ಸ್ವಂತ ಉದ್ಯಮ ಪ್ರಾರಂಭಿಸೋ ಮಹಿಳೆಯರಿಗೆ ಸರ್ಕಾರದ ಈ ಯೋಜನೆಯಡಿ ಸಿಗುತ್ತೆ 3ಲಕ್ಷ ರೂ. ಸಾಲ; ಅರ್ಜಿ ಸಲ್ಲಿಕೆ ಹೇಗೆ?
ಸ್ವಂತ ಉದ್ಯಮದ ಕನಸು ಕಾಣುವ ಮಹಿಳೆಯರ ಪಾಲಿಗೆ ಉದ್ಯೋಗಿನಿ ಯೋಜನೆ ವರದಾನವಾಗಿದೆ.ಈ ಯೋಜನೆಯಡಿ ಗರಿಷ್ಠ 3ಲಕ್ಷ ರೂ. ತನಕ ಸಾಲ ಸೌಲಭ್ಯ ಪಡೆಯಬಹುದು.
ಬೆಂಗಳೂರು (ಜ.29): ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಇಂದು ಅನೇಕ ಮಹಿಳೆಯರು ಸ್ವಂತ ಉದ್ಯಮದತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಇಂಥ ಮಹಿಳೆಯರಿಗೆ ಸ್ವಂತ ಉದ್ಯಮ ಕೈಗೊಳ್ಳಲು ಹಣಕಾಸಿನ ನೆರವು ನೀಡಲು ರಾಜ್ಯ ಸರ್ಕಾರದ ಒಂದು ಯೋಜನೆ ನೆರವು ನೀಡುತ್ತಿದೆ. ಹೆಚ್ಚಿನ ದಾಖಲೆಗಳ ಅಗತ್ಯವಿಲ್ಲದೆ ಮಹಿಳೆಯರು ಬಡ್ಡಿರಹಿತ 3ಲಕ್ಷ ರೂ. ಸಾಲವನ್ನು ಪಡೆಯಲು ಈ ಯೋಜನೆಯಲ್ಲಿ ಅವಕಾಶವಿದೆ. ಈ ಯೋಜನೆ ಹೆಸರು 'ಉದ್ಯೋಗಿನಿ'. ಈ ಯೋಜನೆಯಡಿ ಹಿಂದುಳಿದ ವರ್ಗದ ಹಾಗೂ ಸಾಮಾನ್ಯ ಮಹಿಳೆಯರು ಯಾವುದಾದರೂ ಸ್ವಂತ ಉದ್ಯೋಗ ಕೈಗೊಳ್ಳಲು ಬ್ಯಾಂಕಿನಿಂದ ಗರಿಷ್ಠ 3ಲಕ್ಷ ರೂ. ತನಕ ಸಾಲ ಸೌಲಭ್ಯ ಪಡೆಯಬಹುದು. ಈ ಯೋಜನೆಯಡಿ ವಿಧವೆ, ಅಂಗವಿಕಲ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಸಾಮಾನ್ಯ ವರ್ಗದ ಮಹಿಳೆಯರಿಗೆ ಶೇ.30ರಷ್ಟು ಅಥವಾ ಗರಿಷ್ಠ 90 ಸಾವಿರ ರೂ. ತನಕ ಸಹಾಯಧನ ನೀಡಲಾಗುವುದು. ಹಾಗೆಯೇ ಪರಿಶಿಷ್ಟ ಜಾತಿ, ಪಂಗಡದ ಮಹಿಳೆಯರಿಗೆ ಶೇ.50ರಷ್ಟು ಅಥವಾ 1,50,000 ರೂ.ತನಕ ಸಹಾಯಧನ ನೀಡಲಾಗುತ್ತದೆ.
ಯಾರು ಈ ಯೋಜನೆ ಪ್ರಯೋಜನ ಪಡೆಯಬಹುದು?
ಕರ್ನಾಟಕದಲ್ಲಿ ವಾಸಿಸುವ ಪ್ರತಿ ಮಹಿಳೆ ಕೂಡ 'ಉದ್ಯೋಗಿನಿ' ಯೋಜನೆ ಪ್ರಯೋಜನ ಪಡೆಯಬಹುದು. 18ರಿಂದ 55 ವರ್ಷದೊಳಗಿನ ಮಹಿಳೆಯರು ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಪರಿಶಿಷ್ಟ ಜಾತಿ /ಪಂಗಡದ ಮಹಿಳೆಯರಾಗಿದ್ದರೆ ವಾರ್ಷಿಕ ಆದಾಯ 2ಲಕ್ಷ ರೂ. ಒಳಗಿರಬೇಕು. ಸಾಮಾನ್ಯ ವರ್ಗದ ಮಹಿಳೆಯರಾಗಿದ್ದಲ್ಲಿ ಅವರ ವಾರ್ಷಿಕ ಆದಾಯ 1.5 ಲಕ್ಷ ರೂ. ಒಳಗಿರಬೇಕು.
ಕಾರು,ಬೈಕ್ ವಿಮೆ ನವೀಕರಿಸುವಾಗ ಹಣ ಉಳಿಸೋದು ಹೇಗೆ? ಈ 5 ಟಿಪ್ಸ್ ಅನುಸರಿಸಿ
ಸಬ್ಸಿಡಿ ಲಭ್ಯ
ಇನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರು ಈ ಯೋಜನೆಯಡಿ ಪಡೆದುಕೊಂಡ ಸಾಲದಲ್ಲಿ ಶೇ.40ರಷ್ಟು ಸಬ್ಸಿಡಿ ಪಡೆಯಬಹುದು. ಇನ್ನು ಸಾಮಾನ್ಯ ಮಹಿಳೆಯರಿಗೆ ಸಾಲದಲ್ಲಿ ಶೇ.30ರಷ್ಟು ಸಬ್ಸಿಡಿ ಅಥವಾ 90 ಸಾವಿರ ರೂ. ತನಕ ರಿಯಾಯ್ತಿ ಪಡೆದುಕೊಳ್ಳಲು ಅವಕಾಶವಿದೆ.
