ಸಾಲದ ಕನಿಷ್ಠ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ!
*ಶೇ.10-15ರಷ್ಟು ಎಂಸಿಎಲ್ ಆರ್ ಹೆಚ್ಚಳ ಮಾಡಿದ ಎಸ್ ಬಿಐ
*ಇಂದಿನಿಂದಲೇ ಪರಿಷ್ಕೃತ ದರ ಜಾರಿ
*ಎಂಸಿಎಲ್ಆರ್ ಗೆ ಲಿಂಕ್ ಆಗಿರುವ ಸಾಲಗಳ ಮೇಲಿನ ಇಎಂಐ ಮೊತ್ತ ಏರಿಕೆ
ನವದೆಹಲಿ (ನ.15): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸಾಲದ ಮೇಲಿನ ಕನಿಷ್ಠ ಬಡ್ಡಿದರ ಅಥವಾ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್ ಆರ್) ಅನ್ನು ಶೇ.10-15ರಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ ಅಂದರೆ ನ.15ರಿಂದಲೇ ಜಾರಿಗೆ ಬರಲಿದೆ ಎಂದು ಎಸ್ ಬಿಐ ತಿಳಿಸಿದೆ. ಇದರಿಂದ ಎಂಸಿಎಲ್ಆರ್ ಗೆ ಲಿಂಕ್ ಆಗಿರುವ ಸಾಲಗಳ ಮೇಲಿನ ಇಎಂಐ ಮೊತ್ತ ಹೆಚ್ಚಲಿದ್ದು, ಸಾಲಗಾರರ ಮೇಲೆ ಇನ್ನಷ್ಟು ಹೊರೆ ಬೀಳಲಿದೆ. ಒಂದು ತಿಂಗಳು ಹಾಗೂ ಮೂರು ತಿಂಗಳ ಅವಧಿಯ ಎಂಸಿಎಲ್ ಆರ್ ದರವನ್ನು ಶೇ.7.60ರಿಂದ ಶೇ.7.75 ಕ್ಕೆ ಹೆಚ್ಚಳ ಮಾಡಲಾಗಿದೆ. ಇನ್ನು ಆರು ತಿಂಗಳು ಹಾಗೂ ಒಂದು ವರ್ಷ ಅವಧಿಯ ಎಂಸಿಎಲ್ ಆರ್ ದರವನ್ನು ಶೇ.7.90ರಿಂದ ಶೇ.8.05ಕ್ಕೆ ಹೆಚ್ಚಳ ಮಾಡಲಾಗಿದೆ. ಎರಡು ವರ್ಷಗಳ ತನಕದ ಎಂಸಿಎಲ್ ಆರ್ ದರವನ್ನು ಶೇ.8.15ರಿಂದ ಶೇ.8.25ಕ್ಕೆ ಹೆಚ್ಚಿಸಲಾಗಿದೆ. ಇನ್ನು ಮೂರು ವರ್ಷಗಳವರೆಗಿನ ಎಂಸಿಎಲ್ ಆರ್ ದರವನ್ನು ಶೇ.8.25ರಿಂದ ಶೇ.8.35ಕ್ಕೆ ಏರಿಕೆ ಮಾಡಲಾಗಿದೆ. ಈಗಾಗಲೇ ಗೃಹಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳದಿಂದ ಕಂಗೆಟ್ಟಿರುವ ಸಾಲಗಾರರಿಗೆ ಎಸ್ ಬಿಐ ಮತ್ತೊಮ್ಮೆ ಶಾಕ್ ನೀಡಿದೆ ಎಂದೇ ಹೇಳಬಹುದು.
ಏನಿದು ಎಂಸಿಎಲ್ ಆರ್?
ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್ ಆರ್) ಎಂದರೆ ಬ್ಯಾಂಕ್ ಗಳು ಗ್ರಾಹಕರಿಗೆ ಸಾಲ ನೀಡುವ ಕನಿಷ್ಠ ಬಡ್ಡಿದರ. ವಿವಿಧ ಮಾದರಿಯ ಸಾಲಗಳ ಬಡ್ಡಿ ದರಗಳನ್ನು ನಿರ್ಧರಿಸಲು 2016 ರಲ್ಲಿ ಆರ್ ಬಿಐ ಎಂಸಿಎಲ್ ಆರ್ ಪರಿಚಯಿಸಿತು. ಸರಳವಾಗಿ ಹೇಳಬೇಕೆಂದ್ರೆ ಎಂಸಿಎಲ್ ಆರ್ ಅನ್ನೋದು ಬ್ಯಾಂಕ್ ಗಳು ಸಾಲ ನೀಡಲು ಅನುಸರಿಸುವ ಬಡ್ಡಿಯ ಮಾನದಂಡ. ಈ ವಿಧಾನದಲ್ಲಿ ಸಾಲದ ಮೇಲಿನ ಬಡ್ಡಿ ನಿಗದಿಗೆ ಕನಿಷ್ಠ ದರವನ್ನು ಅನುಸರಿಸಲಾಗುತ್ತದೆ. ಇದಕ್ಕಿಂತ ಕಡಿಮೆ ದರದಲ್ಲಿ ಬ್ಯಾಂಕ್ ಗಳು ಸಾಲ ನೀಡುವುದಿಲ್ಲ.
