License Cancel:ಮುಧೋಳ ಸಹಕಾರಿ ಬ್ಯಾಂಕ್ ಲಿಮಿಟೆಡ್ ಪರವಾನಗಿ ರದ್ದುಗೊಳಿಸಿದ RBI;ಕಾರಣವೇನು?
*ಠೇವಣಿಗಳ ಸ್ವೀಕೃತಿ ಹಾಗೂ ಮರುಪಾವತಿ ಸೇರಿದಂತೆ ಯಾವುದೇ ವ್ಯವಹಾರಗಳನ್ನು ನಡೆಸದಂತೆ ಬ್ಯಾಂಕಿಗೆ RBI ನಿರ್ಬಂಧ
*ಬ್ಯಾಂಕಿನ ಬಳಿ ಸಾಕಷ್ಟು ಬಂಡವಾಳ ಇಲ್ಲದ ಕಾರಣ ಈ ನಿರ್ಧಾರ
*ಬ್ಯಾಂಕಿನ ಠೇವಣಿದಾರರಿಗೆ 16.69 ಕೋಟಿ ರೂ. ಒಟ್ಟು ವಿಮಾ ಮೊತ್ತ ಪಾವತಿಗೆ ಅವಕಾಶ
ಮುಂಬೈ (ಜೂ.9): ಬಾಗಲಕೋಟೆಯ ಮುಧೋಳ ಸಹಕಾರಿ ಬ್ಯಾಂಕ್ ಲಿಮಿಟೆಡ್ (Mudhol Co-operative Bank) ಪರವಾನಗಿಯನ್ನು (license) ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರ ರದ್ದುಗೊಳಿಸಿದೆ. ಬ್ಯಾಂಕಿನ (Bank) ಬಳಿ ಸಾಕಷ್ಟು ಬಂಡವಾಳ ( capital) ಇಲ್ಲದ ಕಾರಣ ಈ ನಿರ್ಧಾರ ಕೈಗೊಂಡಿರೋದಾಗಿ ಆರ್ ಬಿಐ ತಿಳಿಸಿದೆ.
ಠೇವಣಿಗಳ ಸ್ವೀಕೃತಿ ಹಾಗೂ ಮರುಪಾವತಿ ಸೇರಿದಂತೆ ಯಾವುದೇ ವ್ಯವಹಾರಗಳನ್ನು ನಡೆಸದಂತೆ ಬ್ಯಾಂಕಿಗೆ ಆರ್ ಬಿಐ ನಿರ್ಬಂಧ ವಿಧಿಸಿದೆ. 'ಬ್ಯಾಂಕಿನ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಅದು ತನ್ನ ಠೇವಣಿದಾರರಿಗೆ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿಸೋದು ಅಸಾಧ್ಯ. ಹೀಗಾಗಿ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂದುವರಿಸಲು ಬ್ಯಾಂಕಿಗೆ ಅವಕಾಶ ನೀಡಿದರೆ ಸಾರ್ವಜನಿಕರ ಹಿತಾಸಕ್ತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ' ಎಂದು ಆರ್ ಬಿಐ (RBI)ತಿಳಿಸಿದೆ.
ಇನ್ನು ಕರ್ನಾಟಕದ ಸಹಕಾರ ಹಾಗೂ ಸಹಕಾರ ಸೊಸೈಟಿಗಳ ನೋಂದಣಾಧಿಕಾರಿಗೆ ಕೂಡ ಬ್ಯಾಂಕನ್ನು ಮುಚ್ಚಿ ಒಬ್ಬರು ಅಧಿಕಾರಿಯನ್ನು ನೇಮಕ ಮಾಡುವಂತೆ ಆರ್ ಬಿಐ ಆದೇಶಿಸಿದೆ.ಬ್ಯಾಂಕ್ ದಿವಾಳಿಯಾದ ಸಂದರ್ಭದಲ್ಲಿ ಠೇವಣಿದಾರರು ಡಿಐಸಿಜಿಸಿಯಿಂದ (DICGC) 5 ಲಕ್ಷ ರೂ.ವರೆಗೆ ಠೇವಣಿಯ ವಿಮೆ ಕ್ಲೈಮ್ ಮೊತ್ತ ಸ್ವೀಕರಿಸಲು ಅರ್ಹರಾಗಿದ್ದಾರೆ ಎಂದು ಆರ್ ಬಿಐ ತಿಳಿಸಿದೆ. ಬ್ಯಾಂಕಿನ ಠೇವಣಿದಾರರ ಮನವಿ ಮೇರೆಗೆ ಡಿಐಸಿಜಿಸಿ ಕಾಯ್ದೆ1961ರ ಸೆಕ್ಷನ್ 18ರಡಿಯಲ್ಲಿ 16.69 ಕೋಟಿ ರೂ. ಒಟ್ಟು ವಿಮಾ ಮೊತ್ತವನ್ನು ಪಾವತಿ ಮಾಡೋದಾಗಿ ಆರ್ ಬಿಐ (RBI) ಹೇಳಿದೆ.
