ಹೆಚ್ಚುತ್ತಿದೆ QR code ವಂಚನೆ;ಸಾರ್ವಜನಿಕ ಸ್ಥಳಗಳಲ್ಲಿ ಸ್ಕ್ಯಾನ್ ಮಾಡುವಾಗ ತಪ್ಪದೇ ಈ 6 ಟಿಪ್ಸ್ ಫಾಲೋ ಮಾಡಿ
ಇತ್ತೀಚಿನ ದಿನಗಳಲ್ಲಿ ಕ್ಯುಆರ್ ಕೋಡ್ ವಂಚನೆ ಪ್ರಕರಣಗಳು ಹೆಚ್ಚಿವೆ. ಹೀಗಾಗಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮುನ್ನ ಎಚ್ಚರಿಕೆ ವಹಿಸೋದು ಅಗತ್ಯ.ಇಲ್ಲವಾದರೆ ಹಣ ಕಳೆದುಕೊಳ್ಳಬೇಕಾಗುತ್ತದೆ.
Business Desk: ಇಂದು ಚಿಕ್ಕಪುಟ್ಟ ಖರೀದೂ ಯುಪಿಐ ಪಾವತಿ ಮಾಡೋದು ಸಾಮಾನ್ಯವಾಗಿದೆ. ಯಾರು ಕೂಡ ಈ ಹಿಂದಿನಂತೆ ಪರ್ಸ್ ಅಥವಾ ಕಿಸೆಯಲ್ಲಿ ನಗದು ಇಟ್ಟುಕೊಂಡು ತಿರುಗಾಡುವುದಿಲ್ಲ. ಬದಲಿಗೆ ಕೈಯಲ್ಲಿ ಮೊಬೈಲ್ ಇದ್ರೆ ಸಾಕು ಏನು ಬೇಕಾದರೂ ಖರೀದಿಸಬಹುದು ಎಂಬ ಆತ್ಮವಿಶ್ವಾಸ ಇಂದು ಭಾರತದ ಜನಸಾಮಾನ್ಯರಲ್ಲಿ ಮೂಡಿದೆ. ಸರಳವಾಗಿ ಹೇಳಬೇಕೆಂದರೆ ಇಂದು ಡಿಜಿಟಲ್ ಪಾವತಿ ವ್ಯವಸ್ಥೆ ದೇಶದಲ್ಲಿ ಹಣಕಾಸಿನ ವಹಿವಾಟನ್ನು ಸುಲಭವಾಗಿಸಿದೆ. ತರಕಾರಿ ಖರೀದಿಸಿದ್ರೂ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡುತ್ತೇವೆ. ಇನ್ನು ಕೆಲವೊಂದು ವೆಬ್ ಸೈಟ್ ಗಳಲ್ಲಿ ಅಥವಾ ಕೆಲವೊಂದು ಶಾಪ್ ಗಳಲ್ಲಿ ಖರೀದಿ ಮಾಡಿದಾಗ ನಿಮಗೆ ಇ-ಮೇಲ್ ಮೂಲಕ ಕ್ಯುಆರ್ ಕೋಡ್ ಕಳುಹಿಸಬಹುದು ಅಥವಾ ಕೆಲವು ಸೈಟ್ ಗಳಲ್ಲೇ ಕ್ಯುಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಪಾವತಿ ಮಾಡಬಹುದು. ಆದರೆ, ಈ ರೀತಿ ಪರಿಚಯವಿಲ್ಲದ ಆನ್ ಲೈನ್ ತಾಣಗಳಲ್ಲಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಹಣ ಕಳೆದುಕೊಳ್ಳುವ ಅಪಾಯ ಹೆಚ್ಚಿರುತ್ತದೆ. ವಂಚಕರು ಇತ್ತೀಚಿನ ದಿನಗಳಲ್ಲಿ ಕ್ಯುಆರ್ ಕೋಡ್ ವಂಚನೆ ಮೂಲಕ ಹಣ ಎಗರಿಸುತ್ತಿದ್ದಾರೆ.
