Asianet Suvarna News Asianet Suvarna News

ಸುಳ್ಳು ಮಾಹಿತಿ ನೀಡುವಲ್ಲಿ ಭಾರತ ನಂ.1, WEF ವರದಿಗೆ ಭಾರತೀಯರ ಆಕ್ರೋಶ;ತಪ್ಪು ಭೂಪಟ ಪ್ರಕಟಿಸಿದ್ದಕ್ಕೂ ಕ್ಲಾಸ್

ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್ ) ತನ್ನ ವರದಿಯಲ್ಲಿ ತಪ್ಪು ಮಾಹಿತಿಗಳನ್ನು ನೀಡುವ ರಾಷ್ಟ್ರಗಳ ಪೈಕಿ ಭಾರತಕ್ಕೆ ನಂ.1 ಸ್ಥಾನ ನೀಡಿರೋದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಈ ವರದಿ ಜೊತೆಗೆ ಪ್ರಕಟಿಸಿರುವ ಗ್ರಾಫಿಕ್ಸ್ ನಲ್ಲಿ ಭಾರತದ ತಪ್ಪು ನಕ್ಷೆ ಪ್ರಕಟಿಸಿರೋದು ಭಾರತೀಯರ ಕೋಪವನ್ನು ಹೆಚ್ಚಿಸಿದೆ. 

WEF under fire for ranking India as No1 country in misinformation backlash after graphic shows incorrect map anu
Author
First Published Jan 24, 2024, 5:21 PM IST

ನವದೆಹಲಿ (ಜ.24): ವಿಶ್ವ ಆರ್ಥಿಕ ವೇದಿಕೆಯ ( ಡಬ್ಲ್ಯುಇಎಫ್ ) 2024ನೇ ಜಾಗತಿಕ ಅಪಾಯಗಳ ವರದಿಯಲ್ಲಿ ಭಾರತದ ವಿರುದ್ಧ ಮಾಡಿರುವ ಆರೋಪಗಳ ಕುರಿತು ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಈ ವಿವಾದಾತ್ಮಕ ವರದಿಯಲ್ಲಿ ಸುಳ್ಳು ಮಾಹಿತಿ ನೀಡುವ ರಾಷ್ಟ್ರಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ ನೀಡಲಾಗಿದೆ. ಈ ಬಗ್ಗೆ ಭಾರತೀಯ ನಾಗರಿಕರಲ್ಲಿ ಹೊಗೆಯಾಡುತ್ತಿರುವ ಅಸಮಾಧಾನಕ್ಕೆ ವಿಶ್ವ ಆರ್ಥಿಕ ವೇದಿಕೆ ಬಿಡುಗಡೆಗೊಳಿಸಿರುವ ಭಾರತದ ತಪ್ಪು ಭೂಪಟ (ಮ್ಯಾಪ್) ಇನ್ನಷ್ಟು ತುಪ್ಪ ಸುರಿದಿದೆ. ಭಾರತದಲ್ಲಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಡಬ್ಲ್ಯುಇಎಫ್  2024ನೇ ಸಾಲಿನ ಜಾಗತಿಕ ಅಪಾಯಗಳ ವರದಿ ಸುಳ್ಳು ಮಾಹಿತಿ ಹಾಗೂ ತಪ್ಪು ಮಾಹಿತಿಗಳನ್ನು ನೀಡುತ್ತಿರುವ ನಂ.1 ರಾಷ್ಟ್ರ ಭಾರತ ಎಂದು ಹೆಸರಿಸುವ ಮೂಲಕ ವಿವಾದ ಹುಟ್ಟು ಹಾಕಿದೆ. 1,490 ತಜ್ಞರ ಅಭಿಪ್ರಾಯಗಳನ್ನು ಆಧರಿಸಿ ರೂಪಿಸಿರುವ ಈ ವರದಿ ಭಾರತೀಯರನ್ನು ಕೆರಳಿಸಿದೆ.  ಸುಳ್ಳು ಮಾಹಿತಿಗಳನ್ನು ನೀಡಲು ತಮ್ಮ ದೇಶವನ್ನು ಮುಖ್ಯಕೇಂದ್ರ ಎಂಬಂತೆ ಬಿಂಬಿಸಿರುವ ವರದಿ ಬಗ್ಗೆ ಭಾರತೀಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಗತ್ತಿನಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಪ್ಪು ಹಾಗೂ ಸುಳ್ಳು ಮಾಹಿತಿಗಳ ಅಪಾಯ ಹೆಚ್ಚುತ್ತಿದೆ ಎಂದು ಡಬ್ಲ್ಯುಇಎಫ್ (WEF)ವರದಿ ತಿಳಿಸಿದೆ. ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಗಳನ್ನು ಹಾಗೂ ದಿಕ್ಕುತಪ್ಪಿಸುವ ವಿಚಾರಗಳನ್ನು ಹರಡಲಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ. ಭಾರತವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಈ ಅಪಾಯಗಳು ಸೈಬರ್ ಭದ್ರತೆ, ಮಾಲಿನ್ಯ, ನಿರುದ್ಯೋಗ, ಉಗ್ರವಾದಿಗಳ ದಾಳಿ, ಸೋಂಕುಕಾರಕ ಕಾಯಿಲೆಗಳು, ಅನಧಿಕೃತ ಆರ್ಥಿಕ ಚಟುವಟಿಕೆಗಳು, ಸಂಪತ್ತಿನ ಅಸಮಾನತೆ ಹಾಗೂ ಕಾರ್ಮಿಕರ ಕೊರತೆ ಸೇರಿದಂತೆ 34 ಇತರ ಅಪಾಯಗಳಿಗಿಂತ ಹೆಚ್ಚಿದೆ ಎಂದು ಈ ವರದಿ ಅಭಿಪ್ರಾಯಪಟ್ಟಿದೆ. 

