ಶತಮಾನೋತ್ಸವ ಸಂಭ್ರಮದಲ್ಲಿ ಕರ್ನಾಟಕ ಬ್ಯಾಂಕ್ :ಸಣ್ಣ ಚೀಟಿಯಿಂದ ಮೊಬೈಲ್ ಬ್ಯಾಂಕಿಂಗ್‌ವರೆಗೆ ನಡೆದು ಬಂದ ಹಾದಿ ಅಮೋಘ
ಲೆಕ್ಕ ಪತ್ರದ ಸಣ್ಣ ಚೀಟಿಯಿಂದ ಶುರುವಾಗಿ ಇಂದು ಆನ್‌ಲೈನ್ ಜೊತೆ ಮೊಬೈಲ್ ಬ್ಯಾಂಕಿಂಗ್ ಮೂಲಕ ಕುಳಿತಲ್ಲಿಂದಲೇ ಅಂಗೈಯಲ್ಲೇ ಎಲ್ಲಾ ವ್ಯವಹಾರ ಮುಗಿಸುವಂತಹ ಮಟ್ಟಕ್ಕೆ ಬೆಳೆದಿರುವ ಕರ್ನಾಟಕ ಬ್ಯಾಂಕ್‌ಗೆ ಇಂದು ನೂರು ವರ್ಷದ ಸಂಭ್ರಮ. 100 ವರ್ಷದ ಈ ನಡೆದು ಬಂದ ಹಾದಿಯ ಬಗ್ಗೆ ಇಲ್ಲಿದೆ ವಿಶೇಷ ಲೇಖನ.
ಬೆಂಗಳೂರು: ವಾಹಹನ ದಟ್ಟಣೆಯಿರುವ ರಸ್ತೆಯಲ್ಲಿ ಸಣ್ಣ ವಾಹನವೊಂದು ತಿರುವು ತೆಗೆದುಕೊಳ್ಳುವುದಕ್ಕೆ ಪೂರ್ವ ತಯಾರಿ ಬೇಕು. ಆದರೆ ಅದೇ ರೀತಿಯಲ್ಲಿ ಸರಳ ರೇಖೆಯಂತಿರುವ ರೈಲು ಮಾರ್ಗದಲ್ಲಿ ರೈಲು ತಿರುವು ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಸಾವಿರಾರು ಪ್ರಯಾಣಿಕರು, ಬೋಗಿಗಳು ಮತ್ತು ದೂರ ಪ್ರಯಾಣದ ಜವಾಬ್ದಾರಿಗಳನ್ನು ಹೊತ್ತ ಬೃಹತ್ ರೈಲಿನ ಸಂಚಾರವು ವಿಭಿನ್ನ ರೀತಿಯಲ್ಲಿರುತ್ತದೆ. ಬರೋಬ್ಬರಿ ನೂರು ವರ್ಷಗಳನ್ನು ಕಂಡು, ಬ್ಯಾಂಕಿಂಗ್ ಇತಿಹಾಸದಲ್ಲಿ ತನ್ನದೇ ಆದ ಛಾಪು ಒತ್ತಿರುವ ಕರ್ನಾಟಕ ಬ್ಯಾಂಕ್ ನ ಮುನ್ನಡೆಯೂ ಇದೇ ರೀತಿಯಾಗಿ ಸಾಗಿ ಬಂದಿದೆ. ಒಂದು ಶತಮಾನದಷ್ಟು ದೀರ್ಘವಾದ ಇತಿಹಾಸವನ್ನು ಕಂಡಿರುವ ಬ್ಯಾಂಕ್ ನ ಶತಮಾನೋತ್ಸವದ ಸಂಭ್ರಮ ಇದೇ 18ರಂದು ಅಂದರೆ ಇಂದು ಬ್ಯಾಂಕ್‌ಗಳ ತವರೂರು ಮಂಗಳೂರಿನಲ್ಲಿ ನಡೆಯಲಿದೆ.
