಕ), ಜಸ್ಪ್ರೀತ್ ಬುಮ್ರಾ(ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್(ವಿಕೆಟ್ ಕೀಪರ್), ದೃವ್ ಜುರೆಲ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.