ಎನ್ ಪಿಎಸ್ ಹೊಸ ನಿಯಮ ಫೆ.1ರಿಂದ ಜಾರಿ; ಶೇ.25ರಷ್ಟು ಭಾಗಶಃ ವಿತ್ ಡ್ರಾಗೆ ಅವಕಾಶ
ಎನ್ ಪಿಎಸ್ ಹೊಸ ವಿತ್ ಡ್ರಾ ನಿಯಮಗಳನ್ನು ಪ್ರಕಟಿಸಿದೆ. ಇದರ ಅನ್ವಯ ಶೇ.25ರಷ್ಟು ಭಾಗಶಃ ವಿತ್ ಡ್ರಾಗೆ ಅವಕಾಶ ನೀಡಲಾಗಿದೆ. ಈ ಹೊಸ ನಿಯಮ ಫೆ.1ರಿಂದ ಜಾರಿಗೆ ಬರಲಿದೆ.
ನವದೆಹಲಿ (ಜ.19): ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್ ) ಅಡಿಯಲ್ಲಿ ಪಿಂಚಣಿ ವಿತ್ ಡ್ರಾಗೆ ಸಂಬಮಧಿಸಿದ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಈ ಬಗ್ಗೆ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ತನ್ನ ಹೊಸ ಸುತ್ತೋಲೆಯಲ್ಲಿ ಮಾಹಿತಿ ನೀಡಿದೆ. ಈ ಹೊಸ ಸುತ್ತೋಲೆ 2024ರ ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ಈ ಅಪ್ಡೇಟ್ ಆಗಿರುವ ನಿಯಮಗಳ ಪ್ರಕಾರ ಚಂದಾದಾರರು ತಮ್ಮ ವೈಯಕ್ತಿಕ ಪಿಂಚಣಿ ಖಾತೆಯಿಂದ ಉದ್ಯೋಗದಾತ ಸಂಸ್ಥೆಗಳ ಕೊಡುಗೆ ಹೊರತುಪಡಿಸಿ, ತಾವು ಮಾಡಿದ ಕೊಡುಗೆಯಿಂದ ಶೇ.25ರಷ್ಟು ಮೀರದಂತೆ ಭಾಗಶಃ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಚಂದಾದಾರರು ತಾವು ಸೇರ್ಪಡೆಗೊಂಡ ದಿನಾಂಕದಿಂದ ಕನಿಷ್ಠ ಮೂರು ವರ್ಷಗಳ ಕಾಲ ಎನ್ ಪಿಎಸ್ ಸದಸ್ಯರಾಗಿರೋದು ಕಡ್ಡಾಯ. ಒಬ್ಬ ಚಂದಾದಾರ ಎನ್ ಪಿಎಸ್ ಅವಧಿಯುದ್ದಕ್ಕೂ ಗರಿಷ್ಠ ಮೂರು ಭಾಗಶಃ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಈ ಕೆಳಗಿನ ಉದ್ದೇಶಗಳಿಗೆ ವಿತ್ ಡ್ರಾಗೆ ಅವಕಾಶ
*ಕಾನೂನಾತ್ಮಕವಾಗಿ ದತ್ತು ಸ್ವೀಕರಿಸಿದ ಮಗು ಸೇರಿದಂತೆ ಚಂದಾದಾರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ.
*ಕಾನೂನಾತ್ಮಕವಾಗಿ ದತ್ತು ಸ್ವೀಕರಿಸಿದ ಮಗು ಒಳಗೊಂಡಂತೆ ಚಂದಾದಾರರ ಮಕ್ಕಳ ವಿವಾಹ ಉದ್ದೇಶಕ್ಕೆ ವಿತ್ ಡ್ರಾ ಮಾಡಬಹುದು.
*ಚಂದಾದಾರರು ಮನೆ ಖರೀದಿಸುತ್ತಿದ್ದರೆ ಅಥವಾ ನಿರ್ಮಿಸುತ್ತಿದ್ದರೆ ಅಥವಾ ಪ್ಲ್ಯಾಟ್ ಖರೀದಿಸುತ್ತಿದ್ದರೆ, ಆ ಉದ್ದೇಶಕ್ಕೆ ಹಣ ವಿತ್ ಡ್ರಾ ಮಾಡಲು ಅವಕಾಶ. ಚಂದಾದಾರರ ಹೆಸರಿನಲ್ಲಿ ಅಥವಾ ಅವರ ಕಾನೂನಾತ್ಮಕ ಸಂಗಾತಿಯ ಜಂಟಿ ಹೆಸರಿನಲ್ಲಿ ಮನೆ ಖರೀದಿಸುವಾಗ ಮಾತ್ರ ಇದು ಅನ್ವಯಿಸುತ್ತದೆ. ಒಂದು ವೇಳೆ ಚಂದಾದಾರರು ಈಗಾಗಲೇ ಮನೆ ಅಥವಾ ಫ್ಲ್ಯಾಟ್ ಮಾಲೀಕತ್ವ ಹೊದಿದ್ದರೆ, ಯಾವುದೇ ವಿತ್ ಡ್ರಾಗೆ ಅವಕಾಶವಿಲ್ಲ.