ಎಲ್ಐಸಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ 36,000ರೂ. ಪಿಂಚಣಿ!
ಸಾಲದ ಮೇಲೆ ನೇರ ಪರಿಣಾಮ
ಎಂಸಿಎಲ್ ಆರ್ ದರದಲ್ಲಿ ಯಾವುದೇ ಬದಲಾವಣೆಯಾದ್ರೂ ಅದು ನೇರವಾಗಿ ಸಾಲದ ಮೇಲೆ ಪರಿಣಾಮ ಬೀರಲಿದೆ. ಎಂಸಿಎಲ್ ಆರ್ ಹೆಚ್ಚಳದಿಂದ ಸಾಲಗಳ ಮೇಲಿನ ಬಡ್ಡಿದರ ಏರಿಕೆಯಾಗಲಿದೆ. ಇದ್ರಿಂದ ಸಾಲಗಾರರ ಇಎಂಐ ಮೊತ್ತ ಕೂಡ ಹೆಚ್ಚಲಿದೆ. ನೀವು ಈಗಾಗಲೇ ಎಸ್ ಬಿಐಯಿಂದ ಕನಿಷ್ಠ ಬಡ್ಡಿದರದಲ್ಲಿ ಸಾಲ ಪಡೆದಿದ್ರೆ ಮರುಪಾವತಿ ದಿನಾಂಕ ಬಂದ ತಕ್ಷಣ ಬಡ್ಡಿದರದಲ್ಲಿನ ವ್ಯತ್ಯಾಸ ತಿಳಿಯುತ್ತದೆ. ಅದೇ ಕನಿಷ್ಠ ಬಡ್ಡಿದರದಲ್ಲಿ ಹೊಸ ಸಾಲ ಪಡೆಯುತ್ತಿದ್ದರೆ ಪ್ರಾರಂಭದಿಂದಲೇ ಇಎಂಐ ಮೊತ್ತದಲ್ಲಿ ಹೆಚ್ಚಳವಾಗಲಿದೆ.
ಎಂಸಿಎಲ್ ಆರ್ ಹೆಚ್ಚಳಕ್ಕೆ ಕಾರಣವೇನು?
ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿದಾಗ ಬ್ಯಾಂಕ್ ಗಳು ಕೂಡ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡುತ್ತವೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ ಈ ವರ್ಷ ಇಲ್ಲಿಯ ತನಕ ನಾಲ್ಕು ಬಾರಿ ರೆಪೋ ದರ ಏರಿಕೆ ಮಾಡಿದೆ. ರೆಪೋ ದರ ಒಟ್ಟು 190 ಮೂಲಾಂಕಗಳಷ್ಟು ಹೆಚ್ಚಳವಾಗಿದ್ದು, ಶೇ.5.90ರಷ್ಟಿದೆ. ಈಗಾಗಲೇ ಎಸ್ ಬಿಐ ಸೇರಿದಂತೆ ಅನೇಕ ಬ್ಯಾಂಕ್ ಗಳು ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡಿವೆ. ಎಸ್ ಬಿಐ ಈಗ ಸಾಲದ ಮೇಲಿ ಕನಿಷ್ಠ ಬಡ್ಡಿದರವನ್ನು ಕೂಡ ಹೆಚ್ಚಳ ಮಾಡಿದೆ.
ನಿಮ್ಮ ಎಟಿಎಂ ಕಾರ್ಡ್ ಕಳುವಾಗಿದೆಯಾ? ತಕ್ಷಣ ಬ್ಲಾಕ್ ಮಾಡಿಸೋದು ಹೇಗೆ? ಇಲ್ಲಿದೆ ಮಾಹಿತಿ
ಇಎಂಐ ಹೊರೆ ತಗ್ಗಿಸೋದು ಹೇಗೆ?
ಗೃಹಸಾಲದ ಮೇಲಿನ ಇಎಂಐ ಹೊರೆ ತಗ್ಗಿಸಲು ಒಂದೋ ದೊಡ್ಡ ಮೊತ್ತದ ಹಣವನ್ನು ಒಮ್ಮೆಗೆ ಕಟ್ಟಿ ಬಿಡಬೇಕು ಇಲ್ಲವೇ ಸಾಲದ ಅವಧಿ ವಿಸ್ತರಿಸಬೇಕು. ಹೀಗೆ ಮಾಡೋದ್ರಿಂದ ಇಎಂಐ ಮೊತ್ತ ಹೆಚ್ಚಳ ತಪ್ಪಿಸಬಹುದು.