ಮಾನವನ ಮಿದುಳಿಗಿಂತ ಚಾಟ್‌ಜಿಪಿಟಿ ಪ್ರಭಾವಶಾಲಿಯಲ್ಲ; ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಹೀಗೆ ಹೇಳಿದ್ಯಾಕೆ ?
ಚಾಟ್‌ಜಿಪಿಟಿ ಎಂಬ ಕೃತಕ ಬುದ್ಧಿಮತ್ತೆ ವ್ಯವಸ್ಥೆಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತದೆ. ಏನೇ ಮಾಹಿತಿ ಬೇಕಿದ್ದರೂ ಅದನ್ನು ಅಚ್ಚುಕಟ್ಟಾಗಿ ಮನುಷ್ಯರು ಯೋಚಿಸಿ ಹೇಳಿದಂತೆಯೇ ಬಳಕೆದಾರರಿಗೆ ಒದಗಿಸುವ ಮೂಲಕ ಜನಪ್ರಿಯತೆ ಗಳಿಸಿದೆ. ಸದ್ಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಚಾಟ್‌ಜಿಪಿಟಿ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಕೂಡ
ನವದೆಹಲಿ (ಜೂ.12): ಭಾರತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಸಾಕಷ್ಟು ಸಾಧನೆ ಮಾಡಿದೆ. ಭಾರತ ಐಟಿ ಹಬ್ ಆಗಿ ಬೆಳೆಯುವಲ್ಲಿ ಎನ್. ಆರ್. ನಾರಾಯಣಮೂರ್ತಿ ಹಾಗೂ ಅವರ ಕಂಪನಿ ಇನ್ಫೋಸಿಸ್ ಶ್ರಮ ಬಹಳಷ್ಟಿದೆ. ನಾರಾಯಣ ಮೂರ್ತಿ ಅವರು 1981ರಲ್ಲಿ ಇನ್ಫೋಸಿಸ್ ಕಂಪನಿ ಸ್ಥಾಪಿಸಿದರು, ಆ ಬಳಿಕ ಆ ಕಂಪನಿಯನ್ನು ಜಗತ್ತಿನಾದ್ಯಂತ ವಿಸ್ತರಿಸಿದರು ಕೂಡ. 30 ವರ್ಷಗಳ ಕಾಲ ಇನ್ಫೋಸಿಸ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ನಾರಾಯಣ ಮೂರ್ತಿ 2011ರಲ್ಲಿ ಆ ಹುದ್ದೆಯಿಂದ ಕೆಳಗಿಳಿದರು. 2013ರಲ್ಲಿ ವೃತ್ತಿಪ ಸಿಇಒ ಒಬ್ಬರಿಗೆ ಕಂಪನಿಯ ನಿರ್ವಹಣೆ ಜವಾಬ್ದಾರಿ ಹಸ್ತಾಂತರಿಸಿದರು. ಇನ್ಫೋಸಿಸ್ ಸ್ಥಾಪನೆ ಹಾಗೂ ಅದನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ನಾರಾಯಣ ಮೂರ್ತಿ ಅವರಿಗೆ ಪತ್ನಿ ಸುಧಾಮೂರ್ತಿ ಬೆನ್ನೆಲುಬಾಗಿ ನಿಂತಿದ್ದರು. ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಪಟ್ಟ ಶ್ರಮದ ಬಗ್ಗೆ ವಿವರಿಸುವ ಸಂರ್ಭದಲ್ಲಿ ಸುಧಾಮೂರ್ತಿ ಅವರು ತಾವಿಬ್ಬರು 30 ವರ್ಷಗಳ ಕಾಲ ಒಂದು ರಜೆಯನ್ನು ಕೂಡ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದರು. ಭಾರತದ ಐಟಿ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ನಾರಾಯಣ ಮೂರ್ತಿ ಅವರು, ಆಗಾಗ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿವಿಧ ವಿಚಾರಗಳಿಗೆ ಸಂಬಂಧಿಸಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತ ಇರುತ್ತಾರೆ. ಇತ್ತೀಚೆಗೆ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ, ಚರ್ಚೆಯಲ್ಲಿರುವ 'ಚಾಟ್‌ಜಿಪಿಟಿ’ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಬಗ್ಗೆ ನಾರಾಯಣ ಮೂರ್ತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಾಟ್‌ಜಿಪಿಟಿ ಬಗ್ಗೆ ಮೂರ್ತಿ ಏನ್ ಹೇಳಿದ್ದಾರೆ?
ನಾರಾಯಣ ಮೂರ್ತಿ ಅವರ ಪ್ರಕಾರ ಮಾನವನ ಮಿದುಳನ್ನು ಯಾವುದು ಕೂಡ ಮೀರಿಸಲಾರದು. ಹಾಗಾಗಿ ಚಾಟ್ ಜಿಪಿಟ್ ನೀಡುವ ಅಂತಿಮ ಫಲಿತಾಂಶ ಕೂಡ ನಮ್ಮ ಮಿದುಳಿನ ಸಾಮರ್ಥ್ಯವೇ ಆಗಿದೆ ಎಂದು ತುಂಬಾ ಸೊಗಸಾಗಿ ಬಣ್ಣಿಸಿದ್ದಾರೆ. 'ಮಾನವನ ಮಿದುಳು ಅತ್ಯಂತ ಪ್ರಭಾವಶಾಲಿ ಕಲ್ಪನೆ, ಯಂತ್ರ ಎಂಬ ತತ್ತ್ವದಲ್ಲಿ ನಾನು ಬಹಳ ನಂಬಿಕೆಯಿಟ್ಟಿದ್ದೇನೆ. ಹೀಗಾಗಿ ಯಾವುದು ಕೂಡ ಮಾನವನ ಮಿದುಳನ್ನು ಮೀರಿಸಲಾರದು ಎಂಬುದು ನನ್ನ ಭಾವನೆ' ಎಂದು ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಎಐ ಚಾಟ್ ಬಾಕ್ಸ್ ಬಳಸುತ್ತೇವೆ. ಆದರೆ, ಅದನ್ನು ಒಬ್ಬರಿಗಿಂತ ಒಬ್ಬರು ಭಿನ್ನವಾಗಿ ಬಳಸುತ್ತೇವೆ. ಉಳಿದವರಿಗಿಂತ ಭಿನ್ನವಾಗಿ ನಿಲ್ಲಲು ನಾವು ಯಾವುದೇ ಎಐ ಸಾಧನ ಬಳಸುವಾಗ ನಮ್ಮ ಸ್ವಂತ ಭಿನ್ನತೆ ಹಾಗೂ ಜಾಣತನವನ್ನು ಉಪಯೋಗಿಸಬೇಕಾಗುತ್ತದೆ ಎಂದು ಮೂರ್ತಿ ತಿಳಿಸಿದ್ದಾರೆ. 'ಒಂದು ವೇಳೆ ನನ್ನ ಹಾಗೂ ನಿಮ್ಮ ನಡುವೆ ಸ್ಪರ್ಧೆ ಇದ್ದರೆ, ಆಗ ನೀವು ಚಾಟ್ ಜಿಪಿಟಿಯನ್ನು ನಿಮ್ಮ ಸ್ವಂತ ಭಿನ್ನತೆ, ಜಾಣತನ ಹಾಗೂ ವ್ಯಾಖ್ಯಾನದಿಂದ ಬಳಸುತ್ತೀರಿ' ಎಂದು ವಿವರಣೆ ನೀಡಿದ್ದಾರೆ.
ಸಾರ್ವಜನಿಕ ಪರೀಕ್ಷೆಗೆ ಚಾಟ್‌ಜಿಪಿಟಿ ಪ್ರತಿಸ್ಪರ್ಧಿ ಬಾರ್ಡ್ ಲಭ್ಯ; ಉದ್ಯೋಗಿಗಳಿಗೆ ಗೂಗಲ್ ಸಿಇಒ ಎಚ್ಚರಿಕೆ ಮೇಲ್
ಮೂರ್ತಿ ಅವರ ಸಂಪತ್ತು
ಫೋರ್ಬ್ಸ್ ವೆಬ್ ಸೈಟ್ ನಲ್ಲಿರುವ ಮಾಹಿತಿ ಪ್ರಕಾರ ನಾರಾಯಣ ಮೂರ್ತಿ ಅವರ ನಿವ್ವಳ ಸಂಪತ್ತು 4.1 ಬಿಲಿಯನ್ ಅಮೆರಿಕನ್ ಡಾಲರ್ ಇದೆ. ಇನ್ನು ಮೂರ್ತಿ ಅವರ ವಿಶೇಷ ಸಾಧನೆಗಳು ಹಾಗೂ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ ಪದ್ಮವಿಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಮನೇಲಿ ಉಳಿದಿರೋ ಪದಾರ್ಥ ಬಳಸಿ ಥಟ್ಟಂತ ಅಡುಗೆ ಮಾಡಲು ಹೇಳಿಕೊಟ್ಟ ChatGPT
ಚಾಟ್ ಜಿಪಿಟಿ ಎಂದರೇನು?
ಚಾಟ್ ಜೆನೆರೇಟಿವ್ ಪ್ರೀ-ಟ್ರೈನ್ಡ್ ಟ್ರಾನ್ಸ್‌ಫಾರ್ಮರ್ ಎಂಬುದು (ಚಾಟ್ ಜಿಪಿಟಿ) ಇದರ ಪೂರ್ಣ ರೂಪ. ಅಮೆರಿಕದ ಓಪನ್ ಎಐ ಸಂಸ್ಥೆ ಈ ಹೊಸ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಸದ್ಯದ ಮಟ್ಟಿಗೆ ಜಗತ್ತಿನ ಅತ್ಯಂತ ಪ್ರಭಾವಶಾಲಿ, ತೀಕ್ಷ್ಣ ಬುದ್ಧಿಯ ತಂತ್ರಜ್ಞಾನ ಎಂಬ ಹಿರಿಮೆಗೆ ಇದು ಪಾತ್ರವಾಗಿದೆ. ಈ ಚಾಟ್ ಜಿಪಿಟಿಗೆ ನೀವು ಲಿಖಿತ ಅಥವಾ ಮೌಖಿಕವಾಗಿ ಯಾವುದೇ ಪ್ರಶ್ನೆ ಕೇಳಿದರೆ, ಅದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಗಳನ್ನೆಲ್ಲ ಸಂಗ್ರಹಿಸಿ, ಮಾನವನ ಮಿದುಳಿನ ರೂಪದಲ್ಲಿ ಚಿಂತಿಸಿ, ಅದಕ್ಕೊಂದು ರೂಪ ಕೊಟ್ಟು ನಮ್ಮ ಮುಂದೆ ಇಡುತ್ತದೆ.