ಏನಿದು ಕ್ಯುಆರ್ ಕೋಡ್ ವಂಚನೆ?
ವಂಚಕರು ವೈಯಕ್ತಿಕ ಮಾಹಿತಿಗಳನ್ನು ಕದಿಯಲು ಕ್ಯುಆರ್ ಕೋಡ್ ನಲ್ಲಿ ಅಪಾಯಕಾರಿ ಲಿಂಕ್ಗಳನ್ನು ಅಡಗಿಸಿಟ್ಟಿರುತ್ತಾರೆ. ಹೀಗಾಗಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವಾಗ ಎಚ್ಚರ ವಹಿಸುವಂತೆ ಅಮೆರಿಕದ ಫೆಡರಲ್ ಟ್ರೇಡ್ ಕಮೀಷನ್ (ಎಫ್ ಟಿಸಿ) ಎಚ್ಚರಿಕೆ ನೀಡಿದೆ. ಇನ್ನು ಕೆಲವರು ಮೆಸೇಜ್ ಅಥವಾ ಇ-ಮೇಲ್ ಮೂಲಕ ಕ್ಯುಆರ್ ಕೋಡ್ ಕಳುಹಿಸಿ ಯಾವುದೋ ಒಂದು ಕಾರಣ ನೀಡಿ ನಿಮ್ಮನ್ನು ನಂಬಿಸಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವಂತೆ ಮಾಡುತ್ತಾರೆ. ಇನ್ನು ಕ್ಯುಆರ್ ಕೋಡ್ ಮೂಲಕ ಮೊಬೈಲ್ ನಲ್ಲಿರುವ ವೈಯಕ್ತಿಕ ಹಾಗೂ ಹಣಕಾಸಿನ ಮಾಹಿತಿಗಳನ್ನು ಕಳವು ಮಾಡುವ ಪ್ರಕರಣಗಳು ಕೂಡ ಇತ್ತೀಚೆಗೆ ನಡೆಯುತ್ತಿವೆ. ಇನ್ನು ಈ ಮಾಹಿತಿಗಳನ್ನು ಬಳಸಿಕೊಂಡು ಸೈಬರ್ ವಂಚಕರು ನಿಮ್ಮ ಖಾತೆಯಲ್ಲಿನ ಹಣವನ್ನು ವಿತ್ ಡ್ರಾ ಮಾಡುತ್ತಾರೆ. ಇಂಥ ಪ್ರಕರಣಗಳು ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ವರದಿಯಾಗಿದೆ.
ಸೈಬರ್ ವಂಚನೆ ತಡೆಗೆ ಹೊಸ ಕ್ರಮ; 4 ಗಂಟೆ ವಿಳಂಬವಾಗಲಿದೆಯಾ 2000ರೂ. ಮೀರಿದ ಯುಪಿಐ ವಹಿವಾಟು?
ಕ್ಯುಆರ್ ಕೋಡ್ ಬಳಸುವಾಗ ಈ ಎಚ್ಚರಿಕೆ ವಹಿಸಿ
1.ನೀವು ನಿರೀಕ್ಷಿಸದ ಅಥವಾ ನಿಮಗೆ ಹೆಚ್ಚು ಪರಿಚಿತವಲ್ಲದ ಸ್ಥಳಗಳಲ್ಲಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವಾಗ ಎಚ್ಚರಿಕೆ ವಹಿಸಿ. ಇನ್ನು ಲಿಂಕ್ ಗಳ ಮೂಲಕ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವಾಗ ಯುಆರ್ ಎಲ್ ಅನ್ನು ಗುರುತಿಸಿ. ಅದರಲ್ಲಿ ಸ್ವಿಚ್ಡ ಲೇಟರ್ ಅಥವಾ ತಪ್ಪು ಅಕ್ಷರಗಳಿದ್ದರೆ ಎಚ್ಚರ ವಹಿಸಿ.