ಜ್ಞಾನಪೀಠ ಪುರಸ್ಕೃತ ಕನ್ನಡದ ಧೀಮಂತ ಸಾಹಿತಿ ಕೋಟ ಶಿವರಾಮ ಕಾರಂತರು ಬ್ಯಾಂಕಿಗಾಗಿ ರೂಪಿಸಿಕೊಟ್ಟ ಲಾಂಛನವು ಯಶಸ್ವೀ ಓಟವನ್ನು ಮುಂದುವರೆಸಿದೆ. ಈ ಸುದೀರ್ಘ ಪಯಣದ ಹಿಂದೆ ಬ್ಯಾಂಕ್ ದಾಟಿ ಬಂದ ಸಾಧನೆಯ ಮೈಲಿಗಲ್ಲುಗಳು ಅನೇಕ ಇವೆ. ಅವು ಹೊಸಬರಿಗೆ ಮಾದರಿ. ಪರಂಪರೆಯ ಟ್ರೆಶರಿ. ಸಂಸ್ಥೆಗಿರುವ ಸಾಮರ್ಥದ ಸಿರಿ.
Watch: ಮೂರು ಕಂಪನಿಗಳ 11 ಕೋಟಿ ಮೌಲ್ಯದ ಷೇರು ಹೊಂದಿದ್ದರೂ, ಸರಳವಾಗಿ ಬದುಕುವ ಕರ್ನಾಟಕದ ಹಿರಿಯ ಜೀವ!
ಠೇವಣಿ, ಬಡ್ಡಿದರ ಮುಂತಾದ ವಿಚಾರಗಳನ್ನು ಚೀಟಿಯಲ್ಲಿ ಬರೆಯುತ್ತಿದ್ದ ಕಾಲದಿಂದ ಹಿಡಿದು ಇಂದು ಬೆರಳತುದಿಯ ಸ್ಪರ್ಶದಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ನಿಭಾಯಿಸುವಷ್ಟರ ಮಟ್ಟಿಗೆ ಬೆಳೆಯುತ್ತ ಕರ್ನಾಟಕ ಬ್ಯಾಂಕ್ ಅನೇಕ ತಿರುವುಗಳನ್ನು ದಾಟಿ ಬಂದಿದೆ. ಬ್ರಿಟಿಷರ ಕಾಲದಲ್ಲಿ ಸೌತ್ ಕೆನರಾ ಎಂದು ಗುರುತಿಸಿಕೊಂಡಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಬ್ಯಾಂಕ್‌ಗಳ ತವರೂರು, ಕರಾವಳಿಯ ಆರ್ಥಿಕ ಶಿಸ್ತೇ ಬ್ಯಾಂಕಿಂಗ್ ಹಿನ್ನೆಲೆಯ ಕಾರಣವೆನ್ನಬಹುದು.
1906 ರಿಂದ 1945ರ ಅವಧಿಯಲ್ಲಿ ಸುಮಾರು 22 ಬ್ಯಾಂಕ್‌ಗಳು ಕರಾವಳಿಯಲ್ಲಿ ಆರಂಭವಾದವು. ಮದ್ರಾಸು ಪ್ರಾಂತ್ಯಕ್ಕೆ ಸೇರಿದ ಈ ಜಿಲ್ಲೆಯು ನಂತರದ ದಿನಗಳಲ್ಲಿ ಮೈಸೂರು ರಾಜ್ಯಕ್ಕೆ ಸೇರಿತು. 20ನೇ ಶತಮಾನದ ಆರಂಭದ ದಿನಗಳಲ್ಲಿ ಜನರ ಮನಸ್ಸಿನಲ್ಲಿ ರಾಷ್ಟ್ರವಾದವು ತೀವ್ರವಾಗಿ ಬೇರೂರಿತ್ತು. ನಮ್ಮ ದೇಶದ ಸಂಸ್ಥೆಗಳು ಸಬಲವಾಗಿ ಬೆಳೆಯಬೇಕು ಎಂಬ ಆಶಯದಿಂದ ನಿಷ್ಕಲ್ಮಶವಾದ ಮನಸ್ಸಿನಿಂದ ದುಡಿಯುವವರ ಸಂಖ್ಯೆಯೇ ಹೆಚ್ಚಾಗಿತ್ತು