ಅಮೆರಿಕ-ಇರಾನ್ ಮಧ್ಯೆ ಯುದ್ಧ ನಡೆದರೆ ಭಾರತದಲ್ಲಿ ತೈಲಬೆಲೆ ಗಗನಕ್ಕೆ!
ಇರಾಕ್‌ನ ರಾಜಧಾನಿ ಬಾಗ್ದಾದ್‌ನಲ್ಲಿನ ಅಮೆರಿಕದ ರಾಯಭಾರ ಕಚೇರಿ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಹಾಗೂ ಮತ್ತಷ್ಟುಅಮೆರಿಕನ್ನರನ್ನು ಕೊಲ್ಲುವ ಸಂಚಿನ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಿರುವುದಾಗಿ ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.
ಅಮೆರಿಕ-ಇರಾನ್ ಶತ್ರುತ್ವ ಮತ್ತೊಂದು ಮಜಲಿಗೆ ತಲುಪುವ ಲಕ್ಷಣಗಳು ಕಾಣಿಸುತ್ತಿವೆ. ತನ್ನ ರಕ್ಷಣಾ ಪಡೆಯ ಕಮಾಂಡರ್‌ನನ್ನು ಹತ್ಯೆಗೈದ ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ. ಈ ಮಧ್ಯೆ ಇರಾನ್ ಸುತ್ತಮುತ್ತಲ ರಾಷ್ಟ್ರಗಳಿಗೆ ಅಮೆರಿಕ ಸೇನೆಯನ್ನೂ ರವಾನಿಸಿದೆ.
ಈ ಬೆಳವಣಿಗೆ ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ. ಅಮೆರಿಕ-ಇರಾನ್ ಮಧ್ಯೆ ಹಠಾತ್ ಯುದ್ಧದ ವಾತಾವರಣ ಉಂಟಾಗಿದ್ದು ಹೇಗೆ? ಸುಲೈಮಾನಿ ಯಾರು? ಅಮೆರಿಕದ ದಾಳಿಗೆ ಕಾರಣ ಏನು? ಇದರಿಂದ ಭಾರತದ ಮೇಲಾಗುವ ಪರಿಣಾಮ ಏನು? ಹಿಂದೊಮ್ಮೆ ಸ್ನೇಹಿತರಾಗಿದ್ದ ಇರಾನ್-ಅಮೆರಿಕ ಬದ್ಧ ವೈರಿಗಳಾಗಿದ್ದು ಹೇಗೆ ಇತ್ಯಾದಿ ಮಾಹಿತಿ ಇಲ್ಲಿದೆ.
ಅಮೆರಿಕ ವಿರುದ್ಧ ಇರಾನ್ ಸೈಬರ್ ಸಮರ ಶುರು, ವೆಬ್ ಸೈಟ್ ಹ್ಯಾಕ್!
ಸೇನಾ ಮುಖ್ಯಸ್ಥನ ಹತ್ಯೆಯಿಂದ ಪ್ರಕ್ಷುಬ್ಧತೆ ಭುಗಿಲು
ಶುಕ್ರವಾರ ಮುಂಜಾನೆ ಅಮೆರಿಕದ ಪಡೆಗಳು ಬಾಗ್ದಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು. ಈ ವೇಳೆ ಕಾರಿನಲ್ಲಿದ್ದ ಸೇನಾ ಮುಖ್ಯಸ್ಥ ಸುಲೈಮಾನಿ ಹಾಗೂ ಸೇನೆಯ ಉಪ ಮುಖ್ಯಸ್ಥ ಅಬು ಮಹದ್ರಿ ಅಲ್ ಮುಹಣದಿಸ್ ಇಬ್ಬರೂ ಬಲಿಯಾಗಿದ್ದಾರೆ. ಸೇನಾ ಮುಖ್ಯಸ್ಥರ ಸಾವಿಗೆ ತೀಕ್ಷ$್ಣ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಸಂಕಲ್ಪ ಮಾಡಿದೆ. ಇಲ್ಲಿಂದ ಮಧ್ಯಪ್ರಾಚ್ಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
3 ನೇ ಮಹಾಯುದ್ಧ: ಇರಾನ್- ಅಮೆರಿಕಾ ರಣಕಹಳೆಗೆ ವಿಶ್ವವೇ ವಿಲವಿಲ!
