ರೆಪೋ ದರ ಕಡಿತ: ಇದೆಯಾ ತಿಳಿದುಕೊಳ್ಳುವ ತುಡಿತ?

ಪಾಲಿಸಿ ರೆಪೋ ದರ 25 ಬೇಸಿಸ್ ಪಾಯಿಂಟ್‌ ಕಡಿತ| ರೆಪೋ ದರ ಶೇ. 5.75ಕ್ಕೆ ಇಳಿಕೆ ಮಾಡಿದ ಕೇಂದ್ರ ಬ್ಯಾಂಕ್| ಮಹತ್ವದ ನಿರ್ಧಾರ ಪ್ರಕಟಿಸಿದ RBI ಗವರ್ನರ್ ಶಕ್ತಿಕಾಂತ್ ದಾಸ್| ರೆಪೋ ದರ ಎಂದರೇನು ಎಂಬ ತಿಳುವಳಿಕೆ ಅಗತ್ಯ| RBI ತನ್ನ ಅಧೀನ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ| ರೆಪೋ ದರ ಕಡಿಮೆಯಾದರೆ ಗ್ರಾಹಕನಿಗೆ ನೇರ ಲಾಭ| ರೆಪೋ ದರ ಕಡಿತದಿಂದ ದೇಶದ ಅರ್ಥ ವ್ಯವಸ್ಥೆ ಮೇಲಾಗುವ ಪರಿಣಾಮ ಏನು?|   

Why RBI Cuts Its Repo Rate and What Impact It Could Make To Economy

ಬೆಂಗಳೂರು(ಜೂ.06): ಪಾಲಿಸಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿರುವ RBI, ಶೇ. 5.75ಕ್ಕೆ ಇಳಿಸಿ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದೆ. ಮುಂಬೈನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ RBI ಗವರ್ನರ್ ಶಕ್ತಿಕಾಂತ್ ದಾಸ್, ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಆದರೆ ರೆಪೋ ಎಂದರೇನು? ಅದರ ಕಡಿತದಿಂದಾಗುವ ಪರಿಣಾಮಗಳೇನು? ಜನಸಾಮಾನ್ಯರಿಗೆ ಇದರಿಂದಾಗುವ ಲಾಭವೇನು? ಎಂಬುದರ ಕುರಿತು ಬಹುತೇಕರಿಗೆ ತಿಳುವಳಿಕೆ ಇಲ್ಲವಾಗಿದೆ.

RBI ರೆಪೋ ದರ ಕಡಿತಗೊಳಿಸುವುದು ನೇರವಾಗಿ ಬ್ಯಾಂಕ್ ಗ್ರಾಹಕನಿಗೆ ಸಂಬಂಧಪಡದಿದ್ದರೂ, ತಾನು ವ್ಯವಹರಿಸುವ ಬ್ಯಾಂಕ್ ಜೊತೆಗಿನ RBI ಸಂಬಂಧದ ಕುರಿತು ತಿಳಿದುಕೊಳ್ಳುವುದು ಅವಶ್ಯಕ.

ರೆಪೋ ದರ ಎಂದರೇನು?:
ರೆಪೋ ದರ ಎಂದರೆ ರೀಪರ್ಚೇಸ್ ರೇಟ್ (ಮರುಕೊಳ್ಳುವ ದರ) ಎಂದಾಗುತ್ತದೆ. RBI ತನ್ನ ಅಧೀನ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿಗೆ ರೆಪೋ ದರ ಎಂದು ಕರೆಯಲಾಗುತ್ತದೆ. 

ಇದು ಹಣಕಾಸಿನ ವಹಿವಾಟಿನಲ್ಲಿ ಒಂದು ಮುಖ್ಯವಾದ ಅಂಶವಾಗಿದ್ದು, ಬ್ಯಾಂಕ್‌ಗಳು ತಮ್ಮ ಅವಶ್ಯಕತೆಗನುಗುಣವಾಗಿ RBIನಿಂದ ಸಾಲ ಪಡೆಯುತ್ತವೆ. ಇದಕ್ಕೆ RBI ಕಾಲ ಕಾಲಕ್ಕೆ ನಿರ್ದಿಷ್ಟ ಬಡ್ಡಿ ವಿಧಿಸುತ್ತದೆ. ಕೇಂದ್ರ ಬ್ಯಾಂಕ್ ರೆಪೋ ದರ ಕಡಿತಗೊಳಿಸಿದಾಗ ಸಹಜವಾಗಿ ಅಧೀನ ಬ್ಯಾಂಕ್‌ಗಳು ಗೃಹ ಸಾಲ ಸೇರಿದಂತೆ ಇತರ ಸಾಲಗಳ ಮೇಲಿನ ಬಡ್ಡಿದರವನ್ನು ಕಡಿತ ಮಾಡುತ್ತವೆ.

