ಇಂಜಿನಿಯರಿಂಗ್ ಡ್ರಾಪ್ ಔಟ್ ವಿದ್ಯಾರ್ಥಿ ಯೂಟ್ಯೂಬ್ ಚಾನೆಲ್ ಆದಾಯ 9100 ಕೋಟಿ ರೂ.; ಇದು ಫಿಸಿಕ್ಸ್ ವಾಲಾನ ಕಥೆ
ಈತ ಐಐಟಿ ಸೇರುವ ಕನಸು ಕಂಡಿದ್ದ,ಅದು ಈಡೇರಲಿಲ್ಲ.ಇಂಜಿನಿಯರಿಂಗ್ ಕಾಲೇಜು ಸೇರಿದರೂ ಪದವಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದರೆ, ಯೂಟ್ಯೂಬ್ ಚಾನೆಲ್ ಮೂಲಕ ಪಾಠ ಹೇಳಿ ಯಶಸ್ಸು ಕಂಡಿರುವ ಈತ ಈಗ 9100 ಕೋಟಿ ರೂ. ಮೌಲ್ಯದ 'ಫಿಸಿಕ್ಸ್ ವಾಲಾ' ಎಂಬ ಎಡ್ ಟೆಕ್ ಸಂಸ್ಥೆ ಒಡೆಯ.
Business Desk:ಪ್ರತಿ ವರ್ಷ ಇಂಜಿನಿಯರಿಂಗ್ ಮಾಡಲು ಬಯಸುವ ಲಕ್ಷಾಂತರ ವಿದ್ಯಾರ್ಥಿಗಳು ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸೇರುವ ಕನಸು ಕಂಡಿರುತ್ತಾರೆ. ಆದರೆ, ಕೆಲವೇ ಕೆಲವು ವಿದ್ಯಾರ್ಥಿಗಳು ಮಾತ್ರ ಇದರಲ್ಲಿ ಯಶಸ್ಸು ಗಳಿಸುತ್ತಾರೆ. ಈ ರೀತ ಐಐಟಿ ಸೇರುವ ಕನಸು ಕಂಡವರಲ್ಲಿ ಅಲಖ್ ಪಾಂಡೆ ಕೂಡ ಒಬ್ಬರು. ಆದರೆ, ಅಲಖ್ ಪಾಂಡೆ ಅವರಿಗೆ ಜೆಇಇ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರೂ ಅಲಖ್ ಐಐಟಿ ಪ್ರವೇಶಿಸಲು ಸಾಧ್ಯವಾಗದೆ ಎಚ್ ಬಿಟಿಐ ಎಂಬ ಮತ್ತೊಂದು ಪ್ರತಿಷ್ಟಿತ ಕಾಲೇಜಿಗೆ ಸೇರ್ಪಡೆಗೊಳ್ಳುತ್ತಾರೆ. ಆದರೆ, ಅಲಖ್ ಬಿ.ಟೆಕ್ ಪದವಿ ಪೂರ್ಣಗೊಳಿಸದೆ ಕಾಲೇಜಿನಿಂದ ಡ್ರಾಪ್ ಔಟ್ ಆಗುತ್ತಾರೆ. ಇದೇ ಅವರ ಬದುಕಿಗೆ ತಿರುವು ನೀಡಿತು. ಹೊಸ ದಾರಿಯೊಂದನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಾಯಿತು. ಕಾಲೇಜು ತರಗತಿಗಳಿಗೆ ಬದಲಾಗಿ ಪರ್ಯಾಯ ಶಿಕ್ಷಣ ನೀಡುವ ದಾರಿ ಬಗ್ಗೆ ಅಲಾಖ್ ಯೋಚಿಸುತ್ತಾರೆ. ಆಗ ಅವರಿಗೆ ಹೊಳೆದಿದ್ದು ಯೂಟ್ಯೂಬ್ ಚಾನೆಲ್. ಯೂಟ್ಯೂಬ್ ಚಾನೆಲ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ಅಲಾಖ್ ಪ್ರಾರಂಭಿಸುತ್ತಾರೆ. ಇಂದು ಈ ಚಾನೆಲ್ 9100 ಕೋಟಿ ರೂ.ಎಡ್ ಟೆಕ್ ಸಂಸ್ಥೆಯಾಗಿ ಬೆಳೆದಿದೆ.
ಅಲಖ್ ಪಾಂಡೆ ಯೂಟ್ಯೂಬ್ ಚಾನೆಲ್ ಅನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸುತ್ತಾರೆ. ಟ್ಯೂಷನ್ ಶುಲ್ಕದಿಂದ ಅವರ ಮೊದಲ ಗಳಿಕೆ 5,000ರೂ. ಆಗಿತ್ತು. ಆದರೆ, ಅವರು ತಮ್ಮ ಯೂಟ್ಯೂಬ್ ಚಾನೆಲ್ ಜನಪ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲ, ಅದನ್ನು 9100 ಕೋಟಿ ರೂ. ಮೌಲ್ಯದ 'ಫಿಸಿಕ್ಸ್ ವಾಲಾ' ಎಂಬ ಎಡ್ ಟೆಕ್ ಸಂಸ್ಥೆಯನ್ನಾಗಿ ಕೂಡ ಪರಿವರ್ತಿಸಿದರು. ಇಂದು 'ಫಿಸಿಕ್ಸ್ ವಾಲಾ' ಅನ್ನೋದು ಜನಪ್ರಿಯ ಇ-ಕಲಿಕಾ ತಾಣವಾಗಿದೆ. ಇದು 61 ಯೂಟ್ಯೂಬ್ ಚಾನೆಲ್ ಗಳನ್ನು ಹೊಂದಿದ್ದು 31 ಮಿಲಿಯನ್ ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಅಲ್ಲದೆ, ಪಾಂಡೆ ಉತ್ತರ ಪ್ರದೇಶದ ಅತೀಕಿರಿಯ ವಯಸ್ಸಿನ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ.
