ಹಣದುಬ್ಬರ ಹೆಚ್ಚಳದ ಪ್ರಭಾವ, ಜಪಾನ್ ಜಿಡಿಪಿ ಶೇ.2ರಷ್ಟು ಕುಸಿತ

ಹಣದುಬ್ಬರ ಹೆಚ್ಚಳ ಜಗತ್ತಿನ ಎಲ್ಲ ರಾಷ್ಟ್ರಗಳನ್ನೂ ಕಾಡುತ್ತಿದೆ. ಜಪಾನ್ ಕೂಡ ಇದಕ್ಕೆ ಹೊರತಾಗಿಲ್ಲ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಪಾನ್ ಆರ್ಥಿಕತೆ ಶೇ.2.1ರಷ್ಟು ಕುಸಿತ ಕಂಡಿದೆ. 

Japans GDP shrinks over 2percent amid high inflation anu

ಟೋಕಿಯೋ (ನ.15): ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಪಾನ್ ಆರ್ಥಿಕತೆ ಶೇ.2.1ರಷ್ಟು ಕುಸಿತ ಕಂಡಿದೆ. ಬಳಕೆ ಹಾಗೂ ರಫ್ತಿನಲ್ಲಿ ಇಳಿಕೆಯಾಗಿರೋದೆ ಇದಕ್ಕೆ ಕಾರಣ. ಇದರಿಂದ ಎರಡು ತ್ರೈಮಾಸಿಕದ ಬೆಳವಣಿಗೆಯಲ್ಲಿ ಕುಸಿತ ಕಂಡಿದೆ. ಹಣದುಬ್ಬರ ಹೆಚ್ಚುತ್ತಿರುವ ಸಂದರ್ಭದಲ್ಲಿ ಅದನ್ನು ನಿಯಂತ್ರಿಸಲು ಬ್ಯಾಂಕ್ ಆಫ್ ಜಪಾನ್ ಕೈಗೊಳ್ಳುತ್ತಿರುವ ಪ್ರಯತ್ನಗಳು ಕೂಡ ಫಲ ನೀಡುತ್ತಿಲ್ಲ. ನೊರಿನ್ ಚುಕಿನ್ ರಿಸರ್ಚ್ ಇನ್ಸಿಟಿಟ್ಯೂಟ್ ಮುಖ್ಯ ಆರ್ಥಿಕತಜ್ಞರಾದ ಟಕೇಶಿ ಮಿನಾಮಿ ಈ ಬಗ್ಗೆ ಮಾಹಿತಿ ನೀಡಿದ್ದು, ಬೆಳವಣಿಗೆ ಇಂಜಿನ್ ಸ್ಥಗಿತಗೊಂಡಿರುವ ಈ ಸಮಯದಲ್ಲಿ ಜಪಾನ್ ಆರ್ಥಿಕತೆ ಈ ತ್ರೈಮಾಸಿಕದಲ್ಲಿ ಕೂಡ ಸಂಕೋಚಿತಗೊಂಡರೆ ಅದರಲ್ಲಿ ನನಗೇನೂ ಅಚ್ಚರಿಯಿಲ್ಲ. ಜಪಾನ್ ಆರ್ಥಿಕ ಹಿಂಜರಿಕೆ ಎದುರಿಸುವ ಅಪಾಯವನ್ನು ನಿರಾಕರಿಸುವಂತಿಲ್ಲ ಎಂದಿದ್ದಾರೆ. ಜಗತ್ತಿನಾದ್ಯಂತ ಹಣದುಬ್ಬರ ಸಮಸ್ಯೆ ತಾಂಡವವಾಡುತ್ತಿದೆ. ಹಣದುಬ್ಬರ ತಡೆಗೆ ಆಯಾ ರಾಷ್ಟ್ರಗಳು ಕಠಿಣ ಹಣಕಾಸಿನ ಕ್ರಮಗಳನ್ನು ಕೂಡ ಕೈಗೊಳ್ಳುತ್ತಿವೆ. ಹಣದುಬ್ಬರ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿವೆ ಕೂಡ. ಜಪಾನ್ ನಲ್ಲಿ ಕೂಡ ಸದ್ಯ ಇಂಥದ್ದೇ ಪರಿಸ್ಥಿತಿ ಎದುರಾಗಿದೆ. 

