ದುಲೀಪ್ ಟ್ರೋಫಿ: ಭಾರತ 'ಎ'ವಿರುದ್ದ ಅಬ್ಬರಿಸಿದ ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್

ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾರತ 'ಎ' ತಂಡದ ವಿರುದ್ಧ ಭಾರತ 'ಬಿ' ತಂಡವು ಬೃಹತ್ ಮೊತ್ತ ಕಲೆಹಾಕಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

India A vs India B Duleep Trophy Musheer Khan Slams 181 kvn

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಸರ್ಫರಾಜ್ ಖಾನ್ ಸಹೋದರ, ಪ್ರತಿಭಾನ್ವಿತ ಬ್ಯಾಟರ್ ಮುಶೀರ್ ಖಾನ್ ಹಾಗೂ ನವದೀಪ್ ಸೈನಿ ತೋರಿದ ಅಪ್ರತಿಮ ಹೋರಾಟದಿಂದಾಗಿ ದುಲೀಪ್ ಟ್ರೋಫಿ ಕ್ರಿಕೆಟ್‌ನಲ್ಲಿ ಭಾರತ 'ಎ' ವಿರುದ್ದ ಭಾರತ 'ಬಿ' ತಂಡ 321 ರನ್ ಕಲೆಹಾಕಿದೆ. ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿ ರುವ ಭಾರತ 'ಎ' 2ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿದ್ದು, ಇನ್ನೂ 181 ರನ್ ಹಿನ್ನಡೆಯಲ್ಲಿದೆ. 

ಮೊದಲ ದಿನವೇ 94ಕ್ಕೆ 7 ವಿಕೆಟ್ ಕಳೆದು ಕೊಂಡಿದ್ದರೂ 8ನೇ ವಿಕೆಟ್‌ಗೆ ಜೊತೆಯಾದ ಮುಶೀರ್ ಹಾಗೂ ನವದೀಪ್ ಭರ್ಜರಿ ಜೊತೆಯಾಟದ ಮೂಲಕ ತಂಡವನ್ನು ಕಾಪಾಡಿದರು. ಮೊದಲ ದಿನ 7 ವಿಕೆಟ್‌ಗೆ 202 ರನ್ ಕಲೆಹಾಕಿದ್ದ ತಂಡ ಶುಕ್ರವಾರವೂ ಮುಶೀರ್ -ಸೈನಿ 205 ರನ್ ಜೊತೆಯಾಟ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಮುಶೀರ್ 373 ಎಸೆತಗಳಲ್ಲಿ 181 ರನ್ ಸಿಡಿಸಿ ಔಟಾದರೆ, 9ನೇ ಕ್ರಮಾಂಕದಲ್ಲಿ ಕ್ರೀಸ್‌ ಗಿಳಿದಿದ್ದ ಸೈನಿ 144 ಎಸೆತಗಳಲ್ಲಿ 56 ರನ್‌ ಸಿಡಿಸಿದರು. ಈ ಜೋಡಿ 205 ರನ್ ಜೊತೆಯಾಟವಾಡಿತು. ಆಕಾಶ್‌ ದೀಪ್ 4 ವಿಕೆಟ್ ಕಬಳಿಸಿದರು.

ಭಾರತದ ಸಾರ್ವಕಾಲಿಕ ಶ್ರೇಷ್ಠ ಒನ್‌ಡೇ ಟೀಂ ಆಯ್ಕೆ ಮಾಡಿದ ಗೌತಮ್ ಗಂಭೀರ್: ಇಬ್ಬರು ಸ್ಟಾರ್ ಆಟಗಾರರಿಗಿಲ್ಲ ಸ್ಥಾನ!

ಬಳಿಕ ಭಾರತ 'ಎ' ತಂಡ ಸಾಧಾರಣ ಆರಂಭ ಪಡೆಯಿತು. ಆರಂಭಿಕರಾದ ಮಯಾಂಕ್‌ ಅಗರ್‌ವಾಲ್‌ ಹಾಗೂ ನಾಯಕ ಶುಭಮನ್ ಗಿಲ್ ಮೊದಲ ವಿಕೆಟ್‌ 57ರನ್‌ ಜೊತೆಯಾಟವಾಡಿದರು. 36 ರನ್ ಗಳಿಸಿದ್ದ ಮಯಾಂಕ್ ಹಾಗೂ 25 ರನ್ ಬಾರಿಸಿದ್ದ ಗಿಲ್‌ರನ್ನು ಸೈನಿ ಪೆವಿಲಿಯನ್‌ಗೆ ಅಟ್ಟಿದರು. ರಿಯಾನ್ ಪರಾಗ್ (27) ಹಾಗೂ ಕೆ.ಎಲ್.ರಾಹುಲ್ (23) 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 

ಸ್ಕೋರ್: 
ಭಾರತ 'ಬಿ' ಮೊದಲ ಇನ್ನಿಂಗ್ಸ್ 321/10 (ಮುಶೀರ್ 181, ಸೈನಿ 56, ಆಕಾಶ್‌ ದೀಪ್ 4/60) 
ಭಾರತ 'ಎ' 134/2(2ನೇ ದಿನದಂತ್ಯಕ್ಕೆ) (ಮಯಾಂಕ್‌ 36, ರಿಯಾನ್ 27*, ಸೈನಿ 2/36)