ಅಮೆರಿಕ ದಾಳಿ ನಡೆಸಿದ್ದು ಏಕೆ?
ಇರಾಕ್‌ನ ರಾಜಧಾನಿ ಬಾಗ್ದಾದ್‌ನಲ್ಲಿನ ಅಮೆರಿಕದ ರಾಯಭಾರ ಕಚೇರಿ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಹಾಗೂ ಮತ್ತಷ್ಟುಅಮೆರಿಕನ್ನರನ್ನು ಕೊಲ್ಲುವ ಸಂಚಿನ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಿರುವುದಾಗಿ ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಕೆಲವೇ ದಿನಗಳ ಹಿಂದೆ ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯೊಳಕ್ಕೆ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದ್ದರು.
ಅಮೆರಿಕದ ದಾಳಿಗೆ ಇರಾನ್ ಬೆಂಬಲಿತ ಶಿಯಾ ಬಂಡುಕೋರ ಸಂಘಟನೆ ಕತೈಬ್ ಹಿಜ್ಬುಲ್ಲಾದ 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿದ್ದ ಪ್ರತಿಭಟನಾಕಾರರು ರಾಯಭಾರ ಕಚೇರಿಯ ಕಾಂಪೌಂಡ್‌ಗೆ ಬೆಂಕಿ ಇಟ್ಟಿದ್ದರು. ಅಲ್ಲದೆ ಇರಾಕ್‌ನಲ್ಲಿರುವ ಅಮೆರಿಕ ಪಡೆಗಳ ಮೇಲೆ ಕಳೆದ ಹಲವು ತಿಂಗಳಿಂದ ದಾಳಿ ನಡೆದಿದ್ದವು. ಹಾಗಾಗಿ ಅಮೆರಿಕ ಪ್ರತೀಕಾರ ತೆಗೆದುಕೊಂಡಿದೆ.
ಸುಲೈಮಾನಿ ಸಾವು ಇರಾನ್‌ಗೆ ಏಕೆ ಅಷ್ಟು ಮುಖ್ಯ?
ಜನರಲ್ ಖಾಸಿಮ್ ಸುಲೈಮಾನಿ ಇರಾನ್‌ನ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್‌ಜಿಸಿ)’ ಕ್ವಾಡ್ಸ್ ಫೋರ್ಸ್ ಘಟಕದ ಮುಖ್ಯಸ್ಥ. ಇದು ಇರಾನ್‌ನ ಆಂತರಿಕ ರಾಜಕೀಯ ವ್ಯವಸ್ಥೆಯನ್ನು ರಕ್ಷಿಸಲು ಇರುವ ಸೇನಾಪಡೆ. ಇದಲ್ಲದೆ ಬೇಹುಗಾರಿಕೆ ನಡೆಸುವ ಜೊತೆಗೆ ವಿದೇಶಿ ಭಯೋತ್ಪಾದಕ ಸಂಘಟನೆಗಳಿಗೆ ರಕ್ಷಣೆ ನೀಡುವ ‘ಖುದ್‌್ಸ’ ಪಡೆಗೂ ಸುಲೈಮಾನಿ ಮುಖ್ಯಸ್ಥರಾಗಿದ್ದರು. ಈ ಪಡೆಯನ್ನು ಹಿಂದೆ ಅಮೆರಿಕವು ವಿದೇಶಿ ಭಯೋತ್ಪಾದಕ ಸಂಘಟನೆ ಎಂದೇ ಸಾರಿತ್ತು.