ಡಬ್ಲ್ಯುಇಎಫ್  ವರದಿಯಲ್ಲಿ ಏನಿದೆ?
ಈ ವರದಿಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಎದುರಾಗಬಹುದಾದ ಅತ್ಯಂತ ಗಂಭೀರ ಜಾಗತಿಕ ಸವಾಲುಗಳನ್ನು ಅವಲೋಕಿಸಲಾಗಿದೆ. ಸುಮಾರು ಮೂರು ಶತಕೋಟಿ ಜನರು ವಿವಿಧ ಆರ್ಥಿಕತೆಗಳಲ್ಲಿ ಮತದಾನಗಳನ್ನು ಮಾಡಲಿದ್ದಾರೆ. ಬಾಂಗ್ಲಾದೇಶ, ಭಾರತ, ಇಂಡೋನೇಷ್ಯಾ, ಮಿಕ್ಸಿಕೋ, ಪಾಕಿಸ್ತಾನ, ಇಂಗ್ಲೆಂಡ್ ಹಾಗೂ ಅಮೆರಿಕ ಸೇರಿದಂತೆ ಅನೇಕ ಆರ್ಥಿಕತೆಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಸುಳ್ಳು ಹಾಗೂ ತಪ್ಪು ಮಾಹಿತಿಗಳನ್ನು ದೊಡ್ಡ ಪ್ರಮಾಣದಲ್ಲಿ ಪಸರಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಇನ್ನು ಈ ವರದಿಯಲ್ಲಿ ಮುಂದುವರಿದ ತಂತ್ರಜ್ಞಾನ ಸುಳ್ಳು ಮಾಹಿತಿಗಳ ಹೊಸ ಯುಗವನ್ನೇ ಸೃಷ್ಟಿಸಲಿದೆ ಎಂದು ಅಭಿಪ್ರಾಯಪಟ್ಟಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ತಪ್ಪು ಮಾಹಿತಿಗಳ ಆಂದೋಲನ ಹೆಚ್ಚಲಿದೆ ಎಂದು ವರದಿ ತಿಳಿಸಿದೆ.