ಬೆಂಗಳೂರಿನ ಈ ಕಾಫಿ ಶಾಪ್ ಈಗ Starbucks ಪ್ರಬಲ ಎದುರಾಳಿ;ಈ ಸಂಸ್ಥೆಗಾಗಿ ಅಮೆರಿಕದ ಉದ್ಯೋಗ ತ್ಯಜಿಸಿದ್ದ ಸಿಇಒ
ಅಲಖ್ ಪಾಂಡೆ ಬಗ್ಗೆ ಇನ್ನೊಂದು ಆಸಕ್ತಿಕರ ಸಂಗತಿ ಹೇಳಲೇಬೇಕು. ಕಂಪನಿ ಪ್ರಾರಂಭಿಸಿದ ದಿನದಿಂದ ಈ ತನಕ ಅದನ್ನು ಯಶಸ್ವಿಯಾಗಿ ನಡೆಸಿದ ಎಡ್ ಟೆಕ್ (edtech) ಉದ್ಯಮಿ ಅಂದ್ರೆ ಅವರೊಬ್ಬರೇ. 2021ರಲ್ಲಿ ಪಾಂಡೆ ಅವರ ಕಂಪನಿ 9.4 ಕೋಟಿ ರೂ. ಲಾಭ ಗಳಿಸಿತ್ತು. ಇನ್ನು 2022ರಲ್ಲಿ 133.7 ಕೋಟಿ ರೂ. ಹಾಗೂ 2023ರಲ್ಲಿ 108 ಕೋಟಿ ರೂ. ಲಾಭ ಗಳಿಸಿತ್ತು. ಇನ್ನು ಇತ್ತೀಚಿನ ದಿನಗಳಲ್ಲಿ ಇತರ ಆನ್ ಲೈನ್ ಶೈಕ್ಷಣಿಕ ತರಬೇತಿ ನೀಡುವ ಸಂಸ್ಥೆಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದರೆ, ಫಿಸಿಕ್ಸ್ ವಾಲಾ ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಉತ್ತರ ಪ್ರದೇಶದ ನೋಯ್ಡಾ ಅನ್ನು ಕೇಂದ್ರಸ್ಥಾನವಾಗಿಸಿಕೊಂಡು ಫಿಸಿಕ್ಸ್ ವಾಲಾ ಕಾರ್ಯನಿರ್ವಹಿಸುತ್ತಿದೆ.
ದಿನಕ್ಕೆ 1 ಕೋಟಿ ಗಳಿಸುವ ಡೆಲಿವರಿ ಬಾಯ್‌ಗೆ ವೇತನವಿಲ್ಲ, ಆದ್ರೂ 700 ಕೋಟಿ ರೂ ದಾನ ಮಾಡಿದ!
ಅಲಖ್ ಪಾಂಡೆ ಇಂದು ಯಶಸ್ವಿ ಹಾಗೂ ಶ್ರೀಮಂತ ಉದ್ಯಮಿಯಾಗಿರಬಹುದು. ಆದರೆ, ಅವರು ಈ ಸ್ಥಾನ ತಲುಪಲು ಸಾಕಷ್ಟು ಕಠಿಣ ಹಾದಿಯನ್ನು ಸವೆಸಿದ್ದಾರೆ. ಸಾಕಷ್ಟು ವರ್ಷಗಳ ಕಾಲ ಆರ್ಥಿಕ ಸಂಕಷ್ಟ ಅನುಭವಿಸಿ ಆ ಬಳಿಕ ಯಶಸ್ಸು ಕಂಡಿದ್ದಾರೆ. ಅಲಖ್ ಪಾಂಡೆ ಅವರ ನಿವ್ವಳ ಆದಾಯ 4,400 ಕೋಟಿ ರೂ. ಇದೆ. ಕಳೆದ ವರ್ಷ ಅವರು ಪ್ರಯಾಗ್ ರಾಜ್ ನ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದರು. ಈ ವರ್ಷ ಫಿಸಿಕ್ಸ್ ವಾಲಾ ಶೇ.100ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಇತ್ತೀಚೆಗಷ್ಟೇ ಅವರು ತಿಳಿಸಿದ್ದರು. ಇನ್ನು ವೇತನದ ಆಧಾರದಲ್ಲಿ ನೋಡಿದರೆ ಫಿಸಿಕ್ಸ್ ವಾಲಾ ಭಾರತದ ಅತ್ಯಧಿಕ ವೇತನ ನೀಡುವ ಎಡ್ ಟೆಕ್ (Edtech) ಉದ್ಯಮವಾಗಿದೆ.