ಗೃಹಸಂಬಂಧಿ ವೆಚ್ಚಗಳ ಮೇಲೆ ಪರಿಣಾಮ
ಜಪಾನ್ ನಲ್ಲಿ ಹಣದುಬ್ಬರ ಹೆಚ್ಚಳ ಗೃಹಸಂಬಂಧಿ ವೆಚ್ಚಗಳ ಮೇಲೆ ಪರಿಣಾಮ ಬೀರಿದೆ. ಇನ್ನು ಜಪಾನ್ ನಲ್ಲಿನ ಉತ್ಪಾದಕರ ಮೇಲೆ ಕೂಡ ಇದು ಪರಿಣಾಮ ಬೀರಿದ್ದು, ಜಾಗತಿಕ ಬೇಡಿಕೆ ತಗ್ಗಿದೆ. ಇನ್ನು ವೇತನಗಳ ಮೇಲೆ ಕೂಡ ಹಣದುಬ್ಬರ ಪ್ರಭಾವ ಬೀರಿದೆ. ಇದರಿಂದ ಗ್ರಾಹಕರ ಖರೀದಿ ಸಾಮರ್ಥ್ಯ ತಗ್ಗಿದ್ದು, ಒಂದು ವರ್ಷದ ಹಿಂದಿನ ಸಾಲಿಗೆ ಹೋಲಿಸಿದರೆ ಸೆಪ್ಟೆಂಬರ್ ನಲ್ಲಿ ಶೇ.2.4ರಷ್ಟು ಕಡಿಮೆಯಾಗಿದೆ. ಈ ಮೂಲಕ ಸತತ 18 ತಿಂಗಳಿಂದ ಇಳಿಕೆ ದಾಖಲಿಸಿದೆ. ಈ ನಡುವೆ ಪ್ರಧಾನಿ ಫುಮಿಯೋ ಕಿಶಿದ ವೇತನಗಳನ್ನು ಹೆಚ್ಚಿಸುವಂತೆ ಕಂಪನಿಗಳಿಗೆ ಕರೆ ನೀಡಿದ್ದಾರೆ. ಹಾಗೆಯೇ ಜೀವನ ನಿರ್ವಹಣೆ ವೆಚ್ಚ ಹೆಚ್ಚಳದಿಂದ ಏರಿಕೆಯಾಗುತ್ತಿರುವ ಅಗತ್ಯ ಸಾಮಗ್ರಿಗಳ ವೆಚ್ಚಗಳನ್ನು ತಗ್ಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಅಂಬಾನಿ ಜಿಯೋ ಮಾಲ್‌ ಚಿಲ್ಲರೆ ವ್ಯವಹಾರಕ್ಕೆ ಹೊಸ ಪ್ರತಿಸ್ಪರ್ಧಿ, 15000 ಕೋಟಿ ರೂ ಆಸ್ತಿಯ ಬಿಲಿಯನೇರ್ ವ್ಯಕ್ತಿ

ಬಳಕೆ ಹಾಗೂ ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ
ಈ ಹಿಂದಿನ ತ್ರೈಮಾಸಿಕದಲ್ಲಿ ಶೇ.0.9ರಷ್ಟು ಇಳಿಕೆ ಕಂಡ ಬಳಿಕ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಗ್ರಾಹಕರ ವೆಚ್ಚ ಮಾಡುವ ಸಾಮರ್ಥ್ಯ ಯಥಾಸ್ಥಿತಿಯಲ್ಲಿದೆ. ಆರ್ಥಿಕತಜ್ಞರು ಹಾಗೂ ಮಾಧ್ಯಮಗಳು ಶೇ. 0.2ರಷ್ಟು ಬೆಳವಣಿಗೆಯನ್ನು ಅಂದಾಜಿಸಿದ್ದರೂ ಯಾವುದೇ ಬದಲಾವಣೆಯಾಗಿಲ್ಲ. ಇನ್ನು ಬಂಡವಾಳ ವೆಚ್ಚ ಕೂಡ ಕಡಿಮೆಯಾಗಿದ್ದು, ಮೂರನೇ ತ್ರೈಮಾಸಿಕದಲ್ಲಿ ಶೇ.0.6ರಷ್ಟು ಇಳಿಕೆಯಾಗಿದ್ದು, ಏಪ್ರಿಲ್ -ಜೂನ್ ನಲ್ಲಿ ಶೇ.1ರಷ್ಟು ತಗ್ಗಿದೆ.

ರಫ್ತಿನಲ್ಲಿ ಇಳಿಕೆ, ದೇಶೀಯ ಬೇಡಿಕೆಯೂ ಕಡಿಮೆ
ಮೂರನೇ ತ್ರೈಮಾಸಿಕದಲ್ಲಿ ಜಪಾನ್ ಆರ್ಥಿಕಾ ಬೆಳವಣಿಗೆ ತಗ್ಗಲು ರಫ್ತಿನಲ್ಲಿ ಇಳಿಕೆಯಾಗಿರೋದು ಹಾಗೂ ದೇಶೀಯ ಬೇಡಿಕೆ ತಗ್ಗಿರೋದೆ ಕಾರಣ ಎಂದು ಹೇಳಲಾಗಿದೆ. ಆದರೆ, ಎರಡನೇ ತ್ರೈಮಾಸಿಕದಲ್ಲಿ ಕಾರು ಶಿಪ್ಪಮೆಂಟ್ ಹಾಗೂ ಪ್ರವಾಸೋದ್ಯಮದಿಂದ ನಿವ್ವಳ ರಫ್ತಿನಲ್ಲಿ ಏರಿಕೆ ಕಂಡುಬಂದಿದ್ದು, ಬೆಳವಣಿಗೆಗೆ ಕೊಡುಗೆ ನೀಡಿದೆ. ವೇತನದಲ್ಲಿ ಹೆಚ್ಚಳವಾಗದ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಕೂಡ ಬೇಡಿಕೆಯಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ. ಅಲ್ಲದೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಕಾರಣ ಬೇಡಿಕೆ ಕೂಡ ತಗ್ಗಿದೆ. 

ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಂದ ಹಣದುಬ್ಬರ ಹತ್ತಿಕ್ಕಲು ಬಾಂಡ್‌

ನಿಧಾನಗತಿಯ ಚೇತರಿಕೆ
ಕೋವಿಡ್ -19 ಮಹಾಮಾರಿಯಿಂದ ಎದುರಾದ ಆರ್ಥಿಕ ಹೊಡೆತಗಳಿಂದ ಜಪಾನ್ ಆರ್ಥಿಕತೆ ನಿಧಾನಗತಿಯ ಬೆಳವಣಿಗೆ ದಾಖಲಿಸುತ್ತಿದೆ. ಗಡಿಗಳನ್ನು ತೆರೆದಿರೋದು ಹಾಗೂ ನಿರ್ಬಂಧಗಳನ್ನು ತೆರವು ಮಾಡಿರೋದ್ರಿಂದ ಏಪ್ರಿಲ್-ಜೂನ್ ಅವಧಿಯಲ್ಲಿ ಆರ್ಥಿಕತೆ ಉತ್ತಮ ಬೆಳವಣಿಗೆ ದಾಖಲಿಸಿದೆ. ಆದರೂ ಹಣದುಬ್ಬರ ಏರಿಕೆಯಿಂದ ಆರ್ಥಿಕಾ ಬೆಳವಣಿಗೆ ಮೇಲೆ ಪರಿಣಾಮಗಳುಂಟಾಗುತ್ತಿವೆ. ಹೀಗಾಗಿ ಹಣದುಬ್ಬರ ನಿಯಂತ್ರಣಕ್ಕೆ ಬರುವ ತನಕ ಆರ್ಥಿಕತೆಯಲ್ಲಿ ಬೆಳವಣಿಗೆ ದರ ಹೆಚ್ಚಳವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಕೂಡ. 


 

Latest Videos
Follow Us:
Download App:
  • android
  • ios