ಇಂಗ್ಲೆಂಡ್ ಕ್ರಿಕೆಟ್ ತಂಡವು 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೇರದ ಬೆನ್ನಲ್ಲೇ ತಂಡದಲ್ಲಿ ಮೇಜರ್ ಸರ್ಜರಿ ಆರಂಭವಾಗಿದ್ದು, ಸ್ಟಾರ್ ಆಲ್ರೌಂಡರ್ ತಲೆದಂಡವಾಗಿದೆ
ಲಂಡನ್: ತವರಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಎದುರಿನ ಸೀಮಿತ ಓವರ್‌ಗಳ ಸರಣಿಗೆ ತಂಡದಲ್ಲಿ ಸ್ಥಾನ ಪಡೆಯದ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಮೋಯಿನ್ ಅಲಿ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಮೋಯಿನ್ ಅಲಿ ಈಗಾಗಲೇ ಎರಡು ಬಾರಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 2023ರ ಏಕದಿನ ವಿಶ್ವಕಪ್ ಹಾಗೂ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದ ಅಲಿ. ಇದೀಗ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ.
ಡೈಲಿ ಮೇಲ್‌ನಲ್ಲಿ ನಾಸೀರ್ ಹುಸೇನ್ ಜತೆಗಿನ ಮಾತುಕತೆ ವೇಳೆಯಲ್ಲಿ ತಾವೇಕೆ ದಿಢೀರ್ ನಿವೃತ್ತಿಯಾಗುತ್ತಿದ್ದೇನೆ ಎನ್ನುವುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಇಂಗ್ಲೆಂಡ್ ಪರ ಆಡಿದ ಆ ದಿನಗಳು ನನ್ನ ಪಾಲಿನ ಅಮೂಲ್ಯ ದಿನಗಳು ಎಂದು ಬಣ್ಣಿಸಿದ್ದಾರೆ. "ನಾನು ಇನ್ನಷ್ಟು ದಿನಗಳ ಕಾಲ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಬೇಕು ಎಂದುಕೊಂಡಿದ್ದೆ, ಆದರೆ ಅದು ಸಾಧ್ಯವಾಗುವುದಿಲ್ಲ ಎನ್ನುವ ವಾಸ್ತವ ಅರಿವಿಗೆ ಬಂದಿದೆ. ನಾನು ನಿವೃತ್ತಿಯಾದರೂ, ನನ್ನಲ್ಲಿ ಆಡುವ ಸಾಮರ್ಥ್ಯವಿಲ್ಲ ಎಂದರ್ಥವಲ್ಲ. ನಾನು ಈಗಲೂ ಆಡಬಲ್ಲೇ. ಆದರೆ ಯುವಕರಿಗೆ ಅವಕಾಶ ನೀಡುವ ಉದ್ದೇಶದಿಂದ ಹೀಗೆಲ್ಲಾ ನಿರ್ಧಾರ ಮಾಡಬೇಕಾಗುತ್ತದೆ" ಎಂದು ಮೋಯಿನ್ ಅಲಿ ಹೇಳಿದ್ದಾರೆ.
ಟೀಕಾಕಾರರಿಗೆ ತಿರುಗೇಟು ನೀಡಲು ರೋಹಿತ್ ಶರ್ಮಾ ಮಾಸ್ಟರ್ ಪ್ಲ್ಯಾನ್..!
ಸದ್ಯ ಇಂಗ್ಲೆಂಡ್ ತಂಡವು ತವರಿನಲ್ಲಿ ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದೆ. ಈ ಸರಣಿ ಮುಗಿಯುತ್ತಿದ್ದಂತೆಯೇ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ 5ನೇ ದಿನದಾಟ ಸೆಪ್ಟೆಂಬರ್ 10ರ ವರೆಗೆ ನಡೆಯಲಿದೆ. ಇದಾದ ಮರುದಿನವೇ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮೊದಲ ಟಿ20 ಪಂದ್ಯವನ್ನಾಡಲಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ಮೋಯಿನ್ ಅಲಿ ಮಾತ್ರವಲ್ಲದೇ ಕ್ರಿಸ್ ಜೋರ್ಡನ್, ಜೋಸ್ ಬಟ್ಲರ್ ಹಾಗೂ ಜಾನಿ ಬೇರ್‌ಸ್ಟೋವ್ ಕೂಡಾ ಆಡುತ್ತಿಲ್ಲ. ಇಂಗ್ಲೆಂಡ್ ತಂಡವು 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಕ್ವಾಲಿಫೈ ಆಗದ ಬೆನ್ನಲ್ಲೇ ತಂಡದಲ್ಲಿ ಮೇಜರ್ ಸರ್ಜರಿ ಮಾಡಲು ಇಂಗ್ಲೆಂಡ್ ಮುಂದಾಗಿದೆ.
37 ವರ್ಷದ ಮೋಯಿನ್ ಅಲಿ ಇಂಗ್ಲೆಂಡ್ ಪರ 138 ಏಕದಿನ ಪಂದ್ಯಗಳನ್ನಾಡಿ 2355 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 111 ವಿಕೆಟ್ ಕಬಳಿಸಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಪರ 92 ಟಿ20 ಪಂದ್ಯಗಳನ್ನಾಡಿ 1229 ರನ್ ಹಾಗೂ 51 ವಿಕೆಟ್ ಕಬಳಿಸಿದ್ದಾರೆ.