ಆ ಕಾಲದಲ್ಲಿ, ಕರಾವಳಿಯಲ್ಲಿದ್ದ ಜಮೀನುದಾರಿ ಕೃಷಿಕರು, ವಕೀಲರು ಮತ್ತಿತರ ಶ್ರೀಮಂತ ವರ್ಗದವರು ಈ ಸ್ವದೇಶ ಪ್ರೇಮದ ಕಾವಿನಲ್ಲಿ ಜನಪರವಾದ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅದರಲ್ಲಿ ಬ್ಯಾಂಕಿಂಗ್ ಕೂಡ ಒಂದು. ಇದೇ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಕೃಷಿಕರು, ವಕೀಲರು, ಹೊಟೇಲ್ ಉದ್ಯಮಿಗಳು ಬ್ಯಾಂಕೊಂದನ್ನು ಹುಟ್ಟುಹಾಕಲು ಮುಂದಾದರು. ಮದ್ರಾಸ್ ಶಾಸಕಾಂಗ ಮಂಡಳಿಯ ಸದಸ್ಯರಾದ ಡಾ. ಯು. ರಾಮರಾವ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಕರ್ಣಾಟಕ ಬ್ಯಾಂಕ್ ರೂಪು ಪಡೆದಿದ್ದು, 1924ರ ಫೆಬ್ರುವರಿ 18ರಂದು ಬ್ಯಾಂಕ್ ಸ್ಥಾಪನೆಗೊಂಡಿತು.
ಕನ್ನಡತನದ ಮಹತ್ವ ದೇಸೀವಾದದ ಪ್ರಭಾವದ ದೆಸೆಯಿಂದಲೇ ಬ್ಯಾಂಕ್‌ಗೆ ಕರ್ನಾಟಕ ಎಂಬ ಹೆಸರು ಬಂದಿರಬಹುದೇನೋ. ಹೀಗೆ ಒಂದು ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಅಂಬೆಗಾಲಿಟ್ಟ ಬ್ಯಾಂಕ್ ನಂತರದ ದಿನಗಳಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. 1949ರಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಬ್ಯಾಂಕಿನ ಡೆಪಾಸಿಟ್ 55.50 ಲಕ್ಷಕ್ಕೆ ಏರಿದ್ದು ಒಂಭತ್ತು ಶಾಖೆಗಳನ್ನು ಹೊಂದಿತ್ತು. 1953ನೇ ಇಸವಿಗೆ ಒಟ್ಟು ವಹಿವಾಟು ಒಂದು ಕೋಟಿಗೇರಿತ್ತು. ಬ್ಯಾಂಕ್‌ನ ಮತ್ತೊಂದು ಮಹತ್ವದ ಮೈಲಿಗಲ್ಲೆಂದರೆ ಸಂಸ್ಥಾಪಕರ ತಂಡದಲ್ಲಿದ್ದ ಕಕ್ಕುಂಜೆ ಸದಾಶಿವ ಅಡಿಗರ ಮಗ ಸೂರ್ಯನಾರಾಯಣ ಅಡಿಗರು ಬ್ಯಾಂಕ್ ಅರೆಕಾಲಿಕ ಅಧ್ಯಕ್ಷರಾಗಿ 1958ರಲ್ಲಿ ನೇಮಕವಾದುದು.
