ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗಿ ವಿರಾಟ್ ಕೊಹ್ಲಿಗೆ ನಮಸ್ಕರಿಸಿ ಕಾಲಿಗೆ ಬಿದ್ದ ಅಭಿಮಾನಿಗೆ ಮೈದಾನದ ಭದ್ರತಾ ಸಿಬ್ಬಂದಿ ಮಸನೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಆದರೆ, ಹಲ್ಲೆಗೊಳಗಾದ ಅಭಿಮಾನಿಗೆ ಚಿಕಿತ್ಸೆಯಾದರೂ ಕೊಡಿಸುವಂತೆ  ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆ ಮಾಡಲಾಗಿದೆ.

ಬೆಂಗಳೂರು (ಏ.02): ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ನಡೆದ ಆರ್‌ಸಿಬಿ ಟಿ-20 ಐಪಿಎಲ್ ಪಂದ್ಯದ ವೇಳೆ ಕ್ರಿಕೆಟ್ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು, ಕಾಲಿಗೆ ಬಿದ್ದಿದ್ದನು. ಆದರೆ, ಮೈದಾನದ ಭದ್ರತಾ ಸಿಬ್ಬಂದಿ ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಹಿಡಿದು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಹೀಗೆ ಅಮಾನವೀಯವಾಗಿ ಹಲ್ಲೆ ಮಾಡಿದ ಮೈದಾನದ ಸಿಬ್ಬಂದಿ ವಿರುದ್ಧ ಬೆಂಗಳೂರು ನಿವಾಸಿಗಳು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ.

ಹೌದು, ಮಾ.25ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru-RCB) ಹಾಗೂ ಪಂಜಾಬ್‌ ಕಿಂಗ್ಸ್‌ (Punjab Kings-PBKS) ಪಂದ್ಯ ನಡೆಯುತ್ತಿತ್ತು. ಈ ವೇಳೆ ರಾಯಚೂರು ಮೂಲದವನು ಎನ್ನಲಾದ ಅಭಿಮಾನಿಯೊಬ್ಬ ಪಂದ್ಯ ನಡೆಯುವ ವೇಳೆಯೇ ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಅನಧಿಕೃತವಾಗಿ ನುಗ್ಗಿದ್ದಾನೆ. ನಂತರ, ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು, ಅವರ ಕಾಲಿಗೆ ಬಿದ್ದು ಅಭಿಮಾನವನ್ನು ತೋರಿಸಿದ್ದಾನೆ. ಆದರೆ, ಅಭಿಮಾನಿಯನ್ನೇ ಹಿಂಬಾಲಿಸಿಕೊಂಡು ಬಂದ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದಲೇ ಆತನ ಮೇಲೆ ಹಲ್ಲೆ ಮಾಡುತ್ತಾ ಮೈದಾನದ ಹೊರಗೆ ಎಳೆದುಕೊಂಡು ಬಂದಿದ್ದಾರೆ.

IPL 2024 ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿ..! ವಿಡಿಯೋ ವೈರಲ್

ಯುವಕನೊಬ್ಬ ಭದ್ರತೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ಕ್ರೀಡಾಂಗಣಕ್ಕೆ ನುಗ್ಗಿ ಬರುವುದು ಕಾನೂನಿನ ಪ್ರಕಾರ ಅಪರಾಧ ಎಂಬುದು ಎಲ್ಲರಿಗೂ ತಿಳಿದ ವಿಚಾರ.ಅ ಯುವಕ ಮಾಡಿದ ತಪ್ಪಿಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಅದೇ ಕಾರಣಕ್ಕೆ ಲಕ್ಷಾಂತರ ಜನ ಸೇರಿರುವ ಜಾಗದಲ್ಲೇ ಈ ರೀತಿ ಮನಸೋಇಚ್ಛೆ ದೈಹಿಕವಾಗಿ ಹಲ್ಲೆ ಮಾಡುವ ಅಧಿಕಾರ ನೀಡಿದವರು ಯಾರು ? ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇನ್ನು ಮೈದಾನದಿಂದ ಯುವಕನನ್ನು ಹೊರಗೆ ಕರೆದುಕೊಂಡು ಬಂದ ನಂತರ, ಮೈದಾನದ ಭದ್ರತಾ ಸಿಬ್ಬಂದಿಗಳೆಲ್ಲರೂ ಸೇರಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಇನ್ನು ಮೈದಾನದ ಭದ್ರತೆಗೆ ಇರುವ ಸಿಬ್ಬಂದಿಗೆ ಹಲ್ಲೆ ಮಾಡುವ ಅಧಿಕಾರ ಯಾರು ಕೊಟ್ಟಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ. 