ಭಾರತ ಡಿ ತಂಡಕ್ಕೆ 202 ರನ್ ಮುನ್ನಡೆ

ಅನಂತಪುರ(ಆಂಧ್ರಪ್ರದೇಶ): ನಾಯಕ ಶ್ರೇಯಸ್‌ ಅಯ್ಯರ್‌ ಹಾಗೂ ದೇವದತ್ ಪಡಿಕ್ಕಲ್ ಹೋರಾಟದ ಅರ್ಧಶತಕದ ನೆರವಿನಿಂದ ದುಲೀಪ್ ಟ್ರೋಫಿ ಕ್ರಿಕೆಟ್ ನಲ್ಲಿ ಭಾರತ 'ಸಿ' ತಂಡದ ವಿರುದ್ಧ ಭಾರತ 'ಡಿ' ತಂಡ 202 ರನ್ ಮುನ್ನಡೆ ಪಡೆದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 4 ರನ್ ಹಿನ್ನಡೆ ಅನುಭವಿಸಿದ ಹೊರತಾಗಿಯೂ 2ನೇ ಇನ್ನಿಂಗ್ಸ್‌ನಲ್ಲಿ ಸುಧಾರಿತ ಪ್ರದರ್ಶನ ತೋರಿರುವ 'ಡಿ', ಸ್ಪರ್ಧಾತ್ಮಕ ಗುರಿ ನೀಡಲು ಹೋರಾಡುತ್ತಿದೆ.

ಪಂದ್ಯದ ಮೊದಲ ದಿನ 14 ವಿಕೆಟ್‌ಗಳು ಪತನಗೊಂಡಿದ್ದವು. ಶುಕ್ರವಾರ ಭಾರತ 'ಸಿ' ತಂಡ ಮತ್ತೆ ಬ್ಯಾಟಿಂಗ್ ವೈಫಲ್ಯಕ್ಕೊಳಗಾದರೂ, ಇನ್ನಿಂಗ್ಸ್ ಮುನ್ನಡೆ ಪಡೆಯಿತು. 'ಡಿ' ತಂಡದ 164 ರನ್‌ಗೆ ಉತ್ತರವಾಗಿ 'ಸಿ' ತಂಡ 168 ರನ್ ಕಲೆಹಾಕಿತು, ಬಾಬಾ ಇಂದ್ರಜಿತ್ (72) ಏಕಾಂಗಿ ಹೋರಾಟ ಪ್ರದರ್ಶಿಸಿದರು. ಅಭಿಷೇಕ್ ಪೊರೆಲ್ 34 ರನ್ ಕೊಡುಗೆ ನೀಡಿದರು. ಹರ್ಷಿತ್ ರಾಣಾ 4, ಅಕ್ಷರ್ ಪಟೇಲ್ ಹಾಗೂ ಶರನ್ ಜೈನ್ ತಲಾ 2 ವಿಕೆಟ್ ಕಿತ್ತರು.

ಕೇವಲ 6 ರನ್‌ಗೆ ಇಡೀ ಟೀಮ್‌ ಆಲೌಟ್..! ಸೊನ್ನೆ ಸುತ್ತಿದ 7 ಬ್ಯಾಟರ್‌, ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಯ್ತು ಕೆಟ್ಟ ದಾಖಲೆ..!

ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿರುವ 'ಡಿ' ತಂಡ 2ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 206 ರನ್ ಗಳಿಸಿದೆ. ಶ್ರೇಯಸ್‌ ಅಯ್ಯರ್ 54, ಪಡಿಕ್ಕಲ್ 56 ರನ್ ಗಳಿಸಿದರು. ರಿಕ್ಕಿ ಭುಯಿ 44 ರನ್ ಕೊಡುಗೆ ನೀಡಿದರು. ಆರಂಭಿಕ ಆಘಾತದಿಂದ ಚೇತರಿಸಿ 166ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ ಮತ್ತೆ ಕುಸಿತಕ್ಕೊಳಗಾಯಿತು. 37 ರನ್‌ಗೆ 5 ವಿಕೆಟ್ ಕಳೆದುಕೊಂಡಿದೆ. ಅಕ್ಷರ್ (11) ಕ್ರೀಸ್‌ನಲ್ಲಿದ್ದಾರೆ. ಮಾನವ ಸುಥಾರ್ 5 ವಿಕೆಟ್ ಪಡೆದಿದ್ದಾರೆ. 

ಸ್ಕೋರ್: 
ಭಾರತ 'ಡಿ' 164/10 ಮತ್ತು 206/8(2ನೇ ದಿನದಂತ್ಯಕ್ಕೆ) (ಪಡಿಕ್ಕಲ್ 56, ಶ್ರೇಯಸ್ 54, ಮಾನವ್ 5-30)
ಭಾರತ 'ಸಿ' 168/10 (ಇಂದ್ರಜಿತ್ 72, ಅಭಿಷೇಕ್ 34, ಹರ್ಷಿತ್ 4-33)

Latest Videos
Follow Us:
Download App:
  • android
  • ios