ಕರ್ನಾಟಕ ಬ್ಯಾಂಕ್‌ನಿಂದ ಕಸ್ಟಮ್ಸ್ ತೆರಿಗೆ ಪಾವತಿಗೆ ಅಸ್ತು
ನಾಡಿನ ರಾಜಕೀಯ ಸಾಂಸ್ಕೃತಿಕ ಕ್ಷೇತ್ರದ ಕುರಿತು ಅಪಾರ ಜ್ಞಾನ ಹೊಂದಿದ್ದ ಅಡಿಗರು ವೈಯಕ್ತಿಕವಾಗಿ ಪ್ರಭಾವಶಾಲಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಅವರ ಆ ಅವಧಿಯಲ್ಲಿಯೇ ಶೃಂಗೇರಿ ಬ್ಯಾಂಕ್, ಚಿತ್ರದುರ್ಗದ ಚಿತಾಲ್ಬುರ್ಗ್ ಬ್ಯಾಂಕ್, ಹುಬ್ಬಳ್ಳಿಯ ಬ್ಯಾಂಕ್ ಆಫ್ ಕರ್ನಾಟಕ ಕೂಡ ಕರ್ನಾಟಕ ಬ್ಯಾಂಕ್ ಜೊತೆ ವಿಲೀನವಾಯ್ತು. 1971ರಲ್ಲಿ ಅಡಿಗರು ಪೂರ್ಣಕಾಲಿಕ ಅಧ್ಯಕ್ಷರಾಗಿ ಆಯ್ಕೆಯಾದರು. ಅತ್ತ ದೇಶದ ವಾಣಿಜ್ಯ ರಾಜಧಾನಿಯೆಂದೇ ಗುರುತಿಸಿಕೊಂಡ ಮುಂಬೈಯಲ್ಲಿ ಮೊದಲ ಶಾಖೆ ತೆರೆಯಲಾಯಿತು. ಮತ್ತೊಂದು ವರ್ಷಕ್ಕೆ ನಿರ್ಮಾಣವಾದ ಸ್ವಂತ ಕೇಂದ್ರ ಕಚೇರಿಯನ್ನು ಆಗಿನ ರೈಲ್ವೆ ಸಚಿವ ಟಿ.ಎ. ಪೈ. ಅವರು ಉದ್ಘಾಟಿಸಿದರು.
ಎಪ್ಪತ್ತರ ಆರಂಭದಲ್ಲಿ ಬ್ಯಾಂಕ್ ಹೆಚ್ಚು ಶಾಖೆಗಳನ್ನು ತೆರೆಯುವತ್ತ ಗಮನ ಹರಿಸಿತು. ಸುವರ್ಣ ಮಹೋತ್ಸವ ಆಚರಣೆ ವೇಳೆಗೆ ಬ್ಯಾಂಕ್ 146 ಶಾಖೆಗಳನ್ನು ತೆರೆದಿತ್ತು. ಇದು ಖಾಸಗಿ ಕ್ಷೇತ್ರದ ಸಮರ್ಥ ಬ್ಯಾಂಕ್ ಎಂದು ಗುರುತಿಸಿಕೊಳ್ಳುತ್ತ ಹೆಚ್ಚು ಮನ್ನಣೆ ಪಡೆಯಲಾರಂಭಿಸಿತು. ಗ್ರಾಹಕರ ನಂಬಿಕೆಯೇ ಬ್ಯಾಂಕ್‌ನ ಭವಿಷ್ಯಕ್ಕೆ ಆಧಾರ ಎನ್ನುವುದನ್ನು ಗಾಢವಾಗಿ ನಂಬಿದ ಬ್ಯಾಂಕ್ ಇದು. ಬ್ಯಾಂಕ್ ಗಳ ರಾಷ್ಟ್ರೀಕರಣದ ಸವಾಲು ಎದುರಾದಾಗಲೂ ವ್ಯವಹಾರ ಕೌಶಲದಿಂದ ಬ್ಯಾಂಕ್ ತನ್ನ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡಿತು. ಬ್ಯಾಂಕ್ ಇಷ್ಟೊಂದು ದೀರ್ಘ ಇತಿಹಾಸವನ್ನು ಹೊಂದಿದೆ ಎನ್ನುವುದು ನಿಜಕ್ಕೂ ಅರಿವಿಗೆ ಬಂದುದು ಡಿಜಿಟಲ್ ಯುಗ ಪ್ರಾರಂಭವಾದಾಗ.