NPS ಹೂಡಿಕೆ ಈಗ ಇನ್ನಷ್ಟು ಸರಳ; ಕ್ಯುಆರ್ ಕೋಡ್ ಬಳಸಿ ಕೊಡುಗೆಗೆ ಅವಕಾಶ
*ಕ್ಯಾನ್ಸರ್ , ಕಿಡ್ನಿ ವೈಫಲ್ಯ, ಕೋವಿಡ್ -19 ಸೇರಿದಂತೆ ಪ್ರಮುಖ ಕಾಯಿಲೆಗಳ ಚಿಕಿತ್ಸೆ ಹಾಗೂ ಆಸ್ಪತ್ರೆ ವೆಚ್ಚ ಭರಿಸಲು ವಿತ್ ಡ್ರಾ ಮಾಡಲು ಅವಕಾಶ.
*ಚಂದಾದಾರರಿಗೆ ಅಂಗವೈಕಲ್ಯ ಉಂಟಾದರೆ ಆಗ ವೈದ್ಯಕೀಯ ವೆಚ್ಚ ಭರಿಸಲು ವಿತ್ ಡ್ರಾ ಮಾಡಬಹುದು.
*ಕೌಶಲಾಭಿವೃದ್ಧಿ ಅಥವಾ ಯಾವುದೇ ಸ್ವ ಅಭಿವೃದ್ಧಿ ಚಟುವಟಿಕೆಗಳಿಗೆ ತಗಲುವ ವೆಚ್ಚವನ್ನು ಚಂದಾದಾರರು ಭರಿಸಬೇಕು.
*ಸ್ವಂತ ಉದ್ಯಮ ಅಥವಾ ಸ್ಟಾರ್ಟ್ ಅಪ್ ಪ್ರಾರಂಭಿಸಲು.
ಅರ್ಜಿ ಸಲ್ಲಿಕೆ ಹೇಗೆ?
ಕೇಂದ್ರೀಯ ದಾಖಲಾತಿ ನಿರ್ವಹಣೆ ಏಜೆನ್ಸಿಗೆ (ಸಿಆರ್ ಎ) ಸಂಬಂಧಪಟ್ಟ ಸರ್ಕಾರಿ ನೋಡಲ್ ಅಧಿಕಾರಿ ಮೂಲಕ ಅಥವಾ ಅವರ ಸಕ್ಷಮದಲ್ಲಿ ವಿತ್ ಡ್ರಾ ಮನವಿ ಸಲ್ಲಿಕೆ ಮಾಡಬೇಕು. ಇದರ ಜೊತೆಗೆ ವಿತ್ ಡ್ರಾ ಮಾಡಲು ಏನು ಕಾರಣ ಎಂಬ ಬಗ್ಗೆ ಸ್ವ-ಘೋಷಣೆ ನೀಡಬೇಕು. ಚಂದಾದಾರರ ಬ್ಯಾಂಕ್ ಖಾತೆ ಪರಿಶೀಲಿಸಿದ ಬಳಿಕವಷ್ಟೇ ಚಂದಾದಾರರ ಮನವಿಯನ್ನು ಸಿಆರ್ ಎ ಮುಂದುವರಿಸುತ್ತದೆ.
ಎನ್ ಪಿಎಸ್ ನಿಯಮ ಬದಲಾವಣೆ; ವಿತ್ ಡ್ರಾ ಪ್ರಕ್ರಿಯೆಯಲ್ಲಿ ಬ್ಯಾಂಕ್ ಖಾತೆ ಮಾಹಿತಿ ಪರಿಶೀಲನೆಗೆ ಹೊಸ ವಿಧಾನ
ಯುಪಿಐ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಖಾತೆಗೆ ಹಣ
ಚಂದಾದಾರರು ಯಾವುದೇ ಯುಪಿಐ ಅಪ್ಲಿಕೇಷನ್ ಮೂಲಕ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಎನ್ ಪಿಎಸ್ ಖಾತೆಗೆ ಹಣ ವರ್ಗಾಯಿಸಬಹುದು. ಪ್ರತಿಯೊಬ್ಬರಿಗೂ ವಿಭಿನ್ನ ಕ್ಯುಆರ್ ಕೋಡ್ ನೀಡಲಾಗುತ್ತದೆ. ಈ ಕ್ಯುಆರ್ ಕೋಡ್ ಅನ್ನು ಹೂಡಿಕೆದಾರರು ಸೇವ್ ಮಾಡಿಟ್ಟುಕೊಳ್ಳಬಹುದು. ಇನ್ನು ಕ್ಯುಆರ್ ಕೋಡ್ ಟೈರ್-1 ಹಾಗೂ ಟೈರ್ -2 ಖಾತೆಗಳಿಗೆ ಬೇರೆ ಬೇರೆಯಾಗಿರುತ್ತದೆ.ಈ ಮೂಲಕ ಎನ್ ಪಿಎಸ್ ಖಾತೆಗೆ ಕೊಡುಗೆಯನ್ನು ಸರಳಗೊಳಿಸೋದು ಹಾಗೂ ಈ ಪ್ರಕ್ರಿಯೆಯನ್ನು ಹೆಚ್ಚು ಸ್ನೇಹಪರ ಹಾಗೂ ದಕ್ಷತೆಯಿಂದ ಕೂಡಿರುವಂತೆ ಮಾಡೋದು ಪಿಎಫ್ ಆರ್ ಡಿಎ ಉದ್ದೇಶವಾಗಿದೆ.