ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹಾಂಕಾಂಗ್ ತಂಡವು ಕೇವಲ 10 ಎಸೆತಗಳಲ್ಲಿ ಪಂದ್ಯ ಗೆದ್ದು ಬೀಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ: ಹಾಂಕಾಂಗ್‌ ಕ್ರಿಕೆಟ್ ತಂಡವು ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಹೊಸ ಇತಿಹಾಸ ನಿರ್ಮಿಸಿದೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ಎದುರು ನೋಡುತ್ತಿರುವ ಹಾಂಕಾಂಗ್‌ ತಂಡವು, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ದಾಖಲೆ ನಿರ್ಮಿಸಿದೆ.

ಹೌದು, ಐಸಿಸಿ ಪುರುಷರ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಪಂದ್ಯದಲ್ಲಿ ಮಂಗೋಲಿಯಾ ಎದುರು ಹಾಂಕಾಂಗ್ ತಂಡವು 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇನ್ನೂ ಅಚ್ಚರಿಯ ವಿಷಯವೆಂದರೆ ಕೇವಲ 10 ಎಸೆತಗಳನ್ನು ಎದುರಿಸಿ ಹಾಂಕಾಂಗ್ ತಂಡವು ಗೆಲುವಿನ ನಗೆ ಬೀರಿದೆ. ಮಂಗೋಲಿಯಾ ತಂಡವು ಪಂದ್ಯ ಗೆಲ್ಲಲು ಕೇವಲ 18 ರನ್ ಗುರಿ ನೀಡಿತ್ತು. ಈ ಸುಲಭ ಗುರಿ ಬೆನ್ನತ್ತಿದ ಹಾಂಕಾಂಗ್ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡು ಇನ್ನೂ 110 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. 

Scroll to load tweet…

ಬಾಂಗ್ಲಾದೇಶ ಎದುರಿನ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್; ಸ್ಟಾರ್ ಕ್ರಿಕೆಟಿಗನಿಗೆ ಗಾಯ..!

ಆಗಸ್ಟ್‌ 31ರ ಶನಿವಾರ ರಾತ್ರಿ ಕೌಲಲಾಂಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹಾಂಕಾಂಗ್ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಹಾಂಕಾಂಗ್ ತೆಗೆದುಕೊಂಡ ಈ ತೀರ್ಮಾನ ಸರಿ ಎನಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಮಂಗೋಲಿಯಾ ತಂಡವು 14.2 ಓವರ್‌ಗಳಲ್ಲಿ ಕೇವಲ 17 ರನ್ ಗಳಿಸಿ ಸರ್ವಪತನ ಕಂಡಿತು. ಮಂಗೋಲಿಯಾ ಕ್ರಿಕೆಟ್ ತಂಡದ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಮಂಗೋಲಿಯಾ ತಂಡದ ಮೋಹನ್ ವಿವೇಕನಂದನ್ ಎನ್ನುವ ಬ್ಯಾಟರ್ 18 ಎಸೆತಗಳನ್ನು ಎದುರಿಸಿ 5 ರನ್ ಬಾರಿಸಿದರು. ಇದು ಮಂಗೋಲಿಯಾ ಪರ ದಾಖಲಾದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿತು. 

ಹಾಂಕಾಂಗ್ ತಂಡದ ಪರ ಏಹಸಾನ್ ಖಾನ್ ಕೇವಲ 5 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಅನಾಸ್ ಖಾನ್ ಹಾಗೂ ಯಾಸಿಮ್ ಮುರ್ತಾಜಾ ತಲಾ ಎರಡೆರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿ ಕೊಂಡರು. ಇನ್ನು ಇದೆಲ್ಲದರ ನಡುವೆ ಹೆಚ್ಚು ಗಮನ ಸೆಳೆದಿದ್ದು, ಆಯುಷ್ ಶುಕ್ಲಾ ಅವರ ಮಾರಕ ದಾಳಿ. ಆಯುಷ್ ಶುಕ್ಲಾ 4 ಓವರ್‌ ಬೌಲಿಂಗ್ ಮಾಡಿ ಒಂದೇ ಒಂದು ರನ್ ನೀಡದೇ ಒಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತೀಯ ಮೂಲದ ಆಯುಷ್ ಶುಕ್ಲಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದು ಪಂದ್ಯದಲ್ಲಿ 4 ಮೇಡನ್ ಓವರ್ ಮಾಡಿದ ಜಗತ್ತಿನ ಮೂರನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮೊದಲು ಕೆನಡಾದ ಸಾದ್ ಬಿನ್ ಜಾಫರ್ ಹಾಗೂ ನ್ಯೂಜಿಲೆಂಡ್‌ನ ವೇಗಿ ಲಾಕಿ ಫರ್ಗ್ಯೂಸನ್, ಟಿ20 ಪಂದ್ಯವೊಂದರಲ್ಲಿ 4 ಮೇಡನ್ ಓವರ್ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಲಿಗೆ ಇದೀಗ ಆಯುಷ್ ಶುಕ್ಲಾ ಸೇರ್ಪಡೆಯಾಗಿದ್ದಾರೆ.

ಮಹಾರಾಜ ಟ್ರೋಫಿ ಟಿ20: ಮೈಸೂರು ವಾರಿಯರ್ಸ್‌ ಫೈನಲ್‌ಗೆ ಲಗ್ಗೆ

ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಹಾಂಕಾಂಗ್‌ಗೆ ಮೂರನೇ ಅತಿ ದೊಡ್ಡ ಅಂತರದ ಗೆಲುವು: ಹಾಂಕಾಂಗ್ ಕ್ರಿಕೆಟ್ ತಂಡವು 110 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಅತಿ ದೊಡ್ಡ ಅಂತರದ ಗೆಲುವು ಸಾಧಿಸಿದ ದಾಖಲೆ ಬರೆಯಿತು. ಇನ್ನು ಇದಕ್ಕೂ ಮೊದಲು ಸ್ಪೇನ್ ತಂಡವು ಆಯಿಲ್ ಆಫ್ ಮೆನ್ ತಂಡವನ್ನು 118 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿ ಮೊದಲ ಸ್ಥಾನದಲ್ಲಿದೆ. ಇನ್ನು ಇನ್ನು ಜಪಾನ್ ತಂಡವು ಮಂಗೋಲಿಯಾ ಎದುರು 112 ಎಸೆತ ಬಾಕಿ ಇರುವಂತೆಯೇ ಗೆಲುವಿನ ಕೇಕೆ ಹಾಕಿತ್ತು.