ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಜಯಿಸುತ್ತಿದ್ದಂತೆಯೇ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಪರೂಪದ ಸಾಧನೆ ಮಾಡಿದೆ.ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಚೆನ್ನೈ: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ 280 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವು 1-0 ಮುನ್ನಡೆ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 1932ರ ಬಳಿಕ ಅಂದರೆ 92 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.
ಹೌದು, ಚೆಪಾಕ್ ಮೈದಾನದಲ್ಲಿ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯ ಗೆಲ್ಲುತ್ತಿದ್ದಂತೆಯೇ, 92 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವು ಸೋಲಿನ ಸಂಖ್ಯೆಗಿಂತ ಗೆಲುವಿನ ಸಂಖ್ಯೆಯನ್ನು ಇದೇ ಮೊದಲ ಬಾರಿಗೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತ ಕ್ರಿಕೆಟ್ ತಂಡವು 1932ರಲ್ಲಿ ಸಿಕೆ ನಾಯ್ಡು ನಾಯಕತ್ವದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ 158 ರನ್ ಅಂತರದ ಸೋಲು ಅನುಭವಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಗೆದ್ದಿದ್ದಕ್ಕಿಂತ ಸೋತ ಸಂಖ್ಯೆಯೇ ಹೆಚ್ಚಾಗಿತ್ತು.
ಚೆನ್ನೈನಲ್ಲಿ ಭಾರತದ ಬೋನಿಗೆ ಬಿದ್ದ ಬಾಂಗ್ಲಾ ಹುಲಿಗಳು; 6 ಬಲಿ ಪಡೆದ ರವಿಚಂದ್ರನ್ ಅಶ್ವಿನ್
ಭಾರತ ಕ್ರಿಕೆಟ್ ತಂಡವು ಇಂದಿನ ಪಂದ್ಯವೂ ಸೇರಿದಂತೆ ಇದುವರೆಗೂ 581 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ಪೈಕಿ ಭಾರತ ಇದೀಗ 179ನೇ ಟೆಸ್ಟ್ ಗೆಲುವು ಸಾಧಿಸಿದೆ. ಇನ್ನು 178 ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸೋಲಿನ ಕಹಿಯುಂಡಿದೆ. ಇನ್ನು 222 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದ್ದರೇ, ಒಂದು ಪಂದ್ಯ ಟೈನಲ್ಲಿ ಕೊನೆಯಾಗಿತ್ತು.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಗೆಲುವು ಸಾಧಿಸಿದ ತಂಡಗಳಲ್ಲಿ ಇದೀಗ ಭಾರತ ಜಂಟಿ ಮೂರನೇ ಸ್ಥಾನ ಹಂಚಿಕೊಂಡಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಗೆಲುವು- ಸೋಲು ಕಂಡ ಟಾಪ್ 5 ತಂಡಗಳು ಯಾವುವು ನೋಡೋಣ ಬನ್ನಿ
1. ಆಸ್ಟ್ರೇಲಿಯಾ: ಗೆಲುವು 414, ಸೋಲು 232
2. ಇಂಗ್ಲೆಂಡ್: ಗೆಲುವು 397, ಸೋಲು 325
3. ದಕ್ಷಿಣ ಆಫ್ರಿಕಾ: ಗೆಲುವು 179, ಸೋಲು 161
4. ಭಾರತ: ಗೆಲುವು 179, ಸೋಲು 178
5. ಪಾಕಿಸ್ತಾನ: ಗೆಲುವು 148, ಸೋಲು 144
ಇನ್ನು ಚೆನ್ನೈ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ರವಿಚಂದ್ರನ್ ಅಶ್ವಿನ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 376 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಬಾಂಗ್ಲಾದೇಶ ತಂಡವು ಬುಮ್ರಾ ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 149 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ದ್ವಿತೀಯ ಇನಿಂಗ್ಸ್‌ನಲ್ಲಿ ಶುಭ್‌ಮನ್ ಗಿಲ್ ಹಾಗೂ ರಿಷಭ್ ಪಂತ್ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಭಾರತ 4 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇನ್ನು 515 ರನ್‌ಗಳ ಕಠಿಣ ಗುರಿ ಪಡೆದ ಬಾಂಗ್ಲಾದೇಶ ತಂಡವು ಅಶ್ವಿನ್ ದಾಳಿಗೆ ತತ್ತರಿಸಿ ಕೇವಲ 234 ರನ್‌ಗಳಿಗೆ ಸರ್ವಪತನ ಕಂಡಿತು. ಅಶ್ವಿನ್ 6 ವಿಕೆಟ್ ಕಬಳಿಸಿದರೆ, ಜಡೇಜಾ 3 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