ಒಟ್ಟಾರೆ ಇರಾನ್‌ನ ಪ್ರಾದೇಶಿಕ ಭದ್ರತೆಯ ವಾಸ್ತುಶಿಲ್ಪಿ ಎಂದೇ ಖ್ಯಾತಿ ಪಡೆದವರು ಈ ಸುಲೈಮಾನ್. ಖಾಸಿಮ್ ಸುಲೈಮಾನಿ ಸೆಲೆಬ್ರಿಟಿ ಸೇನಾ ನಾಯಕನಾಗಿದ್ದು, ಆತ ದೇಶದ ಹೆಮ್ಮೆ ಎಂಬ ಭಾವನೆ ಇರಾನ್‌ನ ಜನರಲ್ಲಿದೆ. ಈ ಹೆಮ್ಮೆಯ ನಾಯಕನನ್ನು ಅಮೆರಿಕ ಕೊಂದಿರುವುದು ಇಡೀ ದೇಶದ ಜನರನ್ನು ಆಘಾತಕ್ಕೆ ಕೆಡವಿದೆ; ಅಲ್ಲದೆ ಅಮೆರಿಕ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.
1957 ರಲ್ಲಿ ಜನಿಸಿದ್ದ ಸುಲೈಮಾನಿ ತಂದೆಯ ಸಾಲ ತೀರಿಸಲು ಮೊದಮೊದಲು ಕಟ್ಟದ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. 1978ರಲ್ಲಿ ಶಾ ನನ್ನು ಕಿತ್ತೊಗೆಯಲು ಬಂಡಾಯ ನಡೆದಾಗ ಅದರಲ್ಲಿ ಸೇರಿಕೊಂಡು, 1980ರಲ್ಲಿ ಇರಾನ್‌ನ ಸೈನ್ಯ ಸೇರಿದರು. ಅನಂತರ ಸೇನಾ ಕಮಾಂಡ್‌ನಲ್ಲೂ ಶೀಘ್ರವಾಗಿ ಬೆಳೆದರು.
ಆಪ್ತ ರಾಷ್ಟ್ರಗಳೆರಡು ಕಡುವೈರಿಗಳಾಗಿದ್ದು ಹೇಗೆ?
ಹಿಂದೆ ಆಪ್ತ ಸ್ನೇಹಿತರಾಗಿದ್ದ ಅಮೆರಿಕ ಮತ್ತು ಇರಾನ್ ಈಗ ಬದ್ಧ ವೈರಿಗಳಾಗಿವೆ. ಹೌದು, 1953 ರಲ್ಲಿ ಅಮೆರಿಕ ಮತ್ತು ಬ್ರಿಟಿಷ್ ಗುಪ್ತಚರ ವಿಭಾಗದ ಬೆಂಬಲದಿಂದ ಶಾ ಮಹಮ್ಮದ್ ರೇಜಾ ಪಹ್ಲವಿ ನೇತೃತ್ವದಲ್ಲಿ ಇರಾನ್‌ನಲ್ಲಿ ದಂಗೆ ನಡೆದು ಮೊಸಾದಿಕ್ ಪದಚ್ಯುತಿಗೊಂಡರು. ಶಾ ಮಹಮ್ಮದ್ ಅಮೆರಿಕದ ಮಿತೃತ್ವ ಹೊಂದಿದ್ದರು. ಬಿಲಿಯನ್ ಡಾಲರ್ ಮೌಲ್ಯದ ಸಶಾತ್ರಸ್ತ್ರಗಳನ್ನು ಕೊಂಡುಕೊಂಡು ಸೋವಿಯತ್ ಯೂನಿಯನ್ ಮೇಲೆ ಇರಾನ್ ಮೂಲಕ ಬೇಹುಗಾರಿಕೆ ನಡೆಸಲು ಅಮೆರಿಕಕ್ಕೆ ಅವಕಾಶ ನೀಡಿದ್ದರು.
