ಪ್ಯಾನ್ ಕಾರ್ಡ್ ನಲ್ಲಿ ಫೋಟೋ, ಸಹಿ ಹಳೆಯದಾಗಿದ್ದರೆ ಬದಲಾಯಿಸೋದು ಹೇಗೆ? ಇಲ್ಲಿದೆ ಸರಳ ವಿಧಾನ
ಪ್ಯಾನ್ ಕಾರ್ಡ್ ನಲ್ಲಿರುವ ಮಾಹಿತಿಗಳನ್ನು ಆಗಾಗ ಅಪ್ಡೇಟ್ ಮಾಡೋದು ಅಗತ್ಯ. ಅದರಲ್ಲೂ ಪ್ಯಾನ್ ಕಾರ್ಡ್ ನಲ್ಲಿರುವ ಫೋಟೋ ಹಾಗೂ ಸಹಿ ಹಳೆಯದಾಗಿದ್ದರೆ ಬದಲಾಯಿಸೋದು ಅತ್ಯಗತ್ಯ. ಹಾಗಾದ್ರೆ ಪ್ಯಾನ್ ಕಾರ್ಡ್ ನಲ್ಲಿರುವ ಫೋಟೋ, ಸಹಿ ಬದಲಾಯಿಸೋದು ಹೇಗೆ?
Business Desk: ಪ್ಯಾನ್ ಕಾರ್ಡ್ ಅಥವಾ ಕಾಯಂ ಖಾತೆ ಸಂಖ್ಯೆ ಅತೀಮುಖ್ಯ ದಾಖಲೆಗಳಲ್ಲೊಂದು. ಇದು 10 ಅಂಕೆಗಳ ಇಂಗ್ಲಿಷ್ ಅಕ್ಷರಗಳು ಹಾಗೂ ಸಂಖ್ಯೆಗಳ ಸಮೂಹ. ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಗಳನ್ನು ವಿತರಿಸುತ್ತದೆ. ಪ್ಯಾನ್ ಕಾರ್ಡ್ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿದ್ದು, ಮುಖ್ಯವಾಗಿ ತೆರಿಗೆ ಸಂಬಂಧಿ ಉದ್ದೇಶಗಳಿಗೆ ಬಳಸಲಾಗುತ್ತದೆ. ಹೀಗಿರುವಾಗ ಪ್ಯಾನ್ ಕಾರ್ಡ್ ಗಳಲ್ಲಿನ ಮಾಹಿತಿಗಳನ್ನು ಆಗಾಗ ಪರಿಷ್ಕರಿಸೋದು ಕೂಡ ಅಗತ್ಯ. ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಹಳೆಯ ಫೋಟೋ ಅಥವಾ ಸಹಿ ಸೇರಿದಂತೆ ಯಾವುದೇ ಹಳೆಯ ಮಾಹಿತಿಗಳನ್ನು ಹೊಂದಿದ್ದರೆ ಅದನ್ನು ನೀವು ನವೀಕರಿಸಬಹುದು. ಹಾಗೆಯೇ ನಿಮ್ಮ ಪ್ಯಾನ್ ಕಾರ್ಡ್ ನಲ್ಲಿ ಯಾವುದೇ ಮಾಹಿತಿ ಸಮರ್ಪಕವಾಗಿರದಿದ್ದರೆ ಆಗ ಅದನ್ನು ಸರಿಪಡಿಸೋದು ಕೂಡ ಅಗತ್ಯ. ಇಲ್ಲವಾದ್ರೆ ಮುಂದೆ ಅದರಿಂದ ತೊಂದರೆ ಎದುರಾಗಬಹುದು.