ಯಾವೆಲ್ಲ ದಾಖಲೆಗಳು ಅಗತ್ಯ?
ಆಧಾರ್ ಕಾರ್ಡ್, ಜಾತಿ /ಆದಾಯ ಪ್ರಮಾಣಪತ್ರ, ಪಡಿತರ ಚೀಟಿ (Ration card),ಜನನ ಪ್ರಮಾಣಪತ್ರ, ಬ್ಯಾಂಕ್ ಖಾತೆಯ ವಿವರ, ಕೈಗೊಳ್ಳುವ ಉದ್ಯೋಗಕ್ಕೆ ಸಂಬಂಧಿಸಿದ ಯೋಜನಾ ವರದಿ, ಪಾಸ್ ಪೋರ್ಟ್ ಗಾತ್ರದ ಫೋಟೋ ಜೊತೆಗೆ ಅರ್ಜಿ ಸಲ್ಲಿಸಬೇಕು. ಅಂಗವಿಕಲರು, ವಿಧವೆಯರು, ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರು ತಮ್ಮ ಅರ್ಜಿಯೊಂದಿಗೆ ಪ್ರಮಾಣಪತ್ರ ಲಗತ್ತಿಸಬೇಕು. ಮಹಿಳೆಯರು ತ್ಮ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.
ಯಾವೆಲ್ಲ ಉದ್ಯಮ ಕೈಗೊಳ್ಳಲು ಸಾಲ?
ದಿನಸಿ ಅಂಗಡಿ, ಉಪ್ಪಿನಕಾಯಿ ತಯಾರಿಕೆ, ಮೀನು ಮಾರಾಟ, ಬೇಕರಿ, ಕಾಫಿ-ಚಹಾ ಅಂಗಡಿ, ಟೈಲರಿಂಗ್, ಬ್ಯೂಟಿ ಪಾರ್ಲರ್, ಸಿಹಿತಿಂಡಿ ಅಂಗಡಿ, ಹಿಟ್ಟಿನ ಗಿರಣಿ, ಫೋಟೋ ಸ್ಟುಡಿಯೋ, ಕಾಂಡಿಮೆಂಟ್ಸ್, ಚಪ್ಪಲಿ ಮಾರಾಟ ಮಳಿಗೆ ಸೇರಿದಂತೆ 88ಕ್ಕೂ ಹೆಚ್ಚು ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಉದ್ಯೋಗಿನಿ ಯೋಜನೆಯಲ್ಲಿ ಸಾಲ ಪಡೆಯಬಹುದು.
ವಯೋಮಿತಿ ಎಷ್ಟು?
ಉದ್ಯೋಗಿನಿ ಯೋಜನೆ ಫಲಾನುಭವಿಯಾಗಲು ಈ ಹಿಂದೆ 45 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿತ್ತು. ಆದರೆ, ಈಗ 55 ವರ್ಷಗಳಿಗೆ ವಯೋಮಿತಿ ಹೆಚ್ಚಿಸಲಾಗಿದೆ. ಇನ್ನು ವಾರ್ಷಿಕ ಆದಾಯದ ಮಿತಿಯನ್ನು 40 ಸಾವಿರದಿಂದ ರೂ. 1.5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಆರೋಗ್ಯ ವಿಮೆಗೆ ಸಂಬಂಧಿಸಿ ಮಹತ್ವದ ನಿಯಮ ಪ್ರಕಟ; ಎಲ್ಲ ಆಸ್ಪತ್ರೆಗಳಲ್ಲೂ ನಗದುರಹಿತ ದಾಖಲಾತಿಗೆ ಅವಕಾಶ
ಯಾವ ಬ್ಯಾಂಕ್ ಸಾಲ ನೀಡುತ್ತೆ?
ವಾಣಿಜ್ಯ ಬ್ಯಾಂಕುಗಳು, ಜಿಲ್ಲೆಯ ಸಹಕಾರಿ ಬ್ಯಾಂಕುಗಳ ಮೂಲಕ ಫಲಾನುಭವಿಗಳಿಗೆ ಸಾಲ ಒದಗಿಸಲಾಗುತ್ತಿದೆ. ಖಾಸಗಿ ಬ್ಯಾಂಕ್ ಗಳಿಂದ ಅಥವಾ ಫೈನಾನ್ಸ್ ಗಳಿಂದ ಅಧಿಕ ಬಡ್ಡಿದರಕ್ಕೆ ಸಾಲ ಪಡೆದು ಉದ್ಯಮ ಪ್ರಾರಂಭಿಸೋದು ಬಹುತೇಕ ಮಹಿಳೆಯರಿಗೆ ಸುಲಭದ ಕೆಲಸವಲ್ಲ. ಹೀಗಿರುವಾಗ ಉದ್ಯೋಗಿನಿ ಯೋಜನೆ ಸ್ವಂತ ಉದ್ಯಮ ಪ್ರಾರಂಭಿಸುವ ಬಯಕೆ ಹೊಂದಿರುವ ಮಹಿಳೆಯರಿಗೆ ನೆರವಾಗಿದೆ.