ಆದರೆ ಕಾಲ ಕಳೆದಂತೆ ಶಾ ರಾಜಕೀಯ ಅಸ್ತಿತ್ವ ಕಡಿಮೆಯಾಯಿತು. ಅಮೆರಿಕದ ಜೊತೆಗೆ ಶಾ ಅವರ ಸಂಬಂಧದ ಬಗ್ಗೆ ಧಾರ್ಮಿಕ ನಾಯಕ ಖೊಮೇನಿ ಚಳವಳಿ ಆರಂಭಿಸಿದರು. ಈ ಚಳವಳಿಯಿಂದಾಗಿ 1979ರಲ್ಲಿ ಶಾ ಅಧಿಕಾರ ಕಳೆದುಕೊಂಡು ದೇಶದಿಂದ ಪಾಲಾಯನಗೈದರು. 1979ರ ಇಸ್ಲಾಮಿಕ್ ಕ್ರಾಂತಿ ಮತ್ತು ಒತ್ತೆಯಾಳು ಬಿಕ್ಕಟ್ಟು ಅಮೆರಿಕ ಮತ್ತು ಇರಾನನ್ನು ದೂರ ಮಾಡಿತು. ಹಾಗೂ ಅದೇ ವರ್ಷ ಖೊಮೇನಿ ನೇತೃತ್ವದಲ್ಲಿ ಇರಾನ್, ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿತು. ಈ ಪ್ರಕ್ಷುಬ್ಧ ವಾತಾವರಣದಲ್ಲಿ ಇರಾನ್ ಜೊತೆಗಿನ ಎಲ್ಲಾ ಒಪ್ಪಂದಗಳನ್ನೂ ಅಮೆರಿಕ ರದ್ದುಪಡಿಸಿತು. ಇಲ್ಲಿಂದ ಉಭಯ ದೇಶಗಳ ನಡುವೆ ಸೇಡು, ಪ್ರತೀಕಾರ ಆರಂಭವಾಯಿತು.
ಇರಾನ್ ಮೇಲೆ ಅಮೆರಿಕದ ನಾನಾ ಅಸ್ತ್ರ ಪ್ರಯೋಗ
ಇರಾನ್ ಪುಟ್ಟರಾಷ್ಟ್ರವಾದರೂ ವಿಶ್ವದ ದಿಗ್ಗಜ ರಾಷ್ಟ್ರವಾದ ಅಮೆರಿಕಕ್ಕೆ ಸಡ್ಡು ಹೊಡೆಯುತ್ತಿದೆ. ಇರಾನ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ, ಅಣ್ವಸ್ತ್ರಗಳನ್ನು ತಯಾರಿಸುತ್ತಿದೆ ಮತ್ತು ಮಧ್ಯಪ್ರಾಚ್ಯದ ಶಾಂತಿಗೆ ಅಪಾಯ ಒಡ್ಡುತ್ತಿದೆ ಎಂದು ಅಮೆರಿಕ ಆಪಾದಿಸುತ್ತಲೇ ಬರುತ್ತಿದೆ. ಇರಾನ್‌ನ ಪರಮಾಣು ಕಾರ‍್ಯಕ್ಕೆ ಸಂಬಂಧಿಸಿದಂತೆ ಅಮೆರಿಕ, ರಷ್ಯಾ, ಫ್ರಾನ್ಸ್, ಜರ್ಮನಿ, ಬ್ರಿಟನ್ ಮತ್ತು ಚೀನಾ ಅಂತಾರಾಷ್ಟ್ರೀಯ ವಾಣಿಜ್ಯ ಆರ್ಥಿಕ ನಿರ್ಬಂಧ ಹೇರಿದ್ದವು.
2015 ರಲ್ಲಿ ಅದನ್ನು ತೆರವುಗೊಳಿಸಿದವು. ಆದಾಗ್ಯೂ ಇರಾನ್ ಕ್ಷಿಪಣಿಗಳ ತಯಾರಿಕೆಗೆ ಹಣ ವಿನಿಯೋಗಿಸುತ್ತಿದೆ ಎಂದು ಆಪಾದಿಸಲಾಗುತ್ತಿದೆ. ಜೊತೆಗೆ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತ, ಇರಾಕ್, ಚೀನಾ, ಇಟಲಿ ಜಪಾನ್ ದಕ್ಷಿಣ ಕೊರಿಯಾಗಳಿಗೆ ತನ್ನ ವ್ಯಾಪಾರ ವಹಿವಾಟಿನಲ್ಲಿ ಅಮೆರಿಕ ಹಲವು ನಿರ್ಬಂಧಗಳನ್ನು ವಿಧಿಸಿದೆ. ಈ ಮೂಲಕ ಇರಾನ್ ತೈಲ ರಫ್ತು ವಹಿವಾಟನ್ನು ಸಂಪೂರ್ಣ ಸ್ಥಗಿತಗೊಳಿಸಿ ಮಧ್ಯಪ್ರಾಚ್ಯದಲ್ಲಿ ಇರಾನ್‌ನ ಪ್ರಾಬಲ್ಯವನ್ನು ಕುಗ್ಗಿಸುವುದು ಅಮೆರಿಕದ ಉದ್ದೇಶ.