ಇದು ಬಹುತೇಕವಾಗಿ ಗ್ರಾಹಕನೋರ್ವ ಬ್ಯಾಂಕ್ ಜೊತೆಗೆ ಹೊಂದಿರುವ ಸಂಬಂಧದಂತೆಯೇ ಇರುತ್ತದೆ. ಉದಾಹರಣೆಗೆ ಗ್ರಾಹಕ ಬ್ಯಾಂಕ್‌ನಿಂದ ಸಾಲ ಪಡೆದಾಗ ಬ್ಯಾಂಕ್ ಇಂತಿಷ್ಟು ಬಡ್ಡಿ ವಿಧಿಸುತ್ತದೆ. ಇದು RBI ರೆಪೋ ದರದ ಮೇಲೆಯೇ ಅವಲಂಬಿತವಾಗಿರುತ್ತದೆ. ರೆಪೋ ದರ ಕಡಿತಗೊಂಡಾಗ ಸಹಜವಾಗಿ ಬ್ಯಾಂಕ್‌ಗಳು ಕೂಡ ತಮ್ಮ ವಿವಿಧ ಸಾಲಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುತ್ತವೆ.

ಜನಸಾಮಾನ್ಯರಿಗೆ ಏನು ಲಾಭ?:

ಈ ಮೊದಲೇ ಹೇಳಿದಂತೆ RBI ತನ್ನ ರೆಪೋ ದರ ಇಳಿಸಿದರೆ ಬ್ಯಾಂಕ್‌ಗಳು ಕೂಡ ತಮ್ಮ ಬಡ್ಡಿದರ ಕಡಿಮೆ ಮಾಡುತ್ತವೆ. ಅದರಂತೆ ಇದು ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ. ರೆಪೋ ದರ ಕಡಿತದಿಂದಾಗುವ ಲಾಭವನ್ನು ಬ್ಯಾಂಕ್‌ಗಳು ತಮ್ಮ ಗ್ರಾಹಕರೊಂದಿಗೆ ಹಂಚಿಕೊಳ್ಳುತ್ತವೆ.

ಇದರಿಂದ  ಸಹಜವಾಗಿ ಬ್ಯಾಂಕ್‌ಗಳ ಜೊತೆ ಗ್ರಾಹಕನ ವಹಿವಾಟು ಹೆಚ್ಚುತ್ತದೆ ಮತ್ತು ಇಬ್ಬರೂ ಲಾಭದ ಮೇಲಿನ ಸಮಾನ ಹಕ್ಕುದಾರರಾಗಿರುತ್ತಾರೆ. 

ಆರ್ಥಿಕತೆ ಮೇಲಾಗುವ ಪರಿಣಾಮ?:

RBI ರೆಪೋ ದರ ಕಡಿತ ನಿರ್ಧಾರ ಬ್ಯಾಂಕ್‌ಗಳು ಮತ್ತು ಗ್ರಾಹಕನಿಗೆ ಲಾಭ ತಂದುಕೊಡಬಲ್ಲದು. ಆದರೆ ಇದು ಆರ್ಥಿಕತೆ ಮೇಲೆ ಕೊಂಚ ಮಟ್ಟಿಗಿನ ದುಷ್ಪರಿಣಾಮ ಬೀರುವುದು ಸುಳ್ಳಲ್ಲ. ಆದರೆ ಜನಸಾಮಾನ್ಯನ ಒಳಿತಿಗಾಗಿ RBI ಇಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತದೆ.

ಹಾಗೆಂದ ಮಾತ್ರಕ್ಕೆ ಇದರಿಂದ ಆರ್ಥಿಕತೆಗೆ ಪೆಟ್ಟು ಬೀಳುತ್ತದೆ ಎಂದು ಭಾವಿಸಬೇಕಿಲ್ಲ. ಕಾರಣ ರೆಪೋ ದರ ಕಡಿತದಿಂದಾಗಿ ಬ್ಯಾಂಕ್‌ಗಳು ವೈಯಕ್ತಿಕ ಸಾಲ, ಗೃಹ ಸಾಲ, ಉದ್ದಿಮೆ ಸಾಲದ ಮೇಲಿನ ಬಡ್ಡಿದರ ಕಡಿತಗೊಳಿಸುತ್ತವೆ. ಇದರಿಂದ ಸಹಜವಾಗಿ ಬ್ಯಾಂಕ್‌ಗಳಲ್ಲಿ ಸಾಲದ ವಹಿವಾಟು ಅಧಿಕಗೊಳ್ಳುತ್ತದೆ. 

ಅಲ್ಲದೇ ಪಡೆದ ಸಾಲದಿಂದ ಗ್ರಾಹಕ ಮಾಡುವ ವ್ಯವಹಾರ ಕೂಡ ದೇಶದ ಆರ್ಥಿಕತೆಯ ಜೋಳಿಗೆ ತುಂಬಿಸುವುದರಿಂದ, RBI ರೆಪೋ ದರ ಕಡಿತದಿಂದ ದೀರ್ಘಾವಧಿಯ ಪರಿಣಾಮಗಳು ಸಕಾರಾತ್ಮಕವಾಗಿರುತ್ತದೆ ಎಂದು ಹೇಳಬಹುದು.

Latest Videos
Follow Us:
Download App:
  • android
  • ios