ಭಾರತದ ಬಗ್ಗೆ ಏನಿದೆ?
1.4 ಶತಕೋಟಿಗಿಂತಲೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಂತಹ ರಾಷ್ಟ್ರದಲ್ಲಿ 2024ನೇ ಸಾಲಿನಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದೆ. ಈ ಚುನಾವಣೆ ಏಪ್ರಿಲ್ ಹಾಗೂ ಮೇ ನಡುವೆ ನಡೆಯುವ ಸಾಧ್ಯತೆಯಿದೆ. ಡಬ್ಲ್ಯುಇಎಫ್ ವರದಿ ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ದಿಕ್ಕುತಪ್ಪಿಸುವ ತಪ್ಪು ಮಾಹಿತಿಗಳ ಆಂದೋಲನ ದೊಡ್ಡ ಬೆದರಿಕೆಯಾಗಲಿದೆ ಎಂದು ವರದಿ ಹೇಳಿದೆ. ಅಲ್ಲದೆ, ಒಂದು ವೇಳೆ ಚುನಾವಣೆಯ ವಿಶ್ವಾಸಾರ್ಹತೆ ಪ್ರಶ್ನಿಸಿದರೆ, ನಾಗರಿಕ ಯುದ್ಧ ಎದುರಾಗುವ ಸಾಧ್ಯತೆಯಿದೆ ಹಾಗೂ ಆಂತರಿಕ ಸಂಘರ್ಷಗಳು ಹಾಗೂ ಭಯೋತ್ಪಾದನೆ ಕೂಡ ಹೆಚ್ಚಲಿದೆ. ಗಂಭೀರ ಪ್ರಕರಣಗಳಲ್ಲಿ ಸರ್ಕಾರ ಬೀಳುವ ಸಾಧ್ಯತೆ ಕೂಡ ಇದೆ ಎಂದು ವರದಿ ತಿಳಿಸಿದೆ.

ಭಾರತದ ತಪ್ಪು ಭೂಪಟ ಪ್ರಕಟಿಸಿದ ಡಬ್ಲ್ಯುಇಎಫ್ 
ಇನ್ನು ಈ ವರದಿ ಜೊತೆಗೆ ಪ್ರಕಟಿಸಿರುವ 'ಎಲ್ಲಿ ತಪ್ಪು ಮಾಹಿತಿಗಳು ಅತೀದೊಡ್ಡ ಅಪಾಯ ಸೃಷ್ಟಿಸುತ್ತಿವೆ' ಎಂಬ ಶೀರ್ಷಿಕೆಯ  ಗ್ರಾಫ್ ಕೂಡ ವೈರಲ್ ಆಗಿದ್ದು, ಇದರಲ್ಲಿರುವ ಭಾರತದ ಭೂಪಟ ತಪ್ಪಾಗಿರೋದು ಭಾರತೀಯರ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಿದೆ. 

ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಹೆಸರಲ್ಲಿ 1.63 ಲಕ್ಷ ರೂ. ವಂಚನೆ: ಈಗ್ಲೇ ನಿಮ್ಮ ಬಾಂಡ್ ಪೇಪರ್ ಪರಿಶೀಲಿಸಿ

ಭಾರತೀಯರ ಆಕ್ರೋಶ 
ಡಬ್ಲ್ಯುಇಎಫ್ ತನ್ನ ವರದಿಯಲ್ಲಿ ಭಾರತವನ್ನು ಬಿಂಬಿಸಿರುವ ರೀತಿ ಹಾಗೂ ತಪ್ಪು ಮ್ಯಾಪ್ ಪ್ರಕಟಿಸಿರೋದಕ್ಕೆ ಭಾರತೀಯರು 'ಎಕ್ಸ್'ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. 'ಡಬ್ಲ್ಯುಇಎಫ್ ಏನು ಎಂಬುದು ನಮಗೆ ಗೊತ್ತು. ಇದು ಸುಳ್ಳು ಮಾಹಿತಿ ಹಾಗೂ ದಿಕ್ಕುತಪ್ಪಿಸುವವರ ತಾಯಿ. ಚುನಾಯಿತರಾಗದ ಕೆಲವು ಶ್ರೀಮಂತರ ಗುಂಪಿನಿಂದ ಇದು ಜಗತ್ತನ್ನು ದಿಕ್ಕು ತಪ್ಪಿಸುತ್ತಿದೆ' ಎಂದು 'ಎಕ್ಸ್' ಬಳಕೆದಾರರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. 'ಡಬ್ಲ್ಯುಇಎಫ್ ತಪ್ಪು ಮಾಹಿತಿ ನೀಡಿದೆ' ಎಂದು ಇನ್ನೊಬ್ಬ 'ಎಕ್ಸ್' ಬಳಕೆದಾರರು ತಿಳಿಸಿದ್ದಾರೆ. 

Follow Us:
Download App:
  • android
  • ios