ನೇರ ಯುದ್ಧವೋ? ಪರೋಕ್ಷ ಯುದ್ಧವೋ?
ಹೇಳಿ ಕೇಳಿ ಅಮೆರಿಕ ವಿಶ್ವದ ಬಲಾಢ್ಯ ರಾಷ್ಟ್ರ. ಅಮೆರಿಕದ ಶಕ್ತಿಗೆ ಹೋಲಿಸಿದರೆ ಇರಾನ್ ಶಕ್ತಿ ಏನೇನೂ ಅಲ್ಲ. ಹಾಗಾಗಿ ಅಮೆರಿಕದ ಮೇಲೆ ಇರಾನ್ ನೇರ ಯುದ್ಧ ಘೋಷಿಸುವ ಸಾಧ್ಯತೆ ತೀರಾ ಕಡಿಮೆ. ಆದರೆ ಪರೋಕ್ಷವಾಗಿ ದಾಳಿ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ, ಸೈಬರ್ ದಾಳಿ ನಡೆಸುವ ಮೂಲಕ ಅಮೆರಿಕದ ಮೇಲೆ ಪ್ರತೀಕಾರ ತೀರಿಸಿಕೊಳ್ಳಬಹುದು. ಆದರೆ ಒಂದು ವೇಳೆ ಈ ಎರಡು ರಾಷ್ಟ್ರಗಳ ನಡುವೆ ಯುದ್ಧ ನಡೆದರೆ ಭಾರತಕ್ಕೆ ಮಾತ್ರ ಅಲ್ಲ, ಇಡೀ ಜಗತ್ತಿಗೇ ಅಪಾಯ ಕಾದಿದೆ. ಆದ್ದರಿಂದ ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ಸಮುದಾಯಗಳು ಕಳವಳ ವ್ಯಕ್ತಪಡಿಸಿವೆ. ಉಭಯ ರಾಷ್ಟ್ರಗಳೂ ಸಂಯಮ ಕಾಯ್ದುಗೊಳ್ಳಬೇಕು ಎಂದು ಚೀನಾ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ಮನವಿ ಮಾಡಿಕೊಂಡಿವೆ.
ಯುದ್ಧ ನಡೆದರೆ ಭಾರತಕ್ಕಾಗುವ ನಷ್ಟವೇನು?
ಇರಾನ್ ವಿಶ್ವದಲ್ಲಿಯೇ ಪ್ರಮುಖ ತೈಲೋತ್ಪಾದಕ ರಾಷ್ಟ್ರ. ಭಾರತ, ಚೀನಾ, ಟರ್ಕಿ, ಕೊರಿಯಾ, ಜಪಾನ್, ಸ್ಪೇನ್, ಫ್ರಾನ್ಸ್, ಗ್ರೀಸ್, ಸಿರಿಯಾಗಳು ಇರಾನ್‌ನಿಂದಲೇ ಹೆಚ್ಚಿನ ತೈಲವನ್ನು ಆಮದು ಮಾಡಿಕೊಳ್ಳುತ್ತಿವೆ. ಇರಾನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಾಗುವ ಯಾವುದೇ ಕ್ಷೋಭೆಯ ಪರಿಣಾಮ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾರತವೂ ಸೇರಿದಂತೆ ಹಲವು ದೇಶಗಳಿಗೆ ತಟ್ಟುತ್ತದೆ. ಈ ಕಾರಣಕ್ಕೆ ಇರಾನ್ ಮತ್ತು ಅಮೆರಿಕದ ಸಂಘರ್ಷ ಉಳಿದ ರಾಷ್ಟ್ರಗಳನ್ನು ಚಿಂತೆಗೀಡು ಮಾಡಿವೆ.