ಪ್ಯಾನ್ ಕಾರ್ಡ್ ನಲ್ಲಿರುವ ನಿಮ್ಮ ಸಹಿ ಅತೀಮುಖ್ಯ ಪಾತ್ರ ವಹಿಸುತ್ತದೆ. ನಿಮ್ಮ ಗುರುತನ್ನು ದೃಢೀಕರಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ. ಸಾಲ, ಹೂಡಿಕೆಗಳು, ಕ್ರೆಡಿಟ್ ಕಾರ್ಡ್ ಹೀಗೆ ಇನ್ನೂ ಅನೇಕ ಹಣಕಾಸು ಸಂಬಂಧಿ ಕೆಲಸಗಳಿಗೆ ನೀವು ಅರ್ಜಿ ಸಲ್ಲಿಕೆ ಮಾಡಿದಾಗ ನಿಮ್ಮ ಗುರುತು ದೃಢೀಕರಿಸುವಲ್ಲಿ ಪ್ಯಾನ್ ಕಾರ್ಡ್ ನಲ್ಲಿರುವ ಸಹಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲಿರುವ ಸಹಿ ನೀವು ಅರ್ಜಿ ಅಥವಾ ಇತರ ದಾಖಲೆಗಳಲ್ಲಿ ಹಾಕಿರುವ ಸಹಿಗೆ ಹೊಂದಿಕೆಯಾಗೋದು ಕೂಡ ಅಗತ್ಯ. ಹಾಗೆಯೇ ಪ್ಯಾನ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಹಳೆಯದಾಗಿದ್ದರೆ ಅದನ್ನು ಬದಲಾಯಿಸೋದು ಕೂಡ ಅಗತ್ಯ. ಏಕೆಂದರೆ ಆ ಫೋಟೋ ನಿಮ್ಮ ಗುರುತು ದೃಢೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಹೀಗಾಗಿ ಪ್ಯಾನ್ ಕಾರ್ಡ್ ನಲ್ಲಿ ನಿಮ್ಮ ಫೋಟೋ ಹಾಗೂ ಸಹಿ ಹಳೆಯದಾಗಿದ್ದರೆ ಅದನ್ನು ಬದಲಾಯಿಸಿ.
PAN Card ಕಳೆದು ಹೋದ್ರೆ ಏನ್ ಮಾಡ್ಬೇಕು?ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
ಪ್ಯಾನ್ ಕಾರ್ಡ್ ನಲ್ಲಿ ಫೋಟೋ, ಸಹಿ ಬದಲಾಯಿಸೋದು ಹೇಗೆ?
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ಪ್ಯಾನ್ ಕಾರ್ಡ್ ನಲ್ಲಿನ ನಿಮ್ಮ ಫೋಟೋ ಹಾಗೂ ಸಹಿಯನ್ನು ಬದಲಾಯಿಸಬಹುದು.
ಹಂತ 1: NSDL ವೆಬ್ ಪೋರ್ಟಲ್ ಗೆ ಲಾಗಿನ್ ಆಗಿ.
ಹಂತ 2: 'Application Type'ಆಯ್ಕೆಯಲ್ಲಿ 'ಈಗಿರುವ ಪ್ಯಾನ್ ಕಾರ್ಡ್ ನಲ್ಲಿ ಬದಲಾವಣೆಗಳು ಅಥವಾ ಪರಿಷ್ಕರಣೆ' ಆಯ್ಕೆ ಮಾಡಿ.
ಹಂತ 3:'Category'ಮೆನುವಿನಿಂದ 'Individual' ಆಯ್ಕೆ ಮಾಡಿ.
ಹಂತ 4: ನಿಮ್ಮ ಅರ್ಜಿ ಮಾಹಿತಿಗಳನ್ನು ನಮೂದಿಸಿ ಹಾಗೂ 'submit'ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 5: ಅಲ್ಲಿ ಸೃಷ್ಟಿಯಾಗಿರುವ ಟೋಕನ್ ಸಂಖ್ಯೆ ಬರೆದುಕೊಳ್ಳಿ. ಪ್ಯಾನ್ ಅರ್ಜಿ ಸಲ್ಲಿಕೆ ಮುಂದುವರಿಸಿ.
ಹಂತ 6: ಹೇಗೆ ಕೆವೈಸಿ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ. ಆಧಾರ್ ಅಥವಾ ಇಐಡಿ ಸೇರಿದಂತೆ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ನೀಡಿ.
ಹಂತ 7: 'Photo Mismatch'ಅಥವಾ 'Signature Mismatch' ಆಯ್ಕೆ ಮಾಡಿ. ಪ್ಯಾನ್ ಕಾರ್ಡ್ ಸಹಿ ಅಥವಾ ಫೋಟೋ ಬದಲಾವಣೆಗೆ ತಂದೆ ಅಥವಾ ತಾಯಿ ಮಾಹಿತಿಗಳನ್ನು ನಮೂದಿಸಿ.