ಮುಧೋಳ ಸಹಕಾರಿ ಬ್ಯಾಂಕ್ ಲಿಮಿಟೆಡ್ ಸಲ್ಲಿಸಿರುವ ಅಂಕಿಅಂಶಗಳ ಪ್ರಕಾರ ಶೇ.99ಕ್ಕಿಂತಲೂ ಅಧಿಕ ಠೇವಣಿದಾರರು ಡಿಐಸಿಜಿಸಿಯಿಂದ ಪೂರ್ಣ ಪ್ರಮಾಣದ ಠೇವಣಿ ಪಡೆಯಲು ಅರ್ಹರಾಗಿದ್ದಾರೆ ಎಂದು ಆರ್ ಬಿಐ (RBI)ಹೇಳಿದೆ.
ರೆಪೋ ದರ ಏರಿಕೆ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರ (ಜೂ.9) ರೆಪೋ ದರವನ್ನು (Repo rate) 50 ಬೇಸಿಸ್ ಪಾಯಿಂಟ್ಸ್ (Basis Points) ಹೆಚ್ಚಳ ಮಾಡಿದ್ದು, ಶೇ.4.40ರಿಂದ ಶೇ.4.90ಕ್ಕೆ ಏರಿಕೆಯಾಗಿದೆ. ಇದು ಎರಡು ವರ್ಷಗಳಲ್ಲೇ ಅತ್ಯಧಿಕ ಬಡ್ಡಿದರವಾಗಿದೆ (Interest rate).ಕಳೆದ ಕೆಲವು ತಿಂಗಳಿಂದ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ (Inflation)ಕಡಿವಾಣ ಹಾಕಲು ಆರ್ ಬಿಐ (RBI) ಈ ಕ್ರಮ ಕೈಗೊಂಡಿದೆ.
ರೆಪೋ ದರ ಏರಿಕೆಗೆ ಕಾರಣವೇನು?
ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಏರಿಕೆಯಾಗಿದೆ ಎಂದು ಆರ್ ಬಿಐ ಗರ್ವನರ್ ತಿಳಿಸಿದ್ದಾರೆ. ಇನ್ನು ದೇಶದಲ್ಲಿ ಚಿಲ್ಲರೆ ಹಣದುಬ್ಬರ ಆರ್ ಬಿಐ ನಿಗದಿಪಡಿಸಿರುವ ಸಹನಾ ಮಟ್ಟವನ್ನು ಮೀರಿದೆ. ಕಳೆದ ಏಪ್ರಿಲ್‌ನಲ್ಲಿ ಅದು ಶೇ.7.79ಕ್ಕೆ ತಲುಪುವ ಮೂಲಕ 8 ವರ್ಷದ ಗರಿಷ್ಠ ಮಟ್ಟಮುಟ್ಟಿತ್ತು. ಕೇಂದ್ರ ಸರ್ಕಾರವು ಆರ್‌ಬಿಐಗೆ ಹಣದುಬ್ಬರ ಪ್ರಮಾಣವನ್ನು ಶೇ.4ರಲ್ಲಿ ಕಾಪಾಡುವಂತೆ ಸೂಚಿಸಿದೆ. ಆದರೂ ಶೇ.2ರಷ್ಟುಏರುಪೇರಿಗೆ ಅವಕಾಶ ಕಲ್ಪಿಸಿದೆ. ಆದರೆ ಇದೀಗ ಆ ಮಿತಿಯೂ ಮೀರಿರುವ ಹಿನ್ನೆಲೆಯಲ್ಲಿ ಆರ್‌ಬಿಐ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ತೈಲ ಬೆಲೆ ಏರಿಕೆ ನಡುವೆ ಡಾಲರ್ ಎದುರು ದಾಖಲೆ ಕುಸಿತ ಕಂಡ ರೂಪಾಯಿ!
ಬಡ್ಡಿದರ ಏರಿಕೆ
ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ಸ್ ಗೆ ಹೆಚ್ಚಿಸಿದ ಕೇವಲ ಒಂದು ದಿನದಲ್ಲೇ ಅನೇಕ ಬ್ಯಾಂಕುಗಳು ಗೃಹ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡಿರೋದಾಗಿ ಘೋಷಿಸಿವೆ. 36 ದಿನಗಳ ಅವಧಿಯಲ್ಲಿ ಆರ್ ಬಿಐ ರೆಪೋ ದರ ಏರಿಕೆ ಮಾಡುತ್ತಿರೋದು ಇದು ಎರಡನೇ ಬಾರಿಯಾಗಿದೆ. ಕೆಲವೇ ದಿನಗಳ ಹಿಂದೆ ಅನೇಕ ಬ್ಯಾಂಕುಗಳು ಗೃಹಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಿದ್ದು, ಈಗ ಮತ್ತೊಮ್ಮೆ ಏರಿಕೆ ಮಾಡಿವೆ. ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ, ಪಿಎನ್ ಬಿ ಗೃಹ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿವೆ.