Personal Finance : ಹೆಚ್ಚು ಖರ್ಚು ಮಾಡೋ ಅಭ್ಯಾಸವಿದ್ರೆ ಈ ಟಿಪ್ಸ್ ಫಾಲೋ ಮಾಡಿ
ಕೆಲವರ ಕೈನಲ್ಲಿ ಹಣ ಕೊಡೊದು ಮಂಗನ ಕೈನಲ್ಲಿ ಮಾಣಿಕ್ಯ ಕೊಟ್ಟಂತೆ. ಯಾವ ಪರಿವೆ ಇಲ್ಲದೆ ಅವರು ಹಣ ಖರ್ಚು ಮಾಡ್ತಾರೆ. ಮುಂದೆ ಸಾಲದ ಹೊರೆಯಲ್ಲಿ ಸಿಕ್ಕು ಒದ್ದಾಡ್ತಾರೆ. ತುರ್ತು ಪರಿಸ್ಥಿತಿಯಲ್ಲಿ ಪರರ ಮುಂದೆ ಕೈ ಒಡ್ಡುತ್ತಾರೆ. ಅದೆಲ್ಲಕ್ಕಿಂತ ಮೊದಲೇ ಎಚ್ಚೆತ್ರೆ ಎಲ್ಲವೂ ಸುಗಮ.
ಹಣವನ್ನು ಸಂಪಾದನೆ ಮಾಡೋದು ಎಷ್ಟು ಕಷ್ಟವೋ ಅದೇ ರೀತಿ ಹಣವನ್ನು ಉಳಿತಾಯ ಮಾಡೋದು ಕೂಡ ಸವಾಲಿನ ಕೆಲಸ. ಹಣ ಕಾಣ್ತಿದ್ದಂತೆ ಹೆಣವೂ ಬಾಯಿಬಿಡ್ತು ಎನ್ನುವ ಮಾತಿದೆ. ಖಾತೆಯಲ್ಲಿ ಹಣ ಹೆಚ್ಚಾಗ್ತಿದ್ದಂತೆ ಕೈ ತುರಿಸೋಕೆ ಶುರುವಾಗುತ್ತದೆ. ಬೇಕಾಗಿದ್ದು, ಬೇಡವಾಗಿದ್ದು ಎಲ್ಲ ವಸ್ತುಗಳ ಖರೀದಿ ಆರಂಭವಾಗುತ್ತದೆ. ಹಣ ಎಲ್ಲಿ ಖರ್ಚಾಯ್ತು ಅಂದ್ರೆ ಲೆಕ್ಕ ಇರೋದಿಲ್ಲ. ಬೇಕಾಬಿಟ್ಟಿ ಹಣ ಖರ್ಚು ಮಾಡಿ, ಕೈ ಖಾಲಿಯಾದಾಗ್ಲೇ ಜ್ಞಾನೋದಯವಾಗೋದು. ಇನ್ಮುಂದೆ ಹಿಡಿತದಲ್ಲಿರಬೇಕು ಎಂದುಕೊಂಡ್ರೂ ಕೆಲವರಿಗೆ ಇದು ಸಾಧ್ಯವಾಗೋದಿಲ್ಲ.
ಹಿಂದೆ ಕೈನಲ್ಲಿ ನಗದು (Cash) ಮಾತ್ರ ಇರ್ತಾಯಿತ್ತು. ಹಾಗಾಗಿ ಅದು ಖಾಲಿಯಾದ್ರೆ ಮುಂದೆ ಕಷ್ಟ ಎನ್ನುವ ಕಾರಣಕ್ಕೆ ಲೆಕ್ಕ ಹಾಕಿ ಅನೇಕರು ಖರ್ಚು ಮಾಡ್ತಿದ್ದರು. ಆದ್ರೆ ಇದು ಆನ್ಲೈನ್ (Online ) ಯುಗ. ಖಾತೆಯಲ್ಲಿರುವ ಹಣ ವರ್ಗಾವಣೆಯಾಗೋದು ತಿಳಿಯೋದೇ ಇಲ್ಲ. ಕ್ರೆಡಿಟ್ ಕಾರ್ಡ್ ಉಜ್ಜೋದ್ರಿಂದ ನಾವೆಷ್ಟು ಖರ್ಚು ಮಾಡ್ತಿದ್ದೇವೆ ಎಂಬ ಲೆಕ್ಕ ನಮಗೆ ಸರಿಯಾಗಿ ಸಿಗೋದಿಲ್ಲ. ಕೊನೆಯಲ್ಲಿ ಸಾಲ ಮೈಮೇಲೆ ಬಂದಾಗ ತೀರಿಸೋದು ಹೇಗೆ ಎನ್ನುವ ಸಮಸ್ಯೆ ಶುರುವಾಗುತ್ತದೆ. ನಾವಿಂದು ಅತಿಯಾಗಿ ಹಣ ಖರ್ಚು ಮಾಡುವ ಜನರು ಅದನ್ನು ಹೇಗೆ ನಿಯಂತ್ರಿಸಬೇಕು, ಉಳಿತಾಯದ ಕಡೆ ಹೇಗೆ ವಾಲಬೇಕು ಅನ್ನೋದನ್ನು ಹೇಳ್ತೇವೆ.
ಮನೆ ಖರೀದಿಯಲ್ಲಿ ಪತ್ನಿ ಪಾಲುದಾರಳೇ? ಹಾಗಿದ್ರೆ ಆಸ್ತಿ ಆದಾಯ ತೆರಿಗೆಯಲ್ಲೂ ಆಕೆಗೆ ಪಾಲಿದೆ!
ಸಂಬಳಕ್ಕೆ ತಕ್ಕ ಬಜೆಟ್ (Budget) : ಗಳಿಸೋದು ನೂರು ರೂಪಾಯಿ, ಖರ್ಚು ಮಾಡೋದು ಇನ್ನೂರು ರೂಪಾಯಿ ಆದ್ರೆ ಕ್ರೆಡಿಟ್ ಕಾರ್ಡ್ (Credit Card) ಬಿಲ್ ತುಂಬೋದು ಕಷ್ಟವಾಗುತ್ತದೆ. ಹಾಗಾಗಿ ನಿಮ್ಮ ಸಂಬಳಕ್ಕೆ ತಕ್ಕಂತೆ ತಿಂಗಳ ಮೊದಲೇ ಬಜೆಟ್ ಸಿದ್ಧಪಡಿಸಿಕೊಳ್ಳಿ. ಈ ತಿಂಗಳು ಎಷ್ಟು ಹಣ ಖರ್ಚು ಮಾಡ್ಬೇಕು ಎಂಬುದನ್ನು ಮೊದಲೇ ನಿಗದಿಪಡಿಸಿಕೊಂಡು ಖರ್ಚು ಮಾಡಿ. ಅನಿವಾರ್ಯ ಪರಿಸ್ಥಿತಿಯನ್ನು ಹೊರತುಪಡಿಸಿ ಮತ್ತ್ಯಾವುದೇ ಸಂದರ್ಭದಲ್ಲೂ ಬಜೆಟ್ ಹೊರಗೆ ಖರ್ಚು ಮಾಡೋಕೆ ಹೋಗ್ಬೇಡಿ. ಈ ಸಣ್ಣ ಟಿಪ್ಸ್ ನಿಮ್ಮ ಭವಿಷ್ಯಕ್ಕೆ ದೊಡ್ಡ ನೆರವು ನೀಡುತ್ತದೆ ನೆನಪಿರಲಿ.
ಉಳಿತಾಯ ಬಹಳ ಮುಖ್ಯ : ಕೆಲಸಕ್ಕೆ ಸೇರಿ ವರ್ಷವಾದ್ರೂ ಉಳಿತಾಯ ಶುರು ಮಾಡಿಲ್ಲವೆಂದ್ರೆ ಮುಂದೆ ಕಷ್ಟವಾಗುತ್ತದೆ. ನಿಮ್ಮ ಸಂಬಳದ ಒಂದು ಭಾಗವನ್ನು ನೀವು ಉಳಿತಾಯ ಮಾಡ್ಲೇಬೇಕು. ಹೆಚ್ಚು ಖರ್ಚು ಮಾಡ್ತೇನೆ ಎನ್ನುವವರು ಅನವಶ್ಯಕ ವಸ್ತುಗಳ ಖರೀದಿಗೆ ಖರ್ಚು ಮಾಡುವ ಹಣವನ್ನು ಉಳಿತಾಯಕ್ಕೆ ಹಾಕಿ. ತಿಂಗಳ ಆರಂಭದಲ್ಲಿಯೇ ಹೂಡಿಕೆಯಲ್ಲಿ ಹಣವನ್ನು ಹಾಕಿ. ನಿಮ್ಮ ಖಾತೆಯನ್ನು ಹೂಡಿಕೆ ಖಾತೆಗೆ ಲಿಂಕ್ ಮಾಡಿದ್ರೆ ಅಟೊಮೆಟಿಕ್ ಆಗಿ ಹೂಡಿಕೆ ಖಾತೆಗೆ ಹಣ ವರ್ಗಾವಣೆಯಾಗುತ್ತದೆ.
ಕ್ರೆಡಿಟ್ ಕಾರ್ಡ್ ಉಜ್ಜೋವಾಗ ಇದು ನೆನಪಿರಲಿ : ಕೈನಲ್ಲಿ ಕ್ರೆಡಿಟ್ ಕಾರ್ಡ್ ಇದ್ರೆ ಶಾಪಿಂಗ್ ಮಾಡೋಕೆ ಹೆಚ್ಚು ಧೈರ್ಯ ಬರುತ್ತೆ. ಅದೇ ಕಾರ್ಡ್ ಇಲ್ಲವೆಂದ್ರೆ ಖರ್ಚು ಮಾಡೋಕೆ ಹಿಂದು ಮುಂದು ನೋಡ್ತೇವೆ. ಒಂದ್ವೇಳೆ ಕ್ರೆಡಿಟ್ ಕಾರ್ಡ್ ಇದೆ ಎಂದಾದ್ರೆ ನೀವು ಖರ್ಚು ಮಾಡುವ ಮೊದಲು ನಾಲ್ಕೈದು ಬಾರಿ ಆಲೋಚನೆ ಮಾಡಿ ನಂತ್ರ ಖರ್ಚು ಮಾಡಿ. ಇಲ್ಲವೆಂದ್ರೆ ಸಾಲ ತಲೆಮೇಲೆ ಬರುತ್ತೆ.
ಅಗತ್ಯ ವಸ್ತುವಿಗೆ ಆದ್ಯತೆ : ಮೊದಲೇ ಹೇಳಿದಂತೆ ಆಫರ್ ಇದೆ ಅಂತಾ ಬೇಕಾಬಿಟ್ಟಿ ವಸ್ತುಗಳನ್ನು ನಾವು ಖರೀದಿ ಮಾಡ್ತೇವೆ. ಇದು ತಪ್ಪು. ಶಾಪಿಂಗ್ ಮಾಡುವ ಮುನ್ನ ಯಾವುದು ಬೇಕು, ಯಾವುದು ಬೇಡ ಎಂಬುದನ್ನು ಪಟ್ಟಿ ಮಾಡಿ. ಶಾಪಿಂಗ್ ವೇಳೆ ಮನಸ್ಸನ್ನು ಚಂಚಲಗೊಳಿಸಲು ಬಿಡಬೇಡಿ. ಮಾರುಕಟ್ಟೆಗೆ ಹೋಗೋದಿದ್ರೆ ನಿಮ್ಮ ಅಗತ್ಯದ ವಸ್ತು ಸಿಗುವ ಮಳಿಗೆಗೆ ಮಾತ್ರ ಹೋಗಿ, ವಸ್ತು ಖರೀದಿಸಿ ಹಿಂತಿರುಗಿ. ಆನ್ಲೈನ್ ಶಾಪಿಂಗ್ ವೇಳೆ ಕೂಡ ಬೇರೆ ಆಫರ್ ಗಳನ್ನು ಗಮನಿಸುವ ಗೋಜಿಗೆ ಹೋಗ್ಬೇಡಿ.
ನಿಮ್ಗೆ ಗೊತ್ತಾ, ಎಟಿಎಂ ಕಾರ್ಡ್ ಹೊಂದಿರೋರಿಗೆ ಸಿಗುತ್ತೆ 10 ಲಕ್ಷ ರೂ. ವಿಮಾ ಕವರೇಜ್!
ಇನ್ನೊಂದು ಖಾತೆಯಿರಲಿ : ಅತಿ ಹೆಚ್ಚು ಖರ್ಚು ಮಾಡೋದ್ರಲ್ಲಿ ನೀವು ಮುಂದಿದ್ದೀರಿ ಎಂದಾದ್ರೆ ನೀವು ಇನ್ನೊಂದು ಬ್ಯಾಂಕ್ ಖಾತೆ ತೆರೆಯೋದು ಒಳ್ಳೆಯದು. ಆ ಬ್ಯಾಂಕ್ ಖಾತೆಗೆ ಆದಾಯದ ಸ್ವಲ್ಪ ಹಣವನ್ನು ವರ್ಗಾಯಿಸಿ. ಆ ಖಾತೆಯ ಹಣವನ್ನು ಅಪ್ಪಿತಪ್ಪಿಯೂ ತೆಗೆಯುವ ಸಾಹಸಕ್ಕೆ ಹೋಗ್ಬೇಡಿ.