ಹಂತ 8: 'Address and Contact' ವಿಭಾಗದಲ್ಲಿ ನಿಮ್ಮ ಸಂಪರ್ಕ ಮಾಹಿತಿಗಳು, ವಿಳಾಸ ಇತ್ಯಾದಿಯನ್ನು ನಮೂದಿಸಿ.
ಹಂತ 9: ಗುರುತು ದೃಢೀಕರಣ ದಾಖಲೆ, ಜನ್ಮದಿನಾಂಕ ಹಾಗೂ ವಿಳಾಸ ದೃಢೀಕರಣ ದಾಖಲೆಗಳನ್ನು ನೀಡಿ. ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಕೆ ಮಾಡಿದ್ರೆ ಈ ಎಲ್ಲ ಅಗತ್ಯಗಳನ್ನು ಪೂರೈಸಿದಂತಾಗುತ್ತದೆ. ಇದರ ಜೊತೆಗೆ ನಿಮ್ಮ ಪ್ಯಾನ್ ಅಥವಾ ಪ್ಯಾನ್ ನೀಡಿಕೆ ಪತ್ರದ ಪ್ರತಿ ನೀಡಿ.
ಹಂತ 10 : ಡಿಕ್ಲರೇಷನ್ ಬಾಕ್ಸ್ ಮೇಲೆ ಟಿಕ್ ಮಾಡಿ. ಆ ಬಳಿಕ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ 'submit'ಕ್ಲಿಕ್ ಮಾಡಿ.
ಆಧಾರ್ ಸಂಖ್ಯೆ ಇದ್ದರೆ ಸಾಕು ತಕ್ಷಣ ಪ್ಯಾನ್ ಕಾರ್ಡ್ ಪಡೆಯಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ
ಹಂತ11: ಪರಿಶೀಲನೆಗೆ ಅಗತ್ಯವಾದ ಎಲ್ಲ ದಾಖಲೆಗಳ ಸ್ಕ್ಯಾನ್ ಮಾಡಿರೋ ಪ್ರತಿಗಳನ್ನು ಅಪ್ಲೋಡ್ ಮಾಡಿ.
ಹಂತ 12: ನಿಖರತೆಯನ್ನು ಪರಿಶೀಲಿಸಿ ಹಾಗೂ 'Submit' ಮೇಲೆ ಕ್ಲಿಕ್ ಮಾಡಿ. ಯಾವುದೇ ಅಗತ್ಯ ಅಪ್ಡೇಟ್ ಗಳಿದ್ದರೆ 'Edit'ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 13: ನೀವು ಭಾರತದಲ್ಲಿ ನೆಲೆಸಿದ್ದರೆ 101ರೂ. (ಜಿಎಸ್ ಟಿ ಒಳಗೊಂಡಂತೆ) ಅಥವಾ ಅನ್ಯ ದೇಶದಲ್ಲಿ ನೆಲೆಸಿದ್ದರೆ 1011ರೂ. (ಜಿಎಸ್ ಟಿ ಒಳಗೊಂಡಂತೆ) ಪಾವತಿಸಿ.
ಹಂತ 14: ಅರ್ಜಿಯನ್ನು 'ಸೇವ್' ಮಾಡಿ ಹಾಗೂ ಅದರ ಪ್ರತಿಯ ಪ್ರಿಂಟ್ ತೆಗೆಯಿರಿ.
ಹಂತ 15: ಪ್ರಿಂಟ್ ತೆಗೆದಿರುವ ಪ್ರತಿಯನ್ನು ಆದಾಯ ತೆರಿಗೆ ಇಲಾಖೆ ಪ್ಯಾನ್ ಸೇವೆಗಳ ಘಟಕದ NSDL ವಿಳಾಸಕ್ಕೆ ಕಳುಹಿಸಿ. (5th Floor Mantri Sterling, Plot No. 341, Survey No. 997/8, Model Colony, Near Deep Bungalow Chowk, Pune – 411016)