ಗ್ರಾಹಕರ ನಂಬಿಕೆಗೆ ಕರ್ನಾಟಕ ಬ್ಯಾಂಕ್ ಅರ್ಹ: ಶ್ರೀ
ಹೊಸದಾಗಿ ಆರಂಭವಾಗುತ್ತಿದ್ದ ಖಾಸಗಿ ಬ್ಯಾಂಕ್‌ಗಳು ಕಂಪ್ಯೂಟರೀಕರಣದೊಂದಿಗೇ ಗ್ರಾಹಕರನ್ನು ಸ್ವಾಗತಿಸುತ್ತಿದ್ದರೆ, ಕರ್ನಾಟಕ ಬ್ಯಾಂಕ್ ತನ್ನ ಲಕ್ಷಾಂತರ ಗ್ರಾಹಕರ ಖಾತೆ ದಾಖಲೆಗಳನ್ನು ಕಂಪ್ಯೂಟರ್‌ಗೆ ಅಳವಡಿಸುವ ಬೃಹತ್ ಕೆಲಸವನ್ನು ಕ್ಷಿಪ್ರವಾಗಿ ನಿಭಾಯಿಸಿತು. ಇನ್ಫೋಸಿಸ್ ಸಹಯೋಗದಲ್ಲಿ ಈ ಕಂಪ್ಯೂಟರೀಕರಣದ ಕೆಲಸ ಯಶಸ್ವಿಯಾಗಿ ಸಾಗಿತು. 2000ನೇ ಇಸವಿಯಲ್ಲಿ ಕೋರ್ ಬ್ಯಾಂಕಿಂಗ್ ಸೊಲ್ಯುಷನ್ ಅಳವಡಿಸಿಕೊಂಡ ಮೊದಲ ಖಾಸಗಿ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದು ಇತರ ಬ್ಯಾಂಕ್‌ಗಳಿಗೆ ಮಾದರಿಯಾಯಿತು.
ಕೃಷಿ ಮತ್ತು ಸುಸ್ಥಿರ ಇಂಧನದತ್ತ ಬ್ಯಾಂಕ್ ಹೆಜ್ಜೆ
ಕಂಪ್ಯೂಟರೀಕರಣದ ಕಾಯಕ ಶುರುವಾಗುವ ಸಂದರ್ಭದಲ್ಲಿಯೇ ಬ್ಯಾಂಕ್ ಕೃಷಿಕರಿಗೆ ಅನುಕೂಲ ಕಲ್ಪಿಸುವ ಪ್ರಯತ್ನಗಳನ್ನು ಕೈಗೆತ್ತಿಕೊಂಡಿದ್ದು ಮಹತ್ವದ ವಿಷಯ. ಯಾಕೆಂದರೆ ಕೃಷಿಕರೇ ಬ್ಯಾಂಕಿನ ಬೆನ್ನೆಲುಬು ಆಗಿದ್ದರಿಂದ ಕೃಷಿ ಕಾರ್ಡ್‌ಗಳು ಅವರಿಗೆ ವ್ಯವಹಾರವನ್ನು ಸುಲಭ ಮಾಡಿಕೊಟ್ಟಿತು. ಕೃಷಿಕರಿಗೆ ಹೆಚ್ಚು ಸಾಲ ಯಾಕೆ ಕೊಡುತ್ತೀರಿ ಎಂದು ಆರ್‌ಬಿಐ ಅಧಿಕಾರಿಗಳು ಕೂಡ ಒಮ್ಮೆ ಬ್ಯಾಂಕ್‌ನ ಅಧಿಕಾರಿಗಳ ಬಳಿ ಪ್ರಶ್ನಿಸಿದ್ದು ಬ್ಯಾಂಕಿನಲ್ಲಿ ಸುದ್ದಿಯಾಗಿತ್ತು ಎಂದು ಬ್ಯಾಂಕ್‌ನಲ್ಲಿ ದೀರ್ಘಕಾಲ ಉದ್ಯೋಗಿಯಾಗಿ ವಿವಿಧ ಹುದ್ದೆಗಳಲ್ಲಿ ದುಡಿದು, ನಂತರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಪಿ.ಜಯರಾಮ್ ಭಟ್ ಒಮ್ಮೆ ಹೇಳಿದ್ದರು.