2.ಇ-ಮೇಲ್ ಅಥವಾ ಟೆಕ್ಸ್ಟ್ ಮೆಸೇಜ್ ನಲ್ಲಿ ಬಂದಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಬೇಡಿ. ಅದರಲ್ಲೂ ತಕ್ಷಣ ಮಾಡುವಂತೆ ಯಾರಾದರೂ ಒತ್ತಾಯಿಸಿದರೆ ಆಗ ಮಾಡಲೇಬೇಡಿ. ಒಂದು ವೇಳೆ ನಿಮಗೆ ಬಂದಿರುವ ಮೆಸೇಜ್ ಅಧಿಕೃತ ಮೂಲದ್ದು ಅನಿಸಿದೆಎ ಸಂಬಂಧಪಟ್ಟವರನ್ನು ಸಂಪರ್ಕಿಸಿ ಆ ಬಳಿಕ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ.
3.ನಿಮ್ಮ ಮೊಬೈಲ್ ಹಾಗೂ ಖಾತೆಗಳನ್ನು ಸಂರಕ್ಷಿಸಿಕೊಳ್ಳಿ. ಹ್ಯಾಕರ್ಸ್ ನಿಂದ ತಪ್ಪಿಸಿಕೊಳ್ಳಲು ನಿಮ್ಮ ಮೊಬೈಲ್ ಒಎಸ್ (OS)ಅನ್ನು ಅಪ್ಡೇಟ್ ಮಾಡಿ. ಇನ್ನು ನಿಮ್ಮ ಆನ್ ಲೈನ್ ಖಾತೆಗಳನ್ನು ಬಲಿಷ್ಠವಾದ ಪಾಸ್ ವರ್ಡ್ಸ್ ಹಾಗೂ ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಷನ್ ಮೂಲಕ ಸುರಕ್ಷಿತವಾಗಿರಿಸಿ.
4.ಒಂದು ವೇಳೆ ನೀವು ಪರಿಚಯವಿರುವ ವ್ಯಕ್ತಿಯಿಂದ ಕ್ಯುಆರ್ ಕೋಡ್ ಸ್ವೀಕರಿಸಿದ್ದೀರಿ ಎಂದು ನಿಮಗೆ ಅನಿಸಿದರೆ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಈ ಬಗ್ಗೆ ದೃಢಪಡಿಸಿಕೊಳ್ಳಿ.
ನೀವು ಗೂಗಲ್ ಪೇ ಬಳಸ್ತಿದ್ರೆ ಕೂಡಲೇ ನಿಮ್ಮ ಫೋನ್‌ನಿಂದ ಈ ಆ್ಯಪ್‌ಗಳನ್ನು ತೆಗೆದುಹಾಕಿ: ಗೂಗಲ್ ಎಚ್ಚರಿಕೆ
5.ಒಂದು ವೇಳೆ ನೀವು ಯಾವುದೇ ಶಾಪ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದರೆ ಮೂಲ ಕೋಡ್ ನಲ್ಲಿ ಯಾವುದೇ ಬದಲಾವಣೆಯಾಗಿದೆಯ ಇಲ್ಲವೋ ಎಂಬುದನ್ನು ಗಮನಿಸಿ. ಅಂದರೆ ಮೂಲ ಕೋಡ್ ಮೇಲೆ ಸ್ಟಿಕರ್ ಅಂಟಿಸಿರೋದು ಇತ್ಯಾದಿ.
6.ಕ್ಯುಆರ್ ಕೋಡ್ ಗೆ ಕರೆದುಕೊಂಡು ಹೋಗುವ ವೆಬ್ ಸೈಟ್ ನಲ್ಲಿ ಲಾಗಿನ್ , ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಗಳನ್ನು ನಮೂದಿಸುವಾಗ ಎಚ್ಚರ ವಹಿಸಿ.