ಇರಾನ್ ಮತ್ತು ಅಮೆರಿಕದ ನಡುವಿನ ಸಂಘರ್ಷ ತಾರಕಕ್ಕೇರಿದ ಬೆನ್ನಿಗೆ ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ.4ರಷ್ಟುಹೆಚ್ಚಳವಾಗಿದೆ. ಅದು ಇನ್ನೂ ಗಗನಮುಖಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿಜವಾದ ಯುದ್ಧವೇ ನಡೆದರೆ ತೈಲ ಬೆಲೆ ನಿಯಂತ್ರಣಕ್ಕೆ ಸಿಗದು. ಭಾರತಕ್ಕೆ ಇದರಿಂದ ಸಮಸ್ಯೆಗಳ ಸರಮಾಲೆಯೇ ಪ್ರಾರಂಭವಾಗಲಿದೆ. ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತದೆ.
ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುತ್ತಿರುವ ಸುಮಾರು 80 ಲಕ್ಷ ಭಾರತೀಯರಿಗೆ ತೊಂದರೆ ಆಗಲಿದೆ. ಅಲ್ಲದೆ ಪಾಕಿಸ್ತಾನದ ಮಾರ್ಗವನ್ನು ತಪ್ಪಿಸಿ ಅಷ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ಮಾರುಕಟ್ಟೆಗಳಿಗೆ ನೇರ ಸಂಪರ್ಕ ಕಲ್ಪಿಸುವ ಸಲುವಾಗಿ ಭಾರತವು ಇರಾನ್‌ನ ಚಾಬಹರ್ ಬಂದರನ್ನು ಅಭಿವೃದ್ಧಿಪಡಿಸುತ್ತಿದೆ. ಈವರೆಗೆ ಅಮೆರಿಕದ ಆರ್ಥಿಕ ದಿಗ್ಬಂಧನಗಳಿಂದ ಈ ಬಂದರನ್ನು ರಕ್ಷಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. ಆದರೆ ಯುದ್ಧವೇನಾದರೂ ತೀವ್ರಗೊಂಡರೆ ಈ ಯೋಜನೆ ಬಾಧಿತವಾಗಬಹುದು.
ಚುನಾವಣೆ ಗೆಲ್ಲಲು ಟ್ರಂಪ್ ಹೂಡಿದ ತಂತ್ರವೇ ಇದು?
2020ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಡೊನಾಲ್ಡ್ ಟ್ರಂಪ್ ಕೂಡ ಸ್ಪರ್ಧಿಸುತ್ತಿದ್ದಾರೆ. ಈ ಚುನಾವಣೆಯ ಗೆಲುವಿಗೆ ಜನಪ್ರಿಯತೆ ಪಡೆದುಕೊಳ್ಳಲು, ಜಗತ್ತಿನ ಗಮನ ಸೆಳೆಯಲು ಟ್ರಂಪ್ ಇರಾನ್ ದಂಡನಾಯಕರ ಮೇಲೆ ಏರ್‌ಸ್ಟೆ್ರೖಕ್ ನಡೆಸಿದರೇ ಎಂಬ ಅನುಮಾನ ಕೇಳಿಬರುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಗ್ದಂಡನೆ ಸಂದರ್ಭದಲ್ಲೇ ಈ ದಾಳಿ ನಡೆದಿರುವುದು, ಗಮನ ಬೇರೆಡೆ ಸೆಳೆಯುವ ತಂತ್ರವಿರಬಹುದೇ ಎಂಬ ಅನುಮಾನಕ್ಕೂ ದಾರಿ ಮಾಡಿದೆ. ಟ್ರಂಪ್ ನಡೆಸಿದ ಈ ದಾಳಿ ಬಗ್ಗೆ ಸ್ವ ದೇಶದಲ್ಲೇ ವಿರೋಧ ವ್ಯಕ್ತವಾಗಿದೆ.