ಕೃಷಿಯು ಲಾಭದಾಯಕ ಕ್ಷೇತ್ರವಲ್ಲ ಎಂದು ಉದ್ಯಮ ಕ್ಷೇತ್ರವು ನಂಬಿದ್ದಾಗಲೇ ಬ್ಯಾಂಕ್ ಕೃಷಿಕರ ಪರವಾಗಿತ್ತು. ಈಗ ನೋಡಿದರೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೃಷಿಯನ್ನು ಆದ್ಯತಾ ರಂಗವನ್ನಾಗಿ ಪರಿಗಣಿಸಲಾಗಿದ್ದು, ಕೊಡಬೇಕಾದ ಸಾಲಕ್ಕೆ ಸಂಬಂಧಿಸಿ ಆರ್‌ಬಿಐಯೇ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಪಿ.ಜಯರಾಂ ಭಟ್ ಅವರ ಪ್ರಯತ್ನಗಳ ದೆಸೆಯಿಂದಾಗಿ ಬ್ಯಾಂಕ್ ಖಾಸಗಿ ಬ್ಯಾಂಕ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಸ್ಥಾನ ಪಡೆಯಿತು.
Karnataka Bank Recruitment 2023: ಕರ್ನಾಟಕ ಬ್ಯಾಂಕ್ ನಲ್ಲಿ ಖಾಲಿ ಇರುವ ಪ್ರೊಬೇಷನರಿ ಆಫಿಸರ್ ಹುದ್ದೆಗೆ ನೇಮಕಾತಿ
ಕುಂದಾಪುರ ತಾಲ್ಲೂಕಿನ ಅಮಾಸೆಬೈಲ್ ಹಳ್ಳಿಯು ನಕ್ಸಲ್ ಪೀಡಿತ ಹಳ್ಳಿ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ಅಲ್ಲಿನ ಜನರು ವಿದ್ಯುತ್ ಸಂಪರ್ಕದ ಕೊರತೆಯಿಂದ ಪಾಡುಪಡಬೇಕಾಗಿತ್ತು. ಕರ್ನಾಟಕ ಬ್ಯಾಂಕ್ ತನ್ನ ಸಾಮಾಜಿಕ ಹೊಣೆಗಾರಿಕೆಯ ನಿಧಿಯನ್ನು ಬಳಸಿಕೊಂಡು ಈ ಹಳ್ಳಿಗೆ ಸೌರ ವಿದ್ಯುತ್ ಅನ್ನುಕಲ್ಪಿಸಿಕೊಟ್ಟಿದೆ. ಇಡೀ ಹಳ್ಳಿಯೇ ಸೌರ ವಿದ್ಯುತ್ ಅನ್ನು ಅಳವಡಿಸಿಕೊಂಡಿದ್ದು ಸೋಲಾರ್ ಗ್ರಾಮವೆಂಬ ಖ್ಯಾತಿಗೆ ಪಾತ್ರವಾಗಿದೆ.
ಇದೇ ರೀತಿ ಮಲೆನಾಡಿನ ಹಲವು ಹಳ್ಳಿಗಳಲ್ಲಿ ಮನೆಗಳನ್ನು ಗುರುತಿಸಿ ಸೋಲಾರ್ ಅಳವಡಿಸುವ ಕೆಲಸಕ್ಕೆ ಬ್ಯಾಂಕ್ ಆಧಾರವಾಗಿದೆ. ಇದರಿಂದ ಆ ಮನೆಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಚೆನ್ನಾಗಿ ಓದಲು, ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಅವರ ಕೃತಜ್ಞತೆಯ ಮಾತುಗಳೇ ಬ್ಯಾಂಕ್‌ನ ಕೆಲಸವನ್ನು ಒತ್ತಿ ಹೇಳುತ್ತವೆ. ಪ್ರಸ್ತುತ ನೂರು ವರ್ಷಗಳನ್ನು ದಾಟಿ ಓಡುತ್ತಿರುವ ಬ್ಯಾಂಕ್, ಡಿಜಿಟಲ್ ಕ್ಷೇತ್ರದ ಅನೇಕ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಉತ್ಸಾಹದಲ್ಲಿ ಇದೆ. ಮಹಿಳೆಯರಿಗೆ, ಯುವಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ಸ್ನೇಹಿತನಂತೆ ಇರುವ ಬ್ಯಾಂಕ್ ಅಂಗೈಯಲ್ಲಿ ಬ್ಯಾಂಕಿಂಗ್ ತಂತ್ರಜ್ಞಾನವನ್ನು ಅಳವಡಿಸಿದ್ದು ಮುಂಚೂಣಿಯಲ್ಲಿದೆ.