Scroll to load tweet…

ಈ ಪ್ರಕರಣದಲ್ಲಿ ಡಿ.ಎನ್.ಎ. ನೆಟ್ ವರ್ಕ್ ಪ್ರೈವೇಟ್ ಲಿಮಿಟೆಡ್. ಕೆಎಸ್‌ಸಿಎ ಅಧ್ಯಕ್ಷರು, ಕಾರ್ಯದರ್ಶಿ, ಗೌಂಡ್ ಇನ್‌ಚಾರ್ಜ್, ಬಾಡಿಗಾರ್ಡ್, ಪೊಲೀಸ್ ಇಲಾಖೆಯನ್ನು ವಿಚಾರಣೆಗೆ ಒಳಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಅನುಸಾರ ಮೈದಾನಕ್ಕೆ ನುಗ್ಗಿದ ಅಭಿಮಾನಿ ಯಾರು? ಹಲ್ಲೆಯ ನಂತರ ಅವರ ಸ್ಥಿತಿ ಹೇಗಿದೆ? ದೈಹಿಕವಾಗಿ ಲಕ್ಷಾಂತರ ಜನರು ಇರುವ ಮೈದಾನದ ಆವರಣದಲ್ಲಿ ಯುವಕನ ಮೇಲೆ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿರುವ ಅನಾಮಧೇಯ ವ್ಯಕ್ತಿಗಳು ಯಾರು? ಹಲ್ಲೆಗೆ ಒಳಗಾದ ನಂತರ ಆ ಯುವಕನಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ವೈದ್ಯಕೀಯ ಸೌಲಭ್ಯ ನೀಡಿದ್ದಾರಾ ಇಲ್ಲವಾ? ಎಂಬುದನ್ನು ಪತ್ತೆ ಮಾಡಬೇಕಿದೆ.

ಮೈದಾನದಲ್ಲೇ ವಿರಾಟ್ ಕೊಹ್ಲಿ ಕಾಲಿಗೆ ಬಿದ್ದಿದ್ದ ಅಭಿಮಾನಿಗೆ ಹಿಗ್ಗಾಮುಗ್ಗ ಥಳಿತ..! ವಿಡಿಯೋ ವೈರಲ್

ಜೊತೆಗೆ ಮಾನವ ಹಕ್ಕುಗಳನ್ನ ಉಲ್ಲಂಘನೆ ಮಾಡಿ ಹಲ್ಲೆ ಮಾಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿರವರ ಸೂಚನೆ ಇತ್ತಾ? ಇಲ್ಲವಾ? ಹಲ್ಲೆ ಮಾಡಿದವರ ಗುರುತು ಕೆಎಸ್‌ಸಿಎ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗೆ ಇದೆಯೇ? ಎಂಬುದನ್ನು ಪತ್ತೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಆಯೋಗದಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯುವಕನಿಗೆ ಹಲ್ಲೆ ಮಾಡಿರುವವರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಆರೋಪದಡಿ ಕಾನೂನು ರೀತಿಯ ಮನೆಗೆಳುವುದರ ಜೊತೆಗೆ ಹಲ್ಲೆಗೆ ಒಳಗಾದ ಯುವಕನಿಗೆ ವೈದ್ಯಕೀಯ ವೆಚ್ಚವನ್ನು ಸರ್ಕಾರ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯವರೇ ಬರಿಸುವಂತೆ ವ್ಯವಸ್ಥೆ ಮಾಡಬೇಕು. ಈ ಮೂಲಕ ಯುವಕನಿಗೆ ನ್ಯಾಯ ಕೊಡಿಸಿ ಮಾನವ ಹಕ್ಕುಗಳನ್ನ ರಕ್ಷಿಸಬೇಕಾಗಿ ಮಾನವೀಯತೆ ದೃಷ್ಟಿಯಿಂದ ತಮ್ಮಲ್ಲಿ ದೂರು ನೀಡುತ್ತಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ಮರಿಲಿಂಗಗೌಡ ಮಾಲಿಪಾಟೀಲ್ ಅವರು ಮಾನವ ಹಕ್ಕುಗಳಿಗೆ ದೂರು ದಾಖಲಿಸಿದ್ದಾರೆ.