Asianet Suvarna News Asianet Suvarna News

ಬೆಂಗಳೂರು ಟೆಸ್ಟ್: ಕೈಕೊಟ್ಟ ಬ್ಯಾಟರ್ಸ್‌, ಬೃಹತ್ ಮುನ್ನಡೆಯತ್ತ ಕಿವೀಸ್ ಪಡೆ

ಬೆಂಗಳೂರು ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಭಾರತದ ಎದುರು ನ್ಯೂಜಿಲೆಂಡ್ ತಂಡದ ಕೈ ಮೇಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Bengaluru Test New Zealand dominated all three sessions of Day 2 against India kvn
Author
First Published Oct 17, 2024, 5:47 PM IST | Last Updated Oct 17, 2024, 5:47 PM IST

ಬೆಂಗಳೂರು: ಬ್ಯಾಟರ್‌ಗಳ ದಯನೀಯ ವೈಫಲ್ಯ ಹಾಗೂ ಕಳಪೆ ಕ್ಷೇತ್ರರಕ್ಷಣೆಯ ಲಾಭವೆತ್ತಿದ ಪ್ರವಾಸಿ ನ್ಯೂಜಿಲೆಂಡ್ ತಂಡವು ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ. ಮೊದಲಿಗೆ ಟೀಂ ಇಂಡಿಯಾವನ್ನು ಕೇವಲ 46 ರನ್‌ಗಳಿಗೆ ಅಲೌಟ್ ಮಾಡಿ, ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್ ತಂಡವು ಎರಡನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 180 ರನ್ ಬಾರಿಸಿದ್ದು ಒಟ್ಟಾರೆ 134 ರನ್‌ ಅಮೂಲ್ಯ ಮುನ್ನಡೆ ಸಾಧಿಸಿದೆ.

ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎರಡನೇ ದಿನದಿಂದ ಆರಂಭವಾದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಮ್ಯಾಟ್ ಹೆನ್ರಿ ಹಾಗೂ ವಿಲಿಯಮ್‌ ಓರ್ಕೆ ಮಾರಕ ದಾಳಿಗೆ ತತ್ತರಿಸಿದ ಆತಿಥೇಯ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಭಾರತದ ನೆಲದಲ್ಲಿ ಅಲ್ಪ ಮೊತ್ತಕ್ಕೆ ಆಲೌಟ್ ಆದ ಕುಖ್ಯಾತಿಗೆ ಟೀಂ ಇಂಡಿಯಾ ಪಾತ್ರವಾಗಿದೆ. ಈ ಮೊದಲು ಟೀಂ ಇಂಡಿಯಾ 1987ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ದೆಹಲಿಯಲ್ಲಿ 75 ರನ್‌ಗಳಿಗೆ ಆಲೌಟ್ ಆಗಿದ್ದು ಕನಿಷ್ಠ ಸ್ಕೋರ್ ಎನಿಸಿಕೊಂಡಿತ್ತು. ಆ ದಾಖಲೆ ಇದೀಗ ಬ್ರೇಕ್ ಆಗಿದೆ.

ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್(13) ಹಾಗೂ ರಿಷಭ್ ಪಂತ್(20) ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. 8 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ವಿರಾಟ್ ಕೊಹ್ಲಿ ಶೂನ್ಯ ಸುತ್ತಿದರು. ಇನ್ನು ಕನ್ನಡಿಗ ಕೆ ಎಲ್ ರಾಹುಲ್, ಸರ್ಫರಾಜ್ ಖಾನ್, ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರು.

ಭಾರತದ ನೆಲದಲ್ಲಿ ಕನಿಷ್ಟ ಟೆಸ್ಟ್ ಸ್ಕೋರ್; ಅಪಖ್ಯಾತಿಗೆ ಒಳಗಾದ ಟೀಂ ಇಂಡಿಯಾ!

ಇನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಪರ ಮಾರಕ ದಾಳಿ ನಡೆಸಿದ ಮ್ಯಾಟ್ ಹೆನ್ರಿ ಕೇವಲ 15 ರನ್ ನೀಡಿ 5 ವಿಕೆಟ್ ಕಬಳಿಸಿದರೇ, ಮತ್ತೋರ್ವ ನೀಳಕಾಯದ ವೇಗಿ ವಿಲಿಯಮ್ ಓರ್ಕೆ 4 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಅನುಭವಿ ವೇಗಿ ಟಿಮ್ ಸೌಥಿ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಇನ್ನು ಟೀಂ ಇಂಡಿಯಾವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ನಾಯಕ ಟಾಮ್ ಲೇಥಮ್ ಹಾಗೂ ಡೆವೊನ್ ಕಾನ್‌ವೇ 67 ರನ್‌ಗಳ ಜತೆಯಾಟವಾಡಿದರು. ಲೇಥಮ್ 15 ರನ್ ಗಳಿಸಿ ಕುಲ್ದೀಪ್ ಯಾದವ್ ಬಲೆಗೆ ಬಿದ್ದರು. ಇನ್ನು ವಿಲ್ ಯಂಗ್ 33 ರನ್ ಗಳಿಸಿದ್ದಾಗ ಜಡೇಜಾ ಶಾಕ್ ನೀಡಿದರು. ಇನ್ನೊಂದೆಡೆ ಭಾರತೀಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಮತ್ತೋರ್ವ ಆರಂಭಿಕ ಬ್ಯಾಟರ್ 105 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 91 ರನ್ ಗಳಿಸಿ ರಿವರ್ಸ್‌ ಸ್ವೀಪ್ ಮಾಡುವ ಯತ್ನದಲ್ಲಿ ಕ್ಲೀನ್ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು.

ಸದ್ಯ ರಚಿನ್ ರವೀಂದ್ರ 22 ಹಾಗೂ ಡೇರಲ್ ಮಿಚೆಲ್ 14 ರನ್ ಗಳಿಸಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Latest Videos
Follow Us:
Download